ಓಲಾ ಎಲೆಕ್ಟ್ರಿಕ್ ಕಂಪನಿಯ ಮಾರುಕಟ್ಟೆ ಮೌಲ್ಯ ಭಾರೀ ಕುಸಿತ, ಹೂಡಿಕೆದಾರರಿಗೆ ಅಪಾರ ನಷ್ಟ! ಕಾರಣವೇನು?

Published : Dec 18, 2025, 05:44 PM IST
Ola Electric

ಸಾರಾಂಶ

ಓಲಾ ಎಲೆಕ್ಟ್ರಿಕ್ ಷೇರುಗಳು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಹೂಡಿಕೆದಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಪ್ರವರ್ತಕರ ಷೇರು ಮಾರಾಟ, ಮಾರುಕಟ್ಟೆ ಪಾಲಿನಲ್ಲಿ ಕುಸಿತ, ಮತ್ತು ಹೆಚ್ಚುತ್ತಿರುವ ಸಾಲದಂತಹ ಪ್ರಮುಖ ಕಾರಣಗಳಿಂದ ಕಂಪನಿಯ ಮಾರುಕಟ್ಟೆ ಮೌಲ್ಯವು  ₹13,950 ಕೋಟಿಗೆ ಇಳಿದಿದೆ. 

ಬೆಂಗಳೂರು: ಓಲಾ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ಷೇರುಗಳು ಗುರುವಾರವೂ ನಿರಂತರ ಕುಸಿತ ಕಂಡಿದೆ. ಪ್ರೊಮೋಟರ್‌ಗಳಿಂದ ಷೇರು ಮಾರಾಟ, ತೀವ್ರ ಮಾರುಕಟ್ಟೆ ಪೈಪೋಟಿ, ಕುಸಿಯುತ್ತಿರುವ ಮಾರಾಟ ಪ್ರಮಾಣ ಹಾಗೂ ಕಾರ್ಯಾಚರಣೆಯಲ್ಲಿನ ತೊಂದರೆಗಳು ಹೂಡಿಕೆದಾರರಲ್ಲಿ ಭಾರೀ ನಿರಾಶೆ ಮೂಡಿಸಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

ಗುರುವಾರ ಬಿಎಸ್‌ಇ (BSE) ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಷೇರು ಶೇಕಡಾ 4.2 ರಷ್ಟು ಕುಸಿದು ₹31.54ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇದು ಕಂಪನಿಯ ಇತಿಹಾಸದಲ್ಲೇ ಅತಿ ಕಡಿಮೆ ಷೇರು ಬೆಲೆಯಾಗಿದ್ದು, ತನ್ನ ಸಾರ್ವಕಾಲಿಕ ಗರಿಷ್ಠ ಬೆಲೆಯಾದ ₹157.4ಕ್ಕೆ ಹೋಲಿಸಿದರೆ ಬರೋಬ್ಬರಿ ಶೇ.80ರಷ್ಟು ಕುಸಿತ ಕಂಡಿದೆ.

ಒಂದು ಕಾಲದಲ್ಲಿ ಭವಿಷ್ಯದ ಭರವಸೆಯ ಕಂಪನಿಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದ ಭವಿಷ್ ಅಗರ್ವಾಲ್ ನೇತೃತ್ವದ ಓಲಾ ಎಲೆಕ್ಟ್ರಿಕ್, ಇದೀಗ ಹೂಡಿಕೆದಾರರ ಪಾಲಿಗೆ ದೊಡ್ಡ ಸಂಕಷ್ಟ ತಂದಿದೆ. ಸತತ ಮೂರನೇ ದಿನವೂ ಷೇರು ಬೆಲೆ ಕುಸಿತ ಕಂಡಿದ್ದು, ಕಂಪನಿಯ ಮೇಲಿನ ಮಾರುಕಟ್ಟೆ ವಿಶ್ವಾಸಕ್ಕೆ ಭಾರೀ ಹೊಡೆತ ಬಿದ್ದಿದೆ.

ಮಾರುಕಟ್ಟೆ ಮೌಲ್ಯದಲ್ಲಿ ಭಾರೀ ಇಳಿಕೆ

ಷೇರು ಬೆಲೆಯ ನಿರಂತರ ಕುಸಿತದಿಂದಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯ ಮಾರುಕಟ್ಟೆ ಮೌಲ್ಯ ₹69,000 ಕೋಟಿಯಿಂದ ಕುಸಿದು ಕೇವಲ ₹13,950 ಕೋಟಿಗೆ ಇಳಿದಿದೆ. ಇದರಿಂದ ಸಾವಿರಾರು ಹೂಡಿಕೆದಾರರಿಗೆ ಅಪಾರ ನಷ್ಟ ಉಂಟಾಗಿದೆ.

ಷೇರು ಕುಸಿತಕ್ಕೆ ಪ್ರಮುಖ 5 ಕಾರಣಗಳು

1. ಪ್ರೊಮೋಟರ್ ಭವಿಷ್ ಅಗರ್ವಾಲ್ ಅವರಿಂದ ಷೇರು ಮಾರಾಟ

ಕಂಪನಿಯ ಪ್ರೊಮೋಟರ್ ಭವಿಷ್ ಅಗರ್ವಾಲ್ ಅವರು ಕಳೆದ ಎರಡು ದಿನಗಳಲ್ಲಿ 6.8 ಕೋಟಿ ಷೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿರುವುದು ಹೂಡಿಕೆದಾರರ ಆತಂಕಕ್ಕೆ ಪ್ರಮುಖ ಕಾರಣ. ಇದರ ಪರಿಣಾಮವಾಗಿ ಅವರ ಪಾಲು ಶೇ.36.78ರಿಂದ ಶೇ.33ಕ್ಕೆ ಇಳಿಕೆದಿದೆ. ಈ ಮಾರಾಟವನ್ನು ಪ್ರೊಮೋಟರ್ ಹಂತದಲ್ಲಿದ್ದ ₹260 ಕೋಟಿ ಸಾಲ ತೀರಿಸಲು ನಡೆಸಲಾಗಿದೆ ಎಂದು ಕಂಪನಿ ಸ್ಪಷ್ಟನೆ ನೀಡಿದರೂ, ಮಾರುಕಟ್ಟೆಯು ಖಣಾತ್ಮಕವಾಗಿ ತೆಗೆದುಕೊಂಡಿದೆ.

2. ಮಾರುಕಟ್ಟೆ ಪಾಲಿನಲ್ಲಿ ಭಾರೀ ಕುಸಿತ

ಒಂದು ಕಾಲದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಶೇ.46ರಷ್ಟು ಪಾಲು ಹೊಂದಿದ್ದ ಓಲಾ, ಇದೀಗ ಕೇವಲ ಶೇ.17ರ ಮಟ್ಟಕ್ಕೆ ಕುಸಿದಿದೆ. ಟಿವಿಎಸ್ (TVS), ಬಜಾಜ್ (Bajaj) ಸೇರಿದಂತೆ ಇತರ ಪ್ರತಿಷ್ಠಿತ ಕಂಪನಿಗಳ ತೀವ್ರ ಪೈಪೋಟಿಯಿಂದಾಗಿ ಮಾರುಕಟ್ಟೆಯಲ್ಲಿ ಓಲಾ ತನ್ನ ಪ್ರಾಬಲ್ಯವನ್ನು ಕಳೆದುಕೊಳ್ಳುತ್ತಿದೆ.

3. ಮಾರಾಟ ಪ್ರಮಾಣದಲ್ಲಿ ಇಳಿಕೆ

ಕಂಪನಿಯ ಕಾರ್ಯಾಚರಣೆ ಮೇಲಿನ ಹೂಡಿಕೆದಾರರ ವಿಶ್ವಾಸವೂ ಕುಗ್ಗುತ್ತಿದೆ. ಈ ಹಿಂದೆ ತಿಂಗಳಿಗೆ ಸರಾಸರಿ 30,000 ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದ ಓಲಾ, ಈಗ ಕೇವಲ 19,500 ಯುನಿಟ್‌ಗಳ ಮಾರಾಟಕ್ಕೆ ಸೀಮಿತವಾಗಿದೆ. ಇದು ಕಂಪನಿಯ ಬೆಳವಣಿಗೆಯ ಮೇಲೆ ಅನುಮಾನಗಳನ್ನು ಹೆಚ್ಚಿಸಿದೆ.

4. ಹೆಚ್ಚುತ್ತಿರುವ ಸಾಲ 

ಓಲಾ ಎಲೆಕ್ಟ್ರಿಕ್ ಇದೀಗ ಸ್ಕೂಟರ್ ವ್ಯವಹಾರಕ್ಕಿಂತ ಹೆಚ್ಚಾಗಿ ಬ್ಯಾಟರಿ ಸೆಲ್ ತಯಾರಿಕೆ ಮೇಲೆ ಗಮನಹರಿಸುತ್ತಿದೆ. ಈ ತಂತ್ರಬದಲಾವಣೆಯನ್ನು ಮಾರುಕಟ್ಟೆ ತಜ್ಞರು ಸಂಶಯದ ದೃಷ್ಟಿಯಿಂದ ನೋಡುತ್ತಿದ್ದಾರೆ. ಇದಕ್ಕೆ ಜೊತೆಯಾಗಿ ಕಂಪನಿಯು ₹1,700 ಕೋಟಿ ಹೆಚ್ಚುವರಿ ಸಾಲ ಪಡೆಯಲು ಯೋಜಿಸುತ್ತಿದ್ದು, ಒಟ್ಟು ಸಾಲದ ಮೊತ್ತ ₹5,000 ಕೋಟಿ ದಾಟುವ ಸಾಧ್ಯತೆ ಹೂಡಿಕೆದಾರರನ್ನು ಕಳವಳಕ್ಕೆ ಒಳಪಡಿಸಿದೆ.

5. ನೆಗೆಟಿವ್ ಸುದ್ದಿಗಳ ಸರಣಿ

ಸೇವೆಯಲ್ಲಿ ವಿಳಂಬ, ಶೋರೂಂಗಳು ಹಾಗೂ ಸರ್ವಿಸ್ ಸೆಂಟರ್‌ಗಳ ಮುಚ್ಚುವಿಕೆ, ಗ್ರಾಹಕರ ದೂರುಗಳು ಮತ್ತು ನಿರಂತರ ನಕಾರಾತ್ಮಕ ಸುದ್ದಿಗಳು ಕಂಪನಿಯ ಬ್ರ್ಯಾಂಡ್ ಮೌಲ್ಯಕ್ಕೆ ಭಾರೀ ಹಾನಿ ಉಂಟುಮಾಡಿವೆ. ಇದರ ಪರಿಣಾಮವಾಗಿ ಗ್ರಾಹಕರ ಜೊತೆಗೆ ಹೂಡಿಕೆದಾರರ ವಿಶ್ವಾಸವೂ ಕುಸಿದಿದೆ.

ಹೂಡಿಕೆದಾರರ ಆತಂಕ ಹೆಚ್ಚಳ

ಒಟ್ಟಿನಲ್ಲಿ, ಓಲಾ ಎಲೆಕ್ಟ್ರಿಕ್ ಎದುರಿಸುತ್ತಿರುವ ಆರ್ಥಿಕ ಮತ್ತು ಕಾರ್ಯಾಚರಣಾ ಸವಾಲುಗಳು ಷೇರು ಮಾರುಕಟ್ಟೆಯಲ್ಲಿ ಕಂಪನಿಗೆ ದೊಡ್ಡ ಹೊಡೆತ ನೀಡಿವೆ. ಮುಂದಿನ ದಿನಗಳಲ್ಲಿ ಕಂಪನಿ ತನ್ನ ತಂತ್ರಗಳನ್ನು ಮರುಪರಿಶೀಲಿಸಿ ನಂಬಿಕೆ ಮರಳಿ ಗಳಿಸಬಹುದೇ ಎಂಬುದರ ಮೇಲೆ ಹೂಡಿಕೆದಾರರ ದೃಷ್ಟಿ ನೆಟ್ಟಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಗೋಲ್ಡ್ ಬಾಂಡ್ ಹೂಡಿಕೆದಾರರಿಗೆ ಶೇ.366ರಷ್ಟು ರಿಟರ್ನ್ಸ್, 2 ಲಕ್ಷ ರೂ.ಗೆ 9.32 ಲಕ್ಷ ರೂ ಬಂಪರ್
ಲಂಡನ್‌ನಲ್ಲಿ ವಿಜಯ್‌ ಮಲ್ಯ 70ನೇ ಬರ್ತ್‌ಡೇಗೆ ಲಲಿತ್ ಮೋದಿಯಿಂದ ಅದ್ದೂರಿ ಪಾರ್ಟಿ: ಕಿರಣ್ ಮಜುಂದಾರ್ ಭಾಗಿ