Business 2021: ಹೊಸ ದಾಖಲೆ ಬರೆದ IPOs; 1.18ಲಕ್ಷ ಕೋಟಿ ರೂ. ಬಂಡವಾಳ ಸಂಗ್ರಹಿಸಿದ ಕಂಪೆನಿಗಳು

By Suvarna NewsFirst Published Dec 27, 2021, 6:23 PM IST
Highlights

*ಈ ವರ್ಷ ಐಪಿಒನಲ್ಲಿ ಟೆಕ್ ನವೋದ್ಯಮಗಳದ್ದೇ ಪಾರುಪತ್ಯ
*ಪೇಟಿಎಂ ಐಪಿಒ ಭಾರತದ ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆಗೆ ಪಾತ್ರ
*ಈ ವರ್ಷ ಭಾರತದಲ್ಲಿ ಕಂಪೆನಿಗಳು ಒಟ್ಟು ಶೇ.63ರಷ್ಟು ಬಂಡವಾಳವನ್ನು ಐಪಿಒ ಮೂಲಕ ಸಂಗ್ರಹಿಸಿವೆ.
 

Business Desk: ಈ ವರ್ಷ ಕೊರೋನಾ ಎರಡನೇ ಅಲೆ ಅಪ್ಪಳಿಸಿದ ಬಳಿಕ ಭಾರತದ ಆರ್ಥಿಕತೆ ಸಾಕಷ್ಟು ಹೊಡೆತಗಳನ್ನು ತಿಂದಿತು.  ಷೇರು ಮಾರುಕಟ್ಟೆ ಕೂಡ ಸಾಕಷ್ಟು ಹಿಂಜರಿತ ಅನುಭವಿಸಿತು. ಆದ್ರೆ ಇದ್ಯಾವುದೋ ಐಪಿಒ(IPO) ಮೇಲೆ ಪ್ರಭಾವ ಬೀರಲಿಲ್ಲ. 2021ನೇ ಸಾಲಿನಲ್ಲಿ ಭಾರತ ದಾಖಲೆ ಪ್ರಮಾಣದ ಐಪಿಒಗಳಿಗೆ ಸಾಕ್ಷಿಯಾಗಿದೆ. ಐಪಿಒ ಈ ವರ್ಷದಷ್ಟು ಹಿಂದೆಂದೂ ಸದ್ದು ಮಾಡಿರಲಿಲ್ಲ. ಈ ಕಾರಣಕ್ಕೆ 2021ನೇ ಹಣಕಾಸು ವರ್ಷವನ್ನು 'ಐಪಿಒ ವರ್ಷ' ಎಂದೇ ಕರೆಯಬಹುದು.  ಈ ವರ್ಷ ಪೇಟಿಎಂ( Paytm), ಜೊಮ್ಯಾಟೋ(Zomato), ನೈಕ್(Nykaa), ಪಾಲಿಸಿ ಬಜಾರ್(Policybazaar) ಮುಂತಾದ ಹೊಸ ಯುಗದ ಕಂಪನಿಗಳು ಐಪಿಒ ಗೆ ಹೊಸ ರಂಗು ತುಂಬಿದವು.  ಕಳೆದ ಐದು ವರ್ಷಗಳಿಗೆ ಹೋಲಿಸಿದ್ರೆ 2021ರಲ್ಲಿ ಐಪಿಒ ಮೂಲಕ ದಾಖಲೆ ಮೊತ್ತದ ಬಂಡವಾಳ ಸಂಗ್ರಹಿಸಲಾಗಿದೆ. ಒಟ್ಟು 63 ಕಂಪನಿಗಳು ಈ ವರ್ಷ ಐಪಿಒ ಮೂಲಕ ಷೇರುಗಳನ್ನು ಮಾರಾಟ ಮಾಡಿವೆ. ಈ ವರ್ಷ ಭಾರತದಲ್ಲಿ ಕಂಪನಿಗಳು ಒಟ್ಟು ಶೇ.63ರಷ್ಟು  ಬಂಡವಾಳವನ್ನು ಐಪಿಒ ಮೂಲಕ ಸಂಗ್ರಹಿಸಿವೆ. 

1.18ಲಕ್ಷ ಕೋಟಿ ರೂ. ಸಂಗ್ರಹ
ಈ ವರ್ಷ ಐಪಿಒ ಮೂಲಕ ಒಟ್ಟು1,18,704 ಕೋಟಿ ರೂ. ಬಂಡವಾಳ ಸಂಗ್ರಹವಾಗಿದೆ. ಇದು 2021ರ ಭಾರತದ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟಿರೋ ಬಜೆಟ್ಗಿಂತ ಮೂರು ಪಟ್ಟು ಹೆಚ್ಚಿದೆ. ಕೆಲವು ಕಂಪನಿಗಳು ಮೊದಲ ಬಾರಿಗೆ ಅಂದ್ರೆ ಐಪಿಒ ಮೂಲಕ ಫ್ರೆಶ್ ಷೇರು ಮಾರಾಟ ಮಾಡಿ ಗಳಿಸಿದ ಒಟ್ಟು ಮೊತ್ತ 43,000 ಕೋಟಿ ರೂ. ಇನ್ನು ಈಗಾಗಲೇ ಮಾರುಕಟ್ಟೆಯಲ್ಲಿರೋ ಷೇರುದಾರರ ಬಳಿಯಿರೋ ಷೇರುಗಳ ಮಾರಾಟದಿಂದ 75,000ಕೋಟಿ ರೂ. ಸಂಗ್ರಹವಾಗಿದೆ. 

Paytm ಐಪಿಒಗೆ ಮೊದಲ ದಿನವೇ ಭರ್ಜರಿ ಶಾಕ್‌

ದಾಖಲೆ ಸಂಗ್ರಹ
2021ರಲ್ಲಿ ಐಪಿಒ ಮೂಲಕ ಕಂಪನಿಗಳು ಸಂಗ್ರಹಿಸಿದ ಮೊತ್ತ ಇಷ್ಟು ವರ್ಷಗಳಲ್ಲೇ ಅತ್ಯಧಿಕವಾಗಿದೆ. ಈ ವರ್ಷಕ್ಕೂ ಮುನ್ನ 2017ರಲ್ಲಿ ಸಂಗ್ರಹವಾದ  68,827 ಕೋಟಿ ರೂ. ಐಪಿಒನ ಅತ್ಯಧಿಕ ದಾಖಲೆಯಾಗಿತ್ತು.  2021ರಲ್ಲಿ ಪ್ರಾಥಮಿಕ ಮಾರುಕಟ್ಟೆಯಲ್ಲಿಸಂಗ್ರಹವಾದ ಹಣ ಕಳೆದ ಮೂರು ವರ್ಷಗಳಿಗೆ ಹೋಲಿಸಿದ್ರೆ ಶೇ. 62ರಷ್ಟು ಹೆಚ್ಚು. ಕಳೆದ ಮೂರು ವರ್ಷಗಳಲ್ಲಿ ಐಪಿಒ ಮೂಲಕ 73,003ಕೋಟಿ ರೂ. ಸಂಗ್ರಹವಾಗಿತ್ತು. ಇನ್ನು 2020ರಲ್ಲಿ ಕೊರೋನಾ ಮೊದಲೆ ಅಲೆ ಹುಟ್ಟಿಸಿದ ಭಯದ ಕಾರಣಕ್ಕೆ ಐಪಿಒಗಳ ಸಂಖ್ಯೆ ಹಾಗೂ ಸಂಗ್ರಹವಾದ ಹಣ ಕಡಿಮೆ.  2020ರಲ್ಲಿ ಐಪಿಒ ಮೂಲಕ ಸಂಗ್ರಹವಾದ ಒಟ್ಟು ಬಂಡವಾಳ 26,613ಕೋಟಿ ರೂ. 

ಹೊಸ ಯುಗದ ಟೆಕ್ ಉದ್ಯಮಗಳದ್ದೇ ಪಾರುಪತ್ಯ
2021ನೇ ಸಾಲನ್ನು ಹೊಸ ಯುಗದ ಟೆಕ್ ಉದ್ಯಮಗಳ ಐಪಿಒ ಯುಗ ಎಂದೇ ಕರೆಯಬಹುದು. 18,300  ಕೋಟಿ ರೂ. ಸಂಗ್ರಹ ಉದ್ದೇಶದೊಂದಿಗೆ ನವೆಂಬರ್ ನಲ್ಲಿ ನಡೆದ ಪೇಟಿಎಂ ಐಪಿಒ ಭಾರತದ ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆದ್ರೆ ಲಿಸ್ಟ್ ಆದ ಮೊದಲ ದಿನವೇ ಭಾರೀ ಏಟು ಬಿದ್ದಿತ್ತು. 18300 ಕೋಟಿ ರೂ. ಸಂಗ್ರಹ ಉದ್ದೇಶದೊಂದಿಗೆ ಪೇಟಿಎಂ ಸಂಸ್ಥೆ ತಲಾ 2150 ರು. ಮುಖ ಬೆಲೆಯ ಷೇರುಗಳನ್ನು ಬಿಡುಗಡೆ ಮಾಡಿತ್ತು. ಈ ಷೇರುಗಳು ಬಾಂಬೆ ಷೇರು ಪೇಟೆಯಲ್ಲಿ ನಿರೀಕ್ಷೆಗಿಂತ ಭಾರೀ ಕಡಿಮೆ ಪ್ರಮಾಣದಲ್ಲಿ ಅಂದರೆ 1955 ರೂ.ಗೆ ಲಿಸ್ಟ್‌ (List) ಆಗಿವೆ. ಹೀಗಾಗಿ  ಒಟ್ಟಾರೆ ಶೇ.27ರಷ್ಟು ಕುಸಿತದೊಂದಿಗೆ 1564 ರೂ.ನಲ್ಲಿ ಮುಕ್ತಾಯವಾಗಿದೆ. ಇನ್ನು ಈ ವರ್ಷದ ಎರಡನೇ ಅತಿದೊಡ್ಡ ಐಪಿಒ ಆನ್ ಲೈನ್ ಆಹಾರ ಪೂರೈಕೆದಾರ ಸಂಸ್ಥೆಯಾದ ಜೊಮ್ಯಾಟೋದ್ದಾಗಿದೆ. ಈ ಸಂಸ್ಥೆ ಐಪಿಒ ಮೂಲಕ 9,375 ಕೋಟಿ ರೂ. ಬಂಡವಾಳ ಸಂಗ್ರಹಿಸಿದೆ. 

LIC IPO: ಊಹಪೋಹಗಳಿಗೆ ತೆರೆ, ಈ ಆರ್ಥಿಕ ವರ್ಷದ ಅಂತ್ಯದೊಳಗೆ ಎಲ್ಐಸಿ ಐಪಿಒ ಪಕ್ಕಾ!

2021ರ ಮೊದಲ ಐಪಿಒ ಭಾರತೀಯ ರೈಲ್ವೆಯ ಉಪಸಂಸ್ಥೆಯಾದ ಭಾರತೀಯ ರೈಲ್ವೆ ಹಣಕಾಸು ನಿಗಮ ಲಿ.  (IRFC)ಆಗಿದೆ. ಸರ್ಕಾರಿ ಸ್ವಾಮ್ಯದ ಈ ಕಂಪನಿ ಐಪಿಒ ಮೂಲಕ ಪ್ರಾಥಮಿಕ ಮಾರುಕಟ್ಟೆಯಲ್ಲಿ 4,633ಕೋಟಿ ರೂ. ಸಂಗ್ರಹಿಸಿತ್ತು. 

click me!