ಚುನಾವಣೆಗೆ ಸ್ಪರ್ಧಿಸಿರುವ ಗಣ್ಯರಿಗೆ ಅಂಬಾನಿ ಕಂಪನಿಗಳೇ ಹೂಡಿಕೆ ತಾಣ!

By Web DeskFirst Published Apr 29, 2019, 9:15 AM IST
Highlights

ರಾಜಕಾರಣಿಗಳಿಗೆ ಅಂಬಾನಿ ಕಂಪನಿಗಳೇ ಹೂಡಿಕೆ ತಾಣ| ಚುನಾವಣಾ ಕಣದಲ್ಲಿರುವ ಹೆಚ್ಚಿನವರಿಂದ ಅಂಬಾನಿಗಳ ಕಂಪನಿಗಳಲ್ಲಿ ಹೂಡಿಕೆ| ಸ್ಥಿರ ಠೇವಣಿ, ಬಾಂಡ್‌ ಜತೆಗೆ ಷೇರುಪೇಟೆಯಲ್ಲೂ ಭಾರಿ ಸಂಪತ್ತು ಹಂಚಿಕೆ

ನವದೆಹಲಿ[ಏ.29]: ದೇಶದ ರಾಜಕಾರಣಿಗಳು ತಾವು ಗಳಿಸುವ ಹಣವನ್ನು ಯಾವುದರಲ್ಲಿ ಹೂಡಿಕೆ ಮಾಡುತ್ತಾರೆ ಎಂಬುದಕ್ಕೆ ಕುತೂಹಲಕಾರಿ ಉತ್ತರ ದೊರಕಿದೆ. ಜನನಾಯಕರಿಗೆ ಈಗಲೂ ಸ್ಥಿರ ಠೇವಣಿ, ತೆರಿಗೆ ಮುಕ್ತ ಬಾಂಡ್‌ಗಳು ನೆಚ್ಚಿನ ಹೂಡಿಕೆ ವಿಧಾನಗಳಾದರೆ, ಹೆಚ್ಚಿನವರು ಷೇರುಪೇಟೆ ಹಾಗೂ ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸಿದ್ದಾರೆ. ಚುನಾವಣಾ ಅಖಾಡಕ್ಕೆ ಧುಮುಕಿರುವ ಹೆಚ್ಚಿನ ಮಂದಿ ಅಂಬಾನಿ ಸೋದರರ ಕಂಪನಿಗಳ ಷೇರುಗಳನ್ನು ಹೊಂದಿದ್ದಾರೆ.

ಲೋಕಸಭೆ ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ವಿವಿಧ ರಾಜಕಾರಣಿಗಳು ತಮ್ಮ ಆಸ್ತಿ ಕುರಿತು ಮಾಡಿಕೊಂಡಿರುವ ಘೋಷಣೆಯಲ್ಲಿ ಈ ವಿವರ ಇದೆ. 8.82 ಲಕ್ಷ ಕೋಟಿ ರು. ಮಾರುಕಟ್ಟೆಮೌಲ್ಯ ಹೊಂದಿರುವ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿ ಷೇರುಗಳನ್ನು ಹೆಚ್ಚಿನ ರಾಜಕಾರಣಿಗಳು ಹೊಂದಿದ್ದಾರೆ. ಜತೆಗೆ ಅವರ ಸೋದರ ಅನಿಲ್‌ ಅಂಬಾನಿ ಒಡೆತನದ ಕಂಪನಿಯ ಷೇರು, ಅನಿಲ್‌ರ ಕಂಪನಿ ನಡೆಸುತ್ತಿರುವ ಮ್ಯೂಚುವಲ್‌ ಫಂಡ್‌ಗಳನ್ನು ಖರೀದಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮಾತ್ರ ಹೂಡಿಕೆಗೆ ಷೇರುಪೇಟೆ ಅಥವಾ ಮ್ಯೂಚುವಲ್‌ ಫಂಡ್‌ ಮೊರೆ ಹೋಗಿಲ್ಲ.

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಅಂಬಾನಿ ಸೋದರರ ಕಂಪನಿಗಳಲ್ಲಿ ಹಣ ತೊಡಗಿಸಿದ್ದಾರೆ. ಜತೆಗೆ ಟಾಟಾ, ಎಲ್‌ ಆ್ಯಂಡ್‌ ಟಿ, ಆದಿತ್ಯ ಬಿರ್ಲಾ ಕಂಪನಿ, ಸರ್ಕಾರಿ ಕಂಪನಿಗಳ ಷೇರುಗಳಲ್ಲಿ 17.5 ಕೋಟಿ ರು. ಹೂಡಿದ್ದಾರೆ. ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಿಲಯನ್ಸ್‌ ಮ್ಯೂಚುವಲ್‌ ಫಂಡ್‌, ಎಚ್‌ಡಿಎಫ್‌ಸಿ, ಕೋಟಕ್‌, ಮೋತಿಲಾಲ್‌ ಓಸ್ವಾಲ್‌ ಷೇರುಗಳಲ್ಲಿ ಹಣ ತೊಡಗಿಸಿದ್ದಾರೆ.

ಎನ್‌ಸಿಪಿ ನಾಯಕ ಶರದ್‌ ಪವಾರ್‌ ಪುತ್ರಿ ಅಂಬಾನಿ ಸೋದರರ ಕಂಪನಿಯ ಷೇರುಗಳು ಮಾತ್ರವಲ್ಲದೇ, ಮಲ್ಯದ ಒಡೆತನದ ಯುಬಿ ಗ್ರೂಪ್‌ನ ವಿವಿಧ ಕಂಪನಿಗಳಲ್ಲೂ ಹಣ ಹೂಡಿದ್ದಾರೆ. ಬಿಜೆಪಿ ಸಂಸದೆ ಪೂನಂ ಮಹಾಜನ್‌ ಕುಟುಂಬ ರಿಲಯನ್ಸ್‌ ಇಂಡಸ್ಟ್ರೀಸ್‌, ಕಿಂಗ್‌ ಫಿಷರ್‌ ಏರ್‌ಲೈನ್ಸ್‌ನಲ್ಲಿ ಹೂಡಿಕೆ ಮಾಡಿದೆ. ಮಾಜಿ ಸಂಸದರಾದ ಪ್ರಿಯಾ ದತ್‌, ಜಯಪ್ರದಾ ಕೂಡ ರಿಲಯನ್ಸ್‌ ಷೇರು ಹೊಂದಿದ್ದಾರೆ.

click me!