ಮನೆ ಮೇಲ್ಚಾವಣಿಯಲ್ಲೇ ವಿದ್ಯುತ್ ಉತ್ಪಾದಿಸುವ 'ಪಿಎಂ ಸೂರ್ಯ ಘರ್: ಮುಫ್ತ ಬಿಜಲಿ ಯೋಜನೆಗೆ' ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಚಾಲನೆ ನೀಡಿದರು.
ನವದೆಹಲಿ (ಫೆ.13): ಮನೆಯ ಮೇಲ್ಚಾವಣೆಯಲ್ಲಿ ಸೌರ ಫಲಕಗಳ ಅಳವಡಿಕೆಗೆ ಉತ್ತೇಜನ ನೀಡಲು ಪ್ರಧಾನಿ ನರೇಂದ್ರ ಮೋದಿ 'ಪಿಎಂ ಸೂರ್ಯ ಘರ್: ಮುಫ್ತ ಬಿಜಲಿ ಯೋಜನೆ' ಅನ್ನು ಮಂಗಳವಾರ ಘೋಷಿಸಿದರು. ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ ಶಕ್ತಿ ಒದಗಿಸುವ ಮೂಲಕ 1 ಕೋಟಿ ಮನೆಗಳನ್ನು ಬೆಳಗುವ ಗುರಿಯನ್ನು ಈ ಯೋಜನೆ ಹೊಂದಿದೆ. 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಸಂದರ್ಭದಲ್ಲಿ ಈ ಯೋಜನೆಯನ್ನು ಮೊದಲ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಸೋಲಾರ್ ಪ್ಯಾನೆಲ್ ಯೋಜನೆ ಅಡಿಯಲ್ಲಿ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ನೀಡಲಾಗುತ್ತದೆ ಮತ್ತು ಇದನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಈ ರೀತಿ ಸಬ್ಸಿಡಿಗಳನ್ನು ಜನರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡೋದ್ರಿಂದ ಜನರ ಮೇಲೆ ಯಾವುದೇ ವೆಚ್ಚದ ಹೊರೆ ಇರೋದಿಲ್ಲ ಎಂದು ಪ್ರಧಾನಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಮೇಲ್ಚಾವಣೆ ಸೌರವಿದ್ಯುತ್ ವ್ಯವಸ್ಥೆಯನ್ನು ಉತ್ತೇಜಿಸಲು ಸ್ಥಳೀಯ ಪಟ್ಟಣ ಹಾಗೂ ಗ್ರಾಮ ಪಂಚಾಯತಿಗಳಿಗೆ ಸರ್ಕಾರ ಪ್ರೋತ್ಸಾಹಧನ ಕೂಡ ನೀಡಲಿದೆ. ಇನ್ನು ಈ ಯೋಜನೆಯಿಂದ ಹೆಚ್ಚಿನ ಆದಾಯ, ಕಡಿಮೆ ವಿದ್ಯುತ್ ಬಿಲ್ ಗಳು ಹಾಗೂ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಮೋದಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇನ್ನು ಮೇಲ್ಚಾವಣೆ ಸೌರ ವಿದ್ಯುತ್ ಫಲಕಗಳನ್ನು ಕಟ್ಟಡ, ಮನೆ ಅಥವಾ ವಾಸ್ತವ್ಯದ ಕಟ್ಟಡಗಳ ಮೇಲೆ ಅಳವಡಿಸಲು ಅವಕಾಶ ನೀಡಲಾಗಿದೆ. ಇನ್ನು ಪಿಎಂ ಸೂರ್ಯ ಘರ್: ಮುಫ್ತಿ ಬಿಜಲಿ ಯೋಜನೆಗೆ https://pmsuryaghar.gov.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಸೋಲಾರ್ ಪ್ಯಾನೆಲ್ ಹಾಕೋಕೆ ಮೇಲ್ಚಾವಣಿನೇ ಇಲ್ವಾ? ಹಾಗಿದ್ರೆ ಈ ಸೋಲಾರ್ ಬಿಸ್ಕೆಟ್ ಕೊಂಡು ಹಣ ಉಳಿಸಿ
ಅರ್ಜಿ ಸಲ್ಲಿಕೆ ಹೇಗೆ?
ಹಂತ 1: ಈ ಕೆಳಗಿನ ಮಾಹಿತಿಗಳನ್ನು ಪೋರ್ಟಲ್ ನಲ್ಲಿ ಭರ್ತಿ ಮಾಡಿ.
*ನಿಮ್ಮ ರಾಜ್ಯ ಆಯ್ಕೆ ಮಾಡಿ.
ನಿಮ್ಮ ವಿದ್ಯುತ್ ವಿತರಣಾ ಕಂಪನಿಯನ್ನು ಆಯ್ಕೆ ಮಾಡಿ.
ನಿಮ್ಮ ವಿದ್ಯುತ್ ಗ್ರಾಹಕರ ಸಂಖ್ಯೆ ಭರ್ತಿ ಮಾಡಿ.
ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ.
ನಿಮ್ಮ ಇ-ಮೇಲ್ ನಮೂದಿಸಿ.
ಹಂತ 2: ನಿಮ್ಮ ಗ್ರಾಹಕ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಿ.
ಅರ್ಜಿಯಲ್ಲಿರುವಂತೆ ಮೇಲ್ಚಾವಣಿ ಸೋಲಾರ್ ಯೋಜನೆಗೆ ಅರ್ಜಿ ಸಲ್ಲಿಸಿ.
ಹಂತ 3: ಅನುಮೋದನೆಗೆ ಕಾಯಿರಿ.
ನಿಮ್ಮ DISCOM ಅಲ್ಲಿ ಯಾವುದೇ ನೋಂದಾಯಿತ ವ್ಯಾಪಾರಿಗಳಿಂದ ಸೋಲಾರ್ ಸಾಧನ ಅಳವಡಿಸಿಕೊಳ್ಳಿ.
ಹಂತ 4: ಒಮ್ಮೆ ಅಳವಡಿಕೆ ಪೂರ್ಣಗೊಂಡ ಬಳಿಕ ಘಟಕದ ಮಾಹಿತಿಗಳನ್ನು ಸಲ್ಲಿಕೆ ಮಾಡಿ. ಹಾಗೆಯೇ ನೆಟ್ ಮೀಟರ್ ಗೆ ಅರ್ಜಿ ಸಲ್ಲಿಸಿ.
ಹಂತ 5: ನೆಟ್ ಮೀಟರ್ ಅಳವಡಿಕೆ ಹಾಗೂ DISCOM ಪರಿಶೀಲನೆ ಬಳಿಕ ಪೋರ್ಟಲ್ ನಲ್ಲಿ ಕಮೀಷನಿಂಗ್ ಪ್ರಮಾಣಪತ್ರ ಸೃಷ್ಟಿಯಾಗುತ್ತದೆ.
ಹಂತ 6: ಒಮ್ಮೆ ನಿಮಗೆ ಕಮೀಷನಿಂಗ್ ವರದಿ ಬಂದ ಬಳಿಕ ಬ್ಯಾಂಕ್ ಖಾತೆ ಮಾಹಿತಿಗಳು ಹಾಗೂ ಕ್ಯಾನ್ಸಲ್ ಮಾಡಿರುವ ಚೆಕ್ ಅನ್ನು ಪೋರ್ಟಲ್ ಮೂಲಕ ಸಲ್ಲಿಕೆ ಮಾಡಿ.
30 ದಿನಗಳೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಸಬ್ಸಿಡಿ ಬರುತ್ತದೆ.
ತಮಿಳುನಾಡಿನಲ್ಲಿ ಅಮೆರಿಕದ ಫಸ್ಟ್ ಸೋಲಾರ್ ಉತ್ಪಾದನಾ ಘಟಕ ಉದ್ಘಾಟನೆ
ಮನೆಗಳ ಮೇಲ್ಚಾವಣೆಗಳಲ್ಲಿ ಸೌರ ಫಲಕಗಳ ಅಳವಡಿಕೆಗೆ ಉತ್ತೇಜನ ನೀಡಲು ಪಿಎಂ ಸೂರ್ಯ ಘರ್: ಮುಫ್ತ ಬಿಜಲಿ ಯೋಜನೆ' ಅನ್ನು ಫೆ.1ರಂದು 2024ನೇ ಸಾಲಿನ ಮಧ್ಯಂತರ ಬಜೆಟ್ ಮಂಡನೆ ಸಂದರ್ಭದಲ್ಲಿ ವಿತ್ತ ಸಚಿವೆ ಘೋಷಿಸಿದ್ದರು. ಈ ಕ್ರಮದಿಂದ ವಿದ್ಯುತ್ ಉತ್ಪಾದನೆ ಹೆಚ್ಚುವ ಜೊತೆಗೆ ಆಯಾ ಕುಟುಂಬಕ್ಕೆ ಅಗತ್ಯವಾದ ವಿದ್ಯುತ್ ಅನ್ನು ಅವರೇ ಉತ್ಪಾದಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ.