ಬ್ರಹ್ಮಾಸ್ತ್ರ ಚಿತ್ರದಿಂದ ಲಾಭ ಬರೋದು ಬಿಡಿ, ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಯಾಗಿ ವಿಮರ್ಶಕರಿಂದ ಸಾಧಾರಣ ಪ್ರತಿಕ್ರಿಯೆ ಪಡೆದುಕೊಂಡಿದ್ದ ಕಾರಣಕ್ಕೆ ಪಿವಿಆರ್-ಐನಾಕ್ಸ್‌ನ ಹೂಡಿಕೆದಾರರು 800 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. ಈ ಕಂಪನಿಯ ಷೇರುಗಳ ಮೌಲ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸಿತವಾಗಿರುವುದು ಇದಕ್ಕೆ ಕಾರಣ.
ನವದೆಹಲಿ (ಸೆ.11): ತನ್ನ ನಿರ್ಮಾಣದ ಹಣವನ್ನು ಮರಳಿ ಪಡೆಯೋದು ಮರೆತುಬಿಡಿ, ಬ್ರಹ್ಮಾಸ್ತ್ರ ಚಿತ್ರದಿಂದಾಗಿ ಪಿವಿಆರ್ ಮತ್ತು ಐನಾಕ್ಸ್‌ನ ಹೂಡಿಕೆದಾರರ ಹಣವೂ ಮಾಯವಾಗುತ್ತಿದೆ. ಚಿತ್ರದ ಕುರಿತಾಗಿ ಬಂದಿರುವ ಆರಂಭಿಕ ವಿಮರ್ಶೆಗಳಿಂದಾಗಿ ಬ್ರಹ್ಮಾಸ್ತ್ರ ಚಿತ್ರದ ನಿರೀಕ್ಷೆಗೆ ತಣ್ಣೀರು ಸುರಿದಂತಾಗಿದೆ. ಇದರಿಂದಾಗಿ ಶುಕ್ರವಾರ ಅಂತ್ಯದ ವೇಳೆಗೆ ಪಿವಿಆರ್ ಹಾಗೂ ಐನಾಕ್ಸ್ ಕಂಪನಿಯ ಮಾರುಕಟ್ಟೆ ಬಂಡವಾಳೀಕರಣದಲ್ಲಿ 800 ಕೋಟಿಗಿಂತ ಹೆಚ್ಚಿನ ಹಣವನ್ನು ಕಳೆದುಕೊಂಡಿದೆ. ವೀಕೆಂಡ್‌ನಲ್ಲೂ ಚಿತ್ರ ಹಣ ಗಳಿಕೆಯಲ್ಲಿ ಹಿಂದೆ ಬಿದ್ದಿರುವ ಕಾರಣ, ಐನಾಕ್ಸ್ ಹಾಗೂ ಪಿವಿಆರ್ ಕಂಪನಿಯ ಷೇರುಗಳ ಮೇಲೆ ಸೋಮವಾರವೂ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತೀಯ ಪುರಾಣಗಳಲ್ಲಿ, ಬ್ರಹ್ಮಾಸ್ತ್ರವನ್ನು ತಡೆಯಲಾಗದ ವಿನಾಶದ ಆಯುಧವೆಂದು ಕರೆಯಲಾಗುತ್ತದೆ, ಇದನ್ನು ಅದರ ಪ್ರತಿದಾಳಿ ಅಸ್ತ್ರದಿಂದ (ಆಯುಧ) ಮಾತ್ರ ನಿಲ್ಲಿಸಬಹುದು. ಆದರೆ, ಬ್ರಹ್ಮಾಸ್ತ್ರ ಚಿತ್ರಕ್ಕೆ ಅದರ ಹೆಸರೇ ದೊಡ್ಡ ವಿಪತ್ತು ತಂದಿಟ್ಟಿದೆ ಎಂದು ಹೇಳಲಾಗಿದೆ. 23 ಕೋಟಿ ರೂಪಾಯಿಗಿಂತಲೂ ಹೆಚ್ಚು ಉತ್ತಮ ಮುಂಗಡ ಬುಕ್ಕಿಂಗ್‌ನ ಹೊರತಾಗಿಯೂ ಚಿತ್ರಕ್ಕೆ ಮೊದಲದಿನದ ವಿಮರ್ಶೆ ಅಷ್ಟಾಗಿ ಧನಾತ್ಮಕವಾಗಿರಲಿಲ್ಲ. ಚಲನಚಿತ್ರ ವಿಮರ್ಶಕ ಮತ್ತು ವಿಶ್ಲೇಷಕ ತರಣ್ ಆದರ್ಶ್ ಅವರು ರಣಬೀರ್-ಆಲಿಯಾ ಅಭಿನಯದ ಚಿತ್ರಕ್ಕೆ ಎರಡು-ಸ್ಟಾರ್ ರೇಟಿಂಗ್ ನೀಡಿದ್ದಲ್ಲದೆ, ಚಲನಚಿತ್ರವು ರಾಜ ಗಾತ್ರದ ನಿರಾಶೆಯಾಗಿದೆ ಎಂದು ಟ್ವೀಟ್ ಮಾಡಿದ್ದರು.
ಬ್ರಹ್ಮಾಸ್ತ್ರ ಫ್ಲಾಪ್ ಆದಲ್ಲಿ, ಇದು ಬಾಲಿವುಡ್‌ನ ಅತಿದೊಡ್ಡ ಫ್ಲಾಪ್ ಚಿತ್ರಗಳಲ್ಲಿ ಒಂದಾಗಲಿದೆ. ಆದರೆ ಹಲವಾರು ದಕ್ಷಿಣ ಭಾರತದ ಚಲನಚಿತ್ರಗಳು ರಾಷ್ಟ್ರವ್ಯಾಪಿ ದಾಖಲೆಗಳನ್ನು ಮುರಿದಿರುವ ಸಮಯದಲ್ಲಿ ಹಿಂದಿ ಚಲನಚಿತ್ರೋದ್ಯಮದ ಪುನರುಜ್ಜೀವನದ ಭರವಸೆಯನ್ನು ಇದು ಹಳಿ ತಪ್ಪಿಸಬಹುದು. ₹ 410 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಬ್ರಹ್ಮಾಸ್ತ್ರದಲ್ಲಿ ರಣಬೀರ್ ಕಪೂರ್, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಟಾಲಿವುಡ್ ಸ್ಟಾರ್ ನಾಗಾರ್ಜುನ ಮತ್ತು ಶಾರುಖ್ ಖಾನ್ ಕೂಡ ಕೆಲ ಪಾತ್ರದಲ್ಲಿ ನಟಿಸಿದ್ದಾರೆ. ಕರಣ್ ಜೋಹರ್ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಹಲವಾರು ವರ್ಷಗಳಿಂದ ಚಿತ್ರೀಕರಣ ನಡೆದು, ವಿಳಂಬವಾಗಿ ಚಿತ್ರ ಬಿಡುಗಡೆಯಾಗಿದೆ. ಈ ಎಲ್ಲವನ್ನೂ ಲೆಕ್ಕಾಚಾರ ಮಾಡಿದರೆ, ಚಿತ್ರಕ್ಕೆ ಹಾಕಿರುವ ಅರ್ಧದಷ್ಟು ಹಣ ಕೂಡ ವಾಪಸ್ ಬರುವುದು ಅನುಮಾನ ಎಂದು ವಿಶ್ಲೇಷಕರು ಹೇಳಿದ್ದಾರೆ.
ಈ ಚಿತ್ರದ ಲೈಫ್ ಟೈಮ್ ಬಾಕ್ಸ್ ಆಫೀಸ್ ಅಂದಾಜು 130 ರಿಂದ 200 ಕೋಟಿ ರೂಪಾಯಿ ಆಗಬಹುದು. ಇದಕ್ಕೆ ಕಾರಣ ಚಿತ್ರಕ್ಕೆ ಆಗಿರುವ ಉತ್ತಮ ಮುಂಗಡ ಬುಕ್ಕಿಂಗ್ ಎಂದು ಎಲ್ರಾ ಕ್ಯಾಪಿಟಲ್ ವರದಿ ಮಾಡಿದೆ. ಆದರೆ, ಇದು ಚಿತ್ರದ ವಿಮರ್ಶೆ ಬರುವುದಕ್ಕೂ ಮುಂಚಿನ ವಿಮರ್ಶೆಯಾಗಿತ್ತು.
ಬ್ರಹ್ಮಾಸ್ತ್ರ ರಣಬೀರ್ ಕಪೂರ್ ದೊಡ್ಡ ಓಪನರ್; ಆದರೂ KGF ಮೊದಲ ದಿನದ ಕಲೆಕ್ಷನ್ ಮುಟ್ಟಲಿಲ್ಲ
ಪಿವಿಆರ್ ಮಾಲೀಕನ ಸ್ಪಷ್ಟನೆ: ಈ ಚಿತ್ರದಿಂದಾಗಿ ಪಿವಿಆರ್ ಹಾಗೂ ಐನಾಕ್ಸ್‌ನ ಹೂಡಿಕೆದಾರರು ಒಟ್ಟಾರೆ 800 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ ಎನ್ನುವ ವರದಿಯ ಬಗ್ಗೆ ಸ್ವತಃ ಪಿವಿಆರ್ ಸಿಇಒ ಕಮಲ್ ಗೈನ್‌ಚಂದಾನಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ಚಿತ್ರದ ಕುರಿತಾಗಿ ಮಾಡುತ್ತಿರುವ ತಪ್ಪು ಹಾಗೂ ನೆಗೆಟಿವ್ ಮಾಹಿತಿಯಾಗಿದೆ ಎಂದು ಹೇಳಿದ್ದಾರೆ.
ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 'ಬಾಹುಬಲಿ' ಕಲೆಕ್ಷನ್ ಹಿಂದಿಕ್ಕಿದ 'ಬ್ರಹ್ಮಾಸ್ತ್ರ'
ಏನಿದು ಲೆಕ್ಕಾಚಾರ: ಬ್ರಹ್ಮಾಸ್ತ್ರ ಚಿತ್ರ ಸೆ. 9 ರಂದು ಬಿಡುಗಡೆಯಾಗಿತ್ತು. ಅಂದು ಪಿವಿಆರ್ ಲಿಮಿಟೆಡ್‌ನ ಪ್ರತಿ ಷೇರುಗಳು 1959.70 ರೂಪಾಯಿಯಲ್ಲಿತ್ತು. ಆದರೆ ಶುಕ್ರವಾರದ ವ್ಯವಹಾರದ ಅಂತ್ಯದ ವೇಳೆಗೆ 1833 ರೂಪಾಯಿಗೆ ತಲುಪಿದೆ. ಒಂದೇ ದಿನದಲ್ಲಿ101.35 ರೂಪಾಯಿ ಕಡಿಮೆಯಾಗಿದೆ. ಇನ್ನು ಐನಾಕ್ಸ್ ಲೀಶರ್ ಲಿಮಿಟೆಡ್‌ನ ಷೇರು ಶುಕ್ರವಾರದ ಆರಂಭದಲ್ಲಿ 526.15 ರೂಪಾಯಿಗೆ ಮಾರಾಟವಾಗುತ್ತಿತ್ತು. ದಿನದ ಅಂತ್ಯದಲ್ಲಿ 25.30 ರೂಪಾಯಿ ಕುಸಿದು 494.90 ರೂಪಾಯಿಗೆ ಬಂದು ಮುಟ್ಟಿದೆ.