
ನವದೆಹಲಿ (ಮೇ 20): 2000ರೂ. ನೋಟು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಶುಕ್ರವಾರ ಪ್ರಕಟಿಸಿದೆ. ಇದಕ್ಕೂ ಮುನ್ನ 2016ರಲ್ಲಿ ಕೇಂದ್ರ ಸರ್ಕಾರ 500ರೂ. ಹಾಗೂ 1000ರೂ. ನೋಟುಗಳನ್ನು ಬ್ಯಾನ್ ಮಾಡಿತ್ತು. ಆರ್ ಬಿಐ 2000ರೂ. ಮೌಲ್ಯದ ಪಿಂಕ್ ಸುಂದರಿಯನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಪ್ರಕಟಿಸಿದ್ದರೂ ಅದರ ಲೀಗಲ್ ಟೆಂಡರ್ ಮುಂದುವರಿಯಲಿದೆ. ಹೀಗಾಗಿ ನೀವು 2,000ರೂ.ನೋಟು ಬಳಸಿ ಶಾಪಿಂಗ್ ಮಾಡಬಹುದು, ಆರ್ಥಿಕ ವಹಿವಾಟಿಗೂ ಇದನ್ನು ಬಳಕೆ ಮಾಡಬಹುದು. ಆದರೆ. ಸೆಪ್ಟೆಂಬರ್ 30ರೊಳಗೆ ಬ್ಯಾಂಕ್ ನಲ್ಲಿ ಠೇವಣಿ ಇಡಬೇಕು ಅಥವಾ ವಿನಿಮಯ ಮಾಡಿಕೊಳ್ಳಬೇಕು. ಅಕ್ಟೋಬರ್ 1 ರಿಂದ 2,000 ರೂಪಾಯಿ ನೋಟುಗಳ ಚಲಾವಣೆ ಸ್ಥಗಿತಗೊಳ್ಳಲಿದೆ. ಆದರೆ. 2,000ರೂ. ನೋಟು ವಿನಿಮಯಕ್ಕ ಒಂದು ನಿರ್ಬಂಧವಿದೆ. ಅದೇನೆಂದರೆ ಒಂದು ದಿನ ಒಬ್ಬ ವ್ಯಕ್ತಿ 2,000ರೂ. ನೋಟನ್ನು ಗರಿಷ್ಠ 20 ಸಾವಿರ ರೂ. ತನಕ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಮೇ 23ರಿಂದ ವಿನಿಮಯಕ್ಕೆ ಅವಕಾಶ ಸಿಗಲಿದೆ. ಹೀಗಿರುವಾಗ ಬ್ಯಾಂಕ್ ಖಾತೆ ಹೊಂದಿರದವರ ಬಳಿಕ 2,000ರೂ. ನೋಟುಗಳಿದ್ರೆ ಅವರು ಏನ್ ಮಾಡ್ಬೇಕು? ಎಲ್ಲಿ ನೋಟು ವಿನಿಮಯ ಮಾಡಿಕೊಳ್ಳಬೇಕು?ಬ್ಯಾಂಕ್ ನಲ್ಲಿ ಮಾತ್ರ ಇದು ಸಾಧ್ಯನಾ?ಬದಲಾವಣೆ ಮಾಡಲು ಏನಾದರೂ ಶುಲ್ಕ ವಿಧಿಸಬೇಕಾ? ಇಂಥ ಅನೇಕ ಪ್ರಶ್ನೆಗಳು ಕಾಡುವುದು ಸಹಜ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಬ್ಯಾಂಕ್ ಖಾತೆ ಇರದವರು ಏನ್ ಮಾಡ್ಬೇಕು?
ನಕಲಿ ನೋಟುಗಳ ನೀತಿ ಅಡಿಯಲ್ಲಿ ಆರ್ ಬಿಐ 2000ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹೊರಗಿಡುವ ನಿರ್ಧಾರ ಮಾಡಿದೆ. ಹೀಗಿರುವಾಗ ಬ್ಯಾಂಕ್ ಖಾತೆ ಹೊಂದಿರದವರು ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಹೇಗೆ? ಆರ್ ಬಿಐ ನೀಡಿರುವ ಮಾಹಿತಿ ಅನ್ವಯ ಸೆಪ್ಟೆಂಬರ್ 30ರ ತನಕ 2,000ರೂ. ನೋಟುಗಳು ಚಲಾವಣೆಯಲ್ಲಿ ಇರಲಿವೆ. ಹೀಗಾಗಿ ನಿಮ್ಮ ಬಳಿಯಿರುವ 2,000ರೂ. ನೋಟುಗಳನ್ನು ನೀವು ಯಾವುದೇ ಖರೀದಿ ಅಥವಾ ಇತರ ವಹಿವಾಟಿಗೆ ಬಳಸಬಹುದು. ಅದೂ ಆಗಿಲ್ಲವೆಂದ್ರೆ ನೀವು ಬ್ಯಾಂಕ್ ಖಾತೆ ಹೊಂದಿರದಿದ್ದರೂ ಯಾವುದೇ ಬ್ಯಾಂಕಿನ್ ಯಾವುದೇ ಶಾಖೆಗೆ ತೆರಳಿ 2,000 ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು. 2,000ರೂ. ಮುಖಬೆಲೆಯು 10 ನೋಟುಗಳನ್ನು ಅಂದರೆ 20 ಸಾವಿರ ರೂ. ತನಕ ವಿನಿಮಯ ಮಾಡಿಕೊಳ್ಳಬಹುದು.
1000 ರೂ. ನೋಟು ಮತ್ತೆ ಚಲಾವಣೆಗೆ ಬರುತ್ತಾ?;ಇದೇ ಕಾರಣಕ್ಕೆ 2 ಸಾವಿರ ರೂ. ನೋಟು ಹಿಂತೆಗೆದುಕೊಂಡ್ರಾ?
ಸೆಪ್ಟೆಂಬರ್ 30ರ ಬಳಿಕ ಏನಾಗುತ್ತದೆ?
ಒಂದು ವೇಳೆ ಸೆಪ್ಟೆಂಬರ್ 30ರ ಬಳಿಕ ಕೂಡ 2000ರೂ. ನೋಟು ನಿಮ್ಮ ಬಳಿಯಿದ್ದರೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ. ಆದರೆ, ಆ ನೋಟುಗಳನ್ನು ನಿಮಗೆ ಚಲಾವಣೆ ಮಾಡಲು ಸಾಧ್ಯವಾಗೋದಿಲ್ಲ ಅಷ್ಟೆ.
ಎಷ್ಟು ಶುಲ್ಕ ನೀಡಬೇಕು?
2000ರೂ. ನೋಟು ವಿನಿಮಯಕ್ಕೆ ನೀವು ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಬ್ಯಾಂಕ್ ಗಳು ಈ ಸೇವೆಯನ್ನು ಶುಲ್ಕರಹಿತವಾಗಿ ನೀಡುತ್ತವೆ.
ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ವಿಶೇಷ ಸೌಲಭ್ಯವಿದೆಯಾ?
ಹೌದು, ಇವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆರ್ ಬಿಐ ಬ್ಯಾಂಕ್ ಗಳ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.
ಕಪ್ಪು ಹಣದ ವಿರುದ್ದ ಸರ್ಜಿಕಲ್ ಸ್ಟ್ರೈಕ್, 2000 ನೋಟು ಹಿಂತೆಗೆದ ಪ್ರಶಂಸಿದ ಮೋದಿ ಮಾಜಿ ಕಾರ್ಯದರ್ಶಿ!
ಬ್ಯಾಂಕ್ 2,000 ನೋಟು ಸ್ವೀಕರಿಸಲು ನಿರಾಕರಿಸಿದರೆ?
ಒಂದು ವೇಳೆ ಬ್ಯಾಂಕ್ ನೋಟು ಸ್ವೀಕರಿಸಲು ನಿರಾಕರಿಸಿದರೆ ಬ್ಯಾಂಕ್ ವಿರುದ್ಧ ದೂರು ನೀಡಲು ಅವಕಾಶವಿದೆ. ಮೊದಲು ಬ್ಯಾಂಕ್ ಮ್ಯಾನೇಜರ್ ಗೆ ಈ ಬಗ್ಗೆ ದೂರು ನೀಡಬೇಕು. ದೂರು ನೀಡಿ 30 ದಿನಗಳೊಳಗೆ ಬ್ಯಾಂಕ್ ಸೂಕ್ತ ಉತ್ತರ ನೀಡದಿದ್ದರೆ ಆರ್ ಬಿಐ ಪೋರ್ಟಲ್ cms.rbi.org.in ನಲ್ಲಿ ದೂರು ದಾಖಲಿಸಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.