ಪೆಟ್ರೋಲ್‌ ಬೆಲೆ 8.5 ರು. ಇಳಿಸಿದರೂ ಸರ್ಕಾರಕ್ಕೆ ನಷ್ಟವಿಲ್ಲ, ನಿರೀಕ್ಷೆಗೂ ಮೀರಿ ಆದಾಯ!

By Kannadaprabha NewsFirst Published Mar 4, 2021, 8:54 AM IST
Highlights

ಪೆಟ್ರೋಲ್‌ ಬೆಲೆ 8.5 ರು. ಇಳಿಸಿದರೂ ಸರ್ಕಾರಕ್ಕೆ ನಷ್ಟವಿಲ್ಲ| ಸರ್ಕಾರದ ಗುರಿ 3.2 ಲಕ್ಷ ಕೋಟಿ, ಬರುವ ಆದಾಯ 4.3 ಲಕ್ಷ ಕೋಟಿ!

ನವದೆಹಲಿ(ಮಾ.04): ಪೆಟ್ರೋಲ್‌ ಬೆಲೆ ಕೆಲ ರಾಜ್ಯಗಳಲ್ಲಿ ಪ್ರತಿ ಲೀಟರ್‌ಗೆ 100 ರು. ದಾಟಿರುವ ಬೆನ್ನಲ್ಲೇ ದೇಶಾದ್ಯಂತ ಬೆಲೆ ಇಳಿಸಬೇಕೆಂದು ಕೂಗೆದ್ದಿದೆ. ಇದರ ನಡುವೆ ಕೇಂದ್ರ ಸರ್ಕಾರ ತೈಲ ಬೆಲೆಗಳ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 8.5 ರು.ನಷ್ಟುಇಳಿಕೆ ಮಾಡಿದರೂ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಹೊರೆಯಾಗುವುದಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಈ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ತೈಲ ಬೆಲೆಗಳ ಮೇಲಿನ ತೆರಿಗೆಯಿಂದ 2021ರ ಏಪ್ರಿಲ್‌-2022ರ ಮಾಚ್‌ರ್‍ ಅವಧಿಯಲ್ಲಿ 3.2 ಲಕ್ಷ ಕೋಟಿ ರು. ಸಂಗ್ರಹಿಸುವ ಗುರಿ ಹೊಂದಿದೆ. ಈಗಿರುವ ದರದಲ್ಲಿ ಕೇಂದ್ರ ಸರ್ಕಾರಕ್ಕೆ ಅದನ್ನು ಮೀರಿ 4.35 ಲಕ್ಷ ಕೋಟಿ ರು. ಆದಾಯ ಬರಲಿದೆ. ಹೀಗಾಗಿ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ತಲಾ 8.5 ರು. ಇಳಿಕೆ ಮಾಡಿದರೂ ಬಜೆಟ್‌ನ ಗುರಿಯನ್ನು ತಲುಪಬಹುದು ಎಂದು ಐಸಿಐಸಿಐ ಸೆಕ್ಯುರಿಟೀಸ್‌ ಸಂಸ್ಥೆ ಹೇಳಿದೆ.

ಹೀಗಾಗಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಇಳಿಸಬಹುದೇ ಎಂಬ ಆಶಾಭಾವನೆ ವ್ಯಕ್ತವಾಗಿದೆ. ಪೆಟ್ರೋಲ್‌ ಮೇಲೆ ಸರ್ಕಾರ 31.8 ರು. ಹಾಗೂ ಡೀಸೆಲ್‌ ಮೇಲೆ 32.9 ರು. ಅಬಕಾರಿ ಸುಂಕ ವಿಧಿಸುತ್ತದೆ.

click me!