* ನೀವು ಮುಂದಿನ ಯೂನಿಕಾರ್ನ್ ಆಗಿ ಬೆಳೆಯಬೇಕೆಂದು ಉತ್ತೇಜನ
* ಸರ್ಕಾರದಿಂದ ಎಲ್ಲಾ ರೀತಿಯ ನೆರವೂ ಸಿಗಲಿದೆ
* ಸೆಮಿಕಂಡಕ್ಟರ್ ವಲಯದಲ್ಲಿ ಉತ್ಸಾಹದಿಂದ ದುಡಿಯುತ್ತಿರುವ ವರ್ಗ ಬೆಳೆಯಬೇಕು
ಬೆಂಗಳೂರು(ಮೇ.01): ‘ಸೆಮಿಕಾನ್ ಇಂಡಿಯಾ-2022’ (Semicon India -2022) ಕಾರ್ಯಕ್ರಮದಲ್ಲಿ ಅರೆವಾಹಕ (Semi-Conductor) ತಂತ್ರಜ್ಞಾನಗಳನ್ನು ಪ್ರದರ್ಶಿಸಿದ್ದ ಪ್ರದರ್ಶಕರು ಹಾಗೂ ಸ್ಟಾರ್ಟ್‌ಅಪ್ ಕಂಪೆನಿಗಳ ಪ್ರತಿನಿಧಿಗಳೊಂದಿಗೆ ವೈಯಕ್ತಿಕವಾಗಿ ಸಂವಾದ ನಡೆಸಿದ ಕೇಂದ್ರ ಐಟಿ-ಬಿಟಿ, ಎಲೆಕ್ಟ್ರಾನಿಕ್ಸ್ ಹಾಗೂ ಸಂವಹನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ಅವರು ಸೆಮಿ ಕಂಡಕ್ಟರ್ ವಲಯದಿಂದಲೇ ಮುಂದಿನ ಯೂನಿಕಾರ್ನ್ ಹೊರ ಹೊಮ್ಮಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ಪ್ರದರ್ಶಕರ ಬಳಿಯೂ ತಂತ್ರಜ್ಞಾನದ(Technology) ಕುರಿತು ಮಾಹಿತಿ ಪಡೆದು ಅವರ ಬೇಡಿಕೆಗಳು, ಮುಂದಿನ ಗುರಿಗಳು ಹಾಗೂ ಸರ್ಕಾರದಿಂದ ಬೇಕಾಗಿರುವ ಸಹಕಾರದ ಬಗ್ಗೆ ಕೇಳಿ ತಿಳಿದುಕೊಂಡ ಅವರು, ಸರ್ಕಾರದಿಂದ ಎಲ್ಲಾ ರೀತಿಯ ನೆರವೂ ಸಿಗಲಿದೆ. ನೀವು ಮುಂದಿನ ಯೂನಿಕಾರ್ನ್ (100 ಕೋಟಿ ಡಾಲರ್ ವಹಿವಾಟು ಸಂಸ್ಥೆ) ಆಗಿ ಬೆಳೆಯಬೇಕು ಎಂದು ಉತ್ತೇಜನ ನೀಡಿದರು.
ಸೆಮಿಕಂಡಕ್ಟರ್ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಸೆಮಿಕಾನ್ ಇಂಡಿಯಾ-2022 ಕಾರ್ಯಕ್ರಮದ ಎರಡನೇ ದಿನವಾದ ಶನಿವಾರ ರಾಜೀವ್ ಚಂದ್ರಶೇಖರ್ ಅವರು, ಪ್ರದರ್ಶಕರೊಂದಿಗೆ ಚರ್ಚಿಸಿದರು. ದೇಶದ ಡಿಜಿಟಲ್ ಆರ್ಥಿಕತೆ ಬೆಳೆಯಲು ಸ್ಟಾರ್ಟ್‌ಅಪ್(Startup) ಆವಿಷ್ಕಾರ ಹಾದಿ ಮಾಡಿಕೊಡಲಿದೆ. ಈ ನಿಟ್ಟಿನಲ್ಲಿ ಕೌಶಲ್ಯ ವೃದ್ಧಿಗೆ ಆದ್ಯತೆ ನೀಡಬೇಕು. ನೀತಿ ರೂಪಣೆ ಮತ್ತಿತರ ವಿಚಾರಗಳಲ್ಲಿ ಸರ್ಕಾರಕ್ಕೂ ಸಲಹೆ ನೀಡಬೇಕು ಎಂದು ಕರೆ ನೀಡಿದರು.
ಸೆಮಿಕಾನ್ ಇಂಡಿಯಾನದಲ್ಲಿ ಪ್ರದರ್ಶನಗೊಂಡಿದ್ದ ಆ್ಯಂಗ್‌ಸ್ಟ್ರಾಮ್, ಸಂಖ್ಯಾಲ್ಯಾಬ್ಸ್, ಸಿಗ್ನಲ್‌ಚಿಪ್ (ಆಗುಂಬೆ ಹೆಸರಿನ 5ಜಿ/4ಜಿ ಎಲ್‌ಟಿಇ ಮಿಕ್ಸ್‌ಡ್ ಸಿಗ್ನಲ್ ಡಿವೈಸ್ ಅಭಿವೃದ್ಧಿಪಡಿಸಿರುವ ಬೆಂಗಳೂರು ಮೂಲದ ಕಂಪೆನಿ), ಟೆಸ್ಸಾಲ್ ಸೆಮಿ ಕಂಡಕ್ಟರ್, ಇನ್ಫಿನೆನ್, ಸ್ಟೆರಡಿಯನ್ ಸೆಮಿ, ಕೊರೆಲ್ ಸಿಸ್ಟಮ್ಸ್ ಪ್ರೈ.ಲಿ, ಮೊಸ್ಚಿಪ್ ಟೆಕ್ನಾಲಜಿಸ್ ಸೇರಿದಂತೆ ಹಲವರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಸೆಮಿಕಂಡಕ್ಟರ್ ವಲಯದಲ್ಲಿ ಉತ್ಸಾಹದಿಂದ ದುಡಿಯುತ್ತಿರುವ ವರ್ಗ ಬೆಳೆಯಬೇಕು. ಮುಂದಿನ ಯೂನಿಕಾರ್ನ್ ಇಲ್ಲಿಂದ ಹೊರಬರಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ರಾಜೀವ್ ಚಂದ್ರಶೇಖರ್ ಅವರು, ಇಂಟೆಲ್ಸ್ ಕಂಪೆನಿಯ ಆರ್ಕಿಟೆಕ್ಚರ್ ಗ್ರಾಫಿಕ್ಸ್ ಮತ್ತು ಸಾಫ್ಟ್‌ವೇರ್ (ಐಎಜಿಎಸ್) ಉಪ ವಿಭಾಗದ ಹಿರಿಯ ಉಪಾಧ್ಯಕ್ಷ ರಾಜಾ ಕೊಡುರಿ ಸೇರಿದಂತೆ ಹಲವರೊಂದಿಗೆ ಸಂವಾದ ನಡೆಸಿದರು.