
ನವದೆಹಲಿ (ಫೆ.20): ಆರ್ ಬಿಐ ನಿರ್ಬಂಧದ ಬಳಿಕ ಸಂಕಷ್ಟಕ್ಕೆ ಸಿಲುಕಿರುವ ಪೇಟಿಎಂ ಸಂಸ್ಥೆ, ತನ್ನ ಕ್ಯುಆರ್ ಕೋಡ್ ಹಾಗೂ ಸೌಂಡ್ ಬಾಕ್ಸ್ ಸೇವೆಗಳು ಮಾರ್ಚ್ 15ರ ನಂತರವೂ ಕಾರ್ಯನಿರ್ವಹಿಸಲಿದೆ ಎಂಬ ಭರವಸೆಯನ್ನು ಗ್ರಾಹಕರಿಗೆ ನೀಡಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ನಲ್ಲಿ ಪೇಟಿಎಂ ಸ್ಥಾಪಕ ಹಾಗೂ ಸಿಇಒ ವಿಜಯ್ ಶಂಕರ್ ಮಾಹಿತಿ ನೀಡಿದ್ದಾರೆ. ಇನ್ನು ಈ ಬಗ್ಗೆ ಆರ್ ಬಿಐ ಬಿಡುಗಡೆಗೊಳಿಸಿರುವ ನಿರಂತರ ಕೇಳಲಾಗುವ ಪ್ರಶ್ನಾವಳಿಗಳಲ್ಲಿ (ಎಫ್ ಎಕ್ಯು) ಈಗಾಗಲೇ ಮಾಹಿತಿ ನೀಡಿದ್ದು, ಕ್ಯುಆರ್ ಕೋಡ್ ಹಾಗೂ ಸೌಂಡ್ ಬಾಕ್ಸ್ ಹಾಗೂ ಇಡಿಸಿ ಬಳಕೆಗೆ ಯಾವುದೇ ಸಮಸ್ಯೆಯಿಲ್ಲ ಎಂಬ ಸ್ಪಷ್ಟನೆ ನೀಡಿದೆ. ಇನ್ನು ಈ ಟ್ವೀಟ್ ಜೊತೆಗೆ ಪೇಟಿಎಂ ಸಿಇಒ ಜಾಹೀರಾತನ್ನು ಕೂಡ ಹಂಚಿಕೊಂಡಿದ್ದು, ಅದರಲ್ಲಿ ಪೇಟಿಎಂ ಸಾಧನಗಳು ಹಾಗೂ ಕ್ಯುಆರ್ ಕೋಡ್ 'ಇಂದು, ನಾಳೆ, ಯಾವಾಗಲೂ' ಬಳಕೆಯಲ್ಲಿರುತ್ತದೆ ಎಂದು ಹೇಳಿದ್ದಾರೆ.
ಎಕ್ಸ್ ನಲ್ಲಿ (ಈ ಹಿಂದಿನ ಟ್ವಿಟ್ಟರ್) ಪೋಸ್ಟ್ ಮಾಡಿರುವ ಶರ್ಮಾ, 'ಪೆಟಿಎಂ ಕ್ಯುಆರ್, ಸೌಂಡ್ ಬಾಕ್ಸ್ ಹಾಗೂ ಇಡಿಸಿ (ಕಾರ್ಡ್ ಮಷಿನ್) ಮಾ.15ರ ಬಳಿಕ ಕೂಡ ಈ ಹಿಂದಿನಂತೆ ನಿರಂತರವಾಗಿ ಕಾರ್ಯನಿರ್ವಹಿಸಲಿದೆ. ಆರ್ ಬಿಐ ಇತ್ತೀಚೆಗೆ ಬಿಡುಗಡೆಗೊಳಿಸಿರುವ ಎಫ್ ಎಕ್ಯು ಪಾಯಿಂಟ್ #21ರಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಯಾವುದೇ ಸುಳ್ಳು ಸುದ್ದಿಗಳಿಗೆ ಬಲಿಯಾಗಬೇಡಿ ಅಥವಾ ಡಿಜಿಟಲ್ ಇಂಡಿಯಾದಲ್ಲಿ ನೀವು ಚಾಂಪಿಯನ್ ಆಗೋದನ್ನು ತಡೆಯಲು ಯಾರಿಗೂ ಅವಕಾಶ ನೀಡಬೇಡಿ' ಎಂದು ಹೇಳಿದ್ದಾರೆ.
ಪೇಟಿಎಂಗೆ ಆರ್ ಬಿಐ ನಿರ್ಬಂಧ, ಈ ಮೂರು ಕಂಪನಿಗಳಿಗೆ ಭಾರೀ ಲಾಭ!
ಈ ಟ್ವೀಟ್ ಒಂದು ಜಾಹೀರಾತನ್ನು ಕೂಡ ಒಳಗೊಂಡಿದೆ. ಈ ಜಾಹೀರಾತಿನ್ನು ತಪ್ಪು ಮಾಹಿತಿಗಳನ್ನು ಹೋಗಲಾಡಿಸಲು ಕಂಪನಿ ಬಳಸಿಕೊಂಡಿದೆ. ಈ ಜಾಹೀರಾತಿನಲ್ಲಿ ಪೇಟಿಎಂ ಸಾಧನಗಳು ಹಾಗೂ ಕ್ಯುಆರ್ ಕೋಡ್ ನಿರಂತರವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಲಾಗಿದೆ. ಇನ್ನು ಆರ್ ಬಿಐ ಬಿಡುಗಡೆಗೊಳಿಸಿರುವ ಎಫ್ ಎಕ್ಯುನಲ್ಲಿ 'ನಿಮ್ಮ ಹಣದ ಸ್ವೀಕೃತಿ ಹಾಗೂ ವರ್ಗಾವಣೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದರೆ, ಆಗ ನೀವು ಈ ವ್ಯವಸ್ಥೆಯನ್ನು 2024ರ ಮಾರ್ಚ್ 15ರ ಬಳಿಕ ಕೂಡ ಬಳಸಬಹುದು' ಎಂದು ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನವರಿ 31 ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಹೊಸ ಠೇವಣಿಗಳನ್ನು ಸ್ವೀಕರಿಸುವುದು ಮತ್ತು ಫೆಬ್ರವರಿ 29 ರ ನಂತರ ಕ್ರೆಡಿಟ್ ವಹಿವಾಟುಗಳನ್ನು ಮಾಡುವುದು ಸೇರಿದಂತೆ ಪ್ರಮುಖ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿತ್ತು. 2024ರ ಫೆಬ್ರವರಿ 29 ರ ನಂತರ ಯಾವುದೇ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ಇನ್ಸ್‌ಟ್ರುಮೆಂಟ್‌ಗಳು, ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು, ಎನ್‌ಸಿಎಂಸಿ ಕಾರ್ಡ್‌ಗಳು ಇತ್ಯಾದಿಗಳಲ್ಲಿ ಯಾವುದೇ ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಗಳನ್ನು ಹೊರತುಪಡಿಸಿ ಯಾವುದೇ ಸಮಯದಲ್ಲಿ ಕ್ರೆಡಿಟ್ ಮಾಡಬಹುದಾದ ಯಾವುದೇ ಹೆಚ್ಚಿನ ಠೇವಣಿ ಅಥವಾ ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್ ಅಪ್‌ಗಳನ್ನು ಅನುಮತಿಸಲಾಗುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿತ್ತು. ಆದರೆ, ಆ ಬಳಿಕ ಈ ಗಡುವನ್ನು ಮತ್ತೆ 15 ದಿನಗಳ ಕಾಲ ಅಂದರೆ ಮಾರ್ಚ್ 15ರವರೆಗೆ ವಿಸ್ತರಿಸಿತ್ತು.
ಪೇಟಿಎಂ FAStag ಮಾನ್ಯವಲ್ಲ, ಬ್ಯಾಂಕ್ ಪಟ್ಟಿಯಿಂದ PBBL ತೆಗೆದು ಹಾಕಿದ ಹೆದ್ದಾರಿ ಪ್ರಾಧಿಕಾರ!
ಅವಧಿ ವಿಸ್ತರಣೆ ಮಾಡುವಂತೆ ಸಾರ್ವಜನಿಕರಿಂದ ಮನವಿ ಬಂದ ಹಿನ್ನೆಲೆಯಲ್ಲಿ ಆರ್ ಬಿಐ ಗಡುವನ್ನು 15 ದಿನಗಳ ಕಾಲ ಮುಂದೂಡಿತ್ತು. ಗ್ರಾಹಕರು ಪ್ರೀಪೇಯ್ಡ್ ಸೇವೆಗಳಾದ ವ್ಯಾಲೆಟ್ಸ್, ಫಾಸ್ಟ್ ಟ್ಯಾಗ್ಸ್ ಹಾಗೂ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ಗಳನ್ನು ಬಳಸಿಕೊಂಡು 2024ರ ಮಾರ್ಚ್ 15ರ ತನಕ ಠೇವಣಿ ಇಡಬಹುದು, ಕ್ರೆಡಿಟ್ ವಹಿವಾಟುಗಳನ್ನು ನಡೆಸಬಹುದು ಎಂದು ಆರ್ ಬಿಐ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.