
ದೇಶದ ವಿವಿಧ ರಾಜ್ಯಗಳ ಆರ್ಥಿಕ ಆರೋಗ್ಯ, ದುಡ್ಡು ಕಾಸು ಹೇಗಿದೆ ಎಂಬ ಬಗ್ಗೆ ನೀತಿ ಆಯೋಗವು ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ವರದಿಯು ಕರ್ನಾಟಕಕ್ಕೆ ಶಾಕ್ ನೀಡಿದೆ. ದೇಶದ ಅತ್ಯುತ್ತಮ ಹಣಕಾಸು ನಿರ್ವಹಣೆಯಲ್ಲಿ ದೇಶದ ಒಟ್ಟೂ ರಾಜ್ಯಗಳ ಪೈಕಿ 18 ಪ್ರಮುಖ ರಾಜ್ಯಗಳ ಅಧ್ಯಯನ ನಡೆಸಿದ ನೀತಿ ಆಯೋಗವು ಈ ವರದಿಯನ್ನು ಬಿಡುಗಡೆ ಮಾಡಿದೆ. ಬಡ ರಾಜ್ಯಗಳು ಎಂದೇ ಗುರುತಿಸಿಕೊಂಡಿರುವ ಒಡಿಶಾ ಟಾಪ್ 1 ಸ್ಥಾನಕ್ಕೆ ಏರಿದ್ದರೆ, ಇನ್ನೂ ಅಚ್ಚರಿ ಎನ್ನುವಂತೆ, ಜಾರ್ಖಂಡ್ ಮತ್ತು ಛತ್ತೀಸ್‌ಗಢಗಳು ಕ್ರಮವಾಗಿ 2 ಮತ್ತು 4ನೇ ಸ್ಥಾನಕ್ಕೆ ಜಿಗಿದಿವೆ. ಮೂರನೆಯ ಸ್ಥಾನದಲ್ಲಿ ಗೋವಾ ಇದ್ದು, ಗುಜರಾತ್, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳು ಕ್ರಮವಾಗಿ 5,6,7ನೇ ಸ್ಥಾನ ಪಡೆದಿವೆ.
ಇನ್ನು ಕರ್ನಾಟಕದ ವಿಷಯಕ್ಕೆ ಬರುವುದಾದರೆ, 3ನೇ ಸ್ಥಾನದಲ್ಲಿದ್ದ ಕರ್ನಾಟಕ ದಿಢೀರ್ ಎಂದು 10ನೇ ಸ್ಥಾನಕ್ಕೆ ಕುಸಿದಿದೆ! ಇದು ಕರ್ನಾಟಕಕ್ಕೆ ಶಾಕ್ ನೀಡುವ ವರದಿಯಾಗಿದೆ. ಅಂದಹಾಗೆ ಈ ವರದಿಯನ್ನು 2014-2023 ಮಾರ್ಚ್ 31ರವರೆಗಿನ ಸರಾಸರಿ ಆರ್ಥಿಕತೆಯ ಪ್ರಮಾಣವನ್ನು ಪರಿಗಣಿಸಿ ತಯಾರು ಮಾಡಲಾಗಿದೆ. 2014-2015 ರಿಂದ 2020-2021ರ ಅವಧಿಯ ಸರಾಸರಿಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಇತ್ತು. 2022-23ರ ಅವಧಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ, 2014-15 ರಿಂದ 2023-24 ಮಾರ್ಚ್ 31ರವರೆಗೆ ತೆಗೆದುಕೊಳ್ಳುವುದಾದರೆ 10ನೇ ಸ್ಥಾನಕ್ಕೆ ಕುಸಿದಿದೆ. ಒಟ್ಟಾರೆ ನೋಡುವುದಾದರೆ ಈ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಗೂ ಬಿಜೆಪಿ ಸರ್ಕಾರಗಳು ಕಾರ್ಯ ನಿರ್ವಹಿಸಿದ್ದವು. ಈ ಅವಧಿಯಲ್ಲಿ ಸಿದ್ದರಾಮಯ್ಯನವರು ಅತಿ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದರೆ, ಒಂದು ವರ್ಷ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೆ, ಈ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರೂ ಸಿಎಂ ಆಗಿದ್ದರು.
ಭಾರತ ಕಂಡ ಕನಸು ನನಸಾಗೋ ಕಾಲ ಸನ್ನಿಹಿತ: ಕಾಂಗ್ರೆಸ್ 11, ಬಿಜೆಪಿ 4- ಏನಿದು ಲೆಕ್ಕಾಚಾರ?
ನೀತಿ ಆಯೋಗದ ಈ ವರದಿಯ ಬಗ್ಗೆ ಹೇಳುವುದಾದರೆ, ಹಣಕಾಸು ಆರೋಗ್ಯದ ಕುರಿತ ನೀತಿ ಆಯೋಗದ ಪಟ್ಟಿಯಲ್ಲಿ ಪಂಜಾಬ್, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕೇರಳ ಮತ್ತು ಹರಿಯಾಣಗಳು ಕೆಳ ಸ್ಥಾನದಲ್ಲಿವೆ. ರೋಗಗ್ರಸ್ಥ ರಾಜ್ಯ ಎಂದೇ ಫೇಮಸ್ ಆಗಿದ್ದ ಬಿಹಾರ, ಹಣಕಾಸಿನ ಶಿಸ್ತಿನಲ್ಲಿ ಶ್ರೀಮಂತಿಕೆ ಮೆರೆದಿದೆ. 18 ಪ್ರಮುಖ ರಾಜ್ಯಗಳ ಹಣಕಾಸು ಆರೋಗ್ಯ ಸೂಚ್ಯಂಕವನ್ನು ತಯಾರಿಸಲು ನೀತಿ ಆಯೋಗವು ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ನಿಂದ ಡೇಟಾವನ್ನು ಬಳಸಿದೆ. ಹಣಕಾಸಿನ ಆರೋಗ್ಯವು ಆರ್ಥಿಕ ಸ್ಥಿರತೆಯನ್ನು ಸೂಚಿಸುತ್ತದೆ. ಆಯಾ ರಾಜ್ಯಗಳ ಆದಾಯ, ಖರ್ಚು, ಸಾಲ ಮತ್ತು ಕೊರತೆಗಳನ್ನು ಸುಸ್ಥಿರವಾಗಿ ನಿರ್ವಹಿಸುವ ಸಾಮರ್ಥ್ಯದ ಮೂಲಕ ಈ ಪಟ್ಟಿಯನ್ನು ತಯಾರಿಸಲಾಗುತ್ತದೆ.
ನೀತಿ ಆಯೋಗವು ಒಡಿಶಾ ರಾಜ್ಯವನ್ನು ಮನಸಾರೆ ಶ್ಲಾಘಿಸಿದೆ. ಈ ವರದಿಯನ್ನು ತಯಾರಿಸಿದ ಸಂಪೂರ್ಣ ಅವಧಿಯಲ್ಲಿ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ ನೇತೃತ್ವದ ಸರ್ಕಾರ ಕಾರ್ಯ ನಿರ್ವಹಿಸಿತ್ತು. ನೀತಿ ಆಯೋಗವು ಹಿಂದುಳಿದವರ ಆರ್ಥಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪಂಜಾಬ್, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಕೇರಳ "ಗಮನಾರ್ಹ ಆರ್ಥಿಕ ಸವಾಲುಗಳನ್ನು" ಎದುರಿಸುತ್ತಿವೆ ಎಂದು ಅದು ಹೇಳುತ್ತದೆ. ಕೇರಳ ಮತ್ತು ಪಂಜಾಬ್ ಕಡಿಮೆ ಗುಣಮಟ್ಟದ ಖರ್ಚು ಮತ್ತು ಸಾಲ ಸುಸ್ಥಿರತೆಯೊಂದಿಗೆ ಹೋರಾಡುತ್ತಿದ್ದರೆ, ಪಶ್ಚಿಮ ಬಂಗಾಳ ಆದಾಯ ಕ್ರೋಢೀಕರಣ ಮತ್ತು ಸಾಲ ಸೂಚ್ಯಂಕ ಸಮಸ್ಯೆಗಳನ್ನು ಎದುರಿಸುತ್ತಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.