'ನಾಮ್‌ಕೇವಾಸ್ತೆ ಬಜೆಟ್, ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದಿಂದ ಅನ್ಯಾಯ'

By Kannadaprabha NewsFirst Published Mar 6, 2020, 2:42 PM IST
Highlights

11,000 ಕೋಟಿ ರು. ಕೇಂದ್ರದಿಂದ ಬರಬೇಕಿದ್ದ ಜಿಎಸ್ಟಿ ಪಾಲು ರಾಜ್ಯಕ್ಕೆ ಸಿಕ್ಕಿಲ್ಲ| 8000 ಕೋಟಿ ರು. ಉದ್ಯೋಗ ಖಾತ್ರಿ, ಕೇಂದ್ರ ರಸ್ತೆ ನಿಧಿ ಅನುದಾನದಲ್ಲಿ ಕಡಿತ| 1500 ಕೋಟಿ ರು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೈಯಾ ಪೈಸಾ ಹೆಚ್ಚಿಸಿಲ್ಲ| 20 ಕ್ವಿಂಟಲ್ ತೊಗರಿ ಖರೀದಿ ಪ್ರಸ್ತಾಪವಿಲ್ಲ| 45 ಸಾವಿರ ಕೋಟಿ ರು. ರೈತರ ಸಾಲಮನ್ನಾ ಯೋಜನೆಗೆ ಅನುದಾನ ನೀಡಿಲ್ಲ| 

ಕಲಬುರಗಿ(ಮಾ.06): ರಾಜ್ಯ ಸರ್ಕಾರ ಈ ಸಲದ ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗವನ್ನು ಕಡೆಗಣಿಸಿದೆ ಎಂದು ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಮೊದಲು 371 (ಜೆ) ತಿರಸ್ಕರಿಸುವ ಮೂಲಕ ಅನ್ಯಾಯವೆಸಲಾಗಿತ್ತು. ಮತ್ತೆ ಈಗ ಬಜೆಟ್‌ನಲ್ಲಿಯೂ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗಿದೆ. ಕೇವಲ ಹೆಸರು ಬದಲಾವಣೆಯಿಂದ ನಮ್ಮ ಭಾಗದ ಭವಿಷ್ಯ ಬದಲಾಗದು ಎಂದು ಟೀಕಿಸಿದ್ದಾರೆ. 

ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ರಾಜೀನಾಮೆ ನೀಡಿದ ರಾಜಕಾರಣಿಗಳು ಈಗ ಎಲ್ಲಿದ್ದಾರೆ ಎಂದು ತಮ್ಮ ಟ್ವಿಟರ್ ಸಂದೇಶದಲ್ಲಿ ಬಿಜೆಪಿಯ ನಾಯಕರಿಗೆ ಕುಟುಕಿರುವ ಖರ್ಗೆ ಈ ಬಜೆಟ್‌ನ್ನು ಅಸಹಾಯಕ ಮುಖ್ಯಮಂತ್ರಿಗಳಿಂದ ನಾಮ್ ಕೇ ವಾಸ್ತೆ ಬಜೆಟ್ ಎಂದು ಬಣ್ಣಿಸಿದ್ದಾರೆ. 

ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಶೂನ್ಯ..! ಕೇವಲ ಹೆಸರಿನ ಬದಲಾವಣೆಯಿಂದ ನಮ್ಮ ಭಾಗದ ಜನರ ಭವಿಷ್ಯ ಬದಲಾಗುವುದಿಲ್ಲ.
ಬಿಜೆಪಿ ಈ ಮೊದಲು 371J ಅನ್ನು ತಿರಸ್ಕರಿಸಿತ್ತು. ಈಗ ಬಜೆಟ್‌ನಲ್ಲಿಯೂ ಈ ಪ್ರದೇಶವನ್ನು ಕಡೆಗಣಿಸಿದೆ.
ಕಾಂಗ್ರೆಸ್ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ರಾಜೀನಾಮೆ ನೀಡಿದ ರಾಜಕಾರಣಿಗಳು ಎಲ್ಲಿದ್ದಾರೆ?

— Priyank Kharge / ಪ್ರಿಯಾಂಕ್ ಖರ್ಗೆ (@PriyankKharge)

 

ಮಧ್ಯಮ ವರ್ಗದವರ ಮೇಲೆ ಖಡ್ಗ: 

ಕೇಂದ್ರದಿಂದ ಬರಬೇಕಿದ್ದ 11000 ಕೋಟಿ ಜಿಎಸ್ಟಿ ಪಾಲು ರಾಜ್ಯಕ್ಕೆ ಸಿಕ್ಕಿಲ್ಲ. ಅಲ್ಲದೇ, ಗಾಯದ ಮೇಲೆ ಬರೆ ಎಳೆದಂತೆ ಉದ್ಯೋಗ ಖಾತ್ರಿ, ಕೇಂದ್ರ ರಸ್ತೆ ನಿಧಿ ಹಾಗೂ ಕೇಂದ್ರ ಸಹಭಾಗಿತ್ವದ ಅನೇಕ ಯೋಜನೆಗಳ ಅನುದಾನದಲ್ಲಿಯೂ ಸುಮಾರು 8000 ಕೋಟಿ ಕಡಿತವಾಗಿರುವುದನ್ನು ಖುದ್ದು ಮುಖ್ಯಮಂತ್ರಿಗಳೇ ಇಂದಿನ ಬಜೆಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ರಾಜಾಹುಲಿಯಿಂದ ಮಧ್ಯಮ ವರ್ಗದ ಜನರ ಮೇಲೆ ಖಡ್ಗ ಪ್ರಯೋಗವಾಗಿದೆ ಎಂದು ಪ್ರಿಯಾಂಕ್ ಕಿಚಾಯಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿ ಅಧಿಕಾರಕ್ಕೆ ಬಂದ ಈ 8 ತಿಂಗಳಲ್ಲಿ ಹಾಲಿನ ದರ, ವಿದ್ಯುತ್ ದರ, ಬಸ್ ಪ್ರಯಾಣ ದರ, ಪೆಟ್ರೋಲ್ ದರ, ಡೀಸೆಲ್ ದರ ಏರಿಕೆಯಾಗಿರುವುದು ಇವರ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ. ಕೇವಲ ಹೆಸರು ಬದಲಾವಣೆಯಿಂದ ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗುವುದಿಲ್ಲ. ಹಿಂದಿನ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 1500 ಕೋಟಿ ಅನುದಾನವನ್ನು ನೀಡಿತ್ತು. ಈ ಅನುದಾನದಲ್ಲಿ ನಯಾ ಪೈಸೆ ಹೆಚ್ಚಿಸದೇ, ಈ ಭಾಗಕ್ಕೆ ಯಾವುದೇ ಹೊಸ ಯೋಜನೆ ಘೋಷಿಸದೇ ಬಿಜೆಪಿ ಸರ್ಕಾರ ಬಜೆಟ್‌ನಲ್ಲಿಯೂ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವೆಸಗಿದೆ ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ. 

ಸರ್ಕಾರದ ಕಣ್ಣಿಗೆ ಕಾಣಲಿಲ್ಲ ತೊಗರಿ ಬೆಳೆಗಾರರ ಸಂಕಷ್ಟ: 

ಈ ಬಾರಿ ಬಿತ್ತನೆ ಬೀಜ ಖರೀದಿಯಿಂದ ಹಿಡಿದು ಮಾರಾಟದವರೆಗೂ ತೀವ್ರ ಸಂಕಷ್ಟಕ್ಕೆ ತುತ್ತಾಗಿರುವ ತೊಗರಿ ಬೆಳೆಗಾರರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ಯೋಜನೆ ರೂಪಿಸದಿರುವುದು ಬಿಜೆಪಿ ರೈತ ವಿರೋಧಿ ನೀತಿ ಎತ್ತಿ ತೋರಿಸಿದೆ. ಖರೀದಿ ಕೇಂದ್ರಗಳ ಸ್ಥಾಪನೆ, ಖರೀದಿ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ಖರೀದಿ ಪ್ರಮಾಣ ಕಡಿತಗೊಳಿಸಿದ ಹಿನ್ನೆಲೆ ಈ ಬಾರಿ ಉತ್ತಮ ಫಸಲು ಪಡೆದಿದ್ದರೂ ರೈತರು ನಷ್ಟ ಅನುಭವಿಸುವಂತಾಯಿತು. ಪ್ರತಿ ರೈತರಿಂದ 20 ಕ್ವಿಂಟಲ್ ತೊಗರಿ ಖರೀದಿ, ಸೂಕ್ತ ಬೆಂಬಲ ಬೆಲೆ, ಸಮಯಕ್ಕೆ ಸರಿಯಾಗಿ ಖರೀದಿ ಕೇಂದ್ರಗಳ ಸ್ಥಾಪನೆ ಬಗ್ಗೆ ಕೆಲ ದಿನಗಳ ಹಿಂದೆ ಸದನದಲ್ಲಿ ನಾನು ಪ್ರಸ್ತಾಪಿಸಿದ್ದೆ. ಅಂದು ಸರ್ಕಾರದ ಕಡೆಯಿಂದ ಯಾವುದೇ ಸಮರ್ಪಕ ಉತ್ತರ ಬರಲಿಲ್ಲ. ಈ ಬಜೆಟ್‌ನಲ್ಲಾದರೂ ತೊಗರಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ನೀಡು ತ್ತಾರೆ ಎಂಬ ಭರವಸೆ ಹುಸಿಯಾಗಿದೆ. ಯಾವ ಇಲಾಖೆಗೆ ಎಷ್ಟು ಕೊಟ್ಟಿದ್ದೇವೆ, ಯಾವ ರೀತಿ ಈ ಹಣವನ್ನ ಉಪಯೋಗಿಸಿಕೊಳ್ಳುತ್ತೇವೆ ಅನ್ನೋದನ್ನ ಜನರಿಗೆ ತಿಳಿಸುವ ಪ್ರಯತ್ನ ಮಾಡಿಲ್ಲ. ಅಧ್ಯಯನ ಮಾಡಿ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯ ಜನರಿಗೆ ತಿಳಿಸಲು, ರಾಜ್ಯದ ಬೊಕ್ಕಸ ಖಾಲಿಯಾಗಿರು ವುದನ್ನು ಬಹಿರಂಗಪಡಿಸಲು, ತಮ್ಮ ಅಸಹಾಯಕತೆ ಹೊರಹಾಕಲು ಬಿಎಸ್‌ವೈ ಬಜೆಟ್ ವೇದಿಕೆಯಾಗಿಸಿಕೊಂಡಿದ್ದಾರೆಂದು ಪ್ರಿಯಾಂಕ್ ತಿವಿದಿದ್ದಾರೆ.

ನನೆಗುದಿಗೆ ಬಿದ್ದ ರೈತರ ಸಾಲಮನ್ನಾ

ಸಮ್ಮಿಶ್ರ ಸರ್ಕಾರ ರೈತರ ಸಹಕಾರ ಬ್ಯಾಂಕ್‌ಗಳ ಸುಮಾರು 9 ಸಾವಿರ ಕೋಟಿ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಗಳ ಅಂದಾಜು 35 ಸಾವಿರ ಕೋಟಿ ಸೇರಿ ಸರಿಸುಮಾರು 45 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿ ತ್ತು. ಇದು 5 ವರ್ಷಗಳ ದೀರ್ಘಾವಧಿ ಯೋಜನೆಯಾಗಿದ್ದು, ಪ್ರತಿ ವರ್ಷವೂ ಬಜೆಟ್‌ನಲ್ಲಿ ಇದಕ್ಕಾಗಿಯೇ ಅನುದಾನವನ್ನು ಮೀಸಲಿಡಲೇ ಬೇಕಿತ್ತು. ಇದನ್ನು ಮಾಡದೆ ಹಸಿರು ಶಾಲು ಹೊದ್ದುಕೊಂಡು, ಬಜೆಟ್ ಮಂಡಿಸಿದ ಮಾತ್ರಕ್ಕೆ ಇದು ರೈತಪರ ಬಜೆಟ್ ಆಗುವುದಿಲ್ಲ ಎಂದು ಟೀಕಿಸಿದ್ದಾರೆ.
 

click me!