ಚಂದ್ರಯಾನ ಎಫೆಕ್ಟ್: ಫೋರ್ಬ್ಸ್‌ ಬಿಲಿಯನೇರ್‌ ಶ್ರೀಮಂತರ ಪಟ್ಟಿಯಲ್ಲಿ ಗುರುತಿಸಿಕೊಂಡ ಮೈಸೂರಿನ ಉದ್ಯಮಿ

By Kannadaprabha News  |  First Published Apr 5, 2024, 2:48 PM IST

 ಮೈಸೂರು ಮೂಲದ ಕೇನ್ಸ್‌ ಟೆಕ್ನಾಲಜಿ ಕಂಪನಿ ಸ್ಥಾಪಕ ರಮೇಶ್‌ ಕುಂಞಕಣ್ಣನ್‌ ಇದೇ ಮೊದಲ ಬಾರಿಗೆ ಫೋರ್ಬ್ಸ್‌ ಬಿಲಿಯನೇರ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.


ಮೈಸೂರು (ಏ.5): ಚಂದ್ರಯಾನ-3 ನೌಕೆಯ ಲ್ಯಾಂಡರ್‌ ಹಾಗೂ ರೋವರ್‌ಗೆ ಎಲೆಕ್ಟ್ರಾನಿಕ್‌ ಸಿಸ್ಟಮ್ಸ್‌ಗಳನ್ನು ಪೂರೈಕೆ ಮಾಡಿದ್ದ ಮೈಸೂರು ಮೂಲದ ಕೇನ್ಸ್‌ ಟೆಕ್ನಾಲಜಿ ಕಂಪನಿ ಸ್ಥಾಪಕ ರಮೇಶ್‌ ಕುಂಞಕಣ್ಣನ್‌ ಇದೇ ಮೊದಲ ಬಾರಿಗೆ ಫೋರ್ಬ್ಸ್‌ ಬಿಲಿಯನೇರ್‌ಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

10 ಸಾವಿರ ಕೋಟಿ ರು. ಆಸ್ತಿ (1.2 ಬಿಲಿಯನ್‌ ಅಮೆರಿಕನ್‌ ಡಾಲರ್‌) ಹೊಂದಿರುವ ಅವರು, ವಿಶ್ವದ ಶ್ರೀಮಂತ ಉದ್ಯಮಿಗಳಾದ ಎಲಾನ್‌ ಮಸ್ಕ್‌, ಮುಕೇಶ್‌ ಅಂಬಾನಿ, ಜೆಫ್‌ ಬೇಜೋಸ್‌ ಮತ್ತಿತರರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಚಂದ್ರಯಾನ-3 ಯಶಸ್ಸಿನ ಬಳಿಕ ರಮೇಶ್‌ ಅವರ ಕಂಪನಿಯ ಷೇರುಗಳು ಭಾರಿ ಏರಿಕೆಯಾಗಿದ್ದರಿಂದ ಅವರ ಸಂಪತ್ತು ವೃದ್ಧಿಯಾಗಿದೆ.

Tap to resize

Latest Videos

ಇವರೇ ನೋಡಿ ಈ ಬಾರಿ 2024ರ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಟಾಪ್‌ 10 ಶ್ರೀಮಂತರು!

ಯಾರು ಈ ರಮೇಶ್‌?: ಮೈಸೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೇನ್ಸ್‌ ಟೆಕ್ನಾಲಜೀಸ್‌ ಕಂಪನಿ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಮೇಶ್‌ ಕುಂಞಕಣ್ಣನ್‌ ಅವರು ಮೈಸೂರಿನ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್ (ಎನ್‌ಐಇ)ನಿಂದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ. 1988ರಲ್ಲಿ ಕೇನ್ಸ್‌ ಟೆಕ್ನಾಲಜಿ ಎಂಬ ಕಂಪನಿಯನ್ನು ಸ್ಥಾಪಿಸಿ, ಎಲೆಕ್ಟ್ರಾನಿಕ್ಸ್‌ ಉತ್ಪಾದಕರಾದರು. 1996ರಲ್ಲಿ ಅವರ ಪತ್ನಿ ಸವಿತಾ ರಮೇಶ್‌ ಅವರು ಕಂಪನಿಗೆ ಸೇರ್ಪಡೆಯಾದರು. ಈಗ ಸವಿತಾ ಅವರು ಕಂಪನಿಯ ಅಧ್ಯಕ್ಷರಾಗಿದ್ದಾರೆ.

ಈ ವರ್ಷ ಫೋರ್ಬ್ಸ್ ಬಿಲಿಯನೇರ್ ಪಟ್ಟಿಗೆ ಸೇರ್ಪಡೆಗೊಂಡ ಈ ಭಾರತೀಯ ಮಹಿಳಾ ಉದ್ಯಮಿ ಸಂಪತ್ತು 4.8 ಬಿಲಿಯನ್ ಡಾಲರ್!

ಚಂದ್ರಯಾನ-3 ಯೋಜನೆಯ ರೋವರ್ ಹಾಗೂ ಲ್ಯಾಂಡರ್‌ಗೆ ವಿದ್ಯುತ್‌ ಒದಗಿಸುವ ಎಲೆಕ್ಟ್ರಾನಿಕ್‌ ಸಿಸ್ಟಮ್ಸ್‌ಗಳನ್ನು ಇಸ್ರೋಗೆ ಕೇನ್ಸ್‌ ಟೆಕ್ನಾಲಜಿ ಪೂರೈಸಿತ್ತು. ಈ ಉಪಕರಣಗಳ ನೆರವಿನಿಂದಲೇ 2023ರ ಆಗಸ್ಟ್‌ನಲ್ಲಿ ಚಂದ್ರಯಾನ ನೌಕೆ ಚಂದ್ರನ ಮೇಲೆ ಇಳಿಯಲು ಸಾಧ್ಯವಾಯಿತು.

ಕೇನ್ಸ್‌ ಟೆಕ್ನಾಲಜಿಯಲ್ಲಿ ರಮೇಶ್‌ ಅವರು 64% ಷೇರು ಹೊಂದಿದ್ದಾರೆ. ಚಂದ್ರಯಾನ-3 ಯಶಸ್ಸಿನ ಬಳಿಕ ಕಂಪನಿಯ ಷೇರುಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. 2022ರ ನವೆಂಬರ್‌ನಲ್ಲಿ ಕೇನ್ಸ್‌ ಟೆಕ್ನಾಲಜಿ ಕಂಪನಿ ಷೇರು ಮಾರುಕಟ್ಟೆ ಪ್ರವೇಶಿಸಿದ್ದು, ಈವರೆಗೆ ಷೇರು ಮೌಲ್ಯ ಮೂರುಪಟ್ಟು ಏರಿಕೆಯಾಗಿದೆ.

click me!