ಬೀದರ್: ದೇಶಾದ್ಯಂತ ತಲುಪಿದ ಬೀದರ್‌ನ ಸಿರಿಧಾನ್ಯ, ಕಡಿಮೆ ಬಂಡವಾಳ ಕೋಟ್ಯಂತರ ರೂ. ಲಾಭ..!

By Kannadaprabha News  |  First Published Aug 9, 2023, 8:12 PM IST

ಕೋವಿಡ್ ವಿಶ್ವ ವ್ಯಾಪಿಯಾಗಿದ್ದ 2020ರಲ್ಲಿ ರುಚಿತ್-ಬಿ ಸಿರಿಧಾನ್ಯಗಳ ಸಿರಿ ಎಂಬ ಹೆಸರಿನೊಂದಿಗೆ ಬೀದರ್ ಕೈಗಾರಿಕಾ ಪ್ರದೇಶದಲ್ಲಿ ಆರಂಭವಾಗಿರುವ ಮೆ. ಭಾಸನ್ ಎಂಟರ್‌ಪ್ರೈಸಸ್‌ನ ಏಕದಳ ಧಾನ್ಯಗಳ ಆಹಾರೋತ್ಪನ್ನ, ಪೌಷ್ಠಿಕ ಆಹಾರ ಪ್ರೋತ್ಸಾಹ ಉದ್ಯಮವೀಗ ಹೆಮ್ಮರವಾಗಿ ಬೆಳೆಯುತ್ತಿದೆ.


ಅಪ್ಪಾರಾವ್ ಸೌದಿ

ಬೀದರ್(ಆ.09): ಕೋವಿಡ್ ಸಂಕಷ್ಟದ ಆ ದಿನಗಳು, ಜನಾರೋಗ್ಯದ ಚಿಂತೆ, ವಿಷಕಾರಿ ಆಹಾರದ ಆತಂಕದ ಮಧ್ಯಯೇ ಚಿಗುರೊಡೆದ ವ್ಯಾಪಾರೋದ್ಯಮದ ಕನಸು, 5 ಸಾವಿರ ರು. ಬಂಡವಾಳ, ಸರ್ಕಾರದ ಪ್ರೋತ್ಸಾಹದೊಂದಿಗೆ ಮೂರು ವರ್ಷಗಳ ಹಿಂದೆ ಆರಂಭಿಸಿದ ಸಿರಿಧಾನ್ಯದ ವ್ಯಾಪಾರ ಇದೀಗ ಕೋಟ್ಯಂತರ ರೂಪಾಯಿ ವ್ಯವಹಾರದೊಂದಿಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಹಳ್ಳಿ, ಪಟ್ಟಣಗಳಿಗೆ ಸೀಮಿತವಾಗಿದ್ದ ಮಾರಾಟ ಇದೀಗ ದಿಲ್ಲಿ, ಮುಂಬೈಗೂ ತಲುಪಿಯಾಗಿದೆ.

Tap to resize

Latest Videos

undefined

ಅರಬ್ ದೇಶಗಳಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ಎಂಜಿನಿಯರ್. ಸಾವಿರಾರು ಜನ ಎಂಜಿನಿಯರ್ ಸಿಬ್ಬಂದಿಗೆ ಮೇಲಾಧಿಕಾರಿಯಾಗಿ ಕೈತುಂಬಾ ಸಂಬಳ ಪಡೆಯುತ್ತಿದ್ದ ಸಂಜೀವಕುಮಾರ್ ಭಾಸನ್ ಹಾಗೂ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ ಆಗಿ ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಶಶಿಧರ್ ಭಾಸನ್ ಇಲ್ಲಿನ ಜಿಲ್ಲೆಯ ಹೊಚಕನಳ್ಳಿ ಗ್ರಾಮದ ಸಹೋದರರು ಕೋವಿಡ್ ದಿನಗಳಲ್ಲಿ ತಮ್ಮ ವೃತ್ತಿ ತೊರೆದು ಆರಂಭಿಸಿರುವ ಈ ಸ್ಟಾರ್ಟ್ಅಪ್ ಇದೀಗ ದೇಶದ ವಿವಿಧೆಡೆ ತಮ್ಮ ವ್ಯಾಪಾರ ವಿಸ್ತರಿಸಿದೆ. 

ಕಲ್ಪವೃಕ್ಷ ನೀಡಿದ ಕಲ್ಪರಸ, ಇದು ಕರಾವಳಿಯ ಕಾಮಧೇನು!

ಕೋವಿಡ್ ವಿಶ್ವ ವ್ಯಾಪಿಯಾಗಿದ್ದ 2020ರಲ್ಲಿ ರುಚಿತ್-ಬಿ ಸಿರಿಧಾನ್ಯಗಳ ಸಿರಿ ಎಂಬ ಹೆಸರಿನೊಂದಿಗೆ ಬೀದರ್ ಕೈಗಾರಿಕಾ ಪ್ರದೇಶದಲ್ಲಿ ಆರಂಭವಾಗಿರುವ ಮೆ. ಭಾಸನ್ ಎಂಟರ್‌ಪ್ರೈಸಸ್‌ನ ಏಕದಳ ಧಾನ್ಯಗಳ ಆಹಾರೋತ್ಪನ್ನ, ಪೌಷ್ಠಿಕ ಆಹಾರ ಪ್ರೋತ್ಸಾಹ ಉದ್ಯಮವೀಗ ಹೆಮ್ಮರವಾಗಿ ಬೆಳೆಯುತ್ತಿದೆ.

ವ್ಯಾಪಾರೋದ್ಯಮ ಆರಂಭಿಸಲು ಪ್ರೇರಣೆ:

ಕೋವಿಡ್ ಸಂಕಷ್ಟದ ಕಾಲದಲ್ಲಿ ಜನರಿಗೆ ಪೌಷ್ಠಿಕಾಂಶಗಳನ್ನು ಹೊಂದಲು ಸಿರಿಧಾನ್ಯಗಳ ಆಹಾರ ಸೇವನೆಯ ಸಲಹೆ ನೀಡುತ್ತ ಮನೆಯಲ್ಲಿಯೇ ಸಿರಿಧಾನ್ಯಗಳಿಂದ ಆಹಾರ ಪದಾರ್ಥಗಳನ್ನು ತಯಾರಿಸಿ ಪ್ರತಿ ಭಾನುವಾರ ಸಂಬಂಧಿಕರಿಗೆ, ಸ್ನೇಹಿತರಿಗೆ ನೀಡುತ್ತಾ ಹೋದದ್ದು, ಮುಂದೆ ವ್ಯಾಪಾರವಾಗಿ ಬೆಳೆಯಿತು. ರಾಯಚೂರು ಕೃಷಿ ವಿವಿಯಲ್ಲಿ ನಡೆದ ಸಿರಿಧಾನ್ಯ ಮೇಳದಲ್ಲಿ ಸಿಕ್ಕ ಸರ್ಕಾರದ ಪ್ರೋತ್ಸಾಹ ಕೈ ಹಿಡಿದು ಬೆಳೆಸಿದೆ. 

ಬಂಡವಾಳ ಹೂಡಿಕೆ, ವ್ಯಾಪಾರ ಬೆಳವಣಿಗೆ:

ಅಂದು 5 ಸಾವಿರ ರು. ಬಂಡವಾಳದೊಂದಿಗೆ ಆರಂಭವಾದ ಉದ್ಯಮ ಇದೀಗ ವಾರ್ಷಿಕ ಒಂದೂವರೆ ಕೋಟಿ ರು. ವ್ಯಾಪಾರಕ್ಕೇರಿದೆ. ಪ್ರತಿ ತಿಂಗಳು 600 ಕ್ವಿಂಟಲ್ ಸಿರಿಧಾನ್ಯಗಳ ಆಹಾರೋತ್ಪನ್ನಗಳು ಮಾರಾಟವಾಗುತ್ತವೆ. ಅಷ್ಟಕ್ಕೂ ಹೈದ್ರಾಬಾದ್‌ನ ಐಟಿಸಿ ಇವರ ಕೈಗಾರಿಕಾ ಘಟಕದಿಂದ ವಾರ್ಷಿಕ 155 ಟನ್‌ಗೂ ಹೆಚ್ಚು ಸಿರಿಧಾನ್ಯ ಜೋಳದ ನುಚ್ಚನ್ನು ಖರೀದಿಸುತ್ತದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಹಾಗೂ ಗುಜರಾತ್‌ನಲ್ಲಿಯೂ ಇವರ ಉತ್ಪನ್ನಗಳು ಮಾರಾಟವಾಗುತ್ತವೆ. ಇವರು ಬೀದರ್, ರಾಯಚೂರು ಸೇರಿ ಮತ್ತಿತರೆಡೆಯಿಂದ ಸಿರಿಧಾನ್ಯಗಳನ್ನು ಖರೀದಿಸುತ್ತಾರೆ.

ಪಾಲ್ಗೊಂಡ ಮೇಳ, ಪುರಸ್ಕಾರಗಳು, ಸರ್ಕಾರದ ಸಹಕಾರ:

ಇವರು ಮುಂಬೈನಲ್ಲಿ ನಡೆದ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ, ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ, ಗ್ಲೋಬಲ್ ಇನ್ವೆಸ್ಟ್ ಕರ್ನಾಟಕ ಹೀಗೆಯೇ ಅನೇಕ ಪ್ರತಿಷ್ಠಿತ ಮೇಳಗಳಲ್ಲಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ, ಕೈಗಾರಿಕಾ ಇಲಾಖೆ ಸಹಯೋಗದೊಂದಿಗೆ ಪಾಲ್ಗೊಂಡು ಭೇಷ್ ಎನಿಸಿಕೊಂಡಿದ್ದಿದೆ. ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.

ರೇಷ್ಮೆ ಕೃಷಿಯಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ ಕೊರಟಗೆರೆಯ ಶ್ರೀವತ್ಸ: ರೇಷ್ಮೆಗೆ ಪ್ರತ್ಯೇಕ ಮೊಬೈಲ್ ಆ್ಯಪ್

ಏನು ತಯಾರಾಗುತ್ತವೆ?:

ರಾಗಿ ಕಿಚಡಿ ಇನ್ಸ್ಟೆಂಟ್ ಮಿಕ್ಸ್, ನವಣೆ ದೋಸೆ ಮಿಕ್ಸ್, ನವಣೆ ಕಿಚಡಿ ಮಿಕ್ಸ್, ಕೆಂಪು ಅಕ್ಕಿ ಕಿಚಡಿ ಇನ್ಸ್‌ಟಂಟ್ ಮಿಕ್ಸ್, ಕೆಂಪಕ್ಕಿ ಉಪ್ಪಿಟ್ಟು ರವಾ ಇನ್ಸ್‌ಟಂಟ್ ಮಿಕ್ಸ್, ಕೆಂಪಕ್ಕಿ ದೋಸಾ ಮಿಕ್ಸ್, ಅರಕ ಕಿಚಡಿ ಮಿಕ್ಸ್, ಜೋಳದ ದೋಸಾ ಮಿಕ್ಸ್, ಸಜ್ಜೆ ಮಿಕ್ಸ್, ಕಪ್ಪು ಅಕ್ಕಿ ಇಡ್ಲಿ ಮಿಕ್ಸ್, ಅರಕ ಉಪ್ಪಿಟ್ಟು ಮಿಕ್ಸ್, ರಾಗಿ ಇಡ್ಲಿ ರವಾ, ರಾಗಿ ಗಂಜಿ ಮಿಕ್ಸ್, ಉಪ್ಪಿನಕಾಯಿ ಅಲ್ಲದೆ 42 ವಿವಿಧ ಬಗೆಯ ಸಿರಿಧಾನ್ಯಗಳು, ಮತ್ತಿತರ ಪೌಷ್ಟಿಕ ಆಹಾರಗಳನ್ನು ಬಳಸಿ ಸಿರಿಧಾನ್ಯ ಮಿಕ್ಸ್ ತಯಾರಿಸುತ್ತಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಶುಂಠಿ ಬೆಳೆ ಬಳಸಿ ಜಿಂಜರ್ ಗಾರ್ಲಿಕ್ ಪೇಸ್ಟ್ (Ginger Garlic Paste) ತಯಾರಿಸಿ, ಪ್ರತಿ ತಿಂಗಳು 10-12 ಕ್ವಿಂಟಾಲ್ ಮಾರುತ್ತಿದ್ದಾರೆ. ಶೀಘ್ರದಲ್ಲಿಯೇ ಸಿರಿಧಾನ್ಯದ ಐಸ್‌ಕ್ರೀಮ್ (Ice Cream), ಕೇಕ್ (Cake) ತಯಾರಿಸುವ ಯೋಜನೆಯಿದೆ. 15 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ.

ತಂದೆ ತಾಯಿ ಮಾರ್ಗದರ್ಶನ, ಅಣ್ಣನೇ ಸೂತ್ರಧಾರಿ:

ಇಬ್ಬರೂ ಸಹೋದರರಿಗೆ ತಂದೆ ಗುಂಡಪ್ಪ ಭಾಸನ್ ಆದರ್ಶ, ತಾಯಿ ಪಾರಮ್ಮ ಮಾರ್ಗದರ್ಶಿಯಾದರೆ ಇನ್ನೋರ್ವ ಸಹೋದರ ಸರ್ಕಾರಿ ಅಧಿಕಾರಿಯಾದ ವಿದ್ಯಾಧರ್ ಇವರ ಏಳ್ಗೆಗೆ ಸೂತ್ರಧಾರಿ. ಒಗ್ಗಟ್ಟಿನಿಂದ ಇಡೀ ಕುಟುಂಬ ಒಂದಾಗಿ ದುಡಿಯುತ್ತಿದ್ದೇವೆ ಎಂದು ಸಂಜೀವಕುಮಾರ ಹಾಗೂ ಶಶಿಧರ ಭಾಸನ್ ಸಹೋದರರು ತಿಳಿಸಿದ್ದಾರೆ. ಮೊಬೈಲ್ ಸಂಖ್ಯೆ: 9945306501

click me!