ಇನ್ಮುಂದೆ ಮೊಬೈಲ್‌ ನಂಬರ್‌ ರೀತಿ ಫಾಸ್ಟ್‌ಟ್ಯಾಗ್‌ ಕೂಡ ಪೋರ್ಟ್‌ ಮಾಡಬಹುದು, OneTag ಅನಾವರಣ ಮಾಡಿದ NHAI

Published : Sep 18, 2026, 08:59 PM IST
nhai launches onetag

ಸಾರಾಂಶ

NHAI ವಾಹನ ಸವಾರರಿಗಾಗಿ 'ರಾಜಮಾರ್ಗಯಾತ್ರಾ' ಆ್ಯಪ್‌ನಲ್ಲಿ 'ಒನ್‌ಟ್ಯಾಗ್' ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಇದರ ಮೂಲಕ ಗ್ರಾಹಕರು ತಮ್ಮ ವಾಹನದ ಮೇಲಿರುವ ಹಳೆಯ ಫಾಸ್ಟ್ಯಾಗ್ ಸ್ಟಿಕ್ಕರ್ ಬದಲಾಯಿಸದೆಯೇ, ಅದನ್ನು ವಿತರಿಸಿದ ಬ್ಯಾಂಕ್ ಅನ್ನು ಸುಲಭವಾಗಿ ಬದಲಾಯಿಸಬಹುದು.

ನವದೆಹಲಿ (ಸೆ.18): ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ದೇಶದ ಕೋಟ್ಯಂತರ ವಾಹನ ಸವಾರರಿಗೆ ಭಾರಿ ಅನುಕೂಲವಾಗುವಂತಹ ನೂತನ ಸೇವೆ ಅನಾವರಣ ಮಾಡಿದೆ. ವಾಹನದ ವಿಂಡ್‌ಶೀಲ್ಡ್ ಮೇಲೆ ಅಂಟಿಸಲಾದ ಫಾಸ್ಟ್ಯಾಗ್ (Physical FASTag) ಅನ್ನು ಬದಲಾಯಿಸದೆಯೇ, ಅದನ್ನು ವಿತರಿಸಿದ ಬ್ಯಾಂಕ್ ಅನ್ನು ಮಾತ್ರ ಬದಲಾಯಿಸಲು (Porting) ಅವಕಾಶ ನೀಡುವ 'ಒನ್‌ಟ್ಯಾಗ್' (OneTag) ಎಂಬ ಪೋರ್ಟೆಬಿಲಿಟಿ ಸೇವೆಯನ್ನು ತನ್ನ ಅಧಿಕೃತ 'ರಾಜಮಾರ್ಗಯಾತ್ರಾ' (Rajmargyatra) ಆ್ಯಪ್‌ನಲ್ಲಿ ಗುರುವಾರ ಪ್ರಾರಂಭಿಸಿದೆ. ದೇಶಾದ್ಯಂತ ಇರುವ 130 ಮಿಲಿಯನ್ (13 ಕೋಟಿಗೂ ಹೆಚ್ಚು) ಫಾಸ್ಟ್ಯಾಗ್ ಬಳಕೆದಾರರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವ ಹಾಗೂ ಫಾಸ್ಟ್ಯಾಗ್ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸುವ ಉದ್ದೇಶದಿಂದ ಈ ತಂತ್ರಜ್ಞಾನವನ್ನು ಜಾರಿಗೆ ತರಲಾಗಿದೆ ಎಂದು ಎನ್‌ಎಚ್‌ಎಐ ತಿಳಿಸಿದೆ.

'ಒನ್‌ಟ್ಯಾಗ್' ಮೂಲಕ ಬ್ಯಾಂಕ್ ಪೋರ್ಟ್ ಮಾಡುವುದು ಹೇಗೆ?

ಈ ನೂತನ ಸೌಲಭ್ಯದಡಿ ಫಾಸ್ಟ್ಯಾಗ್ ಬ್ಯಾಂಕ್ ಬದಲಾಯಿಸುವ ಸಂಪೂರ್ಣ ಪ್ರಕ್ರಿಯೆಯು ಅತ್ಯಂತ ಸರಳವಾಗಿದ್ದು, ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:

ಆ್ಯಪ್‌ಗೆ ಲಾಗಿನ್: ಫಾಸ್ಟ್ಯಾಗ್ ಹೊಂದಿರುವ ಗ್ರಾಹಕರು ಮೊದಲು 'ರಾಜಮಾರ್ಗ ಯಾತ್ರಾ' ಆ್ಯಪ್‌ಗೆ ಲಾಗಿನ್ ಆಗಿ, ತಮ್ಮ ವಾಹನ ನೋಂದಣಿ ಸಂಖ್ಯೆಯನ್ನು (Vehicle Registration Number) ನಮೂದಿಸಿ ಪೋರ್ಟಿಂಗ್ ಅರ್ಹತೆಯನ್ನು ಪರಿಶೀಲಿಸಬೇಕು.

ಆರ್‌ಒಟಿಪಿ ಮತ್ತು ಆಯ್ಕೆ: ಪ್ರಸ್ತುತ ಫಾಸ್ಟ್ಯಾಗ್ ನೀಡಿದ ಬ್ಯಾಂಕ್‌ನಿಂದ 6 ಆಂಕಿಗಳ 'ಮೊಬೈಲ್ ಪರಿಶೀಲನಾ ಕೋಡ್' (MVC) ಬಂದ ನಂತರ, ಗ್ರಾಹಕರು ತಮಗೆ ಬೇಕಾದ ಹೊಸ ಬ್ಯಾಂಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಕೆವೈಸಿ ಪೂರ್ಣಗೊಳಿಸುವಿಕೆ: ತದನಂತರ ಹೊಸ ಬ್ಯಾಂಕ್‌ನಲ್ಲಿ ಕೆವೈಸಿ (KYC) ಹಾಗೂ ವಾಲೆಟ್ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಪೋರ್ಟಿಂಗ್ ಮುಕ್ತಾಯಗೊಳಿಸಬಹುದು.

ಈ ಪ್ರಕ್ರಿಯೆಯಲ್ಲಿ ವಾಹನಕ್ಕೆ ಲಿಂಕ್ ಆಗಿರುವ ಫಾಸ್ಟ್ಯಾಗ್ ಐಡಿ (FASTag ID) ಯಾವುದೇ ಬದಲಾವಣೆಯಿಲ್ಲದೆ ಹಾಗೆಯೇ ಇರುತ್ತದೆ. ಹೀಗಾಗಿ, ವಾಹನದ ಗ್ಲಾಸ್ ಅಥವಾ ವಿಂಡ್‌ಶೀಲ್ಡ್‌ಗೆ ಅಂಟಿಸಿರುವ ಹಳೆಯ ಫಾಸ್ಟ್ಯಾಗ್ ಸ್ಟಿಕ್ಕರ್ ಅನ್ನು ತೆಗೆದು ಹೊಸದನ್ನು ಅಂಟಿಸುವ ಅಗತ್ಯವಿರುವುದಿಲ್ಲ.

ಹಳೆಯ ವಾಲೆಟ್ ಹಣ ರೀಫಂಡ್ ಹಾಗೂ 6 ತಿಂಗಳ ನಿಯಮ

ಪೋರ್ಟಿಂಗ್ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ತಕ್ಷಣ, ಹಳೆಯ ಫಾಸ್ಟ್ಯಾಗ್ ವಿತರಿಸಿದ್ದ ಬ್ಯಾಂಕ್ ತನ್ನ ವಾಲೆಟ್ ಅನ್ನು ಮುಚ್ಚುತ್ತದೆ. ಜೊತೆಗೆ, ಅನ್ವಯವಾಗುವ ಶುಲ್ಕಗಳು ಅಥವಾ ಹೊಂದಾಣಿಕೆಗಳ ನಂತರ ವಾಲೆಟ್‌ನಲ್ಲಿ ಉಳಿದಿರುವ ಬಾಕಿ ಹಣವನ್ನು (Balance Refund) ಗ್ರಾಹಕರ ಖಾತೆಗೆ ಹಿಂತಿರುಗಿಸಲಾಗುತ್ತದೆ. ಆದರೆ, ಒಮ್ಮೆ ಪೋರ್ಟ್ ಮಾಡಿದ ಫಾಸ್ಟ್ಯಾಗ್ ಅನ್ನು ತಕ್ಷಣವೇ ಮತ್ತೊಮ್ಮೆ ಪೋರ್ಟ್ ಮಾಡಲು ಸಾಧ್ಯವಿಲ್ಲ. ಪೋರ್ಟೆಬಿಲಿಟಿ ನಿಯಮದಂತೆ, 6 ತಿಂಗಳ ಕಡ್ಡಾಯ 'ಕೂಲಿಂಗ್ ಪೀರಿಯಡ್' (Cooling Period) ಪೂರ್ಣಗೊಂಡ ನಂತರವಷ್ಟೇ ಗ್ರಾಹಕರು ಮತ್ತೊಮ್ಮೆ ಬೇರೆ ಬ್ಯಾಂಕ್‌ಗೆ ಪೋರ್ಟ್ ಮಾಡಲು ಅರ್ಹರಾಗುತ್ತಾರೆ.

ಆಡಳಿತಾತ್ಮಕ ವೆಚ್ಚ ಕಡಿತ ಮತ್ತು ಹೆಚ್ಚುವರಿ ಅನುಕೂಲಗಳು

ಪ್ರತಿ ಬಾರಿ ಬ್ಯಾಂಕ್ ಬದಲಾಯಿಸುವಾಗ ಹೊಸ ಫಾಸ್ಟ್ಯಾಗ್ ಉತ್ಪಾದನೆ, ಅದನ್ನು ಗ್ರಾಹಕರಿಗೆ ರವಾನಿಸುವುದು ಹಾಗೂ ಮರು-ವಿತರಣೆ ಮಾಡುವ ಭಾರಿ ವೆಚ್ಚವನ್ನು ತಪ್ಪಿಸಲು 'ಒನ್‌ಟ್ಯಾಗ್' ನೆರವಾಗಲಿದೆ ಎಂದು ಎನ್‌ಎಚ್‌ಎಐ ಹೇಳಿದೆ. ಇದು ಬ್ಯಾಂಕ್ ಬದಲಾಯಿಸುವ ಗ್ರಾಹಕರ ಪ್ರಯಾಸವನ್ನು ತಪ್ಪಿಸಿ, ಸೇವಾದಾರ ಬ್ಯಾಂಕ್‌ಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಗ್ರಾಹಕರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡುತ್ತದೆ. ಇದರ ಜೊತೆಗೆ, ಎನ್‌ಎಚ್‌ಎಐ ನ 'ರಾಜಮಾರ್ಗಯಾತ್ರಾ' ಆ್ಯಪ್‌ನಲ್ಲಿ ಫಾಸ್ಟ್ಯಾಗ್ ವಾರ್ಷಿಕ ಪಾಸ್ (Annual Pass), ಸ್ಥಳೀಯ ಪಾಸ್ (Local Pass) ಖರೀದಿಸಲು ಹಾಗೂ ತುರ್ತು ಸಹಾಯವಾಣಿ 1033 ಅನ್ನು ನೇರವಾಗಿ ಸಂಪರ್ಕಿಸಲು ಅವಕಾಶ ಕಲ್ಪಿಸಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

DMart Offers: ಡಿ-ಮಾರ್ಟ್‌ನಲ್ಲಿ ಅತಿ ಕಡಿಮೆ ದರಕ್ಕೆ ಸಿಗುವ 10 ಬೆಸ್ಟ್ ವಸ್ತುಗಳಿವು!
ನಂದಿನಿ ಹಾಲಿನ ದಿಢೀರ್ ₹10 ಏರಿಕೆಗೆ ಆಗ್ರಹ! ಸರ್ಕಾರಕ್ಕೆ 3 ದಿನ ಗಡುವು ಕೊಟ್ಟ ಬಮುಲ್ ನಿರ್ದೇಶಕರು!