ಮಾಜಿ ಉದ್ಯೋಗಿ ಬಗ್ಗೆ ಬಾಸ್ ಕಾಳಜಿ| ಆರೋಗ್ಯ ವಿಚಾರಿಸಲು ಖುದಸ್ದು ಮಾಜಿ ಉದ್ಯೋಗಿ ಮನೆಗೆ ಭೇಟಿ ನೀಡಿದ ರತನ್ ಟಾಟಾ| ಟಾಟಾ ಸರಳತೆಗೆ ನೆಟ್ಟಿಗರು ಫಿದಾ
ಮುಂಬೈ(ಜ.06): ಟಾಟಾ ಸಮೂಹದ ಮಾಜಿ ಅಧ್ಯಕ್ಷ, ಉದ್ಯಮಿ ರತನ್ ಟಾಟಾ ಹೃದಯ ವೈಶಾಲ್ಯತೆ ಬಗ್ಗೆ ಅವರು ಮಾಡುವ ಲೋಕೋಪಕಾರಿ ಕಾರ್ಯದಿಂದಲೇ ತಿಳಿದು ಬರುತ್ತವೆ. ಹೀಗಾಗೇ ಜನರಿಗೂ ರತನ್ ಟಾಟಾ ಎಂದರೆ ಅದೊಂದು ಬಗೆಯ ಪ್ರೀತಿ. ಸದ್ಯ ರತನ್ ಟಾಟಾ ತಮ್ಮ ಕಂಪನಿಯ ಮಾಜಿ ಉದ್ಯೋಗಿಯೊಬ್ಬರ ಯೋಗಕ್ಷೇಮ ವಿಚಾರಿಸಲು ಮುಂಬೈನಿಂದ 150 ಕಿ. ಮೀಟರ್ ದೂರದಲ್ಲಿರುವ ಪುಣೆಗೆ ತೆರಳಿದ್ದು, ಈ ವಿಚಾರ ಸೋಧಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗಿದೆ. ರತನ್ ಟಾಟಾರ ಕಾಳಜಿ ಮತ್ತೊಮ್ಮೆ ಜನರ ಮನ ಗೆದ್ದಿದೆ.
ತಮ್ಮ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಪುಣೆಯ ನಿವಾಸಿ ಯೋಗೇಶ್ ದೇಸಾಯಿ ಕಳೆದ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆಂಬ ಎಂಬ ಮಾಹಿತಿ ತಿಳಿದ ಕೂಡಲೇ ರತನ್ ಟಾಟಾ, ಆ ವ್ಯಕ್ತಿ ವಾಸಿಸುತ್ತಿದ್ದ ಪುಣೆಯ ಫ್ರೆಂಡ್ಸ್ ಸೊಸೈಟಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ರತನ್ ಟಾಟಾ ಅವರು ತಮ್ಮನ್ನು ಭೇಟಿಯಾಗಿ ಕುಟುಂಬದ ಯೋಗಕ್ಷೇಮವನ್ನು ವಿಚಾರಿಸಿದ ಸಂಗತಿಯನ್ನು ಲಿಂಕ್‌ಡಿನ್‌ನಲ್ಲಿ ಯೋಗೇಶ್ ದೇಸಾಯಿ ಪೋಸ್ಟ್ ಮಾಡಿದ್ದರು. ರತನ್ ಟಾಟಾ ಅವರು ಮಾಜಿ ಉದ್ಯೋಗಿಯೊಂದಿಗೆ ಮಾತನಾಡುತ್ತಿರುವ ಫೋಟೊ ಜನರ ಗಮನ ಸೆಳೆದಿದೆ.
ರತನ್ ಟಾಟಾ ಅವರಿಗೆ ಸದ್ಯ 83 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿ ಮಾಜಿ ಉದ್ಯೋಗಿಯ ಆರೋಗ್ಯ ವಿಚಾರಿಸಲು ತೆರಳಿದ ಅವರ ಹೃದಯ ವೈಶಾಲ್ಯತೆಯನ್ನು ನೆಟ್ಟಿಗರು ಪ್ರಶಂಸಿಸಿದ್ದಾರೆ. 'ಹಣ, ಆಸ್ತಿ ಅಂತಸ್ತಿಗಿಂತಲೂ ಮಾನವೀಯತೆ ದೊಡ್ಡದು. ಅಂಥ ಮಾನವೀಯತೆಯೇ ಮೂರ್ತಿವೆತ್ತಂತಿರುವ ರತನ್ ಟಾಟಾ ಗೌರವಾರ್ಹರು' ಎಂದು ಟ್ವಿಟರ್‌ನಲ್ಲಿ ನೆಟ್ಟಿಗರು ರತನ್ ಟಾಟಾ ನಡೆಯನ್ನು ಶ್ಲಾಘಿಸಿದ್ದಾರೆ.
ಇಷ್ಟೇ ಅಲ್ಲದೇ ಟಾಟಾ ತಮ್ಮ ಮಾಜಿ ಉದ್ಯೋಗಿಯ ಜೊತೆ ಮಾತನಾಡುವ ವೇಳೆ ಅವರ ಸರಳತೆಯ ಬಗ್ಗೆ ನೆಟ್ಟಿಗರು ಕೊಂಡಾಡಿದ್ದಾರೆ. ಎಷ್ಟೇ ಸಿರಿವಂತರಾಗಿ ಆದರೆ ರತನ್ ಟಾಟಾರಂತೆ ಜೀವಿಸಿಬೇಕು ಎಂದು ಅನೇಕ ನೆಟ್ಟಿಗರು ಅವರ ಆದರ್ಶವನ್ನು ಪಾಲಿಸುವಂತೆ ತಿಳಿಸಿದ್ದಾರೆ. ಹೀಗಿರುವಾಗ ಇನ್ನು ಕೆಲವರು ಬಾಸ್ ಮತ್ತು ಉದ್ಯೋಗಿಯ ಸಂಬಂಧದ ಬಗ್ಗೆಯೂ ಚರ್ಚಿಸಲಾರಂಭಿಸಿದ್ದಾರೆ.