
ನವದೆಹಲಿ(ಮೇ.11): ಒಂದೆಡೆ ಕೊರೋನಾ ವೈರಸ್ ಹೊಡೆತದಿಂದ ಶ್ರೀಸಾಮಾನ್ಯರು ತತ್ತರಿಸುತ್ತಿರುವಾಗಲೇ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಶಾಕ್ ಮೇಲೆ ಶಾಕ್ ನೀಡಲು ಆರಂಭಿಸಿವೆ.
ಮತ್ತೆ ಬೆಲೆ ಏರಿಕೆ ಮಾಡಿರುವ ತೈಲ ಕಂಪನಿಗಳು ಸೋಮವಾರ ಲೀಟರ್ ಪೆಟ್ರೋಲ್ ಬೆಲೆಯನ್ನು 26 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು 33 ಪೈಸೆಯಷ್ಟುಹೆಚ್ಚಳ ಮಾಡಿವೆ. ಒಂದು ವಾರದಲ್ಲಿ ಐದನೇ ಬಾರಿ ದರ ಏರಿಕೆಯಾಗುವುದರೊಂದಿಗೆ, ರಾಜಸ್ಥಾನ ಹಾಗೂ ಮಧ್ಯಪ್ರದೇಶ ಬಳಿಕ ಇದೀಗ ಮಹಾರಾಷ್ಟ್ರದಲ್ಲೂ ಲೀಟರ್ ಪೆಟ್ರೋಲ್ ಬೆಲೆ 100 ರು. ಗಡಿಯನ್ನು ದಾಟಿದೆ.
ಕಳೆದೊಂದು ವಾರದ ಅವಧಿಯಲ್ಲಿ ಲೀಟರ್ ಪೆಟ್ರೋಲ್ 1.14 ರು. ಹಾಗೂ ಡೀಸೆಲ್ 1.33 ರು. ದುಬಾರಿಯಾದಂತಾಗಿದೆ. ಮಾ.24ರಿಂದ ಏ.15ರ ನಡುವೆ ಮಾಡಲಾಗಿದ್ದ ದರ ಇಳಿಕೆಯ ಲಾಭವನ್ನು ತೈಲ ಕಂಪನಿಗಳು ಗ್ರಾಹಕರಿಂದ ಮತ್ತೆ ಕಸಿದುಕೊಂಡಿವೆ.
ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ಬೆಲೆ 102.42 ರು. ಇದ್ದರೆ, ಮಧ್ಯಪ್ರದೇಶದಲ್ಲಿ ಅನುಪ್ಪುರ್‌ನಲ್ಲಿ 102.12 ರು.ಗೆ ತಲುಪಿದೆ. ಮಹಾರಾಷ್ಟ್ರ ಪರಭಣಿಯಲ್ಲಿ 100.20 ರು.ಗೆ ಏರಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 94.57 ರು. ಹಾಗೂ ಡೀಸೆಲ್ ಬೆಲೆ 86.99 ರು. ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.