ಚೀನಾ ಅಧ್ಯಕ್ಷ ಜಿನ್ ಪಿಂಗ್ ಜೊತೆ ಸಂಘರ್ಷ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ 2 ತಿಂಗಳಿಂದ ನಾಪತ್ತೆ!

By Suvarna News  |  First Published Jan 5, 2021, 7:44 AM IST

ಚೀನಾದ ಟೆಕ್ ದೈತ್ಯ ಅಲಿಬಾಬಾ ಸಂಸ್ಥಾಪಕ ಹಾಗೂ ಕೋಟ್ಯಾಧಿಪತಿ ಜಾಕ್ ಮಾ ನಾಪತ್ತೆ| ಚೀನಾ ಅಧ್ಯಕ್ಷ ಜೊತೆಗಿನ ಸಂಘರ್ಷದ ಬೆನ್ನಲ್ಲೇ ಕಣ್ಮರೆಯಾದ ಜಾಕ್ ಮಾ| ಜಗತ್ತಿನಾದ್ಯಂತ ಭಾರೀ ಸಂಚಲನ ಮುಡಿಸಿದೆ ಜಾಕ್‌ ಮಾ ಕಣ್ಮರೆ ವಿಚಾರ


ಬೀಜಿಂಗ್(ಜ.05): ಚೀನಾದ ಟೆಕ್ ದೈತ್ಯ ಅಲಿಬಾಬಾ ಸಂಸ್ಥಾಪಕ ಹಾಗೂ ಕೋಟ್ಯಾಧಿಪತಿ ಜಾಕ್ ಮಾ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದೆ. ಚೀನಾ ಅಧ್ಯಕ್ಷ ಜಿನ್​ಪಿಂಗ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರದ ಜೊತೆಗಿನ ಜಿದ್ದಾಜಿದ್ದಿನ ಬಳಿಕ, ಕಳೆದೆರಡು ತಿಂಗಳಿಂದ ಜಾಕ್ ಮಾ ಕಾಣಿಸಿಕೊಂಡಿಲ್ಲ ಎಂಬುವುದು ಉಲ್ಲೇಖನೀಯ. ಈ ಘಟನೆ ಸದ್ಯ ಇಡೀ ಜಗತ್ತಿನ ಕುತೂಹಲ ಕೆರಳಿಸಿದೆ.


ಆಫ್ರಿಕಾದ ಬ್ಯುಸಿನೆಸ್ ಹೀರೋಸ್ ಎಂಬ ಪ್ರತಿಭಾನ್ವೇಷಣೆ ಟಿವಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ತಪ್ಪದೇ ಪಾಲ್ಗೊಳ್ಳುತ್ತಿದ್ದ. ಆಫ್ರಿಕಾದ ಉದ್ಯಮಿಗಳನ್ನು ಪ್ರೋತ್ಸಾಹಿಸಿ 1.5 ಮಿಲಿಯನ್ ಡಾಲರ್ ಪ್ರಶಸ್ತಿ ಮೊತ್ತ ನೀಡುವ ಶೋ ಇದಾಗಿದ್ದು,  ಜಾಕ್ ಮಾ ಈ ಬಾರಿ ಗೈರಾಗಿದ್ದಾರೆ. ಅಲ್ಲದೇ ಏಕಾಏಕಿ ಅವರ ಭಾವಚಿತ್ರವನ್ನೀಗ ತೀರ್ಪುಗಾರರ ಅಧಿಕೃತ ಪುಟದಿಂದ ತೆಗೆಯಲಾಗಿದೆ. ಅಲ್ಲದೇ ಈ ಬಾರಿ ಜಾಕ್  ಮಾ ಬದಲಿಗೆ ಬೇರೊಬ್ಬ ಅಧಿಕಾರಿಯನ್ನು ಆಲಿಬಾಬಾ ಸಂಸ್ಥೆ ಕಳಿಸಿದೆ.

Latest Videos

undefined

ಇನ್ನು ಈ ಕಾರ್ಯಕ್ರಮದ ಫೈನಲ್ ಹಂತ ಅಕ್ಟೋಬರ್ 24ರಂದು ನಡೆದಿತ್ತು. ಹೀಗಿರುವಾಗ ಜಾಕ್ ಮಾ ಚೀನಾದ ಆಡಳಿತ ಮುಖ್ಯಸ್ಥ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ಟೀಕಿಸಿ ಮಾತನ್ನಾಡಿದ್ದರು. ಇದಾದ ಬೆನ್ನಲ್ಲೇ ಜಾಕ್ ಮಾರನ್ನು ಬೀಜಿಂಗ್‌ ಅಧಿಕಾರಿಗಳು ಕರೆದೊಯ್ದಿದ್ದರು. ಅವರ ಕಂಪನಿಯ  37 ಬಿಲಿಯನ್ ಇನಿಶಿಯಲ್​ ಪಬ್ಲಿಕ್​ ಆಫರ್‌ನ್ನೂ ಅಮಾನತುಗೊಳಿಸಲಾಗಿದೆ. ನಂತರ ಅವರು ಎಲ್ಲಿಯೂ ಪತ್ತೆಯಾಗಿಲ್ಲ ಎಂದು ವರದಿ ತಿಳಿಸಿದೆ.

ಕೆಲಸದ ಒತ್ತಡ ಹಾಗೂ ಶೆಡ್ಯೂಲ್ ಇಲ್ಲದೇ ಜಾಕ್ ಮಾ 2020ನೇ ವರ್ಷದ ಆಫ್ರಿಕಾದ ಬಿಸಿನೆಸ್ ಹೀರೋಸ್‌ನ ಅಂತಿಮ ತೀರ್ಪುಗಾರರ ಸಮಿತಿಯ ಭಾಗವಾಗಲು ಸಾಧ್ಯವಿಲ್ಲ ಎಂದು ಎಂದು ಅಲಿಬಾಬಾದ ವಕ್ತಾರರು ಹೇಳಿದ್ದಾರೆ. 

ಅಕ್ಟೋಬರ್ 10ರಂದು ಕೊನೆಯ ಬಾರಿಗೆ ಟ್ವೀಟ್ ಮಾಡಿರುವ ಜಾಕ್ ಅವರು ಕೊಡುಗೈ ದಾನಿಯಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಕೊರೋನಾ ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ಮಾಸ್ಕ್ ವಿತರಣೆಗಾಗಿ ಯುರೋಪ್, ಯುಎಸ್ ಗಳಲ್ಲಿ ನೆರವು ನೀಡಿದ್ದರು. ಜಾಕ್ ಮಾ ಸಂಸ್ಥೆ ಮೂಲಕ ಶಿಕ್ಷಣ, ಉದ್ಯಮ, ಮಹಿಳಾ ನಾಯಕತ್ವ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆಗಳಿಗೆ ಅಪಾರ ಪ್ರಮಾಣದ ದೇಣಿಗೆ ಮೂಲಕ ನೆರವು ನೀಡಲಾಗುತ್ತಿದೆ.

click me!