
India Vs Pakistan: ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿ ಬಳಿಕ ಭಾರತ ಆಪರೇಷನ್ ಸಿಂದೂರ ನಡೆಸಿ ಪಾಕಿಸ್ತಾನದ ನಡುವಿನ 9 ಉಗ್ರರ ತಾಣಗಳನ್ನು ಉಡೀಸ್ ಮಾಡಿತ್ತು. ಇತ್ತ ಪಹಲ್ಗಾಂ ದಾಳಿ ಬೆನ್ನಲ್ಲೇ ಕೇಂದ್ರ ಸರ್ಕಾರ ಪಾಕಿಸ್ತಾನದ ಜೊತೆಗಿನ ಎಲ್ಲಾ ವ್ಯವಹಾರಿಕ ಸಂಬಂಧ ಮತ್ತು ಸಿಂಧೂ ನದಿ ಜಲ ಒಪ್ಪಂದವನ್ನು ರದ್ದುಗೊಳಿದೆ. ಆದ್ರೂ ಈ ವರ್ಷ ಮೇ-2025ರಲ್ಲಿ ನಾಚಿಕೆ ಇಲ್ಲದ ಪಾಕಿಸ್ತಾನ 1.5 ಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ಭಾರತ ಸರ್ಕಾರ ನಿರ್ಬಂಧ ವಿಧಿಸಿದ್ರೂ ಇದು ಹೇಗೆ ಸಾಧ್ಯ ಎಂಬುದರ ಮಾಹಿತಿ ಇಲ್ಲಿದೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಸಂಘರ್ಷದ ನಡುವೆಯೂ ಮೇ ತಿಂಗಳಲ್ಲಿ ಎರಡೂ ದೇಶಗಳ ನಡುವೆ ವ್ಯಾಪಾರ ವಹಿವಾಟು ನಡೆದಿದೆ ಎಂದು ವರದಿಯಾಗಿದೆ. ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮೂರನೇ ರಾಷ್ಟ್ರದ ಮೂಲಕ ನಡೆದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ. ಈ ಕುರಿತು ಪಾಕಿಸ್ತಾನದ ಇಂಗ್ಲಿಷ್ ಪತ್ರಿಕೆ ಡಾನ್ ಕೆಲವು ಅಂಕಿ ಅಂಶಗಳನ್ನು ಸಹ ಪ್ರಕಟಿಸಿದೆ.
ಆಮದು ಮಾಡಿಕೊಳ್ಳುವ ಪ್ರಮಾಣ
ಡಾನ್ ಪತ್ರಿಕೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ (SBP) ಅಂಕಿ ಅಂಶಗಳನ್ನು ಉಲ್ಲೇಖಿಸಿ, ಪಾಕಿಸ್ತಾನದ ಅಂತರಾಷ್ಟ್ರೀಯ ವ್ಯವಹಾರದ ಬಗ್ಗೆ ವಿವರವಾದ ವರದಿ ಮಾಡಿದೆ. ಈ ಡಾನ್ ವರದಿ ಪ್ರಕಾರ, ಕಳೆದ ಆರ್ಥಿಕ ವರ್ಷ ಅಂದ್ರೆ ಜುಲೈ-ಮೇ ಅವಧಿಯಲ್ಲಿ ಭಾರತದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಗರಿಷ್ಠ ಮಟ್ಟವನ್ನು ತಲುಪಿದೆ. ಕಳೆದ ಹಣಕಾಸಿನ ವರ್ಷದ ಮೊದಲ 11 ತಿಂಗಳಲ್ಲಿ ಭಾರತದಿಂದ ಒಟ್ಟು $211.5 ಮಿಲಿಯನ್ ಮೌಲ್ಯದ ಸರಕುಗಳನ್ನು ಪಾಕಿಸ್ತಾನ ಆಮದು ಮಾಡಿಕೊಂಡಿತ್ತು. 2023-24ರಲ್ಲಿ $207 ಮಿಲಿಯನ್ ಮತ್ತು 2022-23ರಲ್ಲಿ $190 ಮಿಲಿಯನ್ ಮೌಲ್ಯದ ಸರಕುಗಳನ್ನು ಭಾರತದಿಂದ ಪಾಕಿಸ್ತಾನ ಆಮದು ಮಾಡಿಕೊಂಡಿತ್ತು.
ಮೇ-2025ರಲ್ಲಿಯೂ $15 ಮಿಲಿಯನ್ ಮೌಲ್ಯದ ಆಮದು!
22ನೇ ಏಪ್ರಿಲ್ 2025ರಂದು ಕಾಶ್ಮೀರದ ಪ್ರವಾಸಿತಾಣ ಪಹಲ್ಗಾಂನಲ್ಲಿ ಉಗ್ರರು ದಾಳಿ ನಡೆಸಿದ್ದರು. ಈ ದಾಳಿಯ ನಂತರ ಭಾರತದ ಸರಕುಗಳನ್ನು ಪಾಕ್ ಆಮದು ಮಾಡಿಕೊಂಡಿದೆ. ಡಾನ್ ವರದಿ ಪ್ರಕಾರ, $15 ಮಿಲಿಯನ್ ಮೌಲ್ಯದ ಆಮದು ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ $17 ಮಿಲಿಯನ್ ವ್ಯಾಪಾರ ನಡೆದಿತ್ತು. ಕಳೆದ ವರ್ಷಕ್ಕೆ ಹೋಲಿಸಿದ್ರೆ $2 ಮಿಲಿಯನ್ ವ್ಯಾಪಾರ ಕುಸಿತ ಕಂಡಿದೆ.
2019 ರಿಂದಲೂ ಪಾಕಿಸ್ತಾನ ಮತ್ತು ಭಾರತದ ನಡುವಿನ ಔಪಚಾರಿಕ ವ್ಯಾಪಾರ ಸಂಬಂಧ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ. ಪುಲ್ವಾಮಾ ದಾಳಿ ಬೆನ್ನಲ್ಲೇ ಭಾರತ ಸರ್ಕಾರ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು. 2023-24ರಲ್ಲಿ $34.4 ಮಿಲಿಯನ್ ಮತ್ತು 202-23ರಲ್ಲಿ $3.3 ಮಿಲಿಯನ್ ರಫ್ತು ನಡೆದಿದೆ. ಹಲವು ಘಟನೆಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತಿದೆ.
ಪಹಲ್ಗಾಮ ದಾಳಿಯಲ್ಲಿ 26 ಪ್ರವಾಸಿಗರ ಮೇಲೆ ಗುಂಡಿನ ದಾಳಿ
ಈ ವರ್ಷ ಏಪ್ರಿಲ್ 22ರಂದು ಪ್ರವಾಸಿತಾಣ ಪಹಲ್ಗಾಂಕ್ಕೆ ಎಂಟ್ರಿ ಕೊಟ್ಟ ಉಗ್ರರು 26 ಪ್ರವಾಸಿಗರನ್ನು ಕೊಂದು ಪರಾರಿಯಾಗಿದ್ದಾರೆ. ಆದರೆ ಈವರೆಗೂ ಗುಂಡಿನ ದಾಳಿ ನಡೆಸಿದ ಉಗ್ರರ ಬಂಧನವಾಗಿಲ್ಲ. ಗುಂಡಿನ ದಾಳಿ ಬಳಿಕ ಮೂರು ರೇಖಾಚಿತ್ರಗಳನ್ನು ಸಹ ಭಾರತ ಸರ್ಕಾರ ಬಿಡುಗಡೆ ಮಾಡಿತ್ತು. ಈ ಭಯೋತ್ಪಾದಕ ದಾಳಿಯ ನಂತರ ಭಾರತದಲ್ಲಿರುವ ಪಾಕಿಸ್ತಾನಿಗಳಿಗೆ ದೇಶ ತೊರೆಯುವಂತೆ ಸೂಚನೆ ನೀಡಿತ್ತು. ಅಟಾರಿ ಗಡಿಯನ್ನು ಸಹ ಕ್ಲೋಸ್ ಮಾಡಿಕೊಳ್ಳಲಾಗಿದೆ. ಪಾಕಿಸ್ತಾನದ ಜೊತೆಗಿನ ಎಲ್ಲಾ ವ್ಯವಹಾರಿಕ ಸಂಬಂಧಗಳಿಗೆ ಭಾರತ ಪೂರ್ಣವಿರಾಮ ಇರಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.