ಮಂಡ್ಯ: ಹಸಿರು ಮನೆಯೊಳಗೊಂದು ಆಲೆಮನೆ, ಉತ್ಕೃಷ್ಟ ಗುಣಮಟ್ಟದ ಸಾವಯವ ಬೆಲ್ಲ ಉತ್ಪಾದನೆ

By Kannadaprabha News  |  First Published Aug 9, 2023, 8:34 PM IST

ಓದಿ ಯಾವುದೋ ಕೆಲಸ ಹುಡುಕಿ ಕೊಂಡು, ಮಹಾನಗರ ಸೇರುತ್ತಿರುವ ವಿದ್ಯಾವಂತ ಯುವಕರ ನಡುವೆ, ಸಾವಯವ ಬೆಲ್ಲ ತಯಾರಿಸಿ, ಮಾರುಕಟ್ಟೆ ವಿಸ್ತರಣೆಗೆ ಯುವ ಇಂಜಿನಿಯರ್‌ಗಳು ಶ್ರಮಿಸುತ್ತಿದ್ದಾರೆ. 


ಮಂಡ್ಯ ಮಂಜುನಾಥ

ಮಂಡ್ಯ(ಆ.09):  ಓದಿ ಯಾವುದಾದರೊಂದು ಪದವಿ ಗಳಿಸಿ ಉದ್ಯೋಗ ಗಿಟ್ಟಿಸಿಕೊಂಡು ಮಹಾನಗರ ಸೇರುತ್ತಿರುವ ಇಂದಿನ ಯುವಕರ ನಡುವೆ ಪಿತ್ರಾರ್ಜಿತ ಜಮೀನಿನಲ್ಲಿ ಉತ್ಕೃಷ್ಟ ಕಬ್ಬನ್ನು ಬೆಳೆದು, ಆಲೆಮನೆ ನಿರ್ಮಿಸಿ ಸಾವಯವ ಬೆಲ್ಲ ತಯಾರಿಕೆಯಲ್ಲಿ ತೊಡಗುವುದರೊಂದಿಗೆ ತಮ್ಮದೇ ಮಾರುಕಟ್ಟೆ ಸೃಷ್ಟಿಸಿಕೊಂಡಿರುವ ಇಬ್ಬರು ಇಂಜಿನಿಯರ್‌ಗಳು ಇತರೆ ಯುವಕರಿಗೆ ಮಾದರಿಯಾಗಿದ್ದಾರೆ.

Tap to resize

Latest Videos

ಮಳವಳ್ಳಿ ತಾಲೂಕು ಬಿ.ಜಿ.ಪುರ ಹೋಬಳಿಯ ವಕ್ಕರಹಳ್ಳಿ ಗ್ರಾಮದ ಹಿತೇಶ್‌ಕುಮಾರ್ ಹಾಗೂ ತುಮಕೂರಿನ ಬಿ.ಜೆ.ರಾಘವೇಂದ್ರ ಅವರು ಜೊತೆಗೂಡಿ ಮೌಲ್ಯಾಧಾರಿತ ಕೃಷಿ ಉತ್ಪನ್ನವಾದ ಸಾವಯವ ಬೆಲ್ಲ ತಯಾರಿಸುತ್ತಿದ್ದಾರೆ. ಹಿತೇಶ್‌ಕುಮಾರ್ ಅವರಿಗೆ ಪಿತ್ರಾರ್ಜಿತವಾಗಿ ದೊರಕಿದ್ದ 6 ಎಕರೆ ಜಮೀನು ಹಾಗೂ ಸಂಬಂಧಿಕರ 10 ಎಕರೆ ಜಮೀನಿನಲ್ಲಿ ಕಬ್ಬನ್ನು ಬೆಳೆದು ಅಚ್ಚುಕಟ್ಟಾಗಿ ನಿರ್ಮಿಸಿರುವ ಆಲೆಮನೆಯೊಳಗೆ ಘಮ ಘಮಿಸುವ ಬೆಲ್ಲ ತಯಾರಾಗುತ್ತಿದೆ.
ಕೊರೋನಾ ಸಮಯದಲ್ಲಿ ಮೊಳಕೆಯೊಡೆದ ಕನಸನ್ನು ನನಸಾಗಿಸಿಕೊಂಡಿರುವ ಯುವಕರು ಯಶಸ್ಸಿನತ್ತ ದಾಪುಗಾಲು ಇಡುತ್ತಿದ್ದಾರೆ. ಬಿ.ಜೆ.ರಾಘವೇಂದ್ರ ಬೆಂಗಳೂರಿನ ಬಾಸ್ಕೋ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದರೆ, ಹಿತೇಶ್‌ಕುಮಾರ್ ಹೆಸರಾಂತ ಕಂಪನಿಗಳಿಗೆ ಸೂಪರ್ ಕಂಪ್ಯೂಟರ್ ವಿನ್ಯಾಸ ಮಾಡಿಕೊಡುವ ಎಂಜಿನಿಯರ್. ಇವರಿಬ್ಬರು ಸೇರಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯಡಿ ಆಲೆಮನೆ ನಿರ್ಮಿಸಿ ಬೆಲ್ಲದ ಉತ್ಪಾದನೆಯಲ್ಲಿ ತೊಡಗಲು ನಿರ್ಧರಿಸಿದರು.

ಬೀದರ್: ದೇಶಾದ್ಯಂತ ತಲುಪಿದ ಬೀದರ್‌ನ ಸಿರಿಧಾನ್ಯ, ಕಡಿಮೆ ಬಂಡವಾಳ ಕೋಟ್ಯಂತರ ರೂ. ಲಾಭ..!

ಸುಮಾರು ಒಂದು ಕೋಟಿ ರು.ವೆಚ್ಚದಲ್ಲಿ ಆಲೆಮನೆಯನ್ನು ಅತ್ಯಾಧುನಿಕ ರೀತಿಯಲ್ಲಿ ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಆಲೆಮನೆಗಳಲ್ಲಿ ಕಬ್ಬಿಣದ ಕೊಪ್ಪರಿಕೆಗಳನ್ನು ಬಳಸಿದರೆ ಇವರು ಸ್ಟೀಲ್ ಕೊಪ್ಪರಿಕೆ ಬಳಸುತ್ತಿದ್ದಾರೆ. ಅಲ್ಲದೆ, ಕಂಪ್ರೆಸ್ಡ್ ಸ್ಟೆಬಿಲೈಸ್ಡ್ ಅರ್ತ್ ಬ್ಲಾಕ್‌ಗಳನ್ನು ಬಳಸಿ ಆಲೆಮನೆಯನ್ನು ನಿರ್ಮಿಸಿದ್ದಾರೆ. ಹಸಿರು ಮನೆ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿರುವ ಅಪರೂಪದ ಆಲೆಮನೆ ಇದು. 

10 ಟನ್ ಸಾಮರ್ಥ್ಯ ಯೂನಿಟ್

ಸುಮಾರು ನಿತ್ಯ 10 ಟನ್ ಕಬ್ಬನ್ನು ಅರೆಯುವ ಸಾಮರ್ಥ್ಯದ ಯೂನಿಟ್ ಅಳವಡಿಸಸಲಾಗಿದೆ. ಪ್ರತಿ ತಿಂಗಳು 250 ಟನ್‌ನಿಂದ ೩೦೦ ಟನ್ ಕಬ್ಬು ಅರೆಯಬಹುದಾಗಿದೆ. ಸದ್ಯ 2 ರಿಂದ 3 ಟನ್ ಕಬ್ಬಿಗೆ ಬೇಕಾಗುವಷ್ಟು ಹಾಲು ಅರೆಯಲಾಗುತ್ತಿದ್ದು 300 ರಿಂದ 500 ಕೆಜಿಯಷ್ಟು ಬೆಲ್ಲ ತಯಾರಿಸುತ್ತಿದ್ದಾರೆ. ಪ್ರತಿ ಕೆಜಿ ಬೆಲ್ಲದ ಪೌಡರ್ ಬೆಲೆ 120 ರು., ಹೋಲ್‌ಸೇಲ್ ಬೆಲೆ 90 ರು. ಆಗಿದ್ದರೆ, ಅಚ್ಚು ಬೆಲ್ಲ ಹೋಲ್‌ಸೇಲ್‌ನಲ್ಲಿ ಪ್ರತಿ ಕೆಜಿಗೆ 60 ರು., 80 ರು.ನಂತೆ ಮಾರಾಟ ಮಾಡಲಾಗುತ್ತಿದೆ. 

ಬೆಂಗಳೂರಿನಲ್ಲಿ ಮಾರುಕಟ್ಟೆ:

ಇಲ್ಲಿ ತಯಾರಾದ ಉತ್ಕೃಷ್ಟ ಗುಣಮಟ್ಟದ ಬೆಲ್ಲವನ್ನು ಉತ್ತಮ ರೀತಿಯಲ್ಲಿ ಪ್ಯಾಕಿಂಗ್ ಮಾಡಿ ರೈತಮಿತ್ರ ಜಾಗರಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್‌ನಡಿ ಮಾರಲಾಗುತ್ತದೆ. ಬೆಂಗಳೂರಿನ ಇಸ್ರೋ ಲೇಔಟ್‌ನಲ್ಲಿ ವೇರ್‌ಹೌಸ್ ನಿರ್ಮಿಸಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇವರು ತಯಾರಿಸುತ್ತಿರುವ ಬೆಲ್ಲಕ್ಕೆ ಎಲ್ಲೆಡೆಯಿಂದ ಉತ್ತಮ ಬೇಡಿಕೆ ಬರುತ್ತಿದೆ. ಗುಣಮಟ್ಟಕ್ಕೆ ಮೊದಲ ಆದ್ಯತೆ ನೀಡಿರುವ ಇವರು ಆತುರಪಡದೆ ನಿಧಾನವಾಗಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಬೆಲ್ಲದ ಕಾಫಿ, ಬೆಲ್ಲದ ಟೀಗೆ ಹೆಚ್ಚು ಜನರು ಒಲವು ತೋರುತ್ತಿರುವುದರಿಂದ ರಾಸಾಯನಿಕ ಮುಕ್ತ ಬೆಲ್ಲಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಮನಗಂಡು ಹೊರ ಜಿಲ್ಲೆಗಳಲ್ಲೂ ಮಾರುಕಟ್ಟೆ ಸೃಷ್ಟಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಕಲ್ಪವೃಕ್ಷ ನೀಡಿದ ಕಲ್ಪರಸ, ಇದು ಕರಾವಳಿಯ ಕಾಮಧೇನು!

ಇಬ್ಬರು ಇಂಜಿನಿಯರ್‌ಗಳ  ಶ್ರಮಕ್ಕೆ ಸಂಬಂಧಿಕರು, ಕುಟುಂಬದವರು, ಸ್ನೇಹಿತರು ಕೈಜೋಡಿಸಿದ್ದಾರೆ. ದಿನೇ ದಿನೇ ಪ್ರವರ್ಧಮಾನಕ್ಕೆ ಬರುತ್ತಾ ಬೆಲ್ಲದ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿದ್ದಾರೆ. ಇದಲ್ಲದೆ ವಕ್ಕರಹಳ್ಳಿಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ನೀಡುವ ಕಬ್ಬಿನ ಬೆಳೆಯನ್ನು ರೈತರಿಗೆ ಪರಿಚಯಿಸುತ್ತಿದ್ದಾರೆ. ಈಗಾಗಲೇ ಇವರ ಜಮೀನಿನಲ್ಲಿ ಕಬ್ಬು ಬೆಳೆದು, ಇತರೆ ರೈತರಿಗೂ ಅರಿವು, ಜಾಗೃತಿ ಮೂಡಿಸುತ್ತಿದ್ದಾರೆ. 

ಗುಣಮಟ್ಟದ ಸಾವಯವ ಬೆಲ್ಲವನ್ನು ತಯಾರಿಸಿ ಜನರಿಗೆ ನೀಡುತ್ತಿದ್ದೇವೆ. ನಮ್ಮ ಉತ್ಪನ್ನ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಗುಣಮಟ್ಟಕ್ಕೆ ಪ್ರಾಮುಖ್ಯತೆ ಕೊಟ್ಟು ಮಾರುಕಟ್ಟೆಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿದ್ದೇವೆ. ಕೊರೋನಾ ಸಮಯದಲ್ಲಿ ಕಂಡ ಕನಸು ನನಸಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಮಾರುಕಟ್ಟೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೇವೆ ಎಂದು ಮಳವಳ್ಳಿ ತಾಲೂಕಿನ ಹಿತೇಶ್‌ಕುಮಾರ್, ವಕ್ಕರಹಳ್ಳಿ ತಿಳಿಸಿದ್ದಾರೆ. 

click me!