
ನವದೆಹಲಿ[ಜೂ.14]: ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಯ ಫಲಾನುಭವಿಗಳಾಗಲು ರೈತರು ಪ್ರತಿ ತಿಂಗಳು 100 ರು. ಪ್ರೀಮಿಯಂ ಪಾವತಿಸಬೇಕಿದ್ದು, 60 ವರ್ಷ ಪೂರ್ಣಗೊಂಡ ಬಳಿಕ ಸರ್ಕಾರ ರೈತರಿಗೆ ಪ್ರತಿ ತಿಂಗಳು ಕನಿಷ್ಠ 3000 ರು. ಪಿಂಚಣಿ ಪಾವತಿಸಲಿದೆ.
ಎರಡನೇ ಅವಧಿಯ ಮೋದಿ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ರೈತರಿಗೆ ಪ್ರತ್ಯೇಕ ಪಿಂಚಣಿ ನೀಡುವ ಪ್ರಧಾನ್ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆ ಸುಮಾರು 5 ಕೋಟಿ ಫಲಾನುಭವಿ ರೈತರನ್ನು ಒಳಗೊಳ್ಳುವ ಗುರಿಯನ್ನು ಹೊಂದಿದ್ದು, ಮೂರು ವರ್ಷದಲ್ಲಿ ಸರ್ಕಾರ ಈ ಯೋಜನೆಗೆ 10,774 ಕೋಟಿ ರು.ಗಳನ್ನು ಒದಗಿಸಲಿದೆ. 18ರಿಂದ 40 ವರ್ಷದ ಒಳಗಿನ ರೈತರು ಪಿಂಚಣಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ರೈತರು ಪ್ರತಿ ತಿಂಗಳು 100 ರು. ಪಾವತಿಸಿದರೆ, ಸರ್ಕಾರ ಕೂಡ ಅಷ್ಟೇ ಮೊತ್ತದ ಹಣವನ್ನು ಒದಗಿಸಲಿದೆ. ಎಲ್‌ಐಸಿ ಪಿಂಚಣಿ ಯೋಜನೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಪಡೆದುಕೊಂಡಿದೆ.
ರಾಜ್ಯ ಕೃಷಿ ಸಚಿವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಯ ಕುರಿತು ಚರ್ಚೆ ನಡೆಸಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಯೋಜನೆಯನ್ನು ಆದಷ್ಟುಬೇಗ ಜಾರಿಗೊಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.