
ಹೊಸ ಆದಾಯ ತೆರಿಗೆ ವಿಧೇಯಕ–2025 ಅನ್ನು ಪರಿಶೀಲನೆ ಮಾಡಿರುವ ಸಂಸದೀಯ ಆಯ್ಕೆ ಸಮಿತಿಯು, ಭವಿಷ್ಯದ ತೆರಿಗೆ ವ್ಯವಸ್ಥೆ ಹೆಚ್ಚು ಜನಪರ, ಸ್ಪಷ್ಟ ಹಾಗೂ ಪರಿಣಾಮಕಾರಿಯಾಗಲು ಹಲವು ಪ್ರಮುಖ ಶಿಫಾರಸುಗಳ ಸಲಹೆ ನೀಡಿದೆ. ವೈಯಕ್ತಿಕ ತೆರಿಗೆದಾರರು ನಿಗದಿತ ಅವಧಿ ಮೀರಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿದರೂ ದಂಡವಿಲ್ಲದೆ ಟಿಡಿಎಸ್ ಮರುಪಾವತಿ ಪಡೆಯಲು ಅವಕಾಶ ನೀಡಬೇಕು ಎಂಬುದು ಪ್ರಮುಖ ಶಿಫಾರಸಾಗಿದೆ.
ಧಾರ್ಮಿಕ ಹಾಗೂ ಲಾಭರಹಿತ ಸಂಸ್ಥೆಗಳ (ಎನ್‌ಜಿಒ) ವಿರುದ್ಧ ಅನಾಮಧೇಯ ದೇಣಿಗೆಗಳ ತೆರಿಗೆ ಸಂಬಂಧಿತ ಅಸ್ಪಷ್ಟತೆಯನ್ನು ತೆಗೆದುಹಾಕಬೇಕು ಎಂದು ಸಮಿತಿ ತೀವ್ರವಾಗಿ ಒತ್ತಿ ಹೇಳಿದೆ. “ಅನಾಮಧೇಯ ದೇಣಿಗೆಗಳು” ಪೂರ್ತಿಯಾಗಿ ತೆರಿಗೆಯೋಗ್ಯ ಎಂಬ ಬಗೆಯ ನಿರ್ಧಾರಗಳು ಎನ್‌ಜಿಒಗಳ ಮೇಲೆ ಪರಿಣಾಮ ಬೀರುತ್ತವೆ. ಸಮಿತಿಯ ಪ್ರಕಾರ, ಈ ಸಂಸ್ಥೆಗಳ ಮೇಲೆ 'ರಸೀದಿ ಆಧಾರಿತ ತೆರಿಗೆ' ವಿಧಿಸುವುದು ಬೇಡ. ಏಕೆಂದರೆ ಇದು "ನೇಟ್ ಇಂಕಮ್" ತತ್ವದ ವಿರುದ್ಧವಾಗಿರುತ್ತದೆ. ಆದ್ದರಿಂದ 'ಆದಾಯ' ಎಂಬ ಪದವನ್ನು ಮರು ವ್ಯಾಖ್ಯಾನ ಮಾಡಬೇಕು ಎಂಬುದಾಗಿ ಸೂಚಿಸಲಾಗಿದೆ.
ವಿಧೇಯಕದ ಕಲಂ 337 ಪ್ರಕಾರ, ಧಾರ್ಮಿಕ ಉದ್ದೇಶ ಹೊರತುಪಡಿಸಿ ಉಳಿದ ಎಲ್ಲಾ ನೊಂದಾಯಿತ ಎನ್‌ಜಿಒಗಳು ಪಡೆದ ಅನಾಮಧೇಯ ದೇಣಿಗೆಗಳಿಗೆ ಶೇಕಡಾವಾರು ತೆರಿಗೆ ವಿಧಿಸುವುದಾಗಿ ಪ್ರಸ್ತಾವವಿದೆ. ಇದನ್ನು ಸಮಿತಿ ಗಂಭೀರ ಲೋಪವೆಂದು ಗುರುತಿಸಿದ್ದು, ಇದು ಎನ್‌ಜಿಒ ವಲಯದ ಅಭಿವೃದ್ಧಿಗೆ ಆಧಾರವಾಗಿರುವ ದೇಣಿಗೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದೆ.
ಪ್ರಸ್ತುತ ಇರುವ ನಿಯಮಗಳಂತೆ, ಯಾರಿಗೆ ಆದಾಯ ತೆರಿಗೆ ಕಟ್ಟಬೇಕಿಲ್ಲವಾದರೂ ಟಿಡಿಎಸ್ ಮರುಪಾವತಿ ಪಡೆಯಬೇಕಾದರೆ ಅವರು ಸಹ ನಿರ್ಧಿಷ್ಟ ದಿನದೊಳಗೆ ಐಟಿ ರಿಟರ್ನ್ ಸಲ್ಲಿಸಬೇಕು. ಇದರಿಂದ ಕಡಿಮೆ ಆದಾಯದವರಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ, ನಿಗದಿತ ಅವಧಿಯ ಬಳಿಕವೂ ದಂಡವಿಲ್ಲದೆ ರಿಟರ್ನ್ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೊಸ ವಿಧೇಯಕವು ತೆರಿಗೆ ವಂಚನೆ ತಡೆಗಟ್ಟುವ ಉದ್ದೇಶದಿಂದ ಐಟಿ ಅಧಿಕಾರಿಗಳಿಗೆ ಹೆಚ್ಚಿನ ತನಿಖಾ ಅಧಿಕಾರಗಳನ್ನು ನೀಡಿದೆ. ಇಮೇಲ್, ಷೇರು ವ್ಯವಹಾರ, ಬ್ಯಾಂಕ್ ಖಾತೆ, ಡಿಜಿಟಲ್ ಅಪ್ಲಿಕೇಶನ್‌ಗಳು, ಆನ್‌ಲೈನ್ ಹೂಡಿಕೆಗಳು ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳವರೆಗೆ ನೇರವಾಗಿ ಪರಿಶೀಲಿಸಲು ಅವಕಾಶವಿದೆ.
2025ರ ಆದಾಯ ತೆರಿಗೆ ವಿಧೇಯಕ ರೂಪಿಸುವ ಮೊದಲು ಹಣಕಾಸು ಸಚಿವಾಲಯವು 20,976 ಅಭಿಪ್ರಾಯಗಳನ್ನು ಸ್ವೀಕರಿಸಿತ್ತು. ಹಳೆಯ 1961ರ ಕಾಯಿದೆಯಲ್ಲಿ 5.12 ಲಕ್ಷ ಪದಗಳು ಇದ್ದರೆ, ಹೊಸ ವಿಧೇಯಕದಲ್ಲಿ ಅದನ್ನು 2.6 ಲಕ್ಷಕ್ಕೆ ಇಳಿಸಲಾಗಿದೆ. ಅಧ್ಯಾಯಗಳ ಸಂಖ್ಯೆಯನ್ನು 47ರಿಂದ 23ಕ್ಕೆ ಕಡಿಮೆ ಮಾಡಲಾಗಿದೆ. ಟೇಬಲ್‌ಗಳ ಸಂಖ್ಯೆಯನ್ನು 18ರಿಂದ 57ಕ್ಕೆ ಹೆಚ್ಚಿಸಲಾಗಿದೆ.
ಹೊಸ ವಿಧೇಯಕದ ಪ್ರಮುಖ ಗುರಿಯೆಂದರೆ ಕಾನೂನು ವಿವಾದಗಳನ್ನು ತಗ್ಗಿಸುವುದು ಹಾಗೂ ತೆರಿಗೆ ಪಾವತಿ ಪ್ರಕ್ರಿಯೆಯನ್ನು ಹೆಚ್ಚು ಪ್ರಜ್ನಾತ್ಮಕವಾಗಿ ರೂಪಿಸುವುದು. ಕಾನೂನು ಪಠ್ಯವು ಹೆಚ್ಚು ಸರಳವಾಗಿರುವುದರಿಂದ, ನಾಗರಿಕರಿಗೆ ಇದರ ಅರ್ಥ ಗ್ರಹಿಸಲು ಸುಲಭವಾಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.