ಪ್ಯಾನ್ ಕಾರ್ಡ್ ಅತೀಮುಖ್ಯ ಗುರುತು ದೃಢೀಕರಣ ದಾಖಲೆಗಳಲ್ಲಿ ಒಂದಾಗಿದೆ. ಪ್ಯಾನ್ ಕಾರ್ಡ್ ಅನ್ನು ಕೂಡ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ.ಹೀಗಿರುವಾಗ ಪ್ಯಾನ್ ಕಾರ್ಡ್ ದುರ್ಬಳಕೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡೋದು ಹೇಗೆ? ತಡೆಗೆ ಏನು ಮಾಡ್ಬೇಕು? ಇಲ್ಲಿದೆ ಮಾಹಿತಿ.
Business Desk: ಭಾರತದಲ್ಲಿ ಪ್ಯಾನ್ ಕಾರ್ಡ್ ಅತೀಮುಖ್ಯ ದಾಖಲೆಗಳಲ್ಲಿ ಒಂದಾಗಿದೆ.ಇದು 10 ಅಂಕೆಗಳ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳ ಸಮೂಹ.ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ. ಪ್ಯಾನ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು, ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ.ಆದರೆ, ಈ ಪ್ಯಾನ್ ಕಾರ್ಡ್ ದುರ್ಬಳಕೆ, ವಂಚನೆ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಕೆಲವು ತಿಂಗಳ ಹಿಂದಷ್ಟೇ ಸೈಬರ್ ಕ್ರಿಮಿನಲ್ ಗಳು ಜನಪ್ರಿಯ ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ ಹಾಗೂ ಸಿನಿಮಾ ನಟಿ, ನಟರಾದ ಶಿಲ್ಪಾ ಶೆಟ್ಟಿ, ಮಾಧುರಿ ದೀಕ್ಷಿತ್, ಅಭಿಷೇಕ್ ಬಚ್ಚನ್ ಹಾಗೂ ಇಮ್ರಾನ್ ಹಸ್ಮಿ ಅವರ ಪ್ಯಾನ್ ಕಾರ್ಡ್ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಂಡು ಕ್ರೆಡಿಟ್ ಕಾರ್ಡ್ ಗಳನ್ನು ಪಡೆದಿದ್ದರು.ಇನ್ನು ಅನುಮತಿಯಿಲ್ಲದೆ ಅನ್ಯವ್ಯಕ್ತಿಗಳ ಪ್ಯಾನ್ ಕಾರ್ಡ್ ಬಳಸಿ ಸಾಲ ತೆಗೆದು ಆ ಬಳಿಕ ಸಾಲ ಮರುಪಾವತಿ ಮಾಡದ ಅನೇಕ ಪ್ರಕರಣಗಳು ವರದಿಯಾಗಿವೆ. ಹೀಗಿರುವಾಗ ಪ್ಯಾನ್ ಕಾರ್ಡ್ ದುರ್ಬಳಕೆ ತಡೆಯೋದು ಹೇಗೆ? ಹಾಗೆಯೇ ಅದರಿಂದಾಗುವ ನಷ್ಟವನ್ನು ತಗ್ಗಿಸೋದು ಹೇಗೆ?
ಪ್ಯಾನ್ ಕಾರ್ಡ್ ದುರ್ಬಳಕೆ
ಒಂದು ವೇಳೆ ನಿಮಗೆ ನಿಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗಿದೆ ಎಂದು ಅನಿಸಿದರೆ ತಕ್ಷಣ ಆ ಬಗ್ಗೆ ದೂರು ದಾಖಲಿಸಬೇಕು. ಇದರಿಂದ ಮುಂದೆ ದೊಡ್ಡ ಪ್ರಮಾಣದ ಹಣ ನಷ್ಟವಾಗೋದನ್ನು ತಡೆಯಬಹುದು. ಅಲ್ಲದೆ, ನಿಮ್ಮ ಹಣಕಾಸಿನ ಸ್ಥಿತಿಗತಿಗಳ ಮೇಲೆ ಕೂಡ ಇದು ಪರಿಣಾಮ ಬೀರಲಿದೆ. ನಿಮ್ಮ ಪ್ಯಾನ್ ಕಾರ್ಡ್ ದರ್ಬಳಕೆ ಮಾಡಿಕೊಂಡು ಸಾಲ ತೆಗೆದರೆ ಹಣದ ಜೊತೆಗೆ ನಿಮ್ಮ ಸಿಬಿಲ್ ಸ್ಕೋರ್ ಕೂಡ ತಗ್ಗುತ್ತದೆ.
ತೆರಿಗೆದಾರರೇ ಎಚ್ಚರ, 2 ಪ್ಯಾನ್ ಕಾರ್ಡ್ ಹೊಂದಿದ್ರೆ ಬೀಳುತ್ತೆ 10 ಸಾವಿರ ರೂ. ದಂಡ
ಪ್ಯಾನ್ ಕಾರ್ಡ್ ದುರ್ಬಳಕೆ ತಡೆ ಹೇಗೆ?
*ನಿಮ್ಮ ಫೈನಾನ್ಷಿಯಲ್ ಸ್ಟೇಟ್ಮೆಂಟ್ ಅನ್ನು ನಿಯಮಿತವಾಗಿ ಪರಿಶೀಲಿಸಿ
ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್ಸ್, ಕ್ರೆಡಿಟ್ ಕಾರ್ಡ್ ಬಿಲ್ಸ್ ಹಾಗೂ ಇತರ ಯಾವುದೇ ಹಣಕಾಸಿನ ವಹಿವಾಟುಗಳಿದ್ದರೂ ಅವುಗಳನ್ನು ಸಮರ್ಪಕವಾಗಿ ಪರಿಶೀಲಿಸಿ. ಯಾವುದೇ ಅನುಮಾನಾಸ್ಪದ ಅಥವಾ ಅನಧಿಕೃತ ಚಟುವಟಿಕೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಿ. ನಿಮ್ಮ ಗಮನಕ್ಕೆ ಬಾರದ ವಹಿವಾಟುಗಳ ಬಗ್ಗೆ ನಿಗಾ ವಹಿಸಿ. ನಿಮ್ಮ ಕ್ರೆಡಿಟ್ ವರದಿ ಪರಿಶೀಲಿಸಿ. ಕ್ರೆಡಿಟ್ ಬ್ಯೂರೋಯಿಂದ ನಿಮ್ಮ ಕ್ರೆಡಿಟ್ ವರದಿ ಪಡೆಯಿರಿ. ನಿಮ್ಮ ಪ್ಯಾನ್ ಕಾರ್ಡ್ ಗೆ ಸಂಬಂಧಿಸಿ ಯಾವುದೇ ಅನಧಿಕೃತ ಖಾತೆ ಅಥವಾ ಸಾಲಗಳಿವೆಯೇ ಎಂಬುದನ್ನು ಪರಿಶೀಲಿಸಿ. ಒಂದು ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿ ಯಾವುದೇ ಅನಧಿಕೃತ ವಹಿವಾಟು ನಡೆದಿದ್ರೆ ತಕ್ಷಣ ಕ್ರೆಡಿಟ್ ಬ್ಯುರೋಗೆ ಮಾಹಿತಿ ನೀಡಿ.
*ನಿಮ್ಮ ಆದಾಯ ತೆರಿಗೆ ಇಲಾಖೆ ಖಾತೆ ಪರಿಶೀಲಿಸಿ
ಆದಾಯ ತೆರಿಗೆ ಇಲಾಖೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ನಿಮ್ಮ ಪ್ಯಾನ್ ಕಾರ್ಡ್ ಮಾಹಿತಿಗಳನ್ನು ಬಳಸಿ ನಿಮ್ಮ ಖಾತೆಗೆ ಲಾಗಿನಗ ಆಗಿ. ನಿಮ್ಮ ತೆರಿಗೆ ಫೈಲಿಂಗ್ ಪರಿಶೀಲಿಸಿ. ಅಲ್ಲಿ ಯಾವುದೇ ಅನಧಿಕೃತ ಬದಲಾವಣೆಗಳು ಆಗಿಲ್ಲ ಎಂಬುದನ್ನು ಖಚಿಪಡಿಸಿಕೊಳ್ಳಿ. ಉದಾಹರಣೆಗೆ ನೀವು ಅರ್ಜಿ ನಮೂನೆ 26ಎಎಸ್ ನಲ್ಲಿ ಮಾಹಿತಿ ಪರಿಶೀಲಿಸಬಹುದು.
*ಬ್ಯಾಂಕ್ ಅಥವಾ ಹಣಕಾಸಿನ ಸಂಸ್ಥೆ ಸಂಪರ್ಕಿಸಿ
ನಿಮಗೆ ಯಾವುದೇ ಅನುಮಾನಾಸ್ಪದ ವಹಿವಾಟುಗಳು ಕಂಡುಬಂದರೆ,ತಕ್ಷಣ ನಿಮ್ಮ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳನ್ನು ಸಂಪರ್ಕಿಸಿ. ಅವರು ನಿಮಗೆ ಪ್ರಕರಣವನ್ನು ಪರಿಶೀಲಿಸಿ, ಅನಧಿಕೃತ ವಹಿವಾಟುಗಳಿಗೆ ಕಡಿವಾಣ ಹಾಕಿ, ನಿಮ್ಮ ಖಾತೆಗಳನ್ನು ಸುರಕ್ಷಿತವಾಗಿರಿಸಿ.
ಇನ್ಮುಂದೆ ಸಣ್ಣ ಉಳಿತಾಯ ಯೋಜನೆಗಳಿಗೆ ಪ್ಯಾನ್, ಆಧಾರ್ ಕಡ್ಡಾಯ
*ಪೊಲೀಸರಿಗೆ ದೂರು ನೀಡಿ
ಪ್ಯಾನ್ ಕಾರ್ಡ್ ದುರ್ಬಳಕೆಯಾಗಿರುವ ಬಗ್ಗೆ ನಿಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ. ಅವರಿಗೆ ಅಗತ್ಯವಿರುವ ಎಲ್ಲ ಮಾಹಿತಿಗಳು ಹಾಗೂ ದಾಖಲೆಗಳನ್ನು ನೀಡಿ.
*ಆದಾಯ ತೆರಿಗೆ ಇಲಾಖೆ ಸಂಪರ್ಕಿಸಿ
ಆದಾಯ ತೆರಿಗೆ ಇಲಾಖೆ ಗ್ರಾಹಕರ ಸೇವಾ ಹೆಲ್ಪ್ ಲೈನ್ ಸಂಪರ್ಕಿಸಿ ಅಥವಾ ಸಮೀಪದ ಆದಾಯ ತೆರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಿ ಪ್ಯಾನ್ ಕಾರ್ಡ್ ದುರ್ಬಳಕೆ ಬಗ್ಗೆ ಮಾಹಿತಿ ನೀಡಿ. ತನಿಖೆಗೆ ಅವರಿಗೆ ನೆರವಾಗಲು ಅಗತ್ಯ ದಾಖಲೆಗಳನ್ನು ನೀಡಿ.
ವರದಿ ಮಾಡೋದು ಹೇಗೆ?
ಹಂತ 1: TIN NSDL ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
ಹಂತ 2: ಹೋಮ್ ಪೇಜ್ ನಲ್ಲಿ ಗ್ರಾಹಕ ಸೇವಾ ವಿಭಾಗವನ್ನು ಹುಡುಕಿ ಅದರಲ್ಲಿ ನಿಮಗೆ ಡ್ರಾಪ್ ಡೌನ್ ಮೆನು ಕಾಣಿಸುತ್ತದೆ.
ಹಂತ 3: ‘Complaints/ Queries’ ಪುಟ ತೆರೆಯಿರಿ.ಈಗ ದೂರು ಅರ್ಜಿ ತೆರೆದುಕೊಳ್ಳುತ್ತದೆ.
ಹಂತ 4: ಅಗತ್ಯವಿರುವ ಎಲ್ಲ ಮಾಹಿತಿಗಳನ್ನು ದೂರು ಅರ್ಜಿಯಲ್ಲಿ ಭರ್ತಿ ಮಾಡಿ. ಕ್ಯಾಪ್ಚ ಕೋಡ್ ನಮೂದಿಸಿ ಹಾಗೂ ‘Submit’ ಮೇಲೆ ಕ್ಲಿಕ್ ಮಾಡಿ.