ವಿಜಯ್ ಶೇಖರ್ ಶರ್ಮಾ ಅವರಯ ಪೇಮೆಂಟ್ಸ್ ಬ್ಯಾಂಕ್ ಘಟಕದ ಅಧ್ಯಕ್ಷ ಮತ್ತು ಮಂಡಳಿಯ ಸದಸ್ಯ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಪಿಪಿಬಿಎಲ್ ಸೋಮವಾರ ತಿಳಿಸಿದೆ.
ನವದೆಹಲಿ (ಫೆ.26): ಆರ್‌ಬಿಐ ಬಿಸಿ ಮುಟ್ಟಿಸುವ ತನಕ ತನ್ನ ನೀತಿ ನಿಬಂಧನೆಗಳ ವಿಚಾರದಲ್ಲಿ ಬೇಕಾಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಈಗ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಸಂದಿಗ್ಧತೆ ಎದುರಾಗಿದೆ. ಆ ನಿಟ್ಟಿನಲ್ಲಿಯೇ ಪ್ರಯತ್ನ ಆರಂಭಿಸಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಸೋಮವಾರ ತನ್ನ ಮಂಡಳಿಯ ಸದಸ್ಯ ಹಾಗೂ ಅಧ್ಯಕ್ಷರಾಗಿದ್ದ ವಿಜಯ್ ಶೇಖರ್ ಶರ್ಮ ಈ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ತಿಳಿಸಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಬಹುಪಾಲು ಶೇರುಗಳು ಇದರ ಸಂಸ್ಥಾಪಕರೂ ಆಗಿರುವ ವಿಜಯ್ ಶೇಖರ್ ಶರ್ಮ ಅವರ ಬಳಿಯಲ್ಲಿಯೇ ಇದೆ. ಒನ್ 97 ಕಮ್ಯುನಿಕೇಷನ್‌ನ ಮಾಲೀಕತ್ವದಲ್ಲಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಈಗಾಗಲೇ ತನ್ನ ನಿರ್ದೇಶಕರ ಮಂಡಳಿಯನ್ನು ಪುನರ್‌ರಚನೆ ಮಾಡುತ್ತಿರುವುದಾಗಿ ತಿಳಿಸಿತ್ತು. ಮಾಜಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಶ್ರೀನಿವಾಸನ್ ಶ್ರೀಧರ್, ನಿವೃತ್ತ ಐಎಎಸ್ ಅಧಿಕಾರಿ ದೇಬೇಂದ್ರನಾಥ್ ಸಾರಂಗಿ, ಬ್ಯಾಂಕ್ ಆಫ್ ಬರೋಡಾದ ಮಾಜಿ ನಿರ್ದೇಶಕ ಅಶೋಕ್ ಕುಮಾರ್ ಗಾರ್ಗ್, ಸ್ವತಂತ್ರ ನಿರ್ದೇಶಕರಾಗಿ ನಿವೃತ್ತ ಐಎಎಸ್ ರಜನಿ ಸೆಖ್ರಿ ಸಿಬಲ್ ಅವರನ್ನು ನೇಮಿಸಲಾಗಿದೆ.
ಹೊಸ ಮಂಡಳಿಯು ಆರ್‌ಬಿಐ ಸೂಚಿಸಿದ ನೀತಿ ನಿಯಮಗಳ ಪರಿಹಾರದ ಮೇಲೆ ಗಮನಹರಿಸುತ್ತದೆ ಎಂದು ತಿಳಿಸಿದೆ. "OCL ತನ್ನ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬೋರ್ಡ್‌ನಿಂದ ತನ್ನ ನಾಮಿನಿಯನ್ನು ಹಿಂತೆಗೆದುಕೊಂಡಿದೆ ಮತ್ತು ವಿಜಯ್ ಶೇಖರ್ ಶರ್ಮಾ ಅರೆಕಾಲಿಕ ನಾನ್-ಎಕ್ಸಿಕ್ಯೂಟಿವ್ ಚೇರ್ಮನ್ ಮತ್ತು ಬೋರ್ಡ್ ಸದಸ್ಯ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಪಿಪಿಬಿಎಲ್‌ನ ಭವಿಷ್ಯದ ವ್ಯವಹಾರವನ್ನು ಪುನರ್ರಚಿಸಲಾದ ಮಂಡಳಿಯಿಂದ ಮುನ್ನಡೆಸಲಾಗುವುದು" ಎಂದು ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್‌ನಲ್ಲಿ ತಿಳಿಸಲಾಗಿದೆ. ವಿಜಯ್ ಶೇಖರ್ ಶರ್ಮ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಶೇ. 51ರಷ್ಟು ಷೇರು ಹೊಂದಿದ್ದಾರೆ. ಇನ್ನು ಪೇಟಿಎಂ ಎಂದು ಗುರುತಿಸಿಕೊಂಡಿರುವ ಒನ್97 ಕಮ್ಯುನಿಕೇಷ್ ಉಳಿದ ಪಾಲನ್ನು ಹೊಂದಿದೆ. ಫೆಬ್ರವರಿ 19 ರಂದು, ಪೇಟಿಎಂ ತನ್ನ ನೋಡಲ್ ಖಾತೆಯನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಿಂದ ಆಕ್ಸಿಸ್ ಬ್ಯಾಂಕ್‌ಗೆ ಬದಲಾವಣೆ ಮಾಡಿದೆ. ಇದು ಮಾರ್ಚ್ 15 ರ ಆರ್‌ಬಿಐ ಗಡುವಿನ ನಂತರ ಪೇಟಿಎಂನ ತ್ವರಿತ-ಪ್ರತಿಕ್ರಿಯೆ ಕೋಡ್, ಧ್ವನಿ ಪೆಟ್ಟಿಗೆ ಮತ್ತು ಕಾರ್ಡ್ ಯಂತ್ರಗಳ ಕಾರ್ಯಾಚರಣೆಯನ್ನು ಮುಂದುವರಿಸಲು ಕಂಪನಿಗೆ ಅವಕಾಶ ನೀಡುತ್ತದೆ.
ನೀವು ಪಾವತಿಗೆ ಪೇಟಿಎಂ UPI ಬಳಸುತ್ತಿದ್ದೀರಾ? ಹಾಗಾದರೆ ನಿಮಗಿದೆ ಆರ್‌ಬಿಐ ಸಂದೇಶ!
ಈ ನಡುವೆ ಒನ್97 ಕಮ್ಯುನಿಕೇಷನ್‌ನ ಶೇರು ಬೆಲೆಗಳು ಏರಿಕೆ ಕಾಣುತ್ತಿದ್ದು, ಕಳೆದ ವಾರದ ಲಾಭವನ್ನು ಮುಂದುವರಿಸಿದೆ. ಸೋಮವಾರ ಕಂಪನಿಯ ಷೇರು ಬೆಲೆಗಳು ಶೇ. 5ರ ಅಪ್ಪರ್ ಸರ್ಕ್ಯೂಟ್ ಮುಟ್ಟಿ 428.10ರಲ್ಲಿ ವ್ಯವಹಾರ ನಡೆಸಿದವು. ನಿಯಮಗಳ ಪ್ರಕಾರ, ಪೇಟಿಎಂ ಅಪ್ಲಿಕೇಶನ್‌ನ ಕಾರ್ಯಾಚರಣೆಗಾಗಿ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಚಾನಲ್‌ಗಾಗಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪೂರೈಕೆದಾರರಾಗಲು ಕಂಪನಿಯ ವಿನಂತಿಯನ್ನು ಪರಿಶೀಲಿಸಲು ಆರ್‌ಬಿಐ ಶುಕ್ರವಾರ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಕ್ಕೆ ಸಲಹೆ ನೀಡಿದೆ.
ಮಾ.15ರ ಬಳಿಕವೂ ಕಾರ್ಯನಿರ್ವಹಿಸಲಿದೆ ಪೇಟಿಎಂ ಕ್ಯುಆರ್ ಕೋಡ್, ಸೌಂಡ್ ಬಾಕ್ಸ್ : ಸಿಇಒ ವಿಜಯ್ ಶಂಕರ್ ಶರ್ಮಾ ಸ್ಪಷ್ಟನೆ
ಪೇಟಿಎಂ ಬ್ರ್ಯಾಂಡ್ ಅನ್ನು ಹೊಂದಿರುವ One97 ಕಮ್ಯುನಿಕೇಷನ್ ಲಿಮಿಟೆಡ್ ತನ್ನ ಪಾಲುದಾರ ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಂದ (NBFCs) ಡಿಜಿಟಲ್ ಲೋನ್‌ಗಳಿಗಾಗಿ ಸಾಲ ನೀಡುವ ಪ್ಲಾಟ್‌ಫಾರ್ಮ್ ಪೂರೈಕೆದಾರರ ಕಾರ್ಯಾಚರಣೆಯನ್ನು ಮಾರ್ಚ್ ಮೊದಲ ವಾರದಲ್ಲಿ ಪುನರಾರಂಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.