10 ವರ್ಷ ಬಡ್ಡಿ ರಿಯಾಯ್ತಿ ಪಡೆದ ರೈತರಿಗೆ ಸಬ್ಸಿಡಿ ಕೃಷಿ ಸಾಲ ಇಲ್ಲ

By Kannadaprabha News  |  First Published Jul 14, 2021, 8:32 AM IST
  • ರೈತರ ಸಂಕಷ್ಟಕ್ಕೆ ನೆರವಾಗಲು ಸರ್ಕಾರ ಸಾಲ ಮನ್ನಾ ಯೋಜನೆ ಜಾರಿಗೆ ತಂದಿರುವುದು ಈಗ ಕೃಷಿಕರಿಗೆ ಶಾಪವಾಗಿದೆ
  • ಸಾಲ ಮನ್ನಾ ಯೋಜನೆಯಲ್ಲಿ ಕಳೆದ 10 ವರ್ಷಗಳಲ್ಲಿ 4 ಲಕ್ಷ ರು. ವರೆಗೆ ಬಡ್ಡಿ ರಿಯಾಯ್ತಿ ಪಡೆದ ಹೊಸ ನಿಯಮ
  • ಬಡ್ಡಿ ರಿಯಾಯ್ತಿಯಲ್ಲಿ ಹೊಸ ದೀರ್ಘಾವಧಿ ಕೃಷಿ ಸಾಲ ಪಡೆಯುವಂತಿಲ್ಲ

ವರದಿ : ಆತ್ಮಭೂಷಣ್‌

 ಮಂಗಳೂರು (ಜು.14):  ರೈತರ ಸಂಕಷ್ಟಕ್ಕೆ ನೆರವಾಗಲು ಸರ್ಕಾರ ಸಾಲ ಮನ್ನಾ ಯೋಜನೆ ಜಾರಿಗೆ ತಂದಿರುವುದು ಈಗ ಕೃಷಿಕರಿಗೆ ಶಾಪವಾಗಿ ಪರಿಣಮಿಸಿದೆ. ಸಾಲ ಮನ್ನಾ ಯೋಜನೆಯಲ್ಲಿ ಕಳೆದ 10 ವರ್ಷಗಳಲ್ಲಿ 4 ಲಕ್ಷ ರು. ವರೆಗೆ ಬಡ್ಡಿ ರಿಯಾಯ್ತಿ ಪಡೆದ ರೈತರು ಮತ್ತೆ ಬಡ್ಡಿ ರಿಯಾಯ್ತಿಯಲ್ಲಿ ಹೊಸ ದೀರ್ಘಾವಧಿ ಕೃಷಿ ಸಾಲ ಪಡೆಯುವಂತಿಲ್ಲ. ಬೇಕಾದರೆ ಅಧಿಕ ಬಡ್ಡಿದರದ ಕೃಷಿಯೇತರ ಸಾಲಕ್ಕೆ ಮೊರೆ ಹೋಗಬೇಕಾಗಿದೆ.

Tap to resize

Latest Videos

ಹೊಸದಾಗಿ ಕೃಷಿ ಸಾಲಕ್ಕೆ ಅರ್ಜಿ ಸಲ್ಲಿಸಲು ಸಹಕಾರಿ ಬ್ಯಾಂಕ್‌ಗಳಿಗೆ ತೆರಳಿದ ವೇಳೆ ರೈತರಿಗೆ ಈ ಸಂಗತಿ ಬೆಳಕಿಗೆ ಬಂದಿದೆ. ರಾಜ್ಯ ಸಹಕಾರ ಇಲಾಖೆ 2020 ಜೂನ್‌ 30ರಂದು ಮಧ್ಯಮಾವಧಿ ಹಾಗೂ ದೀರ್ಘಾವಧಿ ಬೆಳೆ ಸಾಲ ಮಂಜೂರು ಬಗ್ಗೆ ಕೆಲವು ಷರತ್ತು ವಿಧಿಸಿ ಸುತ್ತೋಲೆ ಹೊರಡಿಸಿತ್ತು. ಕಳೆದ ವರ್ಷ ಕೋವಿಡ್‌ ಸಂಕಷ್ಟಕಾರಣಕ್ಕೆ ಈ ಆದೇಶವನ್ನು ಸಹಕಾರಿ ಬ್ಯಾಂಕ್‌ಗಳು ಪಾಲಿಸಿರಲಿಲ್ಲ. ಆದರೆ ಈಗ ಸಾಲಕ್ಕೆ ಅರ್ಜಿ ಸಲ್ಲಿಸಲು ಹೋದ ರೈತರಿಗೆ ಬಡ್ಡಿ ರಿಯಾಯ್ತಿ ನೀಡಲು ಸಾಧ್ಯವಾಗದು ಎಂದು ಸಹಕಾರಿ ಬ್ಯಾಂಕ್‌ಗಳು ಸ್ಪಷ್ಟಪಡಿಸಿವೆ. ಇದರಿಂದಾಗಿ ರೈತರು ಬಡ್ಡಿ ರಿಯಾಯ್ತಿ ರಹಿತ ದೀರ್ಘಾವಧಿ ಸಾಲ ಪಡೆಯಬೇಕಾಗಿದೆ. ಅಂದರೆ ಶೇ.3ರ ಬದಲು ಶೇ.12ಕ್ಕಿಂತಲೂ ಅಧಿಕ ಬಡ್ಡಿ ದರದಲ್ಲಿ ಸಾಲ ಪಡೆಯಬೇಕಾಗಿದೆ. ಅದು ಕೂಡ ಕೃಷಿಯೇತರ ಸಾಲ ಪಡೆಯಬೇಕು. ಬಡ್ಡಿ ರಿಯಾಯ್ತಿ ಇದ್ದರೆ ಮಾತ್ರ ಅದನ್ನು ದೀರ್ಘಾವಧಿ ಕೃಷಿ ಸಾಲ ಎಂದು ಪರಿಗಣಿಸಲಾಗುತ್ತದೆ.

ಕೋವಿಡ್‌ನಿಂದ ಮೃತರಾದ ರೈತರ ಸಾಲ ಮನ್ನಾ : ಚಿಂತನೆಗೆ ಸ್ವಾಗತ

ಕಳೆದ ವರ್ಷ ಸಾಲ ಪಡೆದವರಿಗೂ ತೊಂದರೆ: ಇದೇ ವೇಳೆ ಬಹುತೇಕ ಸಹಕಾರ ಬ್ಯಾಂಕ್‌ಗಳು ಕಳೆದ ವರ್ಷವೇ ಬಡ್ಡಿ ರಿಯಾಯ್ತಿ ಪಡೆದ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ 10 ಲಕ್ಷ ರು. ವರೆಗೆ ದೀರ್ಘಾವಧಿ(7 ವರ್ಷ)ಕೃಷಿ ಸಾಲ ಮಂಜೂರು ಮಾಡಿವೆ. ಈಗ ಈ ಆದೇಶವನ್ನು ಕಟ್ಟುನಿಟ್ಟು ಅನುಷ್ಠಾನಕ್ಕೆ ತಂದಿರುವುದರಿಂದ ಕಳೆದ 10 ವರ್ಷ ಅವಧಿಯಲ್ಲಿ 4 ಲಕ್ಷ ರು. ವರೆಗೆ ಬಡ್ಡಿ ರಿಯಾಯ್ತಿ ಪಡೆದವರು ಅಧಿಕ ಬಡ್ಡಿ ದರದ ಸಾಲಕ್ಕೆ ತಮ್ಮ ಸಾಲವನ್ನು ಪರಿವರ್ತಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈಗಾಗಲೇ ಕೆಲವು ಮಂದಿ ದೀರ್ಘಾವಧಿಗೆ ಶೇ.12ಕ್ಕಿಂತ ಜಾಸ್ತಿ ಬಡ್ಡಿ ಪಾವತಿಸುವ ಸಂಕಷ್ಟಬೇಡ ಎಂದು ಒಮ್ಮೆಲೇ ಸಾಲ ಮರುಪಾವತಿಸಿ ಲೆಕ್ಕ ಚುಕ್ತಾ ಮಾಡಿದ್ದಾರೆ. ಅದಕ್ಕಾಗಿ ಕೈಸಾಲ ಮಾಡಿಕೊಂಡು ಮರುಪಾವತಿಯ ಮೊರೆ ಹೋಗಿದ್ದಾರೆ ಎನ್ನುತ್ತಾರೆ ಪುಣಚ ಸೇವಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ದೇವಿ ಪ್ರಸಾದ್‌.

ಇಂತಹ ಷರತ್ತಿಗೆ ಕಾರಣ ಏನು?: ಸಾಲ ಮನ್ನಾ ಯೋಜನೆಯಲ್ಲಿ ಅನೇಕ ಮಂದಿ ಬಡ್ಡಿ ರಿಯಾಯ್ತಿ ಸೌಲಭ್ಯಕ್ಕಾಗಿ ಶೇ.3ರ ಬಡ್ಡಿ ದರದಲ್ಲಿ 10 ಲಕ್ಷ ರು. ವರೆಗೆ ದೀರ್ಘಾವಧಿಯ ಕೃಷಿ ಸಾಲ ಪಡೆಯುತ್ತಾರೆ. ಅದನ್ನು ಬೇರೆ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿ ಮತ್ತೆ ಬಡ್ಡಿಗೆ ಸಾಲ ನೀಡುವ ದಂಧೆ ನಡೆಸುತ್ತಾರೆ. ಈ ವಿಚಾರ ಆಪೆಕ್ಸ್‌ ಬ್ಯಾಂಕ್‌ ಅಧಿಕಾರಿಗಳ ತಂಡ ನಡೆಸಿದ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ. ಇದರಿಂದ ಬಡ್ಡಿ ರಿಯಾಯ್ತಿ ಸೌಲಭ್ಯದ ಉದ್ದೇಶ ಈಡೇರುವುದಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ. ಈ ಕಾರಣಕ್ಕೆ 10 ವರ್ಷಗಳಲ್ಲಿ 4 ಲಕ್ಷ ರು. ವರೆಗೆ ಬಡ್ಡಿ ರಿಯಾಯ್ತಿ ಪಡೆದವರಿಗೆ ಶೇ.3ರ ಬಡ್ಡಿದರದಲ್ಲಿ ಕೃಷಿ ಸಾಲ ಸೌಲಭ್ಯ ನೀಡದೇ ಇರಲು ತೀರ್ಮಾನಿಸಿದ್ದಾರೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದವರಿಗೆ ತೊಂದರೆಯಾಗದು ಎನ್ನುವುದು ಅಧಿಕಾರಿಗಳ ಪ್ರತಿಪಾದನೆ.

ಶೂನ್ಯ ಬಡ್ಡಿ ಸಾಲಕ್ಕೆ ಷರತ್ತು: ರೈತರಿಗೆ ಹೊಸ ಕಂಟಕ..!

ಶಾಸಕರ ಮನವಿಗೂ ಸ್ಪಂದನ ಇಲ್ಲ

ಸಹಕಾರಿ ಸಂಘ/ಬ್ಯಾಂಕ್‌ಗಳ ಕೃಷಿ ಸಾಲ ನೀಡಿಕೆಗೆ ಸಂಬಂಧಿಸಿ ಸಹಕಾರ ಇಲಾಖೆ ಷರತ್ತು ವಿಧಿಸಿರುವುದು ಇದು ಹೊಸದಲ್ಲ. ಈಗಾಗಲೇ ಒಂದೇ ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರು. ವರೆಗೆ ಕೃಷಿ ಸಾಲಕ್ಕೆ ಅವಕಾಶ ಎಂದು ಆದೇಶ ಹೊರಡಿಸಿದೆ. ಇದರಿಂದಾಗಿ ಒಂದೇ ಕುಟುಂಬದಲ್ಲಿ ಹಲವು ಮಂದಿ ಪ್ರತ್ಯೇಕ ಪಹಣಿ ಪತ್ರ ಹೊಂದಿದ್ದರೆ, ಅಂತಹವರು ಅಲ್ವಾವಧಿ ಬೆಳೆ ಸಾಲ ಪಡೆಯುವಂತಿಲ್ಲ. ಈ ಷರತ್ತು ಸಡಿಲಿಸುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ತಿಂಗಳ ಹಿಂದೆ ಸಹಕಾರ ಸಚಿವರಿಗೆ ಪತ್ರ ಬರೆದರೂ ಪರಿಣಾಮ ಮಾತ್ರ ಶೂನ್ಯ.

ಪ್ರತಿಯೊಬ್ಬ ಕೃಷಿಕರಿಗೂ ಅಲ್ಪಾವಧಿ ಬೆಳೆ ಸಾಲ ಈ ಹಿಂದಿನಂತೆಯೇ ಸಿಗುವಂತಾಗಬೇಕು. ಅಲ್ಲದೆ 10 ವರ್ಷಗಳಲ್ಲಿ 4 ಲಕ್ಷ ರು. ವರೆಗೆ ಬಡ್ಡಿ ರಿಯಾಯ್ತಿ ಪಡೆದವರಿಗೆ ಸಬ್ಸಿಡಿ ಇಲ್ಲ ಎಂಬ ಷರತ್ತನ್ನು ತೆಗೆದುಹಾಕಬೇಕು. ಈ ವಿಚಾರವನ್ನು ಸಹಕಾರ ಇಲಾಖೆಯ ಸಚಿವರ ಗಮನಕ್ಕೆ ತರಲಾಗಿದೆ.

-ಎಸ್‌.ಆರ್‌.ಸತೀಶ್ಚಂದ್ರ, ಅಧ್ಯಕ್ಷ, ರಾಜ್‌ ಸಹಕಾರ ಸಂಘ, ಸಹಕಾರ ಭಾರತಿ

click me!