ಭಾರತವು ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಮತ್ತೊಂದು ಕ್ರಾಂತಿಕಾರಿ ಬೆಳವಣಿಗೆ ಕಾಣುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಗ್ರಾಹಕರ ಮೊಬೈಲ್‌ನಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೂ ಸಹ, ವ್ಯಾಪಾರಿಗಳ ಪಾಯಿಂಟ್-ಆಫ್-ಸೇಲ್ (PoS) ಟರ್ಮಿನಲ್‌ನಲ್ಲಿ ನೇರವಾಗಿ ಯುಪಿಐ ಪಾವತಿ ಮಾಡಬಹುದಾದ ಹೊಸ ತಂತ್ರಜ್ಞಾನವನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ. ಈ ವಿಚಾರಕ್ಕೆ ಹತ್ತಿರವಿರುವ ಮೂರು ಪ್ರಮುಖ ಮೂಲಗಳನ್ನು ಉಲ್ಲೇಖಿಸಿ 'ಬಿಸಿನೆಸ್ ಸ್ಟ್ಯಾಂಡರ್ಡ್' ಪತ್ರಿಕೆ ಈ ಮಹತ್ವದ ವರದಿಯನ್ನು ಪ್ರಕಟಿಸಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI), 2026 ರ ವೇಳೆಗೆ ಪ್ರಮುಖ ತಯಾರಕರು ಉತ್ಪಾದಿಸುವ PoS ಸಾಧನಗಳನ್ನು ಈ ಹೊಸ ತಂತ್ರಜ್ಞಾನಕ್ಕಾಗಿ ಪ್ರಮಾಣೀಕರಿಸಲು (Certify) ಪ್ರಾರಂಭಿಸುವ ಸಾಧ್ಯತೆಯಿದೆ.
ಈ ಪ್ರಸ್ತಾವಿತ ವ್ಯವಸ್ಥೆಯು ನಿಯರ್-ಫೀಲ್ಡ್ ಕಮ್ಯುನಿಕೇಶನ್ (NFC) ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ. ಗ್ರಾಹಕರು ಇಂಟರ್ನೆಟ್ ಇಲ್ಲದ, ಅಥವಾ ನೆಟ್ ವರ್ಕ್ ಸಮಸ್ಯೆ ಇರುವ ಪ್ರದೇಶಗಳಲ್ಲಿ ತಮ್ಮ ಎನ್‌ಎಫ್‌ಸಿ-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್ ಅನ್ನು ಕೇವಲ 'ಟ್ಯಾಪ್' ಮಾಡುವ ಮೂಲಕ ರೂ. 2,000 ವರೆಗಿನ ವಹಿವಾಟುಗಳನ್ನು ಕ್ಷಣಾರ್ಧದಲ್ಲಿ ಪೂರ್ಣಗೊಳಿಸಬಹುದು.
ಈ ವಿಶಿಷ್ಟ ವೈಶಿಷ್ಟ್ಯವನ್ನು ಇಂಟರ್ನೆಟ್ ನೆಟ್‌ವರ್ಕ್ ಸಂಪೂರ್ಣವಾಗಿ ಇಲ್ಲದ ಅಥವಾ ಸಿಗ್ನಲ್ ಸಿಗದ ಅಥವಾ ಸಂಪರ್ಕವೇ ಇಲ್ಲದ ಜಾಗಗಳಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ, ವಿಮಾನದ ಕ್ಯಾಬಿನ್‌ಗಳು ಹಾಗೂ ಭೂಗತ ಮೆಟ್ರೋ ರೈಲು ನಿಲ್ದಾಣಗಳು, ಕೆಲವು ಸೂಕ್ಷ್ಮ ಪ್ರದೇಶಗಳಲ್ಲಿ ಈ ತಂತ್ರಜ್ಞಾನವು ಗ್ರಾಹಕರಿಗೆ ವರದಾನವಾಗಲಿದೆ.
ಈ ವ್ಯವಸ್ಥೆಯನ್ನು ಬಳಸಲು ಗ್ರಾಹಕರು ಮೊದಲು ತಮಗೆ ಇಂಟರ್ನೆಟ್ ಸಂಪರ್ಕ ಲಭ್ಯವಿರುವಾಗ ತಮ್ಮ ಮೊಬೈಲ್‌ನಲ್ಲಿರುವ 'UPI ಲೈಟ್ ವ್ಯಾಲೆಟ್'ಗೆ ಹಣವನ್ನು ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಆಫ್‌ಲೈನ್ ಟರ್ಮಿನಲ್‌ಗಳಲ್ಲಿ ಈ ಹಣವನ್ನು ಬಳಸುವಾಗ ಗ್ರಾಹಕರು ತಮ್ಮ ರಹಸ್ಯ ಯುಪಿಐ ಪಿನ್ (PIN) ಅನ್ನು ನಮೂದಿಸುವ ಅಗತ್ಯವೂ ಇರುವುದಿಲ್ಲ.
"ಆಫ್‌ಲೈನ್ ಪರಿಸರದಲ್ಲಿ ಯುಪಿಐ ಪಾವತಿಗಳನ್ನು ಸ್ವೀಕರಿಸಲು PoS ಕಂಪನಿಗಳು ಮೊದಲು NPCI ಸಂಸ್ಥೆಯಿಂದ ಕಡ್ಡಾಯವಾಗಿ ಪ್ರಮಾಣೀಕರಣವನ್ನು ಪಡೆಯಬೇಕು. ಒಮ್ಮೆ ಈ ಅನುಮೋದನೆ ಸಿಕ್ಕ ನಂತರ, ಅವರು ಅದರ ಮೇಲೆ ಅಗತ್ಯ ಆಪ್‌ಗಳನ್ನು ನಿರ್ಮಿಸಬಹುದು," ಎಂದು ಫಿಂಟೆಕ್ ಸಂಸ್ಥೆಯ ತಜ್ಞರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಸ್ತುತ ವ್ಯಾಪಾರಿಗಳ ಬಳಿ ಇರುವ PoS ಟರ್ಮಿನಲ್‌ಗಳನ್ನು ಕೇವಲ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು ಮತ್ತು ಮೊಬೈಲ್ ವ್ಯಾಲೆಟ್‌ಗಳಿಗಾಗಿ ಬಳಸಲಾಗುತ್ತಿದೆ. ಆದರೆ ಹೊಸ ವ್ಯವಸ್ಥೆಯಡಿಯಲ್ಲಿ, ನೆಟ್‌ವರ್ಕ್ ಇಲ್ಲದಿದ್ದಾಗಲೂ ಈ ಟರ್ಮಿನಲ್ ಪಾವತಿಯ ಅಧಿಕಾರವನ್ನು (Authorization) ತನ್ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡುತ್ತದೆ. ನಂತರ ಸಾಧನಕ್ಕೆ ಇಂಟರ್ನೆಟ್ ಸಂಪರ್ಕ ಮರಳಿದ ತಕ್ಷಣ ಬ್ಯಾಂಕಿಗೆ ಡೇಟಾವನ್ನು ಫಾರ್ವರ್ಡ್ ಮಾಡುತ್ತದೆ.
NPCI ಸಂಸ್ಥೆಯು ಮೊಬೈಲ್ ನೆಟ್‌ವರ್ಕ್ ಇಲ್ಲದಿದ್ದಾಗ ವಹಿವಾಟು ನಡೆಸಲು ಈಗಾಗಲೇ ಸೆಪ್ಟೆಂಬರ್ 2023 ರಲ್ಲಿ 'UPI ಲೈಟ್ X' ಅನ್ನು ಪರಿಚಯಿಸಿತ್ತು. ಆದರೆ, ಪ್ರಸ್ತುತ ಸಿದ್ಧವಾಗುತ್ತಿರುವ ತಂತ್ರಜ್ಞಾನವು ಈ ಸೌಲಭ್ಯವನ್ನು ವ್ಯಾಪಾರಿಗಳ ಸಾಂಪ್ರದಾಯಿಕ PoS ಟರ್ಮಿನಲ್‌ಗಳಿಗೆ ವಿಸ್ತರಿಸುತ್ತಿದೆ ಎನ್ನುವುದು ದೊಡ್ಡ ಬದಲಾವಣೆ.
ಈ ಹಿಂದೆ ಜನವರಿ 2024 ರ ಯುಪಿಐ ಲೈಟ್ X ಮಾರ್ಗಸೂಚಿಗಳು ಕೇವಲ NFC ಫೋನ್‌ಗಳ ನಡುವಿನ ವ್ಯಕ್ತಿಯಿಂದ ವ್ಯಕ್ತಿಗೆ (P2P) ಪಾವತಿ ಅಥವಾ ಎನ್‌ಎಫ್‌ಸಿ ಸಕ್ರಿಯಗೊಳಿಸಿದ ಕ್ಯೂಆರ್ ಕೋಡ್, ಸೌಂಡ್‌ಬಾಕ್ಸ್ ಮತ್ತು ಸ್ಟಿಕ್ಕರ್‌ಗಳ ಮೂಲಕ ಮಾಡುವ ಪಾವತಿಗಳಿಗಷ್ಟೇ ಸೀಮಿತವಾಗಿದ್ದವು. ಆದರೆ ಈಗಿನ ಹೊಸ ಸಾಮರ್ಥ್ಯವು ವ್ಯಾಪಾರಿಗಳ ಅಧಿಕೃತ PoS ಯಂತ್ರಗಳಿಗೂ ಆಫ್‌ಲೈನ್ ಬ್ಯಾಕಪ್ ನೀಡುತ್ತದೆ.
ಪ್ರಸ್ತುತ ವರದಿಯಾಗಿರುವ ಪ್ರತಿ ವಹಿವಾಟಿಗೆ ರೂ. 2,000 ಮಿತಿಯು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಜಾರಿಗೆ ತಂದಿರುವ ಅಸ್ತಿತ್ವದಲ್ಲಿರುವ ನಿಯಮಗಳಿಗಿಂತ ಭಿನ್ನವಾಗಿದೆ. 2022 ರಲ್ಲಿ ಪರಿಚಯಿಸಲಾದ ಮತ್ತು ಡಿಸೆಂಬರ್ 2024 ರಲ್ಲಿ ನವೀಕರಿಸಲಾದ RBI ನ ಆಫ್‌ಲೈನ್ ಡಿಜಿಟಲ್ ಪಾವತಿ ಚೌಕಟ್ಟು, ಸಾಮಾನ್ಯ ಆಫ್‌ಲೈನ್ ವಹಿವಾಟನ್ನು ಕೇವಲ ರೂ. 500 ಕ್ಕೆ ಮತ್ತು ಒಟ್ಟು ಬಾಕಿ ಆಫ್‌ಲೈನ್ ಮಿತಿಯನ್ನು ರೂ. 2,000 ಕ್ಕೆ ಸೀಮಿತಗೊಳಿಸಿದೆ.
ಅಲ್ಲದೆ, ರಿಸರ್ವ್ ಬ್ಯಾಂಕಿನ ರಾಷ್ಟ್ರೀಯ ಹಣಕಾಸು ಸೇರ್ಪಡೆ ಕಾರ್ಯತಂತ್ರ (2025-30) ಪ್ರಕಾರ, ಯುಪಿಐ ಲೈಟ್ X ಗಾಗಿ ಪ್ರತಿ ವಹಿವಾಟಿನ ಮಿತಿ ರೂ. 500 ಮತ್ತು ಗರಿಷ್ಠ ಬ್ಯಾಲೆನ್ಸ್ ರೂ. 2,000 ಆಗಿದೆ. ಹೊಸ PoS ತಂತ್ರಜ್ಞಾನದಲ್ಲಿ ರೂ. 2,000 ಮಿತಿಯನ್ನು ಹೇಳಲಾಗುತ್ತಿದ್ದು, ಇದು ಆರ್‌ಬಿಐನ ಪ್ರಸ್ತುತ ನಿಯಮಾವಳಿಗಳೊಂದಿಗೆ ಹೇಗೆ ಹೊಂದಾಣಿಕೆಯಾಗಲಿದೆ ಎಂಬ ಅಧಿಕೃತ ಕಾರ್ಯಾಚರಣಾ ನಿಯಮಗಳನ್ನು NPCI ಇನ್ನು ಪ್ರಕಟಿಸಬೇಕಿದೆ.
ಪ್ರಸ್ತುತ ನಿಯಮಗಳ ಅಡಿಯಲ್ಲಿ, ಆಫ್‌ಲೈನ್ ಪಾವತಿಗಳಿಗೆ ಗ್ರಾಹಕರ ಸ್ಪಷ್ಟ ಒಪ್ಪಿಗೆ ಅತ್ಯಗತ್ಯ. ಆದರೆ ಇವುಗಳಿಗೆ ಹೆಚ್ಚುವರಿ ದೃಢೀಕರಣ (2FA) ಬೇಕಾಗಿರುವುದಿಲ್ಲ. ಒಂದು ವೇಳೆ ವ್ಯಾಪಾರಿ ಕಡೆಯಿಂದ ಯಾವುದೇ ತಾಂತ್ರಿಕ ಅಥವಾ ಭದ್ರತಾ ಲೋಪಗಳು ಉಂಟಾದರೆ, ಅದಕ್ಕೆ ಪಾವತಿ ಸ್ವೀಕರಿಸುವ ಸಂಸ್ಥೆಯೇ (Acquiring Institution) ಪೂರ್ಣ ಹೊಣೆಯಾಗುತ್ತದೆ. ಯಾವುದೇ ದೂರುಗಳಿದ್ದಲ್ಲಿ ಗ್ರಾಹಕರು ಆರ್‌ಬಿಐನ ಇಂಟಿಗ್ರೇಟೆಡ್ ಓಂಬುಡ್ಸ್‌ಮನ್ ಯೋಜನೆಯನ್ನು ಬಳಸಿಕೊಳ್ಳಬಹುದು.
NPCI ಯ ಅಧಿಕೃತ ಅಂಕಿಅಂಶಗಳ ಪ್ರಕಾರ, ಜೂನ್ 2026 ರ ಒಂದೇ ತಿಂಗಳಿನಲ್ಲಿ ಯುಪಿಐ ವ್ಯವಸ್ಥೆಯು ಬರೋಬ್ಬರಿ 28.92 ಲಕ್ಷ ಕೋಟಿ ರೂ. ಮೌಲ್ಯದ 22.72 ಶತಕೋಟಿ ವಹಿವಾಟುಗಳನ್ನು ಯಶಸ್ವಿಯಾಗಿ ಪ್ರಕ್ರಿಯೆಗೊಳಿಸಿದೆ.
ಪ್ರಸ್ತುತ ಕೆಲವು ತಾಂತ್ರಿಕ ಕಾರಣಗಳಿಂದಾಗಿ ವಿಮಾನಗಳಲ್ಲಿ ಕಾರ್ಡ್ ಬಳಕೆಗೆ ನಿರ್ಬಂಧಗಳಿರುವುದರಿಂದ, ಕಡಿಮೆ ಮಿತಿಯ ಇಂತಹ ಆಫ್‌ಲೈನ್ ಯುಪಿಐ ಪಾವತಿಗಳು ವಿಮಾನಯಾನ ಮತ್ತು ಪ್ರಯಾಣ ವಲಯದಲ್ಲಿ ಯುಪಿಐಗೆ ಅತ್ಯಂತ ದೊಡ್ಡ ಮಾರುಕಟ್ಟೆಯನ್ನು ತೆರೆದಿಡಲಿವೆ ಎಂದು ಆರ್ಥಿಕ ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.