ರಾಜೇಶ್‌ ಎಕ್ಸ್‌ಪೋರ್ಟ್‌ ಆದಾಯ ವಂಚನೆ ಹಗರಣ: ಎಲ್‌ಐಸಿ, ಕೆನರಾ ಬ್ಯಾಂಕ್‌ ಹಣ ಗೋತಾ

Published : Jun 04, 2026, 07:12 PM IST
lic

ಸಾರಾಂಶ

ಚಿನ್ನ ಸಂಸ್ಕರಣಾ ಸಂಸ್ಥೆ ರಾಜೇಶ್ ಎಕ್ಸ್‌ಪೋರ್ಟ್ಸ್ ವಿರುದ್ಧ ಸೆಬಿ ಕಠಿಣ ಕ್ರಮ ಕೈಗೊಂಡಿದ್ದು, ಕಂಪನಿಯು ನಕಲಿ ಆದಾಯ ಸೃಷ್ಟಿಸಿದ ಆರೋಪದ ಮೇಲೆ ತನಿಖೆ ನಡೆಯುತ್ತಿದೆ. ಇದರಿಂದ ಪ್ರಮುಖ ಹೂಡಿಕೆದಾರ ಸಂಸ್ಥೆಯಾದ ಎಲ್‌ಐಸಿಗೆ ₹290 ಕೋಟಿ ನಷ್ಟವಾಗಿದೆ.

ಮುಂಬೈ/ಬೆಂಗಳೂರು (ಜೂ.4): ಚಿನ್ನ ಸಂಸ್ಕರಣೆ ಮಾಡುವ ದೈತ್ಯ ಸಂಸ್ಥೆ ‘ರಾಜೇಶ್ ಎಕ್ಸ್‌ಪೋರ್ಟ್ಸ್’ ವಿರುದ್ಧ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾದ ಸೆಬಿ (Sebi) ಕೈಗೊಂಡಿರುವ ಕಠಿಣ ಕಾನೂನು ಕ್ರಮವು, ಈಗ ಕಂಪನಿಯ ದೊಡ್ಡ ಹೂಡಿಕೆದಾರರ ನೆಮ್ಮದಿ ಕೆಡಿಸಿದೆ. ವಿಶೇಷವಾಗಿ ದೇಶದ ಅತಿ ದೊಡ್ಡ ವಿಮಾ ಸಂಸ್ಥೆ ಹಾಗೂ ಬೃಹತ್ ಹೂಡಿಕೆದಾರ ಸಂಸ್ಥೆಯಾದ ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಈ ಕಂಪನಿಯಲ್ಲಿ ಹೊಂದಿರುವ ದೊಡ್ಡ ಪಾಲಿನ ಕಾರಣದಿಂದಾಗಿ, ಈಗ ಎಲ್ಲರ ಗಮನ ಎಲ್‌ಐಸಿಯ ಹೂಡಿಕೆಯತ್ತ ನೆಟ್ಟಿದೆ.

ಮಾರ್ಚ್ 2026ರ ತ್ರೈಮಾಸಿಕದ ಷೇರು ಹೂಡಿಕೆ ಅಂಕಿ-ಅಂಶಗಳ ಪ್ರಕಾರ, ಎಲ್‌ಐಸಿ ಸಂಸ್ಥೆಯು ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿಯಲ್ಲಿ ಶೇ. 10.80 ರಷ್ಟು ದೊಡ್ಡ ಪಾಲನ್ನು ಹೊಂದಿದೆ. ವಿಶೇಷವೆಂದರೆ, ಸೆಪ್ಟೆಂಬರ್ 2023 ರಿಂದಲೂ ಕಂಪನಿಯಲ್ಲಿ ಎಲ್‌ಐಸಿ ಹೊಂದಿರುವ ಈ ಹೂಡಿಕೆಯ ಪ್ರಮಾಣದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈ ಅವಧಿಯಲ್ಲಿ ಎಲ್‌ಐಸಿ ಯಾವುದೇ ಹೊಸ ಷೇರುಗಳನ್ನು ಖರೀದಿಸುವುದಾಗಲಿ ಅಥವಾ ಇದ್ದ ಷೇರುಗಳನ್ನು ಮಾರಾಟ ಮಾಡುವುದಾಗಲಿ ಮಾಡಿಲ್ಲ. ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿ ಮತ್ತು ಅದರ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಮೆಹ್ತಾ ಅವರ ವಿರುದ್ಧ ಸೆಬಿ ಮಧ್ಯಂತರ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಎಲ್ಲಾ ವಿವರಗಳು ಮುನ್ನೆಲೆಗೆ ಬಂದಿವೆ.

ಕೋಟಿ ಕೋಟಿ ಮೌಲ್ಯದ ಹೂಡಿಕೆ ಪಾತಾಳಕ್ಕೆ

ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿಯ ಷೇರು ಬೆಲೆಗಳು ಸತತವಾಗಿ ಕುಸಿಯುತ್ತಿರುವುದರಿಂದ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆಯ ಮೌಲ್ಯ ಭಾರಿ ಪ್ರಮಾಣದಲ್ಲಿ ಕರಗಿಹೋಗಿದೆ. 2026ರ ಆರಂಭದಲ್ಲಿ ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿಯಲ್ಲಿ ಎಲ್‌ಐಸಿ ಹೊಂದಿದ್ದ ಷೇರುಗಳ ಮೌಲ್ಯ ಸುಮಾರು ₹637 ಕೋಟಿ ರೂಪಾಯಿಗಳಷ್ಟಿತ್ತು. ಆದರೆ ಕಂಪನಿಯ ಇತ್ತೀಚಿನ ವಿವಾದಗಳ ಬಳಿಕ ಅದರ ಮೌಲ್ಯವು ಈಗ ಕೇವಲ ₹347 ಕೋಟಿ ರೂಪಾಯಿಗಳಿಗೆ ಕುಸಿದಿದೆ. ಅಂದರೆ ಎಲ್‌ಐಸಿಯ ₹290 ಕೋಟಿ ರೂಪಾಯಿ ಮೌಲ್ಯದ ಸಂಪತ್ತು ಕರಗಿಹೋಗಿದೆ.

ಇದೇ ಅವಧಿಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೊಂದಿದ್ದ ಷೇರುಗಳ ಒಟ್ಟು ಮೌಲ್ಯವು ಕೂಡ ₹838 ಕೋಟಿ ರೂಪಾಯಿಗಳಿಂದ ಬರೋಬ್ಬರಿ ₹456 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ. ಈ ಬೆಳವಣಿಗೆಗಳ ಪರಿಣಾಮವಾಗಿ, ಗುರುವಾರದ ಟ್ರೇಡಿಂಗ್ ಅವಧಿಯಲ್ಲಿ ಸ್ವತಃ ಎಲ್‌ಐಸಿ (LIC) ಸಂಸ್ಥೆಯ ಷೇರುಗಳ ಮೇಲೂ ಸ್ವಲ್ಪ ಒತ್ತಡ ಕಂಡುಬಂದಿದ್ದು, ದಿನದ ಮುಕ್ತಾಯದ ವೇಳೆಗೆ ಎಲ್‌ಐಸಿ ಷೇರುಗಳು ಶೇ. 1 ರಷ್ಟು ಕುಸಿತ ಕಂಡು ಬಂದ್ ಆಗಿವೆ.

ಕೈತೊಳೆದ ವಿದೇಶಿ ಹೂಡಿಕೆದಾರರು; ಗಟ್ಟಿಯಾಗಿ ನಿಂತ ಎಲ್‌ಐಸಿ

ಒಂದೆಡೆ ಎಲ್‌ಐಸಿ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ತನ್ನ ಹೂಡಿಕೆಯನ್ನು ಹಾಗೇ ಉಳಿಸಿಕೊಂಡಿದ್ದರೆ, ಇನ್ನೊಂದೆಡೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಮಾತ್ರ ರಾಜೇಶ್ ಎಕ್ಸ್‌ಪೋರ್ಟ್ಸ್ ಕಂಪನಿಯಲ್ಲಿದ್ದ ತಮ್ಮ ಹೂಡಿಕೆಯನ್ನು ಜಾಣ್ಮೆಯಿಂದ ಹಂತಹಂತವಾಗಿ ಕಡಿಮೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಮಾರ್ಚ್ 2023 ರಲ್ಲಿ ಕಂಪನಿಯಲ್ಲಿದ್ದ ಒಟ್ಟು ಎಫ್‌ಐಐ (FII) ಹೂಡಿಕೆಯ ಪಾಲು ಶೇ. 17.60 ರಷ್ಟಿತ್ತು. ಆದರೆ ಮಾರ್ಚ್ 2026ರ ವೇಳೆಗೆ ಇದು ಶೇ. 14.26 ಕ್ಕೆ ಕುಸಿದಿದೆ.

ಸದ್ಯಕ್ಕೆ ಕಂಪನಿಯಲ್ಲಿ ಹೂಡಿಕೆ ಉಳಿಸಿಕೊಂಡಿರುವ ಪ್ರಮುಖ ವಿದೇಶಿ ಹೂಡಿಕೆದಾರರ ಪೈಕಿ ‘ಬ್ರಿಡ್ಜ್ ಇಂಡಿಯಾ ಫಂಡ್’ (Bridge India Fund) ಶೇ. 8.46 ರಷ್ಟು ಪಾಲು ಹೊಂದಿದ್ದರೆ, ‘ಶ್ವಾಬ್ ಫಂಡಮೆಂಟಲ್ ಎಮರ್ಜಿಂಗ್ ಮಾರ್ಕೆಟ್ಸ್ ಇಕ್ವಿಟಿ ಇಟಿಎಫ್’ (Schwab Fundamental Emerging Markets Equity ETF) ಶೇ. 2.70 ರಷ್ಟು ಪಾಲನ್ನು ಹೊಂದಿದೆ.

ಕೆನರಾ ಬ್ಯಾಂಕ್‌ಗೂ ಸಮಸ್ಯೆ

ಷೇರು ಮಾರುಕಟ್ಟೆಯಲ್ಲಿ ರಾಜೇಶ್‌ ಎಕ್ಸ್‌ಪೋರ್ಟ್‌ ಬಿಕ್ಕಟ್ಟಿನ ನಡುವೆಯೇ, ಪ್ರಮುಖ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ (Canara Bank) ರಾಜೇಶ್ ಎಕ್ಸ್‌ಪೋರ್ಟ್ಸ್ ನೀಡಿದ್ದ ಸಾಲವನ್ನು ಮರುಪಾವತಿಸದ ಕಾರಣ 'ಒತ್ತಡದ ಆಸ್ತಿ' (Stressed Asset) ಎಂದು ವರ್ಗೀಕರಿಸಿದೆ. ಕಂಪನಿಯು ಬ್ಯಾಂಕ್‌ಗೆ ಸುಮಾರು ₹509 ಕೋಟಿ ಬಾಕಿ ಉಳಿಸಿಕೊಂಡಿದ್ದು, ಈ ಬಾಕಿಯನ್ನು ವಸೂಲಿ ಮಾಡಲು ಕೆನರಾ ಬ್ಯಾಂಕ್ ಈ ಸಾಲದ ಹಕ್ಕನ್ನು ಹರಾಜು ಹಾಕಲು (Auction Process) ಮುಂದಾಗಿದೆ. ಇದು ಕಂಪನಿಗೆ ಒದಗಿರುವ ಎರಡನೇ ದೊಡ್ಡ ಆಘಾತವಾಗಿದೆ.

ಸೆಬಿ ತನಿಖೆಯ ಪ್ರಮುಖ ಆಂಶಗಳು ಹಾಗೂ ಆಡಿಟರ್‌ಗಳಿಗೆ ಕಂಟಕ

ರಾಜೇಶ್ ಎಕ್ಸ್‌ಪೋರ್ಟ್ಸ್ ತನ್ನ ಆರ್ಥಿಕ ವರದಿಯಲ್ಲಿ ತೋರಿಸಿರುವ ಆದಾಯದ ಕುರಿತು ಸೆಬಿ ತೀವ್ರ ಸಂಶಯ ವ್ಯಕ್ತಪಡಿಸಿದೆ. ಕಂಪನಿಯು ಹಣಕಾಸು ವರ್ಷ 2021 ಮತ್ತು 2025ರ ನಡುವೆ ತೋರಿಸಿರುವ ಒಟ್ಟು ಸಂಯೋಜಿತ ಆದಾಯದಲ್ಲಿ (Consolidated Revenues) ಸುಮಾರು ₹15.15 ಲಕ್ಷ ಕೋಟಿ ರೂಪಾಯಿಗಳಷ್ಟು ಆದಾಯವನ್ನು ನಕಲಿಯಾಗಿ ಅಥವಾ ತಪ್ಪು ಮಾಹಿತಿಯೊಂದಿಗೆ ಸೃಷ್ಟಿಸಿರುವ ಪ್ರಾಥಮಿಕ ಪುರಾವೆಗಳು ಸಿಕ್ಕಿವೆ ಎಂದು ಸೆಬಿ ಹೇಳಿದೆ. ಈ ಮೊತ್ತವು ಕಂಪನಿಯು ಆ ಅವಧಿಯಲ್ಲಿ ಘೋಷಿಸಿದ ಒಟ್ಟು ಆದಾಯದ ಶೇ. 99.8 ರಷ್ಟಾಗಿದೆ. ಕಂಪನಿಯ ಒಟ್ಟು ಆದಾಯದ ಶೇ. 97 ರಿಂದ ಶೇ. 99 ರಷ್ಟು ಭಾಗ ಅದರ ವಿದೇಶಿ ಅಂಗಸಂಸ್ಥೆಯಾದ ‘ವ್ಯಾಲ್ಕಂಬಿ ಎಸ್‌ಎ’ (Valcambi SA) ಮೂಲಕವೇ ಬಂದಿದೆ ಎಂದು ತೋರಿಸಲಾಗಿದೆ. ಆದರೆ ವ್ಯಾಲ್ಕಂಬಿ ಕಂಪನಿಯ ಆಡಿಟ್ ಆದ ಸ್ವತಂತ್ರ ಹಣಕಾಸು ವರದಿಯನ್ನು ಪರಿಶೀಲಿಸಿದಾಗ, ಅದರಲ್ಲಿ ಕಂಡುಬಂದಿದ್ದು ಮುಖ್ಯ ಸಂಸ್ಥೆ ತೋರಿಸಿದ ಆದಾಯದ ಕೇವಲ ಒಂದು ಸಣ್ಣ ಭಾಗ ಮಾತ್ರ!

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Rajesh Exports Scam: 15.15 ಲಕ್ಷ ಕೋಟಿ ರೂಪಾಯಿ ಆದಾಯವೇ ನಕಲಿ, ಬೆಂಗಳೂರು ಮೂಲದ ಕಂಪನಿಯ ಭಾರೀ ಹಗರಣ
ಕರ್ನಾಟಕ ಟ್ರೈನ್ ಸುದ್ದಿ: ನೈಋತ್ಯ ರೈಲ್ವೆಯ ಐತಿಹಾಸಿಕ ಸಾಧನೆ, ಮೇ ತಿಂಗಳಿನಲ್ಲಿ ದಾಖಲೆಯ ₹1481 ಕೋಟಿ ದಾಟಿದ ಆದಾಯ!