ಶಿಶು ಆಹಾರ ಉತ್ಪನ್ನಗಳಲ್ಲಿ ಸಕ್ಕರೆ ಪತ್ತೆ; ನೆಸ್ಲೆ ಇಂಡಿಯಾ ಷೇರು ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ

By Suvarna NewsFirst Published Apr 18, 2024, 4:24 PM IST
Highlights

ಭಾರತ ಸೇರಿದಂತೆ ಬಡರಾಷ್ಟ್ರಗಳ ಮಾರುಕಟ್ಟೆಯಲ್ಲಿರುವ ನೆಸ್ಲೆ ಶಿಶು ಆಹಾರ ಉತ್ಪನ್ನಗಳಲ್ಲಿ ಸಕ್ಕರೆ ಅಂಶ ಪತ್ತೆಯಾಗಿದೆ ಎಂಬ ಆರೋಪದ ಬೆನ್ನಲ್ಲೇ ನೆಸ್ಲೆ ಇಂಡಿಯಾದ ಷೇರುಗಳು ಗುರುವಾರ ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿವೆ. 
 

ಮುಂಬೈ (ಏ.18):  ಬೊರ್ವೀಟಾದ ಕುರಿತು ಆರೋಪಗಳು ಕೇಳಿಬಂದ ಬೆನ್ನಲ್ಲೇ ನೆಸ್ಲೆ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಶಿಶು ಆಹಾರ ಉತ್ಪನ್ನಗಳಿಗೆ ಸಂಬಂಧಿಸಿ ನೆಸ್ಲೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಪರಿಣಾಮ ಭಾರತದ ಷೇರು ಮಾರುಕಟ್ಟೆಯಲ್ಲಿ ಇಂದು (ಏ.18)  ನೆಸ್ಲೆ ಇಂಡಿಯಾದ ಷೇರುಗಳು ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ  2,409.55ರೂ. ತಲುಪಿವೆ. ಗುರುವಾರದ ಟ್ರೇಡಿಂಗ್ ನಲ್ಲಿ ಕಂಪನಿಯ ಷೇರುಗಳು ಶೇ.5ರಷ್ಟು ಇಳಿಕೆ ಕಾಣಲು ಮುಖ್ಯಕಾರಣ ಈ ಎಫ್ಎಂಸಿಜೆ ಕಂಪನಿಯನ್ನು ತನ್ನ ಉತ್ಪನ್ನಗಳ ಪ್ರಯೋಜನಗಳ ಕುರಿತು ಜನರನ್ನು ದಾರಿತಪ್ಪಿಸಿದ ಆರೋಪದಲ್ಲಿ ತನಿಖೆ ಎದುರಿಸುತ್ತಿರೋದು. 2023ರ ನವೆಂಬರ್ 30ರ ಬಳಿಕ ಇಂದು (ಏ.18) ಈ ಪ್ಯಾಕೇಜ್ಡ್ ಫುಡ್ಸ್ ಕಂಪನಿಯ ಷೇರಿನ ಬೆಲೆ ಇದೇ ಮೊದಲ ಬಾರಿಗೆ ಅತೀಕಡಿಮೆ ಮಟ್ಟಕ್ಕೆ  ಇಳಿಕೆಯಾಗಿದೆ. ನೆಸ್ಲೆ ಇಂಡಿಯಾದ ಷೇರುಗಳ ಬೆಲೆ ಶೇ.3.4ರಷ್ಟು ಕಡಿಮೆ ಅಂದ್ರೆ 2,460 ರೂ.ನಲ್ಲಿ ಟ್ರೇಡಿಂಗ್ ಆಗುತ್ತಿವೆ. 

ಹಾಲಿನ ಉತ್ಪನ್ನಗಳು ಹಾಗೂ ನ್ಯೂಟ್ರಿಷಿಯನ್, ಪೌಡರ್ಡ್ ಹಾಗೂ ಲಿಕ್ವಿಡ್ ಬಿವರೇಜಸ್ , ಪ್ರೀಪ್ಯಾರ್ಡ್ ಡಿಷಸ್ ಹಾಗೂ ಕುಕ್ಕಿಂಗ್ ಏಡ್ಸ್, ಚಾಕೊಲೇಟ್ ಹಾಗೂ ಕನ್ಫೆಕ್ಷನರಿ ಎಂಬ ನಾಲ್ಕು ವಿಭಾಗಗಳಲ್ಲಿ ನೆಸ್ಲೆ ಇಂಡಿಯಾ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. 

ನೆಸ್ಲೆಗೆ ಪೈಪೋಟಿ ನೀಡಲು ಮುಂದಾದ ಟಾಟಾ ಗ್ರೂಪ್‌; ಹೊಸ ಕಂಪೆನಿ ಖರೀದಿಗೆ ಬರೋಬ್ಬರಿ 5500 ಕೋಟಿ ರೂ. ಹೂಡಿಕೆ!

ಜಗತ್ತಿನ ಅತೀದೊಡ್ಡ ಗ್ರಾಹಕ ಸರಕುಗಳ ಕಂಪನಿ ಎಂಬ ಜನಪ್ರಿಯತೆ ಗಳಿಸಿರುವ ನೆಸ್ಲೆ ಇತ್ತೀಚೆಗೆ ದೊಡ್ಡ ಆರೋಪಕ್ಕೆ ಗುರಿಯಾಗಿದೆ. ಸ್ವಿಸ್ ಮೂಲದ ತನಿಖಾ ಸಂಸ್ಥೆ ಪಬ್ಲಿಕ್ ಐ ನಡೆಸಿದ ತನಿಖೆಯಲ್ಲಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಶಿಶು ಹಾಲಿನ ಹಾಗೂ ಧಾನ್ಯಗಳ ಉತ್ಪನ್ನಗಳಿಗೆ ನೆಸ್ಲೆ ಸಕ್ಕರೆ ಹಾಗೂ ಜೇನುತುಪ್ಪ ಸೇರ್ಪಡೆಗೊಳಿಸಿರೋದು ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ ನೆಸ್ಲೆ ಬಡರಾಷ್ಟ್ರಗಳಲ್ಲಿ ಮಾರಾಟ ಮಾಡುವ ಶಿಶು ಹಾಲಿನ ಉತ್ಪನ್ನಗಳಿಗೆ ಮಾತ್ರ ಸಕ್ಕರೆ ಸೇರಿಸುತ್ತಿದೆ. ಅದೇ ಯುರೋಪ್ ಹಾಗೂ ಇಂಗ್ಲೆಂಡ್ ಮಾರುಕಟ್ಟೆಗಳಲ್ಲಿ ಮಾತ್ರ ಶಿಶು ಉತ್ಪನ್ನಗಳಿಗೆ ಸಕ್ಕರೆ ಸೇರಿಸಿಲ್ಲ.

ಸ್ವಿಸ್ ತನಿಖಾ ಸಂಸ್ಥೆ 'ಪಬ್ಲಿಕ್ ಐ' ಏಷ್ಯಾ, ಆಫ್ರಿಕಾ ಹಾಗೂ ಲ್ಯಾಟಿನ್ ಅಮೆರಿಕಗಳಲ್ಲಿ ಮಾರಾಟ ಮಾಡುವ ನೆಸ್ಲೆಯ ಶಿಶು ಆಹಾರ ಉತ್ಪನ್ನಗಳನ್ನು ಬೆಲ್ಜಿಯನ್ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ಅದರಲ್ಲಿ ಸುಕ್ರೋಸ್ ಅಥವಾ ಜೇನುತುಪ್ಪದ ರೂಪದಲ್ಲಿ ಸಕ್ಕರೆ ಇರೋದು ಪತ್ತೆಯಾಗಿದೆ. ಒಂದು ಹಾಗೂ ಅದಕ್ಕಿಂತ ಮೇಲ್ಪಟ್ಟ ಶಿಶುಗಳಿಗೆ ಬಳಸುವ ಹಾಲಿನ ಫಾರ್ಮುಲಾದಲ್ಲಿ ಇದು ಪತ್ತೆಯಾಗಿದೆ. ಇನ್ನು ಆರು ತಿಂಗಳಿಂದ ಎರಡು ವರ್ಷದ ತನಕದ ಮಕ್ಕಳಿಗೆ ನೀಡುವ ಸೆರ್ಲ್ಯಾಕ್ಸ್ ನಲ್ಲಿ (Cerelac) ಕೂಡ ಸಕ್ಕರೆ ಅಂಶವಿರೋದು ಪತ್ತೆಯಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ. ಇನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಇದೇ ಉತ್ಪನ್ನದಲ್ಲಿ ಯಾವುದೇ ಸಕ್ಕರೆ ಸೇರಿಸಿಲ್ಲ. ಸೆರ್ಲ್ಯಾಕ್ಸ್ ಜಾಗತಿಕವಾಗಿ 1 ಬಿಲಿಯನ್ ಡಾಲರ್ ಗಳಿಕೆ ಮಾಡುತ್ತದೆ. ಇದರಲ್ಲಿ ಶೇ.40ರಷ್ಟು ಆದಾಯ ಭಾರತ ಹಾಗೂ ಬ್ರೆಜಿಲ್ ನಿಂದ ಬರುತ್ತಿದೆ.

ಈ ನಡುವೆ ಶಿಶು ಸೀರಿಯಲ್ಸ್ ನಲ್ಲಿ   ಸಕ್ಕರೆ ಪ್ರಮಾಣವನ್ನು ಶೇ.30ರಷ್ಟು ತಗ್ಗಿಸಿರೋದಾಗಿ ನೆಸ್ಲೆ ಇಂಡಿಯಾ ತಿಳಿಸಿದೆ. ಶಿಶುಗಳ ಆಹಾರದಲ್ಲಿ ಪೌಷ್ಟಿಕಾಂಶದ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ. ಅಲ್ಲದೆ, ಇದರಲ್ಲಿ ಅತ್ಯುತ್ತಮ ಗುಣಮಟ್ಟದ ಸಾಮಗ್ರಿಗಳನ್ನು ಬಳಸುತ್ತಿರೋದಾಗಿ ನೆಸ್ಲೆ ಇಂಡಿಯಾ ತಿಳಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ನೆಸ್ಲೆ ಇಂಡಿಯಾ ಸಕ್ಕರೆ ಪ್ರಮಾಣವನ್ನು ಶೇ.30ರಷ್ಟು ತಗ್ಗಿಸಿರೋದಾಗಿಯೂ ತಿಳಿಸಿದೆ.

ಫಟಾಫಟ್ ರೆಡಿ, ಬಾಯಿಗೂ ರುಚಿ ಎಂದು ಮ್ಯಾಗಿ ತಿನ್ನುವ ಮುನ್ನ ಈ ವರದಿ ಓದ್ಕೊಂಡು ಬಿಡಿ..!

ಈ ನಡುವೆ ಪ್ರಕರಣದ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳೋದಾಗಿ ಭಾರತ ಸರ್ಕಾರ ತಿಳಿಸಿದೆ. ಗ್ರಾಹಕ ವ್ಯವಹಾರಗಳ ಇಲಾಖೆ ಹಾಗೂ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಈ ವಿಚಾರವಾಗಿ ಶೀಘ್ರದಲ್ಲೇ ತನಿಖೆ ನಡೆಸಲಿವೆ ಎಂದು ವರದಿಗಳು ತಿಳಿಸಿವೆ.

ಅಂದಹಾಗೇ ನೆಸ್ಲೆ ಇಂಡಿಯಾದ ವಿರುದ್ಧ ಇಂಥ ಆರೋಪ ಕೇಳಿಬರುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ನೆಸ್ಲೆಯ ಬೋರ್ವಿಟಾ ಡ್ರಿಂಕ್ ನಲ್ಲಿ ಸಕ್ಕರೆ ಅಂಶ ಅತ್ಯಧಿಕ ಮಟ್ಟದಲ್ಲಿರೋದಾಗಿ ಪೋಸ್ಟ್ ಹಾಕಿದ್ದರು. ಇದರ ಬೆನ್ನಲ್ಲೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವಂತೆ FSSAI ಅನ್ನು ಆಗ್ರಹಿಸಿತ್ತು. ಇದು ಹೆಲ್ತ್ ಡ್ರಿಂಕ್ಸ್ ವರ್ಗದಲ್ಲಿ ಬರೋದಿಲ್ಲ ಎಂದು ಪ್ರತಿಪಾದಿಸಿತ್ತು. ಪರಿಣಾಮ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಎಲ್ಲ ಡ್ರಿಂಕ್ಸ್ ಹಾಗೂ ಬೆವರೇಜರ್ಸ್ ಅನ್ನು 'ಹೆಲ್ತ್ ಡ್ರಿಂಕ್ಸ್' ವರ್ಗದಿಂದ ತೆಗೆಯುವಂತೆ ಆಗ್ರಹಿಸಿತ್ತು. 


 

click me!