
ನವದೆಹಲಿ(ಸೆ.14): ನಿರಂತರ ತೈಲದರ ಏರಿಕೆಯಿಂದ ಜನಸಾಮಾನ್ಯ ಕಂಗಾಲಾಗಿದ್ದಾನೆ. ದಿನೇ ದಿನೇ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆಯಿಂದ ಜನಸಾಮಾನ್ಯನ ಜೇಬು ಖಾಲಿಯಾಗುತ್ತಿದೆ. ಕೇಂದ್ರ ಸರ್ಕಾರವೂ ತೈಲದರ ನಿಯಂತ್ರಣಕ್ಕೆ ಸಕಲ ಪ್ರಯತ್ನ ನಡೆಸಿದೆ.
ಈ ಮಧ್ಯೆ ವಾಹನ ಸವಾರರಿಗೆ ಪೇಟಿಎಂ ಭರ್ಜರಿ ಆಫರ್ ಘೋಷಿಸಿದ್ದು, ಪೇಟಿಎಂ ಮೂಲಕ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಿದರೆ 7500 ರೂ. ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ. ದೇಶದ ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿ 50 ರೂ. ಮೇಲ್ಪಟ್ಟು ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಿದರೆ 7500 ರೂ, ಕ್ಯಾಶ್ ಬ್ಯಾಕ್ ಘೋಷಿಸಿದೆ. ಅಲ್ಲದೇ ಈ ಕೊಡುಗೆ ಆಗಸ್ಟ್ 1, 2019 ರ ವರೆಗೆ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.
ಏನಿದು ಆಫರ್?:
ಗ್ರಾಹಕ ಮೊದಲ ಬಾರಿ ಪೇಟಿಎಂ ಮೂಲಕ 50 ರೂ. ಪಾವತಿಸಿ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಬೇಕು. ಕೂಡಲೇ ಗ್ರಾಹಕನ ಅಧಿಕೃತ ಮೊಬೈಲ್ ನಂಬರ್‌ಗೆ ಕ್ಯಾಶ್ ಬ್ಯಾಕ್ ಆಫರ್ ಮೆಸೆಜ್ ಬರುತ್ತದೆ. ಇದಾದ ಬಳಿಕ ಗ್ರಾಹಕ ಪ್ರತಿ ಬಾರಿ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಿದಾಗ ಈ ಆಫರ್ ಮೂಲಕವೇ ಹಣ ಪಾವತಿಸಬೇಕಾಗುತ್ತದೆ.
ಒಮ್ಮೆ ಈ ಆಫರ್‌ಗೆ ನೋಂದಾಯಿಸಿಕೊಂಡ ಮೇಲೆ ಗ್ರಾಹಕನ ಮೊಬೈಲ್ ನಂಬರ್‌ಗೆ ಎಸ್ ಎಂಎಸ್ ಮೂಲಕ ಪೇಟಿಎಂ ಪ್ರೋಮೋ ಕೋಡ್ ಬರುತ್ತದೆ. ಈ ಪ್ರೋಮೋ ಕೋಡ್ ಬಳಸಿ ಗ್ರಾಹಕ ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿ ತೈಲ ಖರೀದಿಸಬಹುದು.
ಈ ಪ್ರೋಮೋ ಸಂಕೇತಗಳು ಪೆಟ್ರೋಲ್ ಪಂಪ್‌ಗಳಲ್ಲಿ ವ್ಯವಹಾರದ ನಂತರ ಸ್ವೀಕರಿಸಿದ ಬಳಕೆದಾರರಿಂದ ಮಾತ್ರ ಮರುಪಡೆಯಬಹುದು ಎಂದು ಪೇಟಿಎಂ ಸ್ಪಷ್ಟಪಡಿಸಿದೆ. ಆದಾಗ್ಯೂ, ವಹಿವಾಟುಗಳ ಸಂದರ್ಭದಲ್ಲಿ, ಕ್ಯಾಶ್ ಬ್ಯಾಕ್ ಮತ್ತು ಪ್ರೋಮೋ ಸಂಕೇತಗಳು ವಾರದ ಮೊದಲ ವ್ಯವಹಾರದ ನಂತರವೇ ಕ್ರೆಡಿಟ್ ಆಗುತ್ತವೆ ಎಂದು ಕಂಪನಿ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.