ಉತ್ತರ ಕರ್ನಾಟಕದ ಕಡೆ ಉದ್ಯಮ ಸ್ಥಾಪಿಸಲು ಮನವೊಲಿಕೆ: ಸಚಿವ ಎಂ.ಬಿ.ಪಾಟೀಲ

By Kannadaprabha NewsFirst Published Dec 1, 2023, 8:11 PM IST
Highlights

ಉದ್ಯಮಗಳು ಎಲ್ಲೆಡೆ ಹರಡಿಕೊಂಡರೆ ಈ ಕಡೆ ಭಾಗದ ಅಭಿವೃದ್ಧಿಯೂ ಸಾಧ್ಯ. ಈ ನಿಟ್ಟಿನಲ್ಲಿ ಉದ್ಯಮಿಗಳ ಮನವೊಲಿಸಲಾಗುತ್ತಿದೆ. ಹೆಚ್ಚು ಒತ್ತಡ ಹಾಕುವ ಹಾಗೂ ಇಲ್ಲ. ಅವರಿಗೆ ಮನವರಿಕೆ ಮಾಡಿ, ಉತ್ತರ ಕರ್ನಾಟಕದ ಕಡೆಗೂ ಹಣ ತೊಡಗಿಸಲು ಕೇಳಲಾಗುತ್ತಿದೆ: ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ 

ವಿಜಯಪುರ(ಡಿ.01):  ಎಲ್ಲ ಕೈಗಾರಿಕೆಗಳು ರಾಜಧಾನಿ ಬೆಂಗಳೂರು ಸುತ್ತ ತಲೆ ಎತ್ತುತ್ತವೆ. ಈ ವಾತಾವರಣ ಬದಲಿಸಿ ವಿಜಯಪುರ ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ಕೈಗಾರಿಕೆಗಳ ಸ್ಥಾಪನೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಯಮಗಳು ಎಲ್ಲೆಡೆ ಹರಡಿಕೊಂಡರೆ ಈ ಕಡೆ ಭಾಗದ ಅಭಿವೃದ್ಧಿಯೂ ಸಾಧ್ಯ. ಈ ನಿಟ್ಟಿನಲ್ಲಿ ಉದ್ಯಮಿಗಳ ಮನವೊಲಿಸಲಾಗುತ್ತಿದೆ. ಹೆಚ್ಚು ಒತ್ತಡ ಹಾಕುವ ಹಾಗೂ ಇಲ್ಲ. ಅವರಿಗೆ ಮನವರಿಕೆ ಮಾಡಿ, ಉತ್ತರ ಕರ್ನಾಟಕದ ಕಡೆಗೂ ಹಣ ತೊಡಗಿಸಲು ಕೇಳಲಾಗುತ್ತಿದೆ ಎಂದರು.

ಬಿ.ಆರ್‌.ಪಾಟೀಲ ಟೀಕೆ, ದೂರು ನನ್ನ ಇಲಾಖೆಗೆ ಸಂಬಂಧಿಸಿದಲ್ಲ: ಸಚಿವ ಕೃಷ್ಣ ಭೈರೇಗೌಡ

ಎಲ್ಲವೂ ಬೆಂಗಳೂರಲ್ಲಿ ಆದರೆ ಎಲ್ಲ ರೀತಿಯಿಂದಲೂ ನಗರಕ್ಕೆ ಕಷ್ಟ. ಈ ಕಡೆಗೆ ಕೈಗಾರಿಕೆಗಳು ಬಂದರೆ ಇಲ್ಲಿನವರಿಗೆ ಉದ್ಯೋಗ ಸಿಗುತ್ತದೆ. ಈ ಕಡೆ ಕೈಗಾರಿಕೆ ಹಾಕಲು ಬಂದರೆ ಖುದ್ದು ನಾನೇ ಮುಂದೆ ನಿಂತು ಸ್ವಾಗತಿಸಿ, ಅವರಿಗೆ ಬೇಕಿರುವ ಎಲ್ಲ ಮೂಲ ಸೌಲಭ್ಯ ಒದಗಿಸಿಕೊಡುತ್ತೇವೆ. ಬೆಂಗಳೂರು ಸುತ್ತಲೇ ಕೈಗಾರಿಕೆಗಳು ಸ್ಥಾಪಿಸುವ ಮನಸ್ಥಿತಿ ಬೇರೂರಿದೆ. ಅದು ಹೋಗಲಾಡಿಸಬೇಕಿದೆ ಎಂದರು.

ವಿಜಯಪುರ ಪ್ರದೇಶದಲ್ಲಿ ನೀರಿದೆ. ವಿದ್ಯುತ್ ಇದೆ. ಭೂಮಿ ಇದೆ. ಅವರಿಗೆ ಎಲ್ಲ ರೀತಿಯ ಅನುಕೂಲವಾಗಲಿದೆ. ಈ ಸಂಬಂಧ ಅಧ್ಯಯನವೂ ಮಾಡಿಸಿದ್ದೇನೆ. ಈ ಕಡೆಗೆ ಕೈಗಾರಿಕೆ ತರಲು ಗಂಭೀರವಾಗಿರುವುದಾಗಿ ಹೇಳಿದರು.

ಕೇಂದ್ರದಿಂದ ತನಿಖಾ ಸಂಸ್ಥೆಗಳ ದುರುಪಯೋಗ:

ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದೆ ಎಂದು ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಆರೋಪಿಸಿದರು. ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿಬಿಐ, ಇಡಿ, ಐಟಿಗಳನ್ನು ತನ್ನ ಪಕ್ಷದ ಮೋರ್ಚಾಗಳಂತೆ ಮಾಡಿಕೊಂಡಿದೆ. ವಿರೋಧ ಪಕ್ಷಗಳನ್ನು ಹತ್ತಿಕ್ಕಲು, ವಿರೋಧಿ ನಾಯಕರಿಗೆ ಚಿತ್ರಹಿಂಸೆ ಕೊಡಲು ಅವುಗಳನ್ನು ಬಳಸುತ್ತಿದೆ. ಪಕ್ಷಗಳಲ್ಲಿ ಹೇಗೆ ಯುವ ಮೋರ್ಚಾ, ಮಹಿಳಾ ಮೋರ್ಚಾ ಇರುತ್ತದೆಯೋ ಅದೇ ರೀತಿ ಬಿಜೆಪಿ ಸಿಬಿಐ ಮೋರ್ಚಾ, ಇಡಿ ಮೋರ್ಚಾ ಅಂತ ಮಾಡಿಕೊಂಡು ಆಟ ಆಡುತ್ತಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಭ್ರಷ್ಟಾಚಾರ ಇಲ್ಲವೆ? ಎಲ್ಲರೂ ಅವರು ಸತ್ಯಹರಿಶ್ಚಂದ್ರರಿದ್ದಾರಾ? ಯಾಕೆ ಒಬ್ಬರ ಮೇಲೂ ದಾಳಿಯಾಗಿಲ್ಲ, ಬಂಧನವಾಗಿಲ್ಲ? ಎಲ್ಲವೂ ವಿರೋಧ ಪಕ್ಷಗಳ ಮೇಲೆ ಬಳಸಿಕೊಳ್ಳಲಾಗುತ್ತಿದೆ? ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದೂರಿದರು.

ಕಾನೂನು ಹೋರಾಟ:

ಡಿಕೆಶಿ ಅವರ ಕಾಲ ಕೆಳಗೆ ಸಿಎಂ ಇದ್ದಾರೆ ಎನ್ನುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಕಾನೂನಾತ್ಮಕವಾಗಿಯೇ ಡಿ.ಕೆ.ಶಿವಕುಮಾರ ಅವರ ಸಿಬಿಐ ಕೇಸ್‌ ಅನ್ನು ಹಿಂದಕ್ಕೆ ಪಡೆಯಲು ನಿರ್ಣಯಿಸಲಾಗಿದೆ. ಅಡ್ವೊಕೇಟ್ ಜನರಲ್ ಅವರ ಸಲಹೆಯಂತೆಯೇ ಕೇಸು ಹಿಂಪಡೆಯಲಾಗಿದೆ. ಇನ್ನುಮುಂದೆ ಕಾನೂನಾತ್ಮಕ ಹೋರಾಟವಿದೆ. ಏನಾಗುತ್ತೆ ನೋಡೋಣ ಎಂದರು.

ಶಾಸಕರಿಗೆ ನಿಗಮ ಮಂಡಳಿ:

ಮೊದಲ ಹಂತದಲ್ಲಿ ಶಾಸಕರಿಗೆ ನಿಗಮ, ಮಂಡಳಿಗಳನ್ನು ನೀಡಲಾಗುವುದು. ಈಗಾಗಲೇ ಸಭೆಯಾಗಿದೆ. ಕೆಲ ದಿನದಲ್ಲೇ ನೇಮಕವಾಗುತ್ತವೆ. ಲೋಕಸಭೆ ಚುನಾವಣೆ ನಂತರ ಎರಡನೇ ಹಂತದಲ್ಲಿ ಕಾರ್ಯಕರ್ತರು, ಮುಖಂಡರನ್ನು ಪರಿಗಣಿಸಲಾಗುವುದು ಎಂದರು. ಶಾಸಕ ಬಿ.ಆರ್.ಪಾಟೀಲರ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅವರು ಒಳ್ಳೆಯವರು. ಸ್ವಲ್ಪ ಭಾವುಕರಾಗುತ್ತಾರೆ. ಎಲ್ಲ ಸರಿ ಹೋಗುತ್ತದೆ ಎಂದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ರಾಜ್ಯಗಳಲ್ಲಿ ಜಯ ಸಾಧಿಸಲಿದೆ. ಮತದಾನೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪರ ಫಲಿತಾಂಶ ಬರಲಿದೆ. ಮೋದಿಯವರ ವರ್ಚಸ್ಸು ಕಡಿಮೆಯಾಗಿದೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಪಾಟೀಲ್ ಹೇಳಿದರು.

ವಿಜಯಪುರ: ಕಬ್ಬು ಬೆಳೆಗಾರರಿಗೆ ಕಬ್ಬು ಕಟಾವು ಚಿಂತೆ..!

ಭ್ರೂಣ ಹತ್ಯೆ ತಡೆಗೆ ವಿಶೇಷ ಪಡೆ ರಚನೆ

ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ. ಇದನ್ನು ತಡೆಯಲು ವಿಶೇಷ ಪಡೆ ರಚಿಸಲಾಗುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ಎಷ್ಟೇ ಕ್ರಮ ವಹಿಸಿದರೂ ಇಂತಹ ಹೀನ ಕೃತ್ಯಗಳು ಘಟಿಸುತ್ತಲೇ ಇವೆ. ಹೆಣ್ಣು ಜೀವವನ್ನು ಕೀಳೆಂದು ಕಾಣುವುದು ಸರಿಯಲ್ಲ. ಕಾನೂನನ್ನು ಇನ್ನಷ್ಟು ಗಟ್ಟಿಗೊಳಿಸಿ, ಬಿಗಿ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕಾಗಿಯೇ ಪ್ರತ್ಯೇಕ ವಿಶೇಷ ಪಡೆ ರಚಿಸಲಾಗುವುದು. ಈಗ ಸಿಕ್ಕಿ ಹಾಕಿಕೊಂಡವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದರು.

ಬಸವಾದಿ ಶರಣರು 12ನೇ ಶತಮಾನದಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನ ನೀಡಿದ್ದರು. ಗಂಡು-ಹೆಣ್ಣು ಅಂತ ಭೇದವಿರಲಿಲ್ಲ. ಇಂತಹ ನಾಡಿನಲ್ಲಿ ಹೀಗೆ ಆಗಬಾರದು. ಹೆಣ್ಣುಮಕ್ಕಳೇ ಶ್ರೇಷ್ಠ ಎನ್ನುವುದು ಅರಿಯಬೇಕು. ತಂದೆ, ತಾಯಿಯನ್ನು ನೋಡಿಕೊಳ್ಳುವವರೇ ಹೆಣ್ಣುಮಕ್ಕಳು. ಅವರನ್ನೇ ಕೀಳಾಗಿ ಕಂಡು ಭ್ರೂಣ ಹತ್ಯೆ ಮಾಡುವುದು ಮಹಾ ಪಾಪ. ಇದರ ಬಗ್ಗೆ ಇನ್ನೂ ಜಾಗೃತಿ ಮೂಡಿಸಬೇಕು. ಈಗ ಕಾಲ ಬದಲಾಗಿದೆ ಎಂದರು.

click me!