ಪಿಎಫ್‌ ಬಡ್ಡಿ ದರ ಶೇ.0.10 ಏರಿಕೆ: ಇನ್ನು ಶೇ.8.65

By Web DeskFirst Published Feb 22, 2019, 8:09 AM IST
Highlights

ಪಿಎಫ್ ಖಾತೆದಾರರಿಗೆ ಸಿಹಿಸುದ್ಧಿ |  ಪಿಎಫ್‌ ಮೇಲಿನ ಬಡ್ಡಿದರವನ್ನು 8.55 ರಿಂದ 8.65ಕ್ಕೆ ಹೆಚ್ಚಳ | 

ನವದೆಹಲಿ (ಫೆ. 22): ನೌಕರರ ಭವಿಷ್ಯ ನಿಧಿ (ಪಿಎಫ್‌) ಖಾತೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. 2018-19ನೇ ಸಾಲಿನಲ್ಲಿ ಪಿಎಫ್‌ ಮೇಲಿನ ಬಡ್ಡಿದರವನ್ನು 8.55ರಿಂದ 8.65ಕ್ಕೆ ಹೆಚ್ಚಿಸಲು ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ)ಯ ಟ್ರಸ್ಟಿಗಳ ಮಂಡಳಿ ನಿರ್ಧರಿಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಗಂಗ್ವಾರ್‌ ಹೇಳಿದ್ದಾರೆ.

ಇಪಿಎಫ್‌ಒ ಸಭೆಯಲ್ಲಿ ಪಿಎಫ್‌ ಮೇಲಿನ ಬಡ್ಡಿದರ ಹೆಚ್ಚಳ ಮಾಡುವ ನಿರ್ಧಾರಕ್ಕೆ ಎಲ್ಲ ಸದಸ್ಯರು ಬೆಂಬಲ ನೀಡಿದರು ಎಂದು ಸಚಿವ ಗಂಗ್ವಾರ್‌ ಹೇಳಿದರು. ಅನುಮೋದನೆ ಪಡೆಯಲು ಈ ಪ್ರಸ್ತಾಪನೆಯನ್ನು ಕೇಂದ್ರ ವಿತ್ತ ಸಚಿವಾಲಯಕ್ಕೆ ರವಾನಿಸಲಾಗುತ್ತದೆ. ವಿತ್ತ ಸಚಿವಾಲಯದ ಅನುಮೋದನೆ ಸಿಕ್ಕ ಬಳಿಕ, ಚಂದಾದಾರರ ಪಿಎಫ್‌ ಹಣಕ್ಕೆ ಹೆಚ್ಚಿನ ಬಡ್ಡಿ ಲಭ್ಯವಾಗಲಿದೆ.

ಈವರೆಗೆ ಇದ್ದ ಶೇ.8.55 ಬಡ್ಡಿ ದರ ಐದು ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮೊತ್ತವಾಗಿತ್ತು. 2016-17ರಲ್ಲಿ ಇದು ಶೇ.8.65, 2015-16ರಲ್ಲಿ ಶೇ.8.8 ಹಾಗೂ 2013-14, 2014-15ರಲ್ಲಿ ಶೇ.8.75ರಷ್ಟಿತ್ತು. 2012-13ರಲ್ಲಿ ಮಾತ್ರ ಶೇ.8.5ರಷ್ಟಿತ್ತು.
 

click me!