*ಆರ್ ಬಿಐ ರೆಪೋ ದರ ಹೆಚ್ಚಿಸಿದ ಹಿನ್ನೆಲೆಯಲ್ಲಿ ಎಫ್ ಡಿ ಮೇಲಿನ ಬಡ್ಡಿದರ ಏರಿಕೆ
*2 ಕೋಟಿ ರೂ.ಗಿಂತ ಕಡಿಮೆ ಮೊತ್ತದ 1ರಿಂದ 10 ವರ್ಷಗಳ ಅವಧಿಯ ಎಫ್ ಡಿಗಳ ಮೇಲಿನ ಬಡ್ಡಿದರ ಹೆಚ್ಚಿಸಿರುವ ಪಿಎನ್ ಬಿ
*2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಆಯ್ದ ಎಫ್ ಡಿಗಳ ಮೇಲಿನ ಬಡ್ಡಿದರವನ್ನು15-20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿರುವ ಎಸ್ ಬಿಐ
ನವದೆಹಲಿ (ಜೂ.14): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ (FDs) ಮೇಲಿನ ಬಡ್ಡಿದರ (Interest rate) ಹೆಚ್ಚಳ ಮಾಡಿವೆ. ಇತ್ತೀಚೆಗೆಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ (Repo Rate) ಹೆಚ್ಚಳ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಎರಡು ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಿಸಿವೆ. ಹಾಗಾದ್ರೆ ಈ ಬ್ಯಾಂಕುಗಳು ಎಫ್ ಡಿ ಮೇಲಿನ ಬಡ್ಡಿದರ ಎಷ್ಟು ಹೆಚ್ಚಿಸಿವೆ? ಇಲ್ಲಿದೆ ಮಾಹಿತಿ.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)
2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಒಂದರಿಂದ 10 ವರ್ಷಗಳ ಅವಧಿಯ ಎಫ್ ಡಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿರೋದಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಒಂದು ವರ್ಷ ಹಾಗೂ ಅದಕ್ಕಿಂತ ಹೆಚ್ಚಿನ ಹಾಗೂ ಎರಡು ವರ್ಷಗಳ ತನಕದ ಸ್ಥಿರ ಠೇವಣಿ (FD) ಮೇಲಿನ ಬಡ್ಡಿದರವನ್ನು ಸಾಮಾನ್ಯ ಗ್ರಾಹಕರಿಗೆ ಶೇ.5.20ಕ್ಕೆ ಹೆಚ್ಚಿಸಲಾಗಿದೆ. ಇನ್ನು ಎರಡು ವರ್ಷಕ್ಕಿಂತ ಹೆಚ್ಚಿನ ಹಾಗೂ ಮೂರು ವರ್ಷಗಳ ತನಕದ ಎಫ್ ಡಿ ಮೇಲಿನ ಬಡ್ಡಿದರವನ್ನು ಶೇ. 5.30ಕ್ಕೆ ಹೆಚ್ಚಿಸಲಾಗಿದೆ. ಇನ್ನು ಮೂರು ವರ್ಷಗಳಿಗಿಂತ ಹೆಚ್ಚಿನ 5 ವರ್ಷಗಳ ತನಕದ ಎಫ್ ಡಿ ಮೇಲಿನ ಬಡ್ಡಿದರವನ್ನು ಶೇ. 5.50ಕ್ಕೆ ಏರಿಕೆ ಮಾಡಲಾಗಿದೆ.
Retail Inflation:ಮೇನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.04ಕ್ಕೆ ಇಳಿಕೆ; ಆದ್ರೂ ತಗ್ಗದ ಆತಂಕ
5ರಿಂದ 10 ವರ್ಷಗಳ ತನಕದ ಎಫ್ ಡಿ ಮೇಲಿನ ಬಡ್ಡಿದರವನ್ನು ಶೇ.5.60ಕ್ಕೆ ಏರಿಸಲಾಗಿದೆ. ಇನ್ನು ಪಿಎನ್ ಬಿ ಪ್ರಾರಂಭಿಸಿರುವ 1,111 ದಿನಗಳ ಹೊಸ ಅವಧಿಯ ಠೇವಣಿ ಮೇಲಿನ ಬಡ್ಡಿದರವನ್ನು ಶೇ.5.50ಕ್ಕೆ ಹೆಚ್ಚಿಸಿದೆ. ಪರಿಷ್ಕೃತ ಬಡ್ಡಿದರವು ಹೊಸ ಠೇವಣಿಗಳು ಹಾಗೂ ಪ್ರಸ್ತುತವಿರುವ ಠೇವಣಿಗಳ ನವೀಕರಣಕ್ಕೂ ಅನ್ವಯಿಸಲಿದ್ದು, ಜೂನ್ 14ರಿಂದ ಜಾರಿಗೆ ಬರಲಿದೆ ಎಂದು ಪಿಎನ್ ಬಿ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ.
ಇನ್ನು ಹಿರಿಯ ನಾಗರಿಕರಿಗೆ ಬ್ಯಾಂಕ್ ಒಂದು ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ 2 ವರ್ಷಗಳ ತನಕದ ಎಫ್ ಡಿಗೆ ಶೇ. 5.70 ಬಡ್ಡಿದರ ನೀಡಲಿದೆ. 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 3 ವರ್ಷಗಳ ಅವಧಿಯ ಎಫ್ ಡಿಗೆ ಶೇ.5.80 ಬಡ್ಡಿ ನೀಡಲಿದೆ. ಇನ್ನು ಮೂರು ವರ್ಷ ಮೇಲ್ಪಟ್ಟ ಹಾಗೂ ಐದು ವರ್ಷಗಳ ತನಕದ ಎಫ್ ಡಿಗೆ ಶೇ.6 ಬಡ್ಡಿ ನೀಡಲಿದೆ. 5ರಿಂದ 10 ವರ್ಷಗಳ ಅವಧಿಯ ಎಫ್ ಡಿಗೆ ಶೇ.6.10 ಹಾಗೂ 1,111 ದಿನಗಳ ಹೊಸ ಮೆಚ್ಯುರಿಟಿ ಅವಧಿ ಹೊಂದಿರುವ ಎಫ್ ಡಿಗೆ ಶೇ.6ರಷ್ಟು ಬಡ್ಡಿ ನೀಡಲಿದೆ. 7-14 ದಿನಗಳು,15-29 ದಿನಗಳು, 30-45 ದಿನಗಳು, 91-179 ದಿನಗಳು, 180-270 ದಿನಗಳು ಹಾಗೂ 271 ದಿನಗಳಿಂದ ಒಂದು ವರ್ಷದೊಳಗಿನ ಎಫ್ ಡಿ ಬಡ್ಡಿದರದಲ್ಲಿ ಪಿಎನ್ ಬಿ ಯಾವುದೇ ಬದಲಾವಣೆ ಮಾಡಿಲ್ಲ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೂಡ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಆಯ್ದ ಸ್ಥಿರ ಠೇವಣಿಗಳ (FD) ಮೇಲಿನ ಬಡ್ಡಿದರವನ್ನು 15-20 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿದೆ. 211 ದಿನಗಳಿಂದ ಒಂದು ವರ್ಷದೊಳಗಿನ ಮೆಚ್ಯುರಿಟಿ ಅವಧಿ ಹೊಂದಿರುವ ಎಫ್ ಡಿ ಗಳ ಬಡ್ಡಿದರವನ್ನು ಎಸ್ ಬಿಐ (SBI) ಶೇ.4.40ರಿಂದ ಶೇ. 4.60ಕ್ಕೆ ಹೆಚ್ಚಿಸಿದೆ.
ಸ್ವಿಗ್ಗಿ, ಝೋಮ್ಯಾಟೊಗೆ 15 ದಿನ ಗಡುವು!
ಒಂದು ವರ್ಷ ಹಾಗೂ ಎರಡು ವರ್ಷಗಳೊಳಗಿನ ಮೆಚ್ಯುರಿಟಿ ಅವಧಿ ಹೊಂದಿರುವ ಎಫ್ ಡಿ ಮೇಲಿನ ಬಡ್ಡಿದರ ಶೇ.5.30 ಹಾಗೂ ಎರಡರಿಂದ ಮೂರು ವರ್ಷಗಳ ಅವಧಿಯ ಎಫ್ ಡಿ ಮೇಲಿನ ಬಡ್ಡಿದವನ್ನು ಶೇ.5.35 ಕ್ಕೆ ಹೆಚ್ಚಿಸಲಾಗಿದೆ. ಈ ಬದಲಾವಣೆಯು ಜೂ.14ರಿಂದಲೇ ಜಾರಿಗೆ ಬರಲಿದೆ ಎಂದು ಎಸ್ ಬಿಐ ತಿಳಿಸಿದೆ.
ಹಿರಿಯ ನಾಗರಿಕರು 211 ದಿನಗಳಿಂದ ಒಂದು ವರ್ಷದೊಳಗಿನ ಅವಧಿಯ ಎಫ್ ಡಿ ಮೇಲೆ ಶೇ.5.10 ಬಡ್ಡಿ ಗಳಿಸಲಿದ್ದಾರೆ. ಇನ್ನು ಒಂದು ವರ್ಷ ಹಾಗೂ ಎರಡು ವರ್ಷದೊಳಗಿನ ಎಫ್ ಡಿ ಮೇಲೆ ಶೇ.5.80. ಇನ್ನು 2 ವರ್ಷಗಳಿಂದ 3 ವರ್ಷಗಳೊಳಗಿನ ಎಫ್ ಡಿ ಮೇಲಿನ ಬಡ್ಡಿದರ ಏರಿಕೆಯ ಬಳಿಕ ಶೇ. 5.85 ತಲುಪಿದೆ ಎಂದು ಎಸ್ ಬಿಐ ತಿಳಿಸಿದೆ.