ಎಲ್ಲ ಸಾಲಗಾರರಿಗೂ ಚಕ್ರಬಡ್ಡಿ ವಿನಾಯ್ತಿ: ಸರ್ಕಾರಕ್ಕೆ 7500 ಕೋಟಿ ಹೊರೆ!

By Kannadaprabha NewsFirst Published Mar 24, 2021, 9:32 AM IST
Highlights

ಎಲ್ಲ ಸಾಲಗಾರರಿಗೂ ಚಕ್ರಬಡ್ಡಿ ವಿನಾಯ್ತಿ| 6 ತಿಂಗಳ ಲೋನ್‌ ಮಾರಟೋರಿಯಂ ಪ್ರಕರಣ| 2 ಕೋಟಿ ರು.ವರೆಗಿನ ಸಾಲಗಾರರಿಗಷ್ಟೇ ಇದ್ದ ಸೌಲಭ್ಯ ಎಲ್ಲರಿಗೂ ವಿಸ್ತರಣೆ| ಇಎಂಐ ಪಾವತಿಗೆ ವಿನಾಯಿತಿ ಸೌಲಭ್ಯ ಮತ್ತೊಮ್ಮೆ ವಿಸ್ತರಣೆ ಇಲ್ಲ: ಕೋರ್ಟ್‌

ನವದೆಹಲಿ(ಮಾ.24): ಕೊರೋನಾ ಹಿನ್ನೆಲೆಯಲ್ಲಿ 2 ಕೋಟಿ ರು.ವರೆಗಿನ ಸಾಲಗಾರರಿಗೆ ‘ಲೋನ್‌ ಮಾರಟೋರಿಯಂ’ನಡಿ ನೀಡಲಾಗಿದ್ದ ಚಕ್ರಬಡ್ಡಿ ಮನ್ನಾ ಸೌಲಭ್ಯವನ್ನು ಸುಪ್ರೀಂಕೋರ್ಟ್‌ ಇದೀಗ ಎಲ್ಲ ಸಾಲಗಾರರಿಗೂ ವಿಸ್ತರಣೆ ಮಾಡಿದೆ. ಬ್ಯಾಂಕುಗಳು ಈಗಾಗಲೇ ಚಕ್ರಬಡ್ಡಿ ಅಥವಾ ಬಡ್ಡಿಯ ಮೇಲೆ ದಂಡವನ್ನು ವಸೂಲಿ ಮಾಡಿದ್ದರೆ ಅದನ್ನು ಮರಳಿಸಬೇಕು ಅಥವಾ ಮುಂದಿನ ಸಾಲ ಕಂತಿನ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಇದೇ ವೇಳೆ, ಕೊರೋನಾ ಕಾರಣ ಆರು ತಿಂಗಳ ಕಾಲ ಸಾಲ ಮರುಪಾವತಿಯಿಂದ ನೀಡಲಾಗಿದ್ದ ವಿನಾಯಿತಿ (ಲೋನ್‌ ಮಾರಟೋರಿಯಂ)ಯನ್ನು ಮತ್ತಷ್ಟುದಿನ ವಿಸ್ತರಿಸಲು ಆಗುವುದಿಲ್ಲ. ಮಾರಟೋರಿಯಂ ಅವಧಿಯ ಸಂಪೂರ್ಣ ಬಡ್ಡಿಯನ್ನು ಮನ್ನಾ ಕೂಡ ಮಾಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ಮಂಗಳವಾರ ತೀರ್ಪು ಪ್ರಕಟಿಸಿದೆ.

‘ಲೋನ್‌ ಮಾರಟೋರಿಯಂ ಸೌಲಭ್ಯ ಪಡೆದಿದ್ದ 2 ಕೋಟಿ ರು.ವರೆಗಿನ ಸಾಲಗಾರರಿಗೆ ಮಾತ್ರ ಕೇಂದ್ರ ಸರ್ಕಾರ ಚಕ್ರಬಡ್ಡಿಯಿಂದ ವಿನಾಯಿತಿ ನೀಡಿದೆ. ಆದರೆ 2 ಕೋಟಿ ರು. ಮಿತಿ ನಿಗದಿಗೆ ಯಾವುದೇ ಸಮರ್ಥನೆಯನ್ನು ನೀಡಿಲ್ಲ ಎಂದು ಕೋರ್ಟ್‌ ತಿಳಿಸಿದ್ದು, ಎಲ್ಲರಿಗೂ ಈ ಸವಲತ್ತಿನ ವಿಸ್ತರಣೆ ಮಾಡುವಂತೆ ಸೂಚಿಸಿದೆ.

ಏನಿದು ಪ್ರಕರಣ?:

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾ.27ರಂದು ಮೂರು ತಿಂಗಳ ಕಾಲ ಸಾಲ ಮರುಪಾವತಿಗೆ ವಿನಾಯಿತಿ (ಲೋನ್‌ ಮಾರಟೋರಿಯಂ) ನೀಡಿತ್ತು. ಬಳಿಕ ಅದನ್ನು ಇನ್ನೂ ಮೂರು ತಿಂಗಳ ಕಾಲ ಅಂದರೆ ಆ.31ರವರೆಗೂ ವಿಸ್ತರಣೆ ಮಾಡಿತ್ತು. ಈ ಅವಧಿಯಲ್ಲಿ ಸಾಲದ ಬಡ್ಡಿಯ ಮೇಲೆ ಬಡ್ಡಿ ವಿಧಿಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆ ಚಕ್ರಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಕೋರ್ಟ್‌ ಸೂಚಿಸಿತ್ತು. ಆದರೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕುಗಳು 2 ಕೋಟಿ ರು.ವರೆಗಿನ ಸಾಲಗಾರರಿಗೆ ಮಾತ್ರ ಚಕ್ರ ಬಡ್ಡಿ ಮನ್ನಾ ಸೌಲಭ್ಯ ನೀಡಿದ್ದವು. ಇದನ್ನು ಪ್ರಶ್ನಿಸಿ ಕಂಪನಿಗಳು, ವ್ಯಕ್ತಿಗಳು, ಉದ್ಯಮ ಸಂಸ್ಥೆಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದವು. ಡಿ.17ರಂದು ತೀರ್ಪು ಕಾದಿರಿಸಿದ್ದ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಆರ್‌. ಸುಭಾಷ್‌ ರೆಡ್ಡಿ ಹಾಗೂ ಎಂ.ಆರ್‌. ಶಾ ಅವರಿದ್ದ ಪೀಠ ಮಂಗಳವಾರ ತೀರ್ಪು ಪ್ರಕಟಿಸಿದೆ.

ಯಾರಿಗೆ ಇದರ ಅನುಕೂಲ?

200 ಕೋಟಿ ರು.ಗಿಂತ ಹೆಚ್ಚು ಸಾಲ ಪಡೆದ ವ್ಯಕ್ತಿಗಳು, ಭಾರೀ ಪ್ರಮಾಣದಲ್ಲಿ ಸಾಲ ಪಡೆದ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳು, ವಿದ್ಯುತ್‌ ಉತ್ಪಾದನಾ ಕಂಪನಿಗಳು, ಬಟ್ಟೆಉತ್ಪಾದನಾ ಕಂಪನಿಗಳು, ಚಿನ್ನಾಭರಣ ತಯಾರಕರು, ಹೋಟೆಲ್‌-ರೆಸ್ಟೋರೆಂಟ್‌ ಮಾಲೀಕರು, ಖಾಸಗಿ ಸಾರಿಗೆ ಸಂಸ್ಥೆಗಳು, ಶಾಪಿಂಗ್‌ ಮಾಲ್‌ಗಳು, ಇತರ ಉದ್ದಿಮೆದಾರರು.

click me!