
ನವದೆಹಲಿ(ಜು.14): ಈಗಾಗಲೇ ಆಧಾರ್ ಪಡೆದಿರುವ ನಾಗರಿಕರು, ಆಧಾರ್ ಸಂಖ್ಯೆಯನ್ನು ಬದಲಾಯಿಸಿ ಹೊಸ ಆಧಾರ್ ಪಡೆಯಲು ಅವಕಾಶ ನೀಡಬೇಕು ಎಂದು ದಿಲ್ಲಿ ಹೈಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಆಧಾರ್ ಪ್ರಾಧಿಕಾರದಿಂದ ಹೈಕೋರ್ಟ್ ಪ್ರತಿಕ್ರಿಯೆ ಬಯಸಿ ನೋಟಿಸ್ ಜಾರಿ ಮಾಡಿದೆ.
ಉದ್ಯಮಿ ರಾಜನ್ ಅರೋರಾ ಅವರು ಈ ಅರ್ಜಿ ಸಲ್ಲಿಸಿದ್ದಾರೆ. ‘ನನ್ನ ಆಧಾರ್ ಸಂಖ್ಯೆಯು ನನ್ನ ಅನುಮತಿ ಇಲ್ಲದೇ ವಿದೇಶೀ ಕಂಪನಿಗಳ ಜತೆ ಅಕ್ರಮವಾಗಿ ಸಂಯೋಜಿತವಾಗಿದೆ. ಇದರಿಂದಾಗಿ ನನ್ನ ಗುರುತು, ಭದ್ರತೆ, ದತ್ತಾಂಶಗಳಿಗೆ ಅಪಾಯ ಎದುರಾಗಿದ್ದು, ಆಧಾರ್ ಸಂಖ್ಯೆಯನ್ನು ಬದಲಾಯಿಸಿ, ಹೊಸ ಆಧಾರ್ ಸಂಖ್ಯೆ ಪಡೆದುಕೊಳ್ಳಲು ಅವಕಾಶ ನೀಡುವಂತೆ ಆದೇಶಿಸಬೇಕು. ಖಾಸಗಿತನದ ಭದ್ರತೆಗೆ ಧಕ್ಕೆ ಬರಕೂಡದು ಎಂದು ಸರ್ಕಾರಕ್ಕೆ ಆದೇಶಿಸಬೇಕು’ ಎಂದು ಕೋರಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಆಧಾರ್ ಪ್ರಾಧಿಕಾರದ ವಕೀಲರು, ‘ಈಗಿನ ಮಟ್ಟಿಗೆ ವ್ಯಕ್ತಿಯೊಬ್ಬರಿಗೆ ಒಮ್ಮೆ ಆಧಾರ್ ಸಂಖ್ಯೆ ನೀಡಿದರೆ ಅದು ಜೀವನಪರ‍್ಯಂತ ಅನ್ವಯಿಸುತ್ತದೆ. ಮತ್ತೆ ಬದಲಾವಣೆಗೆ ನಿಯಮದಲ್ಲಿ ಅವಕಾಶವಿಲ್ಲ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್. ‘ಹಾಗಿದ್ದರೆ ಈ ನಿಯಮ ಬದಲಾಗಬೇಕಿದೆ’ ಎಂದು ಅಭಿಪ್ರಾಯಪಟ್ಟನ್ಯಾಯಪೀಠ, ಈ ಸಂಬಂಧ ಉತ್ತರ ನೀಡುವಂತೆ ಕೇಂದ್ರ ಹಾಗೂ ಆಧಾರ್ ಪ್ರಾಧಿಕಾರಕ್ಕೆ ಸೂಚಿಸಿ, ಸೆ.9ರಂದು ವಿಚಾರಣೆ ಮುಂದೂಡಿತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.