
ಯುಎಇ ಮೂಲದ ಎತಿಹಾದ್ ಏರ್‌ವೇಸ್ ತನ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಮಹತ್ತರ ಮೈಲಿಗಲ್ಲು ತಲುಪಿದ್ದು, 2025 ರಲ್ಲಿ 20 ಮಿಲಿಯನ್ ಪ್ರಯಾಣಿಕರ ಹಾರಾಟವನ್ನು ದಾಖಲಿಸಿದೆ. 2022 ರಲ್ಲಿ ಕೇವಲ 1 ಕೋಟಿ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದ ಸಂಸ್ಥೆ, ಕೆಲವೇ ವರ್ಷಗಳಲ್ಲಿ ತನ್ನ ಸಂಖ್ಯೆಯನ್ನು ದ್ವಿಗುಣಗೊಳಿಸಿ ವಿಮಾನಯಾನ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದೆ. ಈ ಸಾಧನೆಯನ್ನು ಒಂದು ಸಾಮಾನ್ಯ ಪತ್ರಿಕಾ ಪ್ರಕಟಣೆಯ ಮೂಲಕವಲ್ಲದೆ, ವಿಭಿನ್ನ ರೀತಿಯಲ್ಲಿ ಆಚರಿಸುವ ನಿರ್ಧಾರ ಎತಿಹಾದ್ ತೆಗೆದುಕೊಂಡಿತು. ಇದರ ಭಾಗವಾಗಿ, ನವದೆಹಲಿಯಿಂದ ಟೊರೊಂಟೊಗೆ ಹೊರಟಿದ್ದ ಚೋಪ್ರಾ ದಂಪತಿಗೆ ಬೌನ್‌ಸ್ ಆಗಿ ಅದ್ಭುತ ಅನುಭವ ನೀಡಲಾಯಿತು.
ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಎಕಾನಮಿ ಕ್ಲಾಸ್ ಟಿಕೆಟ್ ಹಿಡಿದಿದ್ದ ಚೋಪ್ರಾ ದಂಪತಿಗೆ, ಎತಿಹಾದ್ ಪ್ರತಿನಿಧಿಯೊಬ್ಬರು ಬಂದು ನೀವು ನಮ್ಮ 2 ಕೋಟಿ ಪ್ರಯಾಣಿಕರಲ್ಲಿ ವಿಶೇಷ ವ್ಯಕ್ತಿಗಳು. ನೀವು ದಿಲ್ಲಿಯಿಂದ ಅಬುಧಾಬಿಗೆ ಬಿಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತೀರಿ” ಎಂದು ಹೇಳಿದರು. ಅದರೊಂದಿಗೆ, ಸಂಪೂರ್ಣ ಮಲಗಬಹುದಾದ ಆಸನಗಳು, ಉತ್ತಮ ಭೋಜನ ಮತ್ತು ವೈಯಕ್ತಿಕ ಸೇವೆಗಳನ್ನು ಮೊದಲ ಬಾರಿ ಅನುಭವಿಸಿದರು. ನಾವು ಫಸ್ಟ್ ಕ್ಲಾಸ್ ಯಾವತ್ತೂ ಪ್ರಯಾಣಿಸುತ್ತಿರಲಿಲ್ಲ. ಇದು ನಮ್ಮ ಜೀವನದ ಅತ್ಯುತ್ತಮ ಅನುಭವ ಎಂದು ಖುಷಿಯನ್ನು ಹಂಚಿಕೊಂಡಿದ್ದಾರೆ.
ಅಬುಧಾಬಿಯಲ್ಲಿ ವಿಮಾನ ಇಳಿದ ತಕ್ಷಣ, ದಂಪತಿಗೆ ಅಬುಧಾಬಿಯ ಫರ್ಸ್ಟ್ ಕ್ಲಾಸ್ ಲಾಂಜ್‌ಗೆ ಆಹ್ವಾನ ದೊರಕಿತು. ಅಲ್ಲಿ, ಎತಿಹಾದ್ ಗೆಸ್ಟ್ ಲಾಯಲ್ಟಿ ಪ್ರೋಗ್ರಾಂನ ವ್ಯವಸ್ಥಾಪಕ ನಿರ್ದೇಶಕ ಮಾರ್ಕ್ ಪಾಟರ್ ಸ್ವತಃ ಅವರಿಗೆ ಸ್ಮರಣೀಯ ಕ್ಷಣ ಉಡುಗೊರೆಯಾಗಿ ನೀಡಿದರು. ನಿಮ್ಮ ನಿಷ್ಠೆಗೆ ಗೌರವವಾಗಿ, ನಿಮ್ಮಿಬ್ಬರಿಗೂ ನಾವು ‘ಗೋಲ್ಡ್’ ಶ್ರೇಣಿಯನ್ನು ನೀಡುತ್ತಿದ್ದೇವೆ. ಇದರರ್ಥ, ಮುಂದೆ ಎಲ್ಲ ಪ್ರಯಾಣಗಳಲ್ಲಿಯೂ ವಿಶೇಷ ಸೌಲಭ್ಯಗಳು ಅವರಿಗಾಗಿಯೇ ಕಾಯುತ್ತವೆ.
ಟೊರೊಂಟೊಗೆ ಹೊರಡುವ ಎ380 ವಿಮಾನ ಹತ್ತುವ ಮುನ್ನ, ಅವರಿಗೆ ಘೋಷಿಸಲಾಯಿತು: “ನೀವು ದಿ ರೆಸಿಡೆನ್ಸ್‌ನಲ್ಲಿ ಪ್ರಯಾಣಿಸುತ್ತಿದ್ದೀರಿ!” ‘ದಿ ರೆಸಿಡೆನ್ಸ್’ ಎಂಬುದು ಸಾಮಾನ್ಯ ಫಸ್ಟ್ ಕ್ಲಾಸ್ ಅಲ್ಲ. ಇದು ವಿಶ್ವದಲ್ಲೇ ಅತಿ ಐಷಾರಾಮಿ ವಿಮಾನ ಅನುಭವ ನೀಡಲಿದೆ. ಪ್ರತ್ಯೇಕ ಲಿವಿಂಗ್ ರೂಮ್, ಮಲಗುವ ಕೋಣೆ, ಶವರ್ ಇರುವ ಬಾತ್‌ರೂಮ್, ಖಾಸಗಿ ಬಟ್ಲರ್ ಸಹಿತ ಅನೇಕ ಸೌಲಭ್ಯವಿದೆ. ಈ ಅದ್ಭುತ ಅನುಭವದ ಬೆನ್ನಲ್ಲೇ ದಂಪತಿ ಆಶ್ಚರ್ಯದ ಜೊತೆಗೆ ಸಂತೋಷದಿಂದ ಹೇಳಿದರು. “ಇದು ಸೆಲೆಬ್ರಿಟಿಗಳ ಅನುಭವದಂತಿದೆ. ನಮ್ಮ ಜೀವನದ ಅತ್ಯುತ್ತಮ ಕ್ಷಣ! ಎಂದರು.
ಈ ಸಂದರ್ಭವನ್ನು ಬಳಸಿಕೊಂಡು ಎತಿಹಾದ್ ಏರ್‌ವೇಸ್ ತನ್ನ ಅಭಿವೃದ್ಧಿಯ ದಿಕ್ಕುಗಳನ್ನು ಹಂಚಿಕೊಂಡಿತು. ಸಿಇಒ ಆಂಟೊನಲ್ಡೊ ನೆವೆಸ್ ನೀಡಿದ ಹೇಳಿಕೆಯಂತೆ 2022ರಲ್ಲಿ 1 ಕೋಟಿ ಪ್ರಯಾಣಿಕರಿಂದ ಆರಂಭಿಸಿ, ಈಗ 2 ಕೋಟಿ ಪ್ರಯಾಣಿಕರ ಮೈಲಿಗಲ್ಲನ್ನು ತಲುಪಿದ್ದೇವೆ. ಈ ಬೆಳವಣಿಗೆಯು ಮುಂದುವರೆಯಲಿದೆ. ಸಂಸ್ಥೆ ಈಗಾಗಲೇ 100 ವಿಮಾನಗಳ ಸೊತ್ತು ಹೊಂದಿದ್ದು, 2030ರ ಹೊತ್ತಿಗೆ 170 ವಿಮಾನಗಳೊಂದಿಗೆ ವರ್ಷಕ್ಕೆ 3.8 ಕೋಟಿ ಪ್ರಯಾಣಿಕರನ್ನು ಹೊತ್ತೊಯ್ಯುವ ಗುರಿಯಿದೆ.
ವಿಮಾನಯಾನ ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜನರನ್ನು ಸಾಗಿಸುವುದು ಮಾತ್ರವಲ್ಲ. ಅದು ಜೀವಮಾನದ ನೆನಪುಗಳನ್ನು ಕೂಡ ರಚಿಸಬಲ್ಲದು ಎಂಬುದನ್ನು ಎತಿಹಾದ್ ಈ ವಿಶೇಷ ಪ್ರಯಾಣದ ಮೂಲಕ ತೋರಿಸಿತು. ಚೋಪ್ರಾ ದಂಪತಿಯ ಈ ಕಥೆ, ಎತಿಹಾದ್ ಏರ್‌ವೇಸ್‌ನ ಹೆಗ್ಗಳಿಕೆಗೆ ಹೊಸ ಅರ್ಥ ಕಲ್ಪಿಸಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.