2ನೇ ಆರ್ಥಿಕ ಪ್ಯಾಕೇಜ್‌ಗೆ ಮೋದಿ ಸಿದ್ಧತೆ| ಬಡವರ ಜೊತೆಗೆ ಉದ್ದಿಮೆಗಳಿಗೂ ದೊಡ್ಡ ನೆರವು ಸಾಧ್ಯತೆ
ನವದೆಹಲಿ(ಮೇ.03): ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಆರ್ಥಿಕತೆಗೆ ಉತ್ತೇಜನ ನೀಡಲು 2ನೇ ಪ್ಯಾಕೇಜ್ ಘೋಷಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್, ಗೃಹ ಮಂತ್ರಿ ಅಮಿತ್ ಶಾ ಹಾಗೂ ಸಂಬಂಧಪಟ್ಟ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ಪ್ಯಾಕೇಜ್‌ನಲ್ಲಿ ಬಡವರಿಗೆ ನೆರವು ನೀಡುವುದರ ಜೊತೆಗೆ ಆರ್ಥಿಕ ನಷ್ಟಅನುಭವಿಸುತ್ತಿರುವ ಉದ್ದಿಮೆಗಳಿಗೂ ನೆರವು ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕೊರೋನಾ ವೈರಸ್ ಬಿಕ್ಕಟ್ಟಿನಿಂದ ಆದ ಆರ್ಥಿಕ ಸಮಸ್ಯೆಗೆ ಮಾಚ್‌ರ್ ಅಂತ್ಯದಲ್ಲಿ 1.7 ಲಕ್ಷ ಕೋಟಿ ರು. ಮೊತ್ತದ ಮೊದಲ ಪ್ಯಾಕೇಜ್ ಘೋಷಿಸಿದ್ದ ಕೇಂದ್ರ ಸರ್ಕಾರ, ಅದರಡಿ ಬಡವರಿಗೆ ಉಚಿತ ಆಹಾರ ಧಾನ್ಯ, ಅಡುಗೆ ಅನಿಲ ನೀಡುವುದರ ಜೊತೆಗೆ ನೇರ ನಗದು ವರ್ಗಾವಣೆಯನ್ನೂ ಮಾಡಿತ್ತು. ಈಗ ಎರಡನೇ ಪ್ಯಾಕೇಜ್‌ನಲ್ಲೂ ಅಂತಹ ಅಂಶಗಳು ಇರಲಿದ್ದು, ಸಂಕಷ್ಟದಲ್ಲಿರುವ ಔದ್ಯೋಗಿಕ ಕ್ಷೇತ್ರಕ್ಕೂ ಅಗತ್ಯ ನೆರವು ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ರಾಜ್ಯಗಳಿಗೆ ಜಿಎಸ್‌ಟಿ ಮರುಪಾವತಿ ವಿಳಂಬವಾಗುತ್ತಿರುವ ಬಗ್ಗೆ ನಿರ್ಮಲಾ ಸೀತಾರಾಮನ್ ಅವರು ಪ್ರಧಾನಿಗೆ ಕಾರಣಗಳನ್ನು ವಿವರಿಸಿದರು ಎಂದೂ ಗೊತ್ತಾಗಿದೆ. ಇದೇ ಕಾರಣಕ್ಕಾಗಿಯೇ ಶುಕ್ರವಾರ ಪ್ರಕಟವಾಗಬೇಕಿದ್ದ ಮಾಸಿಕ ಜಿಎಸ್‌ಟಿ ಸಂಗ್ರಹ ಮಾಹಿತಿಯನ್ನೂ ಸರ್ಕಾರ ಬಹಿರಂಗಪಡಿಸಿಲ್ಲ ಎನ್ನಲಾಗಿದೆ.