ಸಾವರಿನ್ ಗೋಲ್ಡ್ ಬಾಂಡ್ (ಎಸ್ ಜಿಬಿ) ಅವಧಿಪೂರ್ವ ವಿತ್ ಡ್ರಾಗೆ ಆರ್ ಬಿಐ ಅವಕಾಶ ಕಲ್ಪಿಸಿದ್ದು, ವಿವಿಧ ಸಾಲಿನ ಸರಣಿಗಳಿಗೆ ಸಂಬಂಧಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದೆ. 2023ರ ಅಕ್ಟೋಬರ್ 1ರಿಂದ 2024ರ ಮಾರ್ಚ್ 31ರ ತನಕ ಅವಧಿಪೂರ್ವ ವಿತ್ ಡ್ರಾಗೆ ಅವಕಾಶ ನೀಡಲಾಗಿದೆ.
ನವದೆಹಲಿ (ಸೆ.4): ಸಾವರಿನ್ ಗೋಲ್ಡ್ ಬಾಂಡ್ (ಎಸ್ ಜಿಬಿ) ಅವಧಿಪೂರ್ವ ವಿತ್ ಡ್ರಾಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಮೂಲಕ ಹೂಡಿಕೆದಾರರಿಗೆ ಎಂಟು ವರ್ಷಗಳ ಮೆಚ್ಯುರಿಟಿ ದಿನಾಂಕಕ್ಕೂ ಮುನ್ನ ಈ ಬಾಂಡ್ ಗಳನ್ನು ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಈ ಅವಕಾಶ 2023ರ ಅಕ್ಟೋಬರ್ 1ರಿಂದ 2024ರ ಮಾರ್ಚ್ 31ರ ತನಕ ಲಭ್ಯವಿರಲಿದೆ. ಇನ್ನು ಅನಿಶ್ಚಿತ ರಜೆಗಳ ಕಾರಣಕ್ಕೆ ಈಗ ನೀಡಿರುವ ದಿನಾಂಕಗಳಲ್ಲಿ ವ್ಯತ್ಯಾಸವಾಗಬಹುದು ಎಂದು ಆರ್ ಬಿಐ ತಿಳಿಸಿದೆ. ಇನ್ನು ಹೂಡಿಕೆದಾರರು ಎಸ್ ಜಿಬಿ ಬಾಂಡ್ ಗಳನ್ನು ಮೆಚ್ಯುರಿಟಿಗೂ ಮನ್ನ ವಿತ್ ಡ್ರಾ ಮಾಡಲು ಬಯಸಿದ್ರೆ ವಿತ್ ಡ್ರಾ ಮನವಿ ಸಲ್ಲಿಕೆ ಅವಧಿಯ ಬಗ್ಗೆ ಗಮನ ಹರಿಸುವಂತೆ ಆರ್ ಬಿಐ ಹೇಳಿಕೆಯೊಂದರಲ್ಲಿ ತಿಳಿಸಿದೆ. ಸಾವರಿನ್ ಗೋಲ್ಡ್ ಬಾಂಡ್ ಮೇಲೆ ಹೂಡಿಕೆದಾರರು ವಾರ್ಷಿಕ ಶೇ.2.5 ರಷ್ಟು ಬಡ್ಡಿ ಗಳಿಸುತ್ತಾರೆ. ಪ್ರತಿ 6 ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ಕ್ಯಾಪಿಟಲ್ ಗೇನ್ಸ್ ತೆರಿಗೆ ವಿನಾಯಿತಿಯೂ ಲಭ್ಯವಿದೆ. ಈ ಯೋಜನೆಯಡಿ ಚಿನ್ನವನ್ನು ಖರೀದಿಸಲು ಯಾವುದೇ ಜಿಎಸ್‌ಟಿ ಮತ್ತು ಮೇಕಿಂಗ್ ಶುಲ್ಕಗಳನ್ನು ವಿಧಿಸಲಾಗೋದಿಲ್ಲ.
ಏನಿದು ಸಾವರಿನ್ ಗೋಲ್ಡ್ ಬಾಂಡ್ ಯೋಜನೆ?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಕೇಂದ್ರ ಸರ್ಕಾರದ ಒಂದು ಯೋಜನೆಯಾಗಿದ್ದು, ಇದು ಭೌತಿಕವಲ್ಲದ ಚಿನ್ನದ ಮೇಲೆ ಹೂಡಿಕೆ (Invest) ಮಾಡಲು ಅವಕಾಶ ಕಲ್ಪಿಸುತ್ತದೆ. ಅಂದರೆ ಚಿನ್ನದ ಗಟ್ಟಿ, ನಾಣ್ಯ ಅಥವಾ ಆಭರಣಗಳ ಮೇಲೆ ಹೂಡಿಕೆ ಮಾಡೋ ಬದಲು ಭೌತಿಕ ಸ್ವರೂಪದಲ್ಲಿರದ ಚಿನ್ನದ ಮೇಲೆ ಹೂಡಿಕೆ ಮಾಡೋದು. ಭೌತಿಕ ಚಿನ್ನದ ಬೇಡಿಕೆಯನ್ನು ತಗ್ಗಿಸೋ ಜೊತೆಗೆ ಸ್ವ ಉಳಿತಾಯದ ಒಂದು ಭಾಗವನ್ನು ಆರ್ಥಿಕ ಉಳಿತಾಯವಾಗಿ ಬದಲಾಯಿಸೋ ಉದ್ದೇಶದಿಂದ ಕೇಂದ್ರ ಸರ್ಕಾರ 2015ರ ನವೆಂಬರ್ನಲ್ಲಿಸಾವರಿನ್ ಗೋಲ್ಡ್ ಬಾಂಡ್ ಯೋಜನೆಯನ್ನು ಪ್ರಾರಂಭಿಸಿತು. ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ಬಾಂಡ್ ಗಳನ್ನು ವಿತರಿಸುತ್ತದೆ.
ಆರ್ ಬಿಐ ಗವರ್ನರ್ ವಿಶ್ವದ ನಂ.1 ಬ್ಯಾಂಕರ್ ; A+ ರೇಟಿಂಗ್ ಪಡೆದ ಶಕ್ತಿಕಾಂತ ದಾಸ್ ಗೆ ಪ್ರಧಾನಿ ಅಭಿನಂದನೆ
ಯಾರು ಖರೀದಿಸಬಹುದು?
ಭಾರತದಲ್ಲಿ ವಾಸಿಸುವ ವ್ಯಕ್ತಿಗಳು, ಅವಿಭಜಿತ ಹಿಂದೂ ಕುಟುಂಬಗಳು, ಟ್ರಸ್ಟ್‌ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳು ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಖರೀದಿಸಬಹುದು.
ಅವಧಿಫೂರ್ಣ ವಿತ್ ಡ್ರಾ ದಿನಾಂಕಗಳು ಹೀಗಿವೆ:
2017ರ ಅಕ್ಟೋಬರ್ 16ರಂದು ವಿತರಿಸಲಾಗಿರುವ ಎಸ್ ಜಿಬಿ 2017-18ನೇ ಸಾಲಿನ ಮೂರನೇ ಸರಣಿಯ ಅವಧಿಪೂರ್ಣ ವಿತ್ ಡ್ರಾಗೆ ಹೂಡಿಕೆದಾರರಿಗೆ 2023ರ ಸೆಪ್ಟೆಂಬರ್ 16ರಿಂದ 2023ರ ಅಕ್ಟೋಬರ್ 6ರ ತನಕ ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇನ್ನು 2017ರ ಅಕ್ಟೋಬರ್ 23ರಂದು ವಿತರಿಸಿರುವ ಎಸ್ ಜಿಬಿ 2017-18ನೇ ಸಾಲಿನ ನಾಲ್ಕನೇ ಸರಣಿಯ ಅವಧಿಪೂರ್ಣ ವಿತ್ ಡ್ರಾಗೆ ಮನವಿ ಸಲ್ಲಿಕೆಗೆ 2023ರ ಸೆಪ್ಟೆಂಬರ್ 23ರಿಂದ 2023ರ ಅಕ್ಟೋಬರ್ 13ರ ತನಕ ಅವಕಾಶ ನೀಡಲಾಗಿದೆ. ಇನ್ನು ಎಸ್ ಜಿಬಿ 2017-18ನೇ ಸಾಲಿನ ಸರಣಿ vರ ಅವಧಿಪೂರ್ಣ ವಿತ್ ಡ್ರಾ ಮನವಿ ಸಲ್ಲಿಕೆಗೆ 2023ರ ಸೆಪ್ಟೆಂಬರ್ 30ರಿಂದ 2023ರ ಅಕ್ಟೋಬರ್ 20ರ ತನಕ ಅವಕಾಶ ನೀಡಲಾಗಿದೆ.
ಸುಳ್ಳಾದ ರಘುರಾಮ್ ರಾಜನ್ ಭವಿಷ್ಯ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ.7.8 ಏರಿಕೆ!
ಎಲ್ಲಿ ಸಿಗುತ್ತೆ?
ಸಾವರಿನ್ ಗೋಲ್ಡ್ ಬಾಂಡ್ ಗಳ ವಿವಿಧ ಸರಣಿಗಳ ಚಂದಾದಾರಿಕೆ ದಿನಾಂಕವನ್ನು ಆರ್ ಬಿಐ ಘೋಷಣೆ ಮಾಡುತ್ತದೆ. ಆ ಸಮಯದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳು, ವಾಣಿಜ್ಯ ಬ್ಯಾಂಕ್ ಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (SHCIL), ಕ್ಲಿಯರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (CCIL),ಅಂಚೆ ಕಚೇರಿಗಳು ಹಾಗೂ ಸ್ಟಾಕ್ ಎಕ್ಸ್ ಚೇಂಜ್ ಗಳು, ಎನ್ ಎಸ್ ಇ ಹಾಗೂ ಬಿಎಸ್ ಇ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಗಳನ್ನು ಮಾರಾಟ ಮಾಡಲಾಗುತ್ತದೆ.