RBI ಡೆಪ್ಯುಟಿ ಗವರ್ನರ್ ಹುದ್ದೆಗೆ ವಿರಾಲ್ ಆಚಾರ್ಯ ದಿಢೀರ್ ರಾಜೀನಾಮೆ!

By Web DeskFirst Published Jun 24, 2019, 11:12 AM IST
Highlights

ಡೆಪ್ಯುಟಿ ಗವರ್ನರ್ ಹುದ್ದೆಗೆ ರಾಜೀನಾಮೆ ನೀಡಿದ ವಿರಾಲ್ ಆಚಾರ್ಯ| ಅವಧಿಗೂ ಮುನ್ನವೇ ರಾಜೀನಾಮೆ ಸಲ್ಲಿಸಿದ ಉಪ ಗವರ್ನರ್| ಕೇಂದ್ರ ಹಾಗೂ ಆರ್‌ಬಿಐ ನಡುವಿನ ಭಿನ್ನಾಭಿಪ್ರಾಯ ಅಂತ್ಯವಾಯ್ತು ಎನ್ನುವಾಗಲೇ ರಾಜೀನಾಮೆ

ನವದೆಹಲಿ[ಜೂ.24]: ಅವಧಿಗೆ ಮುನ್ನವೇ ಆರ್‌ಬಿಐ ಉಪ ಗವರ್ನರ್ ವಿರಾಲ್ ಆಚಾರ್ಯ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.  2020ರ ಜನವರಿ 20ರಂದು ವಿರಾಲ್ ಆಚಾರ್ಯ ಅಧಿಕಾರಾವಧಿ ಪೂರ್ಣಗೊಳ್ಳಲಿತ್ತು. 

RBI ಮಾಜಿ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ವಿರಾಲ್ ಆಚಾರ್ಯ ಬಹಳ ಆಪ್ತರಾಗಿದ್ದರು. ಈ ಹಿಂದೆ 2018ರ ಡಿಸೆಂಬರ್ ನಲ್ಲಿ ಎನ್‌ಪಿಎ, ಕೇಂದ್ರಕ್ಕೆ ಮೀಸಲು ಹಣ ವರ್ಗಾವಣೆ ಮತ್ತಿತರ ವಿಷಯಗಳ ಕುರಿತು ಕೇಂದ್ರ ಹಾಗೂ ರಿಸರ್ವ್ ಬ್ಯಾಂಕ್ ನಡುವಿನ ತಿಕ್ಕಾಟದಿಂದ ಬೇಸತ್ತಿದ್ದ ಊರ್ಜಿತ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂದರ್ಭದಲ್ಲಿ ಉಪ ಗವರ್ನರ್ ಸ್ಥಾನದಲ್ಲಿದ್ದ ವಿರಾಲ್ ಆಚಾರ್ಯ ಕೂಡಾ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈ ವದಂತಿಯನ್ನು ಖುದ್ದು ವಿರಾಲ್ ಆಚಾರ್ಯರೇ ತಳ್ಳಿ ಹಾಕಿದ್ದರು.

ಏನಾಗ್ತಿದೆ ದೇಶದಲ್ಲಿ?: ಆರ್‌ಬಿಐ ಡೆಪ್ಯೂಟಿ ರಾಜೀನಾಮೆ?

ಅಲ್ಲದೇ ಮಾಜಿ ಗವರ್ನರ್ ಊರ್ಜಿತ್ ಪಟೇಲ್ ನಿರ್ಗಮನದ ನಂತರ RBIನ ಮೂರು ಹಣಕಾಸು ನೀತಿ ಮರುಪರಿಶೀಲನಾ ಸಭೆಗಳಲ್ಲಿ ವಿರಾಲ್ ಆಚಾರ್ಯ ಪಾಲ್ಗೊಂಡಿದ್ದರು. ಹೀಗಾಗಿ ಕೇಂದ್ರ ಹಾಗೂ ಅವರ ನಡುವಿನ ಎಲ್ಲಾ ಬಿಕ್ಕಟ್ಟು ಅಂತ್ಯವಾಗಿದೆ ಎಂದೇ ಭಾವಿಸಲಾಗಿತ್ತು. ಆದರೀಗ ಬರೋಬ್ಬರಿ 6 ತಿಂಗಳ ಬಳಿಕ, ಹಬ್ಬಿದ ವದಂತಿ ತಣ್ಣಗಾದ ಬಳಿಕ ವಿರಾಲ್ ಆಚಾರ್ಯ ಉಪ ಗವರ್ನರ್ ಹುದ್ದೆಯಿಂದ ಕೆಳಗಿಳಿದಿದ್ದಾರೆ.

ನ್ಯೂಯಾರ್ಕ್‌ ವಿಶ್ವವಿದ್ಯಾನಿಲಯದ ಸ್ಟರ್ನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದ ವಿರಾಲ್ ಆಚಾರ್ಯ ತಮ್ಮ ಮುಂದಿನ ನಡೆ ಏನು ಎಂದು ಬಹಿರಂಗಪಡಿಸಿಲ್ಲ. ಹೀಗಿದ್ದರೂ ಅವರು ಮತ್ತೆ ತಮ್ಮ ಶಿಕ್ಷಣ ಸೇವೆಯನ್ನು ಮುಂದುವರೆಸುತ್ತಾರೆಂದು ನಿರೀಕ್ಷಿಸಲಾಗಿದೆ. ಇಷ್ಟೇ ಅಲ್ಲದೇ, ಅಮೆರಿಕಾದ ಶೈಕ್ಷಣಿಕ ವರ್ಷಾರಂಭಗೊಳ್ಳುವ ಸಂದರ್ಭದಲ್ಲೇ ಅವರು ರಾಜೀನಾಮೆ ನೀಡಿರುವುದು ಇದಕ್ಕೆ ಮತ್ತಷ್ಟು ಇಂಬು ನೀಡಿದಂತಿದೆ.

click me!