‘ಬಿಜೆಪಿಗೆ ಕಟ್ಟುವ ಕೆಲಸ ಗೊತ್ತಿಲ್ಲ: ಒಡೆಯುವ ಕೆಲಸ ಮಾತ್ರ ಬಿಡಲ್ಲ’!

By Web DeskFirst Published Aug 3, 2019, 9:26 PM IST
Highlights

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ| ಬಿಜೆಪಿಗೆ ಕಟ್ಟುವ ಕೆಲಸ ಗೊತ್ತಿಲ್ಲ ಎಂದ ರಾಹುಲ್ ಗಾಂಧಿ| ‘ದಶಕಗಳಿಂದ ಸುಭದ್ರವಾಗಿ ಕಟ್ಟಿದ್ದ ಆರ್ಥಿಕ ವ್ಯವಸ್ಥೆ ಹಾಳು ಮಾಡಿದ ಬಿಜೆಪಿ’| ಆದ್ಯತಾ ವಲಯಗಳ ಪ್ರಗತಿ ದರ ಶೇ. 0.2ಕ್ಕೆ ಕುಸಿದಿದೆ ಎಂದ ಕಾಂಗ್ರೆಸ್ ನಾಯಕ| ಬಿಜೆಪಿಗೆ ಒಡೆಯುವ ಕೆಲಸವಷ್ಟೇ ಗೊತ್ತು ಎಂದ ರಾಹುಲ್ ಗಾಂಧಿ|

ನವದೆಹಲಿ(ಆ.03): ಬಿಜೆಪಿಯವರಿಗೆ ಕಟ್ಟುವ ಕೆಲಸ ಗೊತ್ತಿಲ್ಲ, ಅವರಿಗೇನಿದ್ದರೂ ಒಡೆಯುವ ಕೆಲಸವಷ್ಟೇ ಗೊತ್ತು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೇಶದ ಆರ್ಥಿಕತೆ ಅಧೋಗತಿಗೆ ಇಳಿದಿದ್ದು, ದಶಕಗಳಿಂದ ನಿರ್ಮಿಸಲ್ಪಟ್ಟಿದ್ದ ಉತ್ತಮ ವ್ಯವಸ್ಥೆಯನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಹಾಳು ಮಾಡುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.

ಬಿಜೆಪಿ ಸರ್ಕಾರ ಹೊಸದಾಗಿ ಏನನ್ನೂ ಕಟ್ಟಲಿಲ್ಲ, ಬದಲಾಗಿ ದಶಕಗಳಿಂದ ಕಠಿಣ ಪರಿಶ್ರಮದ ಮೂಲಕ ರೂಪಿಸಿದ್ದ ಭದ್ರ ಆರ್ಥಿಕ ಅಡಿಪಾಯವನ್ನು ನಾಶ ಮಾಡುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

The BJP Government can’t build anything. It can only destroy what was built over decades with passion and hard work. pic.twitter.com/IV0HYE1GJ7

— Rahul Gandhi (@RahulGandhi)

ಪ್ರಸಕ್ತ ಸಾಲಿನಲ್ಲಿ ಎಂಟು ಪ್ರಮಖ ಆದ್ಯತಾ ವಲಯಗಳ ಪ್ರಗತಿ ದರ ಶೇ. 0.2ಕ್ಕೆ ಕುಸಿದಿದ್ದು, ಇದಕ್ಕೆ ಉತ್ತರ ಕೇಳಿದರೆ ದೇಶಪ್ರೇಮ, ರಾಷ್ಟ್ರ ವಿರೋಧಿ ಎಂಬಂತಹ ಮಾತುಗಳ ಮೂಲಕ ತನ್ನ ವೈಫಲ್ಯವನ್ನು ಮರೆಮಾಚಲು ಪ್ರಯತ್ನಿಸುತ್ತದೆ ಎಂದು ರಾಹುಲ್ ಹರಿಹಾಯ್ದಿದ್ದಾರೆ.

ಲಾರ್ಸೆನ್ ಮತ್ತು ಟಬ್ರೊ (ಎಲ್&ಟಿ) ಅಧ್ಯಕ್ಷ ಎ.ಎಮ್ ನಾಯಕ್ ದೇಶದ ಆರ್ಥಿಕತೆಯ ಬಗ್ಗೆ ಮಾಡಿರುವ ಟೀಕೆ, ಆರ್ಥಿಕತೆಯ ಮಂದಗತಿ ತೋರುವ ಮಾಧ್ಯಮ ವರದಿಗಳನ್ನು ರಾಹುಲ್ ಉಲ್ಲೇಖಿಸಿದ್ದಾರೆ. 

ಭಾರತೀಯ ರೈಲ್ವೆ ಇಲಾಖೆ ಮೂರು ಲಕ್ಷ ಉದ್ಯೋಗ ಕಡಿತ ಮಾಡುವ ಆಲೋಚನೆ ಮಾಡಿದ್ದು, ಆಟೋಮೊಬೈಲ್ ವಿಭಾಗದಲ್ಲಿ ಜುಲೈ ಮಾರಾಟದ ಕುಸಿತ ಮತ್ತು ಬಿಎಸ್ಎನ್ಎಲ್ ಹಾಗೂ ಎಂಟಿಎನ್ಎಲ್ 1.98 ಲಕ್ಷ ಉದ್ಯೋಗಿಗಳಿಗೆ ವೇತನ ಪಾವತಿಸಲು ಆಗದಿರುವುದಕ್ಕೆ ರಾಹುಲ್ ಕಿಡಿಕಾರಿದ್ದಾರೆ. 

ಆರ್ಥಿಕತೆ ಪೂರ್ಣ ಹಳಿ ತಪ್ಪಿದ್ದು, ಮೋದಿ ಅವರ ಅಸಮರ್ಥ ಹಣಕಾಸು ಸಚಿವರು ಸುರಂಗದಲ್ಲಿ ಬೆಳಕಿದೆ ಎಂದು ಸುಳ್ಳು ಹೇಳುತ್ತಾ ಭ್ರಮೆ ಹುಟ್ಟಿಸುತ್ತಿದ್ದಾರೆ ಎಂದು ರಾಹುಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

click me!