Post Office Bal Jeevan Bhima Poliy: ಮಕ್ಕಳ ಭವಿಷ್ಯಕ್ಕೆ ಪಡೆಯಲೇಬೇಕಾದ ವಿಮೆ

By Suvarna NewsFirst Published May 5, 2022, 3:17 PM IST
Highlights

Post Office Bal Jeevan Bhima Poliy details in Kannada: ಮಕ್ಕಳಿಗೆ ಯಾವುದೆ ತೊಂದರೆಯಾಗದಿರಲಿ ಎಂದು ಎಲ್ಲ ಪಾಲಕರು ಬಯಸ್ತಾರೆ. ಆದ್ರೆ ಯಾವ ಯೋಜನೆಯಲ್ಲಿ ಹಣ ಹೂಡಿಕೆ ಮಾಡ್ಬೇಕೆಂಬ ಗೊಂದಲಕ್ಕೆ ಬೀಳ್ತಾರೆ. ಕೆಲವೊಮ್ಮೆ ಹಣ ಡಬಲ್ ಆಗುವ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ಮೋಸ ಹೋಗ್ತಾರೆ. ಅದ್ರ ಬದಲು ಅಂಚೆ ಕಚೇರಿ ಸುರಕ್ಷಿತ ಯೋಜನೆ ಲಾಭ ಪಡೆಯಬಹುದು.

ಮಕ್ಕಳ (Children) ಉತ್ತಮ ಭವಿಷ್ಯ ಎಲ್ಲ ಪಾಲಕರಿಗೆ ಮುಖ್ಯ. ಹಾಗಾಗಿ ಮಕ್ಕಳ ವಿದ್ಯಾಭ್ಯಾಸ (Education), ಮದುವೆ (Marriage) ಗಾಗಿ ಹಣ ಹೂಡಿಕೆ (Investment) ಶುರು ಮಾಡ್ತಾರೆ. ಬ್ಯಾಂಕ್ ಮಾತ್ರವಲ್ಲ ಅಂಚೆ ಕಚೇರಿಯಲ್ಲೂ ಹಣ ಹೂಡಿಕೆ ಮಾಡಬಹುದು. ಅಂಚೆ ಕಚೇರಿಯಲ್ಲಿ ಹಣ ಹೂಡಿಕೆ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಅಂಚೆ ಕಚೇರಿಯಲ್ಲಿ ಪಾಲಕರು ವಿಮಾ ಪಾಲಿಸಿಯನ್ನು ತೆಗೆದುಕೊಂಡಿದ್ದರೆ  ಮಕ್ಕಳಿಗೆ ಕೂಡ ಪಾಲಿಸಿ ತೆಗೆದುಕೊಳ್ಳುವುದು ಸುಲಭ. ಅಂಚೆ ಕಚೇರಿಯಲ್ಲಿ ಮಕ್ಕಳಿಗಾಗಿಯೇ ವಿಶೇಷ ಪಾಲಿಸಿಯಿದೆ. ಬಾಲ ಜೀವನ್ ಭೀಮಾ ಯೋಜನೆಯಡಿಯಲ್ಲಿ (Post Office Bal Jeevan Bhima) ವಿಮಾ ರಕ್ಷಣೆಯನ್ನು ನೀಡಲಾಗುತ್ತದೆ. ಇದು ತುಂಬಾ ಪ್ರಯೋಜನಕಾರಿ ಯೋಜನೆಯಾಗಿದೆ. ಈ ಯೋಜನೆಯು ಪಾಲಿಸಿದಾರರ ಮಕ್ಕಳಿಗೆ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ.  ಇಂದು ನಾವು ಬಾಲ ಜೀವನ್ ಭೀಮಾ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ನೀಡ್ತೇವೆ. 

ಈ ಯೋಜನೆ ಅರ್ಹತೆಯ ನಿಯಮಗಳು ಯಾವುವು ? : ಅಂಚೆ ಕಚೇರಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಬಾಲ ಜೀವನ್ ಭೀಮಾ ವಿಮೆ ಯೋಜನೆಯನ್ನು ಪಾಲಕರು ತೆಗೆದುಕೊಳ್ಳಬೇಕು. ಇದರಲ್ಲಿ ಮಕ್ಕಳು ನಾಮಿನಿಗಳಾಗಿರುತ್ತಾರೆ. ಪಾಲಕರು ಗರಿಷ್ಠ ಇಬ್ಬರು ಮಕ್ಕಳ ಹೆಸರಿನಲ್ಲಿ ಬಾಲ ಜೀವನ್ ಭೀಮಾ ಯೋಜನೆ ಪಡೆಯಬಹುದು. ಐದು ವರ್ಷದಿಂದ ಇಪ್ಪತ್ತು ವರ್ಷದವರೆಗಿನ ನಿಮ್ಮ ಮಕ್ಕಳನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳಬಹುದು. ಆದ್ರೆ ಪಾಲಿಸಿದಾರರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. 

ವಿಮಾ ಮೊತ್ತ ಎಷ್ಟು ? : ಮಕ್ಕಳ ಹೆಸರಿನಲ್ಲಿ ವಿಮೆ ಮಾಡಿಸಲು ಬಯಸಿದ್ದರೆ  ಪೋಸ್ಟ್ ಆಫೀಸ್ ಬಾಲ ಜೀವನ್ ಭೀಮಾ ಯೋಜನೆ ಅಡಿಯಲ್ಲಿ ವಿಮಾ ಮೊತ್ತವು 3 ಲಕ್ಷ ರೂಪಾಯಿಗಿಂತ ಹೆಚ್ಚಿರಬೇಕು. ಇಲ್ಲವೆ ಪೋಷಕರ ವಿಮಾ ಮೊತ್ತಕ್ಕೆ ಸರಿಯಾಗಿರಬೇಕು.  ನೀವು 5 ವರ್ಷಕ್ಕೆ ವಿಮೆ ತೆಗೆದುಕೊಂಡಿದ್ದರೆ 18.88 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ನೀವು 20 ವರ್ಷದ ಪಾಲಿಸಿ ತೆಗೆದುಕೊಂಡಿದ್ದರೆ 5.92 ರೂಪಾಯಿ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. 

ಮಕ್ಕಳ ಪಾಲಿಸಿ ಪ್ರೀಮಿಯಂಗೆ ಯಾರು ಜವಾಬ್ದಾರರು ? : ನಿಯಮಗಳ ಪ್ರಕಾರ, ನೀವು ನಿಮ್ಮ ಮಕ್ಕಳಿಗೆ ಈ ಮಕ್ಕಳ ಪಾಲಿಸಿಯನ್ನು ತೆಗೆದುಕೊಂಡರೆ, ಪ್ರೀಮಿಯಂ ಪಾವತಿಸುವುದು ನಿಮ್ಮ ಜವಾಬ್ದಾರಿಯಾಗಿದೆ. ಪ್ರೀಮಿಯಂ ಪಾವತಿ ಮಾಡುವವರು ಪಾಲಕರೇ ಆಗಿರುತ್ತಾರೆ. ಹಾಗೆಯೇ ಪಾಲಿಸಿ ಮುಗಿಯುವವರೆಗೆ ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಆದ್ರೆ ಅವಧಿ ಮುಗಿದ ಮೇಲೆ ಅದನ್ನು ಮತ್ತೆ ವಿಸ್ತರಿಸಲು ಬರುವುದಿಲ್ಲ. ಆದ್ರೆ ಈ ವಿಮೆ ಯೋಜನೆಯಡಿ ಸಾಲ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಯಾವಾಗ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ : ಅಂಚೆ ಕಚೇರಿಯ ಈ ಯೋಜನೆ ಪ್ರಕಾರ, ಪಾಲಿಸಿದಾರರು ಅಂದರೆ ಪೋಷಕರು ಮರಣಹೊಂದಿದರೆ, ಮಕ್ಕಳ ಪಾಲಿಸಿಯ ಪ್ರೀಮಿಯಂ ಅನ್ನು ಪಾವತಿಸಬೇಕಾಗಿಲ್ಲ. ಅವಧಿ ಮುಗಿದ ಮೇಲೆ ಪೂರ್ಣ ವಿಮಾ ಮೊತ್ತ ಮತ್ತು ಬೋನಸ್‌ ಹಣವನ್ನು ಮಕ್ಕಳಿಗೆ ನೀಡಲಾಗುತ್ತದೆ.  

GOLD AND SILVER PRICE: ದೇಶದ ಪ್ರಮುಖ ನಗರಗಳಲ್ಲಿ ಹೀಗಿದೆ ಚಿನ್ನ, ಬೆಳ್ಳಿ ದರ

ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ : ಈ ಪಾಲಿಸಿಯನ್ನು ನೀವು ಮಕ್ಕಳ ಹೆಸರಿನಲ್ಲಿ ಪಡೆಯುತ್ತಿದ್ದರೆ  ಪಾಲಿಸಿಯನ್ನು ತೆಗೆದುಕೊಳ್ಳುವಾಗ ಮಕ್ಕಳ ವೈದ್ಯಕೀಯ ಪರೀಕ್ಷೆಯ ಅಗತ್ಯವಿಲ್ಲ. ಆದ್ರೆ ಮಗು ಆರೋಗ್ಯವಾಗಿರುವುದು ಮುಖ್ಯವಾಗುತ್ತದೆ. ಇಷ್ಟೇ ಅಲ್ಲ ಈ ಪಾಲಿಸಿಯನ್ನು ಪಾಲಕರು ಯಾವುದೇ ಕಾರಣಕ್ಕೂ ಸರೆಂಡರ್ ಮಾಡುವಂತಿಲ್ಲ. ಅಂಚೆ ಕಚೇರಿ ಈ ಯೋಜನೆಗೆ ಸರೆಂಡರ್ ಅವಕಾಶವನ್ನು ನೀಡಿಲ್ಲ. 

Petrol, Diesel Price Today: ರಾಜ್ಯದ ಜಿಲ್ಲೆಗಳಲ್ಲಿ ಹೇಗಿದೆ ಇಂದಿನ ಬೆಲೆ? ಇಲ್ಲಿದೆ ದರ ಪಟ್ಟಿ

ಯಾವ ದಾಖಲೆಗಳು ಅಗತ್ಯವಿದೆ : ಈ ವಿಮೆ ಪಡೆಯಲು ಅರ್ಜಿ ಸಲ್ಲಿಸಬೇಕು. ಅರ್ಜಿ ಜೊತೆ ಮಗು ಮತ್ತು ಪೋಷಕರ ಗುರುತಿನ ಪುರಾವೆ (ಆಧಾರ್ ಕಾರ್ಡ್, ರೇಷನ್ ಕಾರ್ಡ್, ಇತ್ಯಾದಿ)  ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ, ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ, ಆಧಾರ್ ಕಾರ್ಡ್, ಇತ್ಯಾದಿ). ವಿಳಾಸ ಪುರಾವೆ (ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಇತ್ಯಾದಿ). ಪಾಸ್ಪೋರ್ಟ್ ಗಾತ್ರದ ಫೋಟೋ ಅಗತ್ಯವಿರುತ್ತದೆ. 

click me!