
ಮುಂಬೈ (ಅ.25): ದೇಶದ ಪ್ರಸಿದ್ಧ ಕೈಗಾರಿಕೋದ್ಯಮಿ ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅಕ್ಟೋಬರ್ 9 ರಂದು ವಿಧಿವಶರಾದರು. ಆ ಬಳಿಕ ಅವರ ಮಲ ಸಹೋದರ ನೋಯೆಲ್ ಟಾಟಾ ಅವರನ್ನು ಟಾಟಾ ಟ್ರಸ್ಟ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನೋಯೆಲ್ ಟಾಟಾ ಅವರನ್ನು ಟಾಟಾದ ಎರಡೂ ಪ್ರಮುಖ ಟ್ರಸ್ಟ್‌ಗಳ ಅಧ್ಯಕ್ಷರಾಗಿ ನೇಮಿಸಲಾಗಿದೆ. ಆ ಮೂಲಕ ಅವರು ಎಲ್ಲಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಅದೇನೇ ಇದ್ದರೂ, ನೋಯೆಲ್ ಟಾಟಾ, ಎಲ್ಲಾ ಗ್ರೂಪ್ ಕಂಪನಿಗಳನ್ನು ನೋಡಿಕೊಳ್ಳುವ ಕಂಪನಿಯ ಅಧ್ಯಕ್ಷರಾಗಲು ಎಂದಿಗೂ ಸಾಧ್ಯವಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಟಾಟಾ ಗ್ರೂಪ್‌ನಲ್ಲಿ ಹತ್ತಕ್ಕೂ ಹೆಚ್ಚು ಕಂಪನಿಗಳನ್ನು ನಿಯಂತ್ರಿಸುವ ಏಕೈಕ ಕಂಪನಿ ಟಾಟಾ ಸನ್ಸ್. ಆದರೆ ನೋಯೆಲ್ ಟಾಟಾ ಯಾವುದೇ ಕಾರಣಕ್ಕೂ ಟಾಟಾ ಸನ್ಸ್‌ನ ಕಂಪನಿಯ ಅಧ್ಯಕ್ಷರಾಗಿರಲು ಸಾಧ್ಯವಿಲ್ಲ.
ಟಾಟಾ ಸನ್ಸ್ ಅಧ್ಯಕ್ಷರಾಗುವ ಹಾದಿಯಲ್ಲಿ ನೋಯೆಲ್ ಟಾಟಾಗೆ ಅಡೆತಡೆ ಎದುರಾಗಿದ್ದು ಇದು ಮೊದಲೇನಲ್ಲ. ಸುಮಾರು 13 ವರ್ಷಗಳ ಹಿಂದೆ, ಅವರು ಟಾಟಾ ಸನ್ಸ್‌ನಲ್ಲಿ ಉನ್ನತ ಸ್ಥಾನಕ್ಕೇರುವ ನಿಟ್ಟಿನಲ್ಲೂ ಇದೇ ಸ್ಥಿತಿ ಎದುರಾಗಿತ್ತು. 2011 ರಲ್ಲಿ, ರತನ್ ಟಾಟಾ ಟಾಟಾ ಸನ್ಸ್‌ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ, ನೋಯೆಲ್ ಟಾಟಾ ಸನ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ ಎಂದು ವ್ಯಾಪಕವಾಗಿ ವರದಿಯಾಗಿತ್ತು.
ಆದರೆ, ಈ ಸ್ಥಾನವನ್ನು ನೋಯೆಲ್ ಟಾಟಾ ಅವರ ಸೋದರಿಯ ಮಗ ಸೈರಸ್ ಮಿಸ್ತ್ರಿ ಅವರಿಗೆ ನೀಡಲಾಗಿತ್ತು. 2019ರಲ್ಲಿ ಸರ್ ರತನ್ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿ ನೋಯೆಲ್ ಟಾಟಾ ನೇಮಕಗೊಂಡಾಗ ಅವರ ಟಾಟಾ ಸನ್ಸ್‌ನ ಅಧ್ಯಕ್ಷರಾಗುವ ಬಗ್ಗೆ ವದಂತಿಗಳು ಹರಡಿದ್ದವು. 2022 ರಲ್ಲಿ, ಅವರನ್ನು ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ನ ಟ್ರಸ್ಟಿಯನ್ನಾಗಿ ಮಾಡಲಾಯಿತು, ಆದರೆ ಟಾಟಾ ಸನ್ಸ್‌ಗೆ ಅಧ್ಯಕ್ಷರಾಗುವ ಅವರ ಆಸೆ ಇಂದಿಗೂ ಈಡೇರಿಲ್ಲ. ಬಹುಶಃ ಇದು ಈಡೇರುವ ಸಾಧ್ಯತೆಯೂ ಕಾಣುತ್ತಿಲ್ಲ.
ನೋಯೆಲ್ ಟಾಟಾ ಸೊಸೆ ಮಾನಸಿ, ಟಾಟಾ ಮೋಟಾರ್ಸ್‌ನ ಪ್ರಮುಖ ಎದುರಾಳಿ ಕಂಪನಿಯ ಒಡತಿ!
ಎರಡು ವರ್ಷಗಳ ಹಿಂದೆ ಜಾರಿಗೆ ಬಂದಿತ್ತು ನಿಯಮ: 2022 ರಲ್ಲಿ, ರತನ್ ಟಾಟಾ ಅವರ ನಾಯಕತ್ವದಲ್ಲಿ, ಟಾಟಾ ಗ್ರೂಪ್ ಹೊಸ ನೀತಿಯನ್ನು ಜಾರಿಗೆ ತಂದಿತು. ಟಾಟಾ ಗ್ರೂಪ್‌ನ ದೊಡ್ಡ ಮಟ್ಟದ ನಾಯಕತ್ವವನ್ನು ನೋಯೆಲ್ ಟಾಟಾ ಹೊಂದಿದ್ದರೂ ಸಹ, ಟಾಟಾ ಸನ್ಸ್ ಅಧ್ಯಕ್ಷರಾಗುವ ಪ್ರಯತ್ನದಲ್ಲಿ ಇದೇ ನಿಯಮ ಅವರಿಗೆ ಅಡ್ಡಿಯಾಗಿದೆ.
ರತನ್ ಟಾಟಾ ಅಂತಿಮ ವಿಲ್‌ನಲ್ಲಿದೆ ನಾಲ್ವರ ಹೆಸರು; ಮಲ ಸಹೋದರಿಯರು, ಸ್ನೇಹಿತೆ ಮತ್ತು ವಕೀಲ!
ಏನಿದು ನಿಯಮ: ಸ್ವಹಿತಾಸಕ್ತಿ ಸಂಘರ್ಷವನ್ನು ತಪ್ಪಿಸಯವ ನಿಟ್ಟಿನಲ್ಲಿ ಟಾಟಾ ಸನ್ಸ್ ತನ್ನ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ಅನ್ನು 2022 ರಲ್ಲಿ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿ ಕಾನೂನಿನ ಪ್ರಕಾರ, ಟಾಟಾ ಟ್ರಸ್ಟ್ ಹಾಗೂ ಟಾಟಾ ಸನ್ಸ್‌ಗೆ ಯಾವುದೇ ಸಮಯದಲ್ಲೂ ಒಂದೇ ವ್ಯಕ್ತಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡಿರಬಾರದು. ಸದ್ಯಕ್ಕೆ, ನೋಯೆಲ್ ಟಾಟಾ ಅವರು ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿದ್ದಾರೆ ಮತ್ತು ಈ ನಿಯಮದಿಂದಾಗಿ ಅವರನ್ನು ಟಾಟಾ ಸನ್ಸ್‌ನ ಅಧ್ಯಕ್ಷರನ್ನಾಗಿ ನೇಮಕ ಮಾಡೋದಕ್ಕೆ ಸಾಧ್ಯವಾಗೋದಿಲ್ಲ. ಎರಡೂ ಸಂಸ್ಥೆಗಳಿಗೆ ಏಕಕಾಲದಲ್ಲಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಟಾಟಾ ಕುಟುಂಬದ ಕೊನೆಯ ಸದಸ್ಯ ರತನ್ ಟಾಟಾ ಆಗಿರುತ್ತಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.