ಹಸಿರು ಶಾಲು ಹಾಕಿಕೊಂಡಾಕ್ಷಣ ರೈತ ಪರ ಆದಂತಲ್ಲ: BSYಗೆ ಕಲಬುರಗಿ ಜನರ ಪ್ರಶ್ನೆ?

By Kannadaprabha News  |  First Published Mar 6, 2020, 2:24 PM IST

ಕಲ್ಯಾಣ ಕರ್ನಾಟಕ ನೋಟ ಬದಲಾಗಲಿಲ್ಲ| ನಿಜವಾಗಿಯೂ ರೈತರ ಪರ ಕಾಳಜಿ ಇದ್ದರೆ ರೈತರ ಸಾಲ ಮನ್ನಾ ಮಾಡಬೇಕಿತ್ತು| ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿದೂಗಿಸಿ ರಾಜ್ಯದ ಎಲ್ಲ ಜನರಿಗೆ ಸಮನಾದ ನ್ಯಾಯ ಕೊಡುವ ಶಕ್ತಿ ಯಡಿಯೂರಪ್ಪಗೆ ಇದೆ| 


ಶೇಷಮೂರ್ತಿ ಅವಧಾನಿ 

ಕಲಬುರಗಿ(ಮಾ.06): ‘ಹೆಸರು ಬದಲಾದದ್ದೇ ಬಂತು, ಕಲ್ಯಾಣ ಕರ್ನಾಟಕದ ಬಗೆಗಿರುವ ಬಜೆಟ್ ದೃಷ್ಟಿಕೋನ ಮಾತ್ರ ಬದಲಾಗಲಿಲ್ಲ’ ಬಿಎಸ್‌ವೈ ಮಂಡಿಸಿರುವ ಬಜೆಟ್ ಕುರಿತಂತೆ ಸಾಮಾನ್ಯ ಜನರ ನೋವಿನ ಸ್ಪಂದನೆ ಇದು. 

Latest Videos

undefined

ಹೈದ್ರಾಬಾದ್ ಬದಲಿಗೆ ಕಲ್ಯಾಣ ಸೇರ್ಪಡೆಯಾಗಿ ಹಿಂದುಳಿದ ನೆಲ ಕಲ್ಯಾಣ ಕರ್ನಾಟಕವಾದ ನಂತರ ಮಂಡನೆಯಾದ ಚೊಚ್ಚಿಲ ಬಜೆಟ್‌ನಲ್ಲಿ ಈ ಭಾಗಕ್ಕೆ ಅನುದಾನದ ಹೊಳೆಯೇ ಹರಿದು ಬರುವ ಜನರ ನಿರೀಕ್ಷೆ ಹುಸಿಯಾಗಿದೆ. ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಆದ್ಯತೆ ದೊರಕಿಲ್ಲ. ಹೀಗಾಗಿ ಯಡಿಯೂರಪ್ಪ ಅವರು ಬಜೆಟ್ ನಲ್ಲಿ ಹೆಚ್ಚಿನ ಹಣ ನೀಡಿ ಈ ಅಸಮಾಧಾನ ಸರಿದೂಗಿಸುತ್ತಾರೆಂಬ ನಿರೀಕ್ಷೆ ಠುಸ್ ಆಗಿದ್ದು, ಹಿಂದಿನ ಸರ್ಕಾರಗಳಂತೆ ಈ ಸರ್ಕಾರದ ಬಜೆಟ್ ಕಲ್ಯಾಣ ಕರ್ನಾಟಕ ನೆಲದ ಜನಮನಗೆಲ್ಲುವಲ್ಲಿ ಮುಗ್ಗರಿಸಿತು ಎಂದೇ ಹೇಳಬೇಕು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

30 ಲಕ್ಷ ರು. ವೆಚ್ಚದಲ್ಲಿ ಅಂಧರಿಗೆ ಅನುಕೂಲವಾಗಲು ಶ್ರವಣ ಮತ್ತು ದೃಷ್ಟಿಯ ಗ್ರಂಥಾಲಯದ ಹೊಸ ಯೋಜನೆ ಕಲಬುರಗಿಗೆ ದಕ್ಕಿದ್ದು ಹೊರತುಪಡಿಸಿದರೆ ಹೇಳಿಕೊಳ್ಳುವಂತಹ ಹೊಸ ಯೋಜನೆಗಳು ಈ ನೆಲದತ್ತ ಮುಖ ಮಾಡಿಲ್ಲ. ಹೀಗಾಗಿ ಜನ ವ್ಯಂಗ್ಯವಾಗಿ ‘ಕುರುಡರಲ್ಲಿ ಮೆರಳುಗಣ್ಣಿನವ ಶ್ರೇಷ್ಠ’ ಎಂಬಂತೆ ಈ ಯೋಜನೆಯಾದರೂ ಸಿಕ್ಕಿತಲ್ಲ ಎಂದು ಆಡಿಕೊಳ್ಳುತ್ತಿದ್ದಾರೆ. 

ಕೆಕೆಆರ್‌ಡಿಬಿಗೆ ಪರ್ಯಾಯವಾಗಿ ಸಂಘಕ್ಕೆ ಪ್ರೋತ್ಸಾಹಿಸಲಾಯ್ತೆ?: 

ಕಲ್ಯಾಣ ಕರ್ನಾಟಕ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಹಲವು ಬಾರಿ ವೈಯಕ್ತಿಕವಾಗಿ ಮತ್ತು ನಿಯೋಗದೊಂದಿಗೆ ಭೇಟಿ ಮಾಡಿದ್ದ ಇಲ್ಲಿನ ಅನೇಕರು ಮಂಡಳಿಗೆ 2 ಸಾವಿರ ಕೋಟಿ ರು. ಅನುದಾನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರೂ ಅದಕ್ಕೆ ಕ್ಯಾರೆ ಎನ್ನದೆ 2020-21 ನೇ ಸಾಲಿಗೂ ಹಿಂದಿನಂತೆಯೇ 1500 ಕೋಟಿ ರು. ಅನುದಾನ ಮುಂದುವರಿಸಿರುವ ಯಡಿಯೂರಪ್ಪ ತಮ್ಮ ಸರ್ಕಾರ ಈಚೆಗಷ್ಟೇ ರಚಿಸಿರುವ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ 500 ಕೋಟಿ ರು. ಅನುದಾನ ಮೀಸಲಿಟ್ಟು ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಹೊಸ ಸಂಘಕ್ಕೆ ಅನುದಾನದ ಹೊಳೆಯೇ ಹರಿದಿದ್ದು ನೋಡಿದರೆ ಈಗಿರುವ ಕೆಕೆಆರ್‌ಡಿಬಿ ಸಡಿಲಗೊಳಿಸಿ ಸಂಘವನ್ನೇ ಬಲಗೊಳಿಸುವ ಯತ್ನದ ಭಾಗ ಇದಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.ಹೊಸ ಸಂಘಕ್ಕೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಸ್ವಯಂ ಉದ್ಯೋಗ, ಯುವ ಸಬಲೀಕರಣಕ್ಕೆಂದು ಹಣ ನೀಡಿದ್ದಾರೆ. ಇವೇ ಕೆಲಸಗಳನ್ನೇ ಮಂಡಳಿ ಮಾಡುತ್ತಿದ್ದರೂ ಆ ಬಗ್ಗೆ ಚಕಾರ ಇಲ್ಲ. 

ಪ್ರತ್ಯೇಕ ಸಚಿವಾಲಯ ಘೋಷಣೆ ನನೆಗುದಿಗೆ: 

2019 ರ ಸೆ.17ರಂದು ತಾವೇ ಕಲಬುರಗಿಗೆ ಬಂದು ಪ್ರತ್ಯೇಕ ಸಚಿವಾಲಯ ಕಲ್ಯಾಣ ಕರ್ನಾಟಕಕ್ಕೆ ಮಾಡುತ್ತೇನೆಂದು ಘೋಷಿಸಿದ್ದ ಯಡಿಯೂರಪ್ಪ ಮಾತನ್ನು ನಂಬಿದ್ದ ಜನ ಈ ಬಜೆಟ್‌ನಲ್ಲಿ ಇದನ್ನೇ ನಿರೀಕ್ಷಿಸಿದ್ದರು. ಆದರೆ ಮೂಗಿಗೆ ತುಪ್ಪ ಸವರಿದಂತೆ ಸಿಎಂ ವಾಗ್ದಾನ ಅನುಷ್ಠಾನಕ್ಕೆ ಬರಲೇ ಇಲ್ಲ. ಕಲಂ 371 (ಜೆ) ಅನೇಕ ಅಂಶಗಳ ಅನುಷ್ಠಾನಕ್ಕೆ ಇದರಿಂದ ಎಂದಿನಂತೆ ಅಡ್ಡಿ, ಆತಂಕಗಳ ಕಾಡಾಟ ಹಾಗೇ ಮುಂದುವರಿಯಲಿದೆ. ಪ್ರತ್ಯೇಕ ಸಚಿವಾಲಯ ಸೃಷ್ಟಿಯ ವಿಚಾರದಲ್ಲಿ ನೀಲ ನಕಾಶೆ ತಯಾರಿಗೆ ಸೂಚಿಸಿ ಕೈತೊಳೆದುಕೊಂಡಿರುವುದು ಸ್ಪಷ್ಟವಾಗಿದೆ. 

ತೊಗರಿ ರೈತರ ಮೂಗಿಗೂ ತುಪ್ಪ: 

10 ಕ್ವಿಂಟಲ್ ಬದಲು ಪ್ರತಿ ರೈತರಿಂದ 20 ಕ್ವಿಂಟಲ್ ತೊಗರಿ ಖರೀದಿಸುವುದಾಗಿ ಹೇಳಿ ತಿಂಗಳಾದರೂ ಸರ್ಕಾರ ತುಟಿ ಬಿಚ್ಚಿಲ್ಲ. ಬಜೆಟ್‌ನಲ್ಲಿಯೇ ಘೋಷಣೆ ಹೊರಬರಬಹುದು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ತೊಗರಿ ಖರೀದಿ ವಾಗ್ದಾನ ಅನುಷ್ಠಾನಕ್ಕೆ ಬಾರದ ಸಂಗತಿಯಿಂದ ಬೇಸರದಲ್ಲಿದ್ದಾರೆ.

ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕದ ಯಾವ ಬೇಡಿಕೆಗೂ ಸಿಕ್ಕಿಲ್ಲ ಮನ್ನಣೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ನಿರಾಶದಾಯಕವಾಗಿದೆ ಎಂದು ಕಲಬುರಗಿಯ ಹೈದ್ರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಮರನಾಥ ಸಿ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಲ್ಯಾಣಕ ರ್ನಾಟಕ ಪ್ರದೇಶದ ಸರ್ವತೊಮುಖಿ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಮಂಜೂರು ಮಾಡಲು ಕೋರಲಾಗಿತ್ತು. ಆದರೆ ಇದರ ಕುರಿತು ಮುಂಗಡ ಪತ್ರದಲ್ಲಿ ಯಾವುದೇ ಉಲ್ಲೆಖವಿಲ್ಲ. ಕಲಬುರಗಿ ಜಿಲ್ಲೆಯಲ್ಲಿ ನಿಮ್ಜ್ ಯೋಜನೆ ಅಥವಾ ಇಂಡಸ್ಟ್ರೀಯಲ್ ಕಾರಿಡಾರ್‌ಗಾಗಿ ಸಂಪನ್ಮೂಲಗಳ ಕ್ರೋಢಿಕರಣಗೊಳಿಸುವ ಕುರಿತು ಗಮನ ಹರಿಸಿಲ್ಲ. ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಾರ್ಯಾ ಲಯದ ಕಾಮಗಾರಿ ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳ್ಳುವ ಪ್ರಯತ್ನ ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರೈತರ ಪ್ರಮುಖ ಬೆಳೆಯಾದ ತೊಗರಿಗೆ ಬೆಲೆ ವ್ಯತ್ಯಾಸ ಪಾವತಿಸುವ (ಪಿಡಿಪಿಎಸ್) ಯೋಜನೆ ಜಾರಿ ಮಾಡುವ ಕುರಿತು ಯಾವುದೇ ಪ್ರಸ್ತಾಪವಿಲ್ಲ. ರಾಜ್ಯದ ಎಪಿಎಂಸಿಗಳಲ್ಲಿ ಸಂಗ್ರಹಿಸುತ್ತಿರುವ ಸೆಸ್ ದರವನ್ನು ಶೆ.1.5 ರಿಂದ ಶೆ.1 ಮಾಡಬೇಕೆಂಬ ಪ್ರಮುಖ ಬೇಡಿಕೆ ನಿರ್ಲಕ್ಷಿಸಲಾಗಿದೆ. ರೈತರಿಗೆ ಅವಶ್ಯವಿರುವಗೊಬ್ಬರ, ಕೀಟನಾಶಕ, ಕ್ರಿಮಿನಾಶಕ ಗಳ ಮೆಲೆ ವಿಧಿಸಲಾಗುತ್ತಿರುವ ಜಿಎಸ್‌ಟಿ ದರ ಕಡಿಮೆ ಮಾಡಲು ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ ಎಂದು ಕಿಡಿಕಾರಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತೆರೆಗೆ ಹೆಚ್ಚಿಸಿ ರುವುದರಿಂದ ಸಾಗಾಣಿಕೆ ವೆಚ್ಚವು ಹೆಚ್ಚಾಗಿ ಬೆಲೆ ಹೆಚ್ಚಾಗುವುದರಿಂದ ಜನರ ಜೀವನವು ಕಷ್ಟಮಯವಾ ಗುವುದು. ಕಲಬುರಗಿಯಲ್ಲಿ ಸೋಲಾರ್ ಕ್ಲಸ್ಟರ್ ಸ್ಥಾಪಿಸುವ ಕುರಿತು ಯಾವುದೇ ಘೋಷಣೆ ಮಾಡದೆ ಈ ಭಾಗಕ್ಕೆ ನಿರಾಸೆ ಮೂಡಸಿದ್ದಾರೆ ಎಂದು ಹೈದ್ರಾ ಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಮರನಾಥ ಸಿ. ಪಾಟೀಲ್, ಗೌರವ ಕಾರ್ಯದರ್ಶಿ ಶಶಿಕಾಂತ ಬಿ. ಪಾಟೀಲ್, ಕೇಂದ್ರ ಮತ್ತು ರಾಜ್ಯ ತೆರಿಗೆ ಉಪ ಸಮಿತಿ ಚೇರಮನ್ ಸಿ.ಎ. ಗುರುದೇವ ಎ. ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರಾಶೆಯ ಕಾರ್ಮೋಡ ಕರಗೋದು ಎಂದು?

* ಕಲಬುರಗಿ ಜಿಲ್ಲೆಯಲ್ಲಿ ನಿಮ್ಜ್ ಯೋಜನೆ, ಇಂಡಸ್ಟ್ರೀಯಲ್ ಕಾರಿಡಾರ್‌ಗಾಗಿ ಸಂಪನ್ಮೂಲಗಳ ಕ್ರೋಢಿಕರಣಗೊಳಿಸುವ ವಿಚಾರ ಪ್ರಸ್ತಾಪವಿಲ್ಲ 
* ಕಲ್ಯಾಣ ಕರ್ನಾಟಕ ಪರಿಸರದಲ್ಲಿ ಕೈಗಾರೀಕರಣಕ್ಕೆ ಮುಂಗಡ ಪತ್ರದಲ್ಲಿ ಸ್ಪಂದನೆ ಶೂನ್ಯ 
* ಈಶಾನ್ಯ ರಾಜ್ಯಗಳಿಗೆ ಕೇಂದ್ರ ನೀಡಿರುವ ಲಕ್ಷದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಲಕ್ಷ್ಯ ನೀಡಬೇಕೆಂಬ ಪ್ರಸ್ತಾಪಕ್ಕೂ ಎಳ್ಳುನೀರು 
* ಕಲ್ಯಾಣ ಕರ್ನಾಟಕ ವಲಯದಲ್ಲಿ ಇಂಡಸ್ಟ್ರೀಯಲ್ ಕಾರಿಡಾರ್, ವಿಶೇಷ ಆರ್ಥಿಕ ವಲಯ ಸ್ಥಾಪಿಸಬೇಕೆಂಬ ಬೇಡಿಕೆಗೂ ಸ್ಪಂದನೆ ಇಲ್ಲ 
* 2013 ರಲ್ಲಿ ಮಂಜುರಾಗಿ ಅಡಿಗಲ್ಲು ಹಾಕಿರುವ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿಗೆ ರಾಜ್ಯ ತನ್ನ ಪಾಲಿನ ಅನುದಾನ ಮೀಸಲಿಡಲಿಲ್ಲ 
* ತೊಗರಿ ಬೆಲೆ ವ್ಯತ್ಯಾಸ ಪಾವತಿಸುವ (ಪಿಡಿಪಿಎಸ್) ಭಾವಾಂತರ ಯೋಜನೆ ಜಾರಿ ಆಗ್ರಹಕ್ಕೆ ಕಾಸಿನ ಕಿಮ್ಮತ್ತು ಸಿಗಲಿಲ್ಲ 
* ದಾಲ್ ಮಿಲ್ ಕೃಷಿ ಆಧಾರಿತ ಕೈಗಾರಿಕೆಗಳೆಂದು ವರ್ಗಿಕರಿಸುವ ಆಗ್ರಹಕ್ಕೆ ಪುರಸ್ಕಾರ ಸಿಗಲಿಲ್ಲ 
* ಹೆಚ್ಚಾಗಿ ಸಿಮೆಂಟ್ ಹಾಗೂ ಥರ್ಮಲ ಪವರ ಉದ್ಯಮ ಬರೋದು ಬೇಡವೆಂದರೂ ಅದಕ್ಕೂ ಕ್ಯಾರೆ ಎಂದಿಲ್ಲ 
* ಇಲ್ಲಿ ತಲೆ ಎತ್ತಿರುವ 1400 ಕೋಟಿ ರು. ವೆಚ್ಚದ ವೈದ್ಯಕೀಯ ಸಂಕೀರ್ಣ ಸದ್ಬಳಕೆಗೆ ಏಮ್ಸ್ ಕಲಬುರಗಿಗೆ ಕೊಡಿರೆಂಬ ಬೇಡಿಕೆ ಅಲಕ್ಷ್ಯ 
* ಹಿಂದಿನ ಸರ್ಕಾರದ ‘ಕಾಂಪಿಟ್ ವಿಥ್ ಚೈನಾ ‘ಯೋಜನೆ ಅಡಿಯಲ್ಲಿ ಕಲಬುರಗಿಗೆ ಮಂಜೂರಾಗಿರುವ ಸೋಲಾರ್ ಕ್ಲಸ್ಟರ್ ಬಗ್ಗೆ ಚಕಾರ ಇಲ್ಲ 
* ತೊಗರಿ ಪಾರ್ಕ್‌ಗೆ ಸ್ಪಂದನೆ ಶೂನ್ಯ

ಕಲ್ಯಾಣ ಪ್ರದೇಶದಕ್ಕೆ ಈ ಘೋಷಣೆಗಳಿಂದ ಅಲ್ಪ ಹಿತ

ಕಲಬುರಗಿ, ಯಾದಗಿರಿ, ರಾಯಚೂರು ಜನರಿಗೆ ಕುಡಿವ ನೀರಿನ ಸೌಲಭ್ಯ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ತಿಂತಿಣಿ ಬ್ರಿಡ್ಜ್ ಹತ್ತಿರ ಕೃಷ್ಣಾ ನದಿಗೆ ಜಲಾಶಯ ನಿರ್ಮಾಣಕ್ಕೆ ವಿಸ್ತತ ಯೋಜನಾ ವರದಿ ತಯಾರಿಸಲು ಸೂಚನೆ, ಈ ಭಾಗದ ಜನರ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರದ ಹುಡುಕುವ ಪ್ರಯತ್ನ ಎನ್ನಬಹುದು 

* ಬಸವಕಲ್ಯಾಣದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಯಡಿಯೂರಪ್ಪ ಬಜೆಟ್‌ನಲ್ಲಿ 500 ಕೋಟಿ ರು. ಮೀಸಲಿಟ್ಟು, 100 ಕೋಟಿ ರು. ಒದಗಿಸುವ ಭರವಸೆ ನೀಡಿದ್ದಾರೆ 
* ಎಸ್ಸಿ- ಎಸ್ಟಿ ನಿರುದ್ಯೋಗಿ ಯುವಕ, ಯುವತಿಯವರಿಗೆ ವಾಹನ ಚಾಲನಾ ತರಬೇತಿ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಮೂಲಕ ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವ್ಯವಸ್ಥೆ 
* ದೃಷ್ಟಿದೋಷವುಳ್ಳ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ಹಾಗೂ ಕಲಬುರಗಿಯಲ್ಲಿ ಬ್ರೈಲ್ ಕಂ ಟಾಕಿಂಗ್ ಲೈಬ್ರರಿ 30 ಲಕ್ಷ ರು. ವೆಚ್ಚದಲ್ಲಿ ಸ್ಥಾಪನೆ 
*  ಬಳ್ಳಾರಿ, ಚಿತ್ರದುರ್ಗ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ 20 ಕೋಟಿ ರು. ಮೊತ್ತದಲ್ಲಿ ಶುದ್ಧೀಕರಿಸಿದ ನೀರನ್ನು ಗೃಹೇತರ ಉದ್ದೇಶಕ್ಕೆ ಮರುಬಳಕೆ ಮಾಡುವ ಯೋಜನೆ 
* ರಾಯಚೂರು, ಬಳ್ಳಾರಿ ಹಾಗೂ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ‘ಫ್ಲೂ ಗ್ಯಾಸ್ ಡಿ ಸಲ್ಫರೈಸೇಷನ್’ ವ್ಯವಸ್ಥೆ ಒಟ್ಟು 2510 ಕೋಟಿ ರು. ವೆಚ್ಚದಲ್ಲಿ ಸ್ಥಾಪನೆ, ಮೊದಲ ಹಂತದಲ್ಲಿ 500 ಕೋಟಿ ವೆಚ್ಚ, ವಾಯು ಮಾಲಿನ್ಯ ತಗ್ಗುವ ನಿರೀಕ್ಷೆ 
* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ, ದೇವಾಲಯ ಪ್ರಗತಿಗೆ 20 ಕೋಟಿ ರು. ಮೀಸಲು ಥಿ ಹಿಂದುಳಿದ ತಾಲೂಕಗಳ ಅಭಿವೃದ್ಧಿಗಾಗಿ 3060 ಕೋಟಿ ಅನುದಾನ. ಇದು ಕಲ್ಯಾಣ

ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುಕೂಲ

ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುದಾನ ನೀಡಿಲ್ಲ. ಹೈ. ಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿದ್ದೇ ಸರ್ಕಾರದ ಸಾಧನೆಯಾಗಿದೆ. ಇದು ಮಲತಾಯಿ ಧೋರಣೆ ಬಜೆಟ್ ಆಗಿದೆ ಎಂದು ಅಫಜಲ್ಪುರದ ಸಾಮಾಜಿಕ ಹೋರಾಟಗಾರ ರವಿ ಗೌರ ಹೇಳಿದ್ದಾರೆ.

ಹಸಿರು ಶಾಲು ಹಾಕಿಕೊಂಡಾಕ್ಷಣ ರೈತ ಪರ ಆದಂತಲ್ಲ. ನಿಜವಾಗಿಯೂ ರೈತರ ಪರ ಕಾಳಜಿ ಇದ್ದರೆ ರೈತರ ಸಾಲ ಮನ್ನಾ ಮಾಡಬೇಕಿತ್ತು. ಕೃಷಿಗೆ ಸಂಬಂಧಿಸಿದ ಯಾವ ಹೊಸ ಯೋಜನೆ ಸರ್ಕಾರ ಘೋಷಣೆ ಮಾಡಿಲ್ಲ. ಅಲ್ಲದೆ ಕಲ್ಯಾಣ ಕರ್ನಾಟಕ ನಿರ್ಲಕ್ಷ್ಯ ಮಾಡಿದ್ದು ಕೂಡ ನಮ್ಮನ್ನು ಮೂಲೆಗುಂಪಾಗಿಸುವ ಹುನ್ನಾರವಾಗಿದೆ ಎಂದು ಅಫಜಲ್ಪುರದ ರೇವೂರ (ಬಿ) ಕಾಂಗ್ರೆಸ್ ಮುಖಂಡ ರಾಜೇಂದ್ರಕುಮಾರ ಪಾಟೀಲ್ ಹೇಳಿದ್ದಾರೆ. 

ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿದೂಗಿಸಿ ರಾಜ್ಯದ ಎಲ್ಲ ಜನರಿಗೆ ಸಮನಾದ ನ್ಯಾಯ ಕೊಡುವ ಶಕ್ತಿ ಯಡಿಯೂರಪ್ಪಗೆ ಇದೆ. ಅದನ್ನು ಗಮನದಲ್ಲಿಟ್ಟುಕೊಂಡು ಜನಹಿತಕ್ಕಾಗಿ ಬಜೆಟ್ ಮಂಡಿಸಿದ್ದಾರೆ. ಇದು ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ ಎಂದು ಅಫಜಲ್ಪುರದ ಬಿಜೆಪಿ ಮುಖಂಡ ಸುನೀಲ್ ಶೆಟ್ಟಿ ತಿಳಿಸಿದ್ದಾರೆ.

ಅಟಲ್ ಭೂ ಜಲ ಯೋಜನೆಯಡಿ 1202 ಕೋಟಿ ರು. ಬಳಸಿಕೊಂಡು ರಾಜ್ಯದ ಆಯ್ದ ಜಿಲ್ಲೆಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಜಲಾಮೃತ ಯೋಜನೆ ಅಡಿಯಲ್ಲಿ ಅಂತರ್ಜಲ ಸ್ಥಿತಿ ಗಂಭೀರವಾಗಿರುವ 76 ತಾಲೂಕುಗಳಲ್ಲಿ ಮುಂದಿನ ಮೂರು ವರ್ಷದಲ್ಲಿ 4 ಲಕ್ಷ ಹೆಕ್ಟೇರ್‌ನಲ್ಲಿ 810 ಅತೀ ಸಣ್ಣ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಿದ್ದು ಶ್ಲಾಘನೀಯವಾಗಿದೆ ಎಂದು ಚಿತ್ತಾಪುರದ ವ್ಯಾಪರಸ್ಥ ಮಹೇಶ ಬಟಗೇರಿ ಹೇಳಿದ್ದಾರೆ.

ಈ ಬಾರಿಯ ಬಜೆಟ್ ನಿರಾಶಾದಾಯಕವಾಗಿದೆ. ರೈತ ಪರ ಮುಖ್ಯಮಂತ್ರಿ ಎನ್ನಿಸಿಕೊಳ್ಳುವವರು ರೈತರಿಗಾಗಿ ಹೊಸದಾಗಿ ಏನು ಮಾಡಿಲ್ಲ. ಹಳೆಯ ಮದ್ಯವನ್ನು ಹೊಸ ಬಾಟಲಿಯಲ್ಲಿ ಹಾಕಿ ತೋರಿಸಿದ್ದಾರೆ ಎಂದು ಅಫಜಲ್ಪುರ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಕುಮಾರ ಬಡದಾಳ ಹೇಳಿದ್ದಾರೆ.

ರಾಜ್ಯದ ಜನರ ಪರವಾದ ಆಶಾದಾಯಕ ಬಜೆಟ್ ಇದಾಗಿದೆ. ಯಾರು ಏನೇ ಆರೋಪ ಮಾಡಿದರೂ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಇದು ಉತ್ತಮ ಬಜೆಟ್ ಆಗಿದೆ ಎಂದು ಅಫಜಲ್ಪುರ ಬಿಜೆಪಿ ತಾಲೂಕು ಅಧ್ಯಕ್ಷ ಶೈಲೇಶ್ ಗುಣಾರಿ ಹೇಳಿದ್ದಾರೆ. 
 

click me!