
ನವದೆಹಲಿ(ಮಾ.25): ತೈಲ ದರ ಏರಿಕೆ ವಿರುದ್ಧ ರೋಸಿ ಹೋಗಿದ್ದ ಜನರಿಗೆ ಸಮಾಧಾನದ ಸುದ್ದಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನೆಲೆಯಲ್ಲಿ ಲೀಟರ್ ಪೆಟ್ರೋಲ್ ದರವನ್ನು 18 ಪೈಸೆ ಹಾಗೂ ಡೀಸೆಲ್ ಬೆಲೆಯನ್ನು 17 ಪೈಸೆಯಷ್ಟುತೈಲ ಕಂಪನಿಗಳು ಕಡಿತಗೊಳಿಸಿವೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗುತ್ತಿರುವುದು ಕಳೆದ ಒಂದು ವರ್ಷದ ಅವಧಿಯಲ್ಲಿ ಇದೇ ಮೊದಲು.
ದರ ಕಡಿತದೊಂದಿಗೆ ಲೀಟರ್ ಪೆಟ್ರೋಲ್ ಬೆಲೆ ಬೆಂಗಳೂರಿನಲ್ಲಿ 94.02 ರು. ಹಾಗೂ ಡೀಸೆಲ್ ಬೆಲೆ 86.21 ರು.ಗೆ ಇಳಿಕೆಯಾಗಿದೆ. 2020ರ ಮಾ.16ರಂದು ದೇಶದಲ್ಲಿ ತೈಲ ಬೆಲೆ ಇಳಿಕೆಯಾಗಿತ್ತು. ಆ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಕುಸಿತವಾದರೂ ಸರ್ಕಾರ ಆ ಲಾಭವನ್ನು ಜನರಿಗೆ ವರ್ಗಾಯಿಸುವ ಬದಲು ತೆರಿಗೆ ಹೆಚ್ಚಳ ಮಾಡಿತ್ತು. ಇದರಿಂದಾಗಿ ದರಗಳಲ್ಲಿ ಇಳಿಕೆಯಾಗಿರಲಿಲ್ಲ.
ನಂತರದ ದಿನಗಳಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದರೂ ಸರ್ಕಾರ ತೆರಿಗೆ ಕಡಿತಗೊಳಿಸಿರಲಿಲ್ಲ. ಹೀಗಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 21.58 ರು. ಹಾಗೂ ಡೀಸೆಲ್ ದರ 19.18 ರು.ನಷ್ಟುಹೆಚ್ಚಳವಾಗಿದೆ. ಇದರ ಪರಿಣಾಮವಾಗಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಕೆಲವೊಂದು ನಗರಗಳಲ್ಲಿ ಪೆಟ್ರೋಲ್ ಬೆಲೆ ಕಳೆದ ತಿಂಗಳು 100 ರು. ಗಡಿ ದಾಟಿದೆ.
ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೊರೋನಾ ಮತ್ತೊಂದು ಸುತ್ತಿನ ಅಲೆ ಕಾಣಿಸಿಕೊಳ್ಳುತ್ತಿರುವುದರಿಂದ ಬಳಕೆ ಕಡಿಮೆಯಾಗಬಹುದು ಎಂಬ ಭೀತಿಯಿಂದ ತೈಲ ಬೆಲೆ ಕುಸಿಯುತ್ತಿದೆ ಎನ್ನಲಾಗಿದೆ. ಪಶ್ಚಿಮ ಟೆಕ್ಸಾಸ್ ಮಾರುಕಟ್ಟೆಯಲ್ಲಿ ಬ್ಯಾರಲ್ ತೈಲ ಬೆಲೆ ಮಂಗಳವಾರ 57.76 ಡಾಲರ್‌ಗೆ ಇಳಿಕೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.