
ಮುಂಬೈ(ಸೆ.14): ಮಹತ್ವದ ಬೆಳವಣಿಗೆಯೊಂದರಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ತುಸು ಚೇತರಿಕೆ ಕಂಡಿದ್ದು, ಸತತ ಕುಸಿತದ ಬಳಿಕ ಭಾರತೀಯ ಷೇರುಮಾರುಕಟ್ಟೆ ಕೂಡ ಚೇತರಿಕೆಯ ಹಾದಿ ಹಿಡಿದಿದೆ.
ಏರಿದ ರೂಪಾಯಿ ಮೌಲ್ಯ:
ರೂಪಾಯಿ ಮೌಲ್ಯದಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ರೂಪಾಯಿ ಮೌಲ್ಯದಲ್ಲಿ 50 ಪೈಸೆಯಷ್ಚು ಏರಿಕೆಯಾಗಿದೆ. ಈ ಮೂಲಕ ಪ್ರತೀ ಡಾಲರ್ ಎದುರು ರುಪಾಯಿ ಮೌಲ್ಯ 71.68 ರೂ. ಆಗಿದೆ. ಷೇರುಮಾರುಕಟ್ಟೆಯ ಸಕಾರಾತ್ಮಕ ವಹಿವಾಟು ಮತ್ತು ಡಾಲರ್ ಗೆ ಉಂಟಾಗಿದ್ದ ಅಲ್ಪ ಪ್ರಮಾಣದ ಬೇಡಿಕೆ ಕುಸಿದ ಹಿನ್ನಲೆಯಲ್ಲಿ ರುಪಾಯಿ ಮೌಲ್ಯ ಏರಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಸೆನ್ಸೆಕ್ಸ್ ಚೇತರಿಕೆ:
ವಾರದ ಅಂತಿಮ ದಿನದ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 300ಕ್ಕೂ ಅಧಿಕ ಅಂಕಗಳ ಏರಿಕೆ ಕಂಡಿತು. ಪ್ರಮುಖವಾಗಿ ಭಾರತದ ಸಗಟು ಹಣದುಬ್ಬರ ಪ್ರಮಾಣ ಚೇತರಿಕೆ ಕಂಡಿದ್ದು, ಷೇರುಮಾರುಕಟ್ಟೆಯಲ್ಲಿ ಆಶಾದಾಯಕ ವಹಿವಾಟು ನಡೆಯುತ್ತಿದೆ.
ಅಲ್ಲದೆ ಕೈಗಾರಿಕಾ ಉತ್ಪಾದನೆ ಪ್ರಮಾಣದಲ್ಲಿಯೂ ಕೂಡ ಶೇ.6.6ರಷ್ಟು ಏರಿಕೆ ಕಂಡುಬಂದಿದ್ದು, ಚಿಲ್ಲರೆ ಹಣದುಬ್ಬರ 10 ತಿಂಗಳ ಹಿಂದಿನ ಪ್ರಮಾಣಕ್ಕೆ ಹಿಂತಿರುಗುವ ಮೂಲಕ ಗ್ರಾಹಕರಲ್ಲಿ ನಿರಾಳತೆ ಮೂಡಿಸಿದೆ.
ಸೆನ್ಸೆಕ್ಸ್ ಇಂದು 304.863 ಅಂಕಗಳ ಏರಿಕೆಯೊಂದಿಗೆ ಮತ್ತೆ 38 ಸಾವಿರ ಗಡಿ ದಾಟಿದೆ. ಅಂತೆಯೇ ನಿಫ್ಟಿ ಕೂಡ 84.90 ಅಂಕಗಳ ಏರಿಕೆಯೊಂದಿಗೆ 11, 400ರ ಗಡಿ ದಾಟಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.