ಇಲ್ಲಿವರೆಗೂ Zerodha ಕಂಪನಿಗೆ ನಮ್ಮ ಹೂಡಿಕೆ ಬರೀ 10 ಲಕ್ಷ ಮಾತ್ರ ಎಂದ ನಿತಿನ್‌ ಕಾಮತ್‌!

Published : Sep 18, 2025, 03:28 PM IST
 Nithin Kamath Zerodha

ಸಾರಾಂಶ

Nithin Kamath Reveals Zerodha Initial Investment Was Only ₹10 Lakhs ಜೆರೋಧಾ ಸಹ-ಸಂಸ್ಥಾಪಕ ನಿತಿನ್ ಕಾಮತ್ ಅವರು ತಮ್ಮ ಕಂಪನಿಯ ಯಶಸ್ಸಿನ ಹಿಂದಿನ ಕಾರಣಗಳನ್ನು ಹಂಚಿಕೊಂಡಿದ್ದಾರೆ. ಗ್ರಾಹಕರಿಗೆ ಆದ್ಯತೆ ನೀಡಿ, ಸರಿಯಾದ ಸಮಯದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದೇ ಗೆಲುವಿಗೆ ಕಾರಣ ಎಂದಿದ್ದಾರೆ.

ಬೆಂಗಳೂರು (ಸೆ.18): ಆನ್‌ಲೈನ್‌ ಸ್ಟಾಕ್‌ಬ್ರೋಕಿಂಗ್‌ ವಿಚಾರ ಬಂದಾಗ ಸಾಕಷ್ಟು ಹೆಸರುಗಳು ಬಂದರೂ ಬಹಳ ವಿಶೇಷವಾಗಿ ನಿಲ್ಲೋದು Zerodha. ತನ್ನ ವಿಭಿನ್ನ ಹೆಸರಿನ ಕಾರಣಕ್ಕಾಗಿ ಮಾತ್ರವಲ್ಲದೆ ಜೀರೋಧಾ ತನ್ನ ಪಾಲಿಸಿಯ ಕಾರಣದಿಂದಾಗಿಯೂ ಜನರ ಮೆಚ್ಚಿನದಾಗಿದೆ. ಆನ್‌ಲೈನ್ ಸ್ಟಾಕ್ ಬ್ರೋಕರೇಜ್ ಪ್ಲಾಟ್‌ಫಾರ್ಮ್ ಮಾರುಕಟ್ಟೆಯಲ್ಲಿ ಭಿನ್ನವಾಗಿ ನಿಲ್ಲಲು ಸಾಧ್ಯವಾಗಿರುವ ಬಗ್ಗೆ ಜೆರೋಧಾ ಸಹ-ಸಂಸ್ಥಾಪಕ ನಿತಿನ್ ಕಾಮತ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತದ ಷೇರು ಮಾರುಕಟ್ಟೆ ಮತ್ತು ರಿಟೇಲ್‌ ಟ್ರೇಡಿಂಗ್‌ ಬೆಳವಣಿಗೆಯನ್ನು ಅನುಭವಿಸುತ್ತಿರುವ ಸಮಯದಲ್ಲಿ ಜೆರೋಧಾದ ಯಶಸ್ಸು ಸಂಭವಿಸಿದೆ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತಿನ್‌ ಕಾಮತ್‌

"ಸರಿಯಾದ ಉತ್ಪನ್ನಗಳೊಂದಿಗೆ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿರುವುದು ನಿರ್ಣಾಯಕವಾಗಿತ್ತು" ಎಂದು ಅವರು X ನಲ್ಲಿ ಬರೆದುಕೊಂಡಿದ್ದಾರೆ. ರೆಡ್ಡಿಟ್‌ನಲ್ಲಿ ಈ ಬಗ್ಗೆ ಒಬ್ಬರು ಪ್ರಶ್ನೆ ಕೂಡ ಮಾಡಿದ್ದಾರೆ. ಜೀರೋಧಾ ಇತರ ಎಲ್ಲಾ ಬ್ರೋಕರ್‌ಗಳಿಗಿಂತ ಹೇಗೆ ಭಿನ್ನ, ಅದು ಹೇಗೆ ಲಾಭದಾಯಕವಾಗಿದೆ ಮತ್ತು ಇಲ್ಲಿಯವರೆಗೂ ಕಂಪನಿ ಯಾಕೆ ಐಪಿಓಗೆ ಬಂದಿಲ್ಲ ಎಂದು ನಿತಿನ್‌ ಕಾಮತ್‌ಗೆ ಪ್ರಶ್ನೆ ಮಾಡಿದ್ದಾರೆ.

ಇದಕ್ಕೆ ಉತ್ತರ ನೀಡಿರುವ ಕಾಮತ್‌, ಹಣಕಾಸು ಮಾರುಕಟ್ಟೆಯಲ್ಲಿ ತಮಗೆ 25 ವರ್ಷಗಳ ಅನುಭವ ಇದೆ ಎಂದು ಹೇಳಿದ್ದಾರೆ. ಜೀರೋಧಾವನ್ನು ಸ್ಥಾಪನೆ ಮಾಡುವ ಒಂದು ದಶಕಕ್ಕೂ ಮುಂಚೆಯೇ ನನಗೆ ಮಾರುಕಟ್ಟೆಯ ಅನುಭವವಿತ್ತು ಎಂದಿದ್ದಾರೆ. "ವ್ಯವಹಾರದಲ್ಲಿನ ವಿಷಯಗಳು ಕಾಲಾನಂತರದಲ್ಲಿ ಸಂಯೋಜನೆಗೊಳ್ಳುತ್ತವೆ, ವಿಶೇಷವಾಗಿ ನೀವು ಮಾಡುತ್ತಿರುವ ಕೆಲಸವನ್ನು ನೀವು ಇಷ್ಟಪಟ್ಟರೆ ಅಥವಾ ಪ್ರೀತಿಸುತ್ತಿದ್ದರೆ ಮತ್ತು ನೀವು ಸರಿಯಾದ ಸ್ಥಳ ಮತ್ತು ಸಮಯದಲ್ಲಿರಲು ಅದೃಷ್ಟವಂತರಾಗಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ' ಎಂದು ಅವರು ಬರೆದಿದ್ದಾರೆ.

ಪಾಲುದಾರಿಕೆ ಸಂಸ್ಥೆಯಾಗಿ ಮೊದಲು ಜೀರೋಧಾ ಆರಂಭವಾಗಿತ್ತು. ಏಕೆಂದರೆ ಆಗ ವಿನಿಮಯ ಠೇವಣಿಯ ಅವಶ್ಯಕತೆ ಗಮನಾರ್ಹವಾಗಿ ಕಡಿಮೆ ಇತ್ತು. ಒಂದೂವರೆ ಕೋಟಿಗೆ ಹೋಲಿಸಿದರೆ 90 ಲಕ್ಷ ಆಗಿತ್ತು. ಜೆರೋಧಾ ಪ್ರಾರಂಭವಾದಾಗ, ಕಂಪನಿಯು NSE ಎಂಬ ಟ್ರೇಡಿಂಗ್‌ ಸಾಫ್ಟ್‌ವೇರ್ ಅನ್ನು ಬಳಸಿತು, ಇದು NSE ಬ್ರೋಕರ್‌ಗಳಿಗೆ ಉಚಿತವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಜೀರೋಧಾಗೆ ಖರ್ಚು ಮಾಡಿದ್ದು ಬರೀ 10 ಲಕ್ಷ ರೂಪಾಯಿ

"ಇನ್ನು ಬ್ಯಾಕ್‌ ಆಫೀಸ್‌ನಲ್ಲಿ, ಕಾಂಟ್ರಾಕ್ಟ್ ನೋಟ್‌ಗಳನ್ನು ಕಳುಹಿಸುವುದು, ಲೆಡ್ಜರ್‌ಗಳನ್ನು ನಿರ್ವಹಿಸುವುದು ಇತ್ಯಾದಿಗಳಿಗಾಗಿ, ನಾವು ಬಹುತೇಕ ಶೂನ್ಯ ವೆಚ್ಚದಲ್ಲಿ ಅದನ್ನು ನೀಡಿದ ಮಾರಾಟಗಾರರೊಂದಿಗೆ ಸಹಿ ಹಾಕಿದ್ದೇವೆ. ನಾವು ಅವರ ಪ್ಲಾಟ್‌ಫಾರ್ಮ್ ಅನ್ನು ಪರೀಕ್ಷಿಸಲು ಇದನ್ನು ಒದಗಿಸಲಾಗಿದೆ" ಎಂದು ಅವರು ಬರೆದಿದ್ದಾರೆ.

ಜೆರೋಧಾಗೆ 10 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಕಾಮತ್ ಹೇಳಿದ್ದಾರೆ, ಇದರಲ್ಲಿ ವೆಬ್‌ಸೈಟ್ ನಿರ್ಮಿಸಲು 2.5 ಲಕ್ಷ ರೂಪಾಯಿ, ಕಚೇರಿ ಒಳಾಂಗಣಕ್ಕೆ 5 ಲಕ್ಷ ರೂಪಾಯಿ ಮತ್ತು ಇತರ ವೆಚ್ಚಗಳಿಗಾಗಿ 2.5 ಲಕ್ಷ ರೂಪಾಯಿಗಳು ಸೇರಿವೆ. "ನಾವು ತುಂಬಾ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದಿದ್ದೇವೆ ಮತ್ತು ಶ್ರೀಮಂತರು ಅಂತಾ ಯಾರೂ ಇದ್ದಿರಲಿಲ್ಲ. ಅಪ್ಪ ಬ್ಯಾಂಕ್ ಮ್ಯಾನೇಜರ್ ಆಗಿದ್ದರು, ಮತ್ತು ಅಮ್ಮ ನಮಗೆ ವೀಣೆಯನ್ನು ಕಲಿಸಿದ್ದರು" ಎಂದು ಅವರು ಹೇಳಿದ್ದಾರೆ.

ಎನ್ವಿಡಿಯಾ ಸಂಸ್ಥಾಪಕ ಜೆನ್ಸನ್ ಹುವಾಂಗ್ ಅವರ ಉದಾಹರಣೆಯನ್ನು ಉಲ್ಲೇಖಿಸಿದ ಕಾಮತ್, ತಮ್ಮ ಕಂಪನಿಯನ್ನು ನಿರ್ಮಿಸಲು 30 ವರ್ಷಗಳನ್ನು ಕಳೆದ ನಂತರ ಒಂದು ಮಹತ್ವದ ಕ್ಷಣವನ್ನು ತಲುಪಿದರು ಎಂದು ಹೇಳಿದರು. ಸರಿಯಾದ ಅವಕಾಶ ಮತ್ತು ಸಮಯ ಸಿಗುವವರೆಗೂ ಅವರು 30 ವರ್ಷಗಳ ಕಾಲ ವ್ಯವಹಾರದಲ್ಲಿದ್ದರು ಎಂದಿದ್ದಾರೆ. 'ಬಹಳ ಸಮಯದವರೆಗೆ, ಅಂದರೆ ತೀರಾ ಇತ್ತೀಚಿನವರೆಗೂ ಜನರು ನಾವು ಏನು ಮಾಡುತ್ತಿದ್ದೇವೆ ಅನ್ನೋದನ್ನೇ ಪ್ರಶ್ನೆ ಮಾಡಿದ್ದರು' ಎಂದಿದ್ದಾರೆ.

ಜೆರೋಧಾ ಹೊರಗಿನಿಂದ ಹಣ ಪಡೆದಿಲ್ಲವಾದ್ದರಿಂದ, ಹೂಡಿಕೆದಾರರಿಗೆ ತ್ವರಿತ ಲಾಭವನ್ನು ನೀಡುವ ಒತ್ತಡವಿಲ್ಲ ಎಂದು ಕಾಮತ್ ಬಹಿರಂಗಪಡಿಸಿದ್ದಾರೆ. ಇದು ಕೆಲವೊಮ್ಮೆ ಅಲ್ಪಾವಧಿಯ ಲಾಭವನ್ನು ಕಡಿಮೆ ಮಾಡಿದರೂ ಸಹ, ಗ್ರಾಹಕರಿಗೆ ಉತ್ತಮವಾದದ್ದನ್ನು ಆದ್ಯತೆ ನೀಡಲು ಜೆರೋಧಾಗೆ ಅನುವು ಮಾಡಿಕೊಡುತ್ತದೆ.

"ಉದಾಹರಣೆಗೆ, ನಮ್ಮ ನೋ ಸ್ಪ್ಯಾಮ್ ಅಥವಾ ನೋ ಟ್ರ್ಯಾಕಿಂಗ್ ನೀತಿ. ನಾವು ಜೆರೋಧಾವನ್ನು ನಡೆಸುವ ಫಿಲಾಸಫಿ ವ್ಯವಹಾರವಾಗಿ ನಮ್ಮ ನಿಜವಾದ ಗೆಲುವು ಆಗಿರುತ್ತದೆ ಎಂದು ನಾನು ನಂಬುತ್ತೇನೆ. ಲಿಸ್ಟೆಡ್‌ ಕಂಪನಿ ಆದಲ್ಲಿ ಅದಕ್ಕೆ ಅಂಟಿಕೊಳ್ಳುವುದು ತುಂಬಾ ಕಷ್ಟ," ಎಂದು ಅವರು ಹೇಳಿದರು.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?