EPF ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ, ಬ್ಯಾಲೆನ್ಸ್ ತಿಳಿಯಲು ಹೀಗ್ಮಾಡಿ!

By Suvarna NewsFirst Published Mar 4, 2021, 2:54 PM IST
Highlights

ಭವಿಷ್ಯ ನಿಧಿ ಮಂಡಳಿಯ ಸಭೆ| EPF ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲ| ನಿಟ್ಟುಸಿರು ಬಿಟ್ಟ ನೌಕರರು|

ನವದೆಹಲಿ(ಮಾ.04): ಭವಿಷ್ಯ ನಿಧಿ ಮಂಡಳಿಯ ಸಭೆಯಲ್ಲಿ ಕಾರ್ಮಿಕ ಸಚಿವಾಲಯವು  2020-2021ನೇ ವರ್ಷದ ನೌಕರರ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರವನ್ನು ಶೇ.8.5ರಷ್ಟು ನಿಗಧಿಗೊಳಿಸಿದೆ. ಇದು ಕಳೆದ ವರ್ಷದ ಬಡ್ಡಿ ದರಕ್ಕೆ ಸಮನಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಪಿಎಫ್‌ ಬಡ್ಡಿ ಕಡಿತಗೊಳಿಸುತ್ತದೆ ಎಂಬ ಭೀತಿ ನಿವಾರಣೆಯಾಗಿದೆ. 

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಭವಿಷ್ಯ ನಿಧಿ ಮಂಡಳಿಯ ಸಭೆಯಲ್ಲಿ ಬಡ್ಡಿ ದರ ಈ ಹಿಂದಿನಂತೆಯೇ ಮುಂದುವರೆಸಲು ನಿರ್ಧರಿಸಲಾಗಿದೆ. ಒಂದು ವೇಳೆ ಈ ಸಭೆಯಲ್ಲಿ ಬಡ್ಡಿ ದರ ಕಡಿತಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದರೆ, ಅದು ಈ ದಶಕದಲ್ಲೇ ಅತ್ಯಂತ ಕನಿಷ್ವಾಗುತ್ತಿತ್ತು. 

ಹಾಲಿ ನೌಕರರಿಗೆ ಶೇ.8.5ರಷ್ಟು ಬಡ್ಡಿ ದರ ಸಿಗುತ್ತಿದೆ. ಇದು ಏಳು ವರ್ಷಗಳಲ್ಲೇ ಕನಿಷ್ಠ ಪ್ರಮಾಣವಾಗಿದೆ. ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ನೌಕರರು ಇಪಿಎಫ್‌ ಹಣವನ್ನು ಹಿಂಪಡೆದಿದ್ದಾರೆ. ಇದೇ ವೇಳೆ, ಭವಿಷ್ಯ ನಿಧಿ ಮಂಡಳಿಗೆ ಹರಿದು ಬರುವ ಹಣದ ಪ್ರಮಾಣವೂ ಕಡಿಮೆಯಾಗಿದೆ. ಹೀಗಾಗಿ ಭವಿಷ್ಯ ನಿಧಿ ಮಂಡಳಿ ಇಪಿಎಫ್‌ ಬಡ್ಡಿ ದರವನ್ನೇ ಕಡಿತಗೊಳಿಸುವ ಭೀತಿ ಎದುರಾಗಿತ್ತು. ಆದರೀಗ ಈ ವಿಚಾರದಲ್ಲಿ ಯಾವುದೇ ಬದಲಾವಣೆ ಮಾಡದಿರುವುದರಿಂದ ನೌಕರರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಕೆವೈಸಿ ದೃಢೀಕರಣ ಸಮಸ್ಯೆಯಿಂದಾಗಿ ಹಲವು ನೌಕರರಿಗೆ ಈವರೆಗೆ ಕಳೆದ ಸಾಲಿನ ಬಡ್ಡಿಯೇ ಸಿಕ್ಕಿಲ್ಲ ಎಂಬುವುದು ಉಲ್ಲೇಖನೀಯ. 

Missed Call ಕೊಟ್ಟು ನಿಮ್ಮ ಪಿಎಫ್‌ ಬ್ಯಾಲೆನ್ಸ್ ತಿಳಿದುಕೊಳ್ಳಿ

ಈಗ ನೀವು ಕೇವಲ ಒಂದು ಮಿಸ್ಡ್‌ ಕಾಲ್ ನಿಡಿ ನಿಮ್ಮ ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು. ಇದಕ್ಕಾಗಿ ನೀವು ನಿಮ್ಮ ಪಿಎಫ್‌ ಅಕೌಂಟ್‌ ನೋಂದಾಯಿಸಿದ ಮೊಬೈಲ್ ನಂಬರ್‌ನಿಂದ 011-22901406 ನಂಬರ್‌ಗೆ ಮಿಸ್ಟ್‌ ಕಾಳ್ ನೀಡಿ. ಇದಾದ ಬಳಿಕ ನಿಮ್ಮ ಪಿಎಫ್‌ ಮೊತ್ತದ ಮಾಹಿತಿ ನೀಡುವ ಮೆಸೇಜ್ ನಿಮಗೆ ತಲುಪುತ್ತದೆ.

click me!