ಅಮ್ಮನ ಕಷ್ಟದ ದಿನಗಳು ನೆನದು ₹250 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಮಗಳು!

Published : Oct 05, 2026, 07:42 PM IST
Ahana Gautam Open Secret

ಸಾರಾಂಶ

ಐಐಟಿ ಮತ್ತು ಹಾರ್ವರ್ಡ್‌ನಲ್ಲಿ ಓದಿ, ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ಅಹನಾ ಗೌತಮ್ ಅವರು 'ಓಪನ್ ಸೀಕ್ರೆಟ್' ಎಂಬ ಆರೋಗ್ಯಕರ ಸ್ನ್ಯಾಕ್ಸ್ ಕಂಪನಿ ಹುಟ್ಟುಹಾಕಿದರು. ಒಂಟಿ ತಾಯಿಯ ಹೋರಾಟದಿಂದ ಸ್ಫೂರ್ತಿ ಪಡೆದ ಇವರು, ಕೇವಲ 30ನೇ ವಯಸ್ಸಿನಲ್ಲಿ ಆರಂಭಿಸಿದ ಈ ಉದ್ಯಮ ಇಂದು ₹250 ಕೋಟಿ!

ಜೀವನದಲ್ಲಿ ಯಾವಾಗ ಹೊಸ ತಿರುವು ಬರುತ್ತದೋ ಯಾರಿಗೂ ಗೊತ್ತಿರುವುದಿಲ್ಲ. ಯಶಸ್ವಿ ಉದ್ಯಮಿಗಳ ಲೈಫ್ ಸ್ಟೋರಿ ಓದಿದ್ದರೆ ನಿಮಗಿದು ಗೊತ್ತಿರುತ್ತದೆ. ಬಾಂಬೆ ಬೀದಿಗಳಲ್ಲ ಪಾನಿಪೂರಿ ಮಾರುತ್ತಿದ್ದವರು ಕೋಟ್ಯಧಿಪತಿಯಾಗಿದ್ದು, ಸಣ್ಣ ಪೆಟ್ಟಿಗೆ ಅಂಗಡಿ ಮೂಲಕ ಬಹುಕೋಟಿ ಉದ್ಯಮ ಕಟ್ಟಿದ್ದು, ಸರ್ಕಾರಿ ಕೆಲಸದಿಂದ ನಿವೃತ್ತರಾದ ಬಳಿಕವೇ ಕೃಷಿಯಲ್ಲಿ ತೊಡಗಿ ಕೋಟ್ಯಧಿಪತಿ ಆಗಿ ಸಾಧಿಸಿದ್ದು ಇವೆಲ್ಲವೂ ನಾವು ಓದಿದ ಉದಾಹರಣೆಗಳಾಗಿ ಕಣ್ಮುಂದೆ ಬರುತ್ತವೆ.

ಒಮ್ಮೊಮ್ಮೆ ನಾವು ಭೇಟಿ ನೀಡುವ ವ್ಯಕ್ತಿಗಳು, ಪ್ರವಾಸಕ್ಕೆ ಹೋಗುವ ಸ್ಥಳಗಳು ಅಥವಾ ಓದುವ ಪುಸ್ತಕಗಳು ನಮ್ಮ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತವೆ. ಆ ಕ್ಷಣದ ಒಂದು ಸಣ್ಣ ಗಮನದಿಂದ ಹೊಸ ಆಲೋಚನೆಗಳು ಚಿಗುರೊಡೆದು ಹೆಮ್ಮರವಾಗಿ ಬೆಳೆಯುತ್ತವೆ. ಹೀಗೆ ಜೀವನದಲ್ಲಿ ಎದುರಾದ ಯಾವುದೋ ಒಂದು ಅನುಭವವೇ ದೊಡ್ಡ ಕನಸಿಗೆ ಕಾವು ಕೊಡಲಾರಂಭಿಸಿಬಿಡಬಹುದು. ಅಂತಹ ಒಂದು ಸ್ಪೂರ್ತಿದಾಯಕ ಕಥೆ ಅಹನಾ ಗೌತಮ್ ಅವರದ್ದು.

ಅಹಾನಾ ಐಐಟಿ, ಹಾರ್ವರ್ಡ್ ಹಾಗೂ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾಕೆ ಕೇವಲ 30ನೇ ವಯಸ್ಸಿನಲ್ಲಿ ಉದ್ಯೋಗಕ್ಕೆ ರಾಜೀನಾಮೆ ನೀಡಿ ಹೊಸ ಸಾಹಸಕ್ಕೆ ಕೈ ಹಾಕಿದ್ರು! ಸಾಮಾನ್ಯವಾಗಿ ಆ ವಯಸ್ಸಿಗೆ ಅಂಥ ಉದ್ಯೋಗ ಸಿಕ್ಕರೆ ಸಾಕಪ್ಪ ಅಂತಾ ಸೇಫ್ ಜೋನ್‌ನಲ್ಲಿರೋಕೆ ಬಯಸ್ತಾರೆ ಅಂತದ್ರಲ್ಲಿ ಈ ಯುವತಿ ಕೈತುಂಬಾ ಸಂಬಳದ ಕೆಲಸಕ್ಕೆ ರಿಸೈನ್ ಮಾಡಿ ಇವರೇ ಕಟ್ಟಿದ ‘ಓಪನ್ ಸೀಕ್ರೆಟ್’ ಸ್ನ್ಯಾಕ್ ಬ್ರ್ಯಾಂಡ್‌ ಸುಮಾರು ₹250 ಕೋಟಿ ಮೌಲ್ಯ ಹೊಂದಿದೆ. ಇದರ ಹಿಂದೆ ಉದ್ಯಮದ ಕನಸಿನಷ್ಟೇ ಅಲ್ಲ, ತಾಯಿ-ಮಗಳ ಭಾವನಾತ್ಮಕ ಕಥೆಯೂ ಇದೆ.

ಐಐಟಿ ಬಾಂಬೆ ಪದವಿ, ಹಾರ್ವರ್ಡ್‌ನಿಂದ ಎಂಬಿಎ ಮತ್ತು ಜನರಲ್ ಮಿಲ್ಸ್ ಹಾಗೂ ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್‌ನಂತಹ ಕಂಪನಿಗಳಲ್ಲಿ ಕೆಲಸ. ಇವೆಲ್ಲವೂ ಅಹನಾ ಗೌತಮ್ ಅವರನ್ನು ಸಾಮಾನ್ಯ ಕಾರ್ಪೊರೇಟ್ ವೃತ್ತಿಜೀವನದತ್ತ ಕರೆದೊಯ್ಯಬಹುದಾಗಿತ್ತು. ಆದರೆ ಅಮೆರಿಕದ ವೋಲ್ ಫುಡ್ಸ್‌ ಅಂಗಡಿಗೆ ನೀಡಿದ ಆ ಒಂದು ಭೇಟಿಯಿಂದಾಗಿ ಭಾರತದ ಪ್ಯಾಕೇಜ್‌ಡ್ ಆಹಾರ ಮಾರುಕಟ್ಟೆಯಲ್ಲಿ ಏನು ಕೊರತೆಯಿದೆ ಎಂಬುದನ್ನು ಯೋಚಿಸುವಂತೆ ಮಾಡಿತು.

ಕೃತಕ ಬಣ್ಣ, ಫ್ಲೇವರ್‌, ಪ್ರಿಸರ್ವೇಟಿವ್‌ಗಳು ಮತ್ತು ಹೈಡ್ರೋಜನೀಕೃತ ಕೊಬ್ಬಿನಂತಹ ಪದಾರ್ಥಗಳಿಂದ ಮುಕ್ತವಾಗಿರುವ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ ವೋಲ್ ಫುಡ್ಸ್, ದೈನಂದಿನ ಸ್ನ್ಯಾಕ್ಸ್‌ ಬಗ್ಗೆ ಅಹನಾ ಗೌತಮ್ ವಿಭಿನ್ನ ದೃಷ್ಟಿಕೋನ ನೀಡಿತು. ಭಾರತದಲ್ಲಿ ಆಹಾರವನ್ನು ಸಾಂಪ್ರದಾಯಿಕವಾಗಿ ಆರೋಗ್ಯ ಮತ್ತು ಪೌಷ್ಟಿಕಾಂಶದೊಂದಿಗೆ ಜೋಡಿಸಲಾಗುತ್ತದೆ. ಆದರೆ ಪ್ಯಾಕೇಜ್‌ಡ್ ಸ್ನ್ಯಾಕ್ಸ್‌ ವಿಷಯದಲ್ಲಿ ಪರಿಸ್ಥಿತಿ ವಿಭಿನ್ನವಾಗಿರುವುದನ್ನು ಅವರು ಗಮನಿಸಿದರು. ಇದರ ಪರಿಣಾಮವೇ 2019ರಲ್ಲಿ ಗೌತಮ್ ಸಹ-ಸ್ಥಾಪಿಸಿದ ಆರೋಗ್ಯಕರ ಸ್ನ್ಯಾಕಿಂಗ್ ಕಂಪನಿ ‘ಓಪನ್ ಸೀಕ್ರೆಟ್’ಗೆ ಅಡಿಪಾಯವಾಯಿತು.

ಉದ್ಯಮ ಆರಂಭಿಸುವ ಮೊದಲು ಆಕೆ ಸುಮಾರು ನಾಲ್ಕು ವರ್ಷಗಳ ಕಾಲ P&G ಯಲ್ಲಿ ಕೆಲಸ ಮಾಡಿದ್ದರು. ಬಳಿಕ ಜನರಲ್ ಮಿಲ್ಸ್‌ನಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಅವರ ವೃತ್ತಿಜೀವನ ಸಂಪೂರ್ಣವಾಗಿ ಕಾರ್ಪೊರೇಟ್ ಕ್ಷೇತ್ರದತ್ತ ಸಾಗುತ್ತಿತ್ತು. ಆದರೆ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿದ್ದ ವೇಳೆ ಅವರ ವೃತ್ತಿಜೀವನ, ಮುಂದಿನ ಅವಕಾಶಗಳನ್ನು ನೋಡುವ ದೃಷ್ಟಿಕೋನವನ್ನೇ ಬದಲಿಸಿತು.

ಅಹಾನಾ ಗೌತಮ್‌ಗೆ ಸ್ಫೂರ್ತಿಯೇ ತಾಯಿ!

ರಾಜಸ್ಥಾನದಲ್ಲಿ ಬೆಳೆದ ನನಗೆ ಜಗತ್ತಿನಾದ್ಯಂತ ಅತ್ಯುತ್ತಮ ಶಿಕ್ಷಣ ಪಡೆಯಬೇಕು ಎಂಬ ಸ್ಫೂರ್ತಿ ನೀಡಿದ್ದು ನನ್ನ ತಾಯಿ. ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು ಎಂದು ಗೌತಮ್ ಹಳೆಯ ಸಂದರ್ಶನವೊಂದರಲ್ಲಿ ಹೇಳಿದ್ದರು.

ಆಕೆಯ ಮಾತಲ್ಲೇ ಕೇಳಿ, 'ತಮ್ಮ ತಾಯಿ ಏಕಾಂಗಿಯಾಗಿ ಇಬ್ಬರು ಮಕ್ಕಳನ್ನು ಬೆಳೆಸಿದರು. ಆ ನನ್ನ ತಾಯಿ ಒಂಟಿಯಾಗಿ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಲೇ ನನ್ನನ್ನು ನನ್ನ ಸಹೋದರನನ್ನು ಹೇಗೆ ಬೆಳೆಸಿದರು ಎಂಬುದು ನನಗೆ ಈಗಲೂ ಅಚ್ಚರಿಯಾಗುತ್ತದೆ. ಯಾವುದೇ ಕೊರತೆಯಾಗದಂತೆ ಉನ್ನತ ಶಿಕ್ಷಣ ಕೊಡಿಸಿದವಳು ನನ್ನ ತಾಯಿ ಹೀಗಾಗಿ ನನಗೆ ನನ್ನ ತಾಯಿಯೇ ಸ್ಪೂರ್ತಿ. ನಾನು ಮತ್ತು ನನ್ನ ಸಹೋದರ ರಾಜಸ್ಥಾನದಲ್ಲಿ ಒಂಟಿಯಾಗಿದ್ದ ನನ್ನ ತಾಯಿ ಮಡಿಲಲ್ಲಿ ಬೆಳೆದಿದ್ದೇವೆ. ಏಕಾಂಗಿ ಮಹಿಳೆಯೊಬ್ಬಳು ಸಮಾಜದಲ್ಲಿ ಮಕ್ಕಳನ್ನು ಓದಿಸಿ ಬೆಳೆಸಿ ದೊಡ್ಡವರನ್ನ ಮಾಡಬೇಕಾದರೆ ಅದೆಷ್ಟು ಸವಾಲುಗಳು ಎದುರಾಗುತ್ತವೆ ಎಂಬುದನ್ನು ನಾವು ಬೆಳೆಯುತ್ತಲೇ ತಾಯಿಯ ಕಷ್ಟವನ್ನು ನೋಡಿಕೊಂಡು ಬೆಳೆದಿದ್ದೇವೆ.

ನಾನು ಐಐಟಿಯಲ್ಲಿ ಕೋರ್ಸ್ ಮಾಡುತ್ತಿದ್ದಾಗಲೂ, ನಂತರ ಹಾರ್ವರ್ಡ್‌ನಲ್ಲಿ ಎಂಬಿಎ ಮಾಡುತ್ತಿದ್ದಾಗಲೂ, ನನ್ನ ತಾಯಿಯನ್ನು ಏಕೆ ಇಷ್ಟು ಕಷ್ಟ ಪಡುತ್ತಿದ್ದೀಯ ಅಂತಾ ಕೇಳಿದಾಗಲೂ ನಮ್ಮ ಮಾತುಗಳಿಗೆ ಕಿವಿಗೊಡುತ್ತಿರಲಿಲ್ಲ. ನನ್ನ ತಾಯಿಯ ಈ ಅನುಭವಗಳೇ ನನಗೆ ಸ್ಫೂರ್ತಿ. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬುದಕ್ಕೆ ಪ್ರೇರಣೆಯಾದವು ಎನ್ನುತ್ತಾರೆ ಅಹಾನಾ ಗೌತಮ್.

2019 ರಲ್ಲಿ 'ಓಪನ್ ಸೀಕ್ರೆಟ್ ಆರಂಭ

2019ರಲ್ಲಿ ಮುಂಬೈನಲ್ಲಿ ಇಮ್ಮ್ಯಾಕ್ಯುಲೇಟ್‌ಬೈಟ್ಸ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ‘ಓಪನ್ ಸೀಕ್ರೆಟ್’ ಆರಂಭವಾಯಿತು. ಆರಂಭದಲ್ಲಿ ಮಕ್ಕಳ ಸ್ನ್ಯಾಕಿಂಗ್‌ ಮೇಲೆ ಗಮನಹರಿಸಿದ್ದ ಕಂಪನಿ ಇಂಟರ್‌ನೆಟ್ ಆಧಾರಿತ ಆರೋಗ್ಯಕರ ಸ್ನ್ಯಾಕಿಂಗ್ ಬ್ರ್ಯಾಂಡ್ ಆಗಿ ತನ್ನನ್ನು ಗುರುತಿಸಿಕೊಂಡಿತು. ಉತ್ತಮ ಹಾಗೂ ಆರೋಗ್ಯಕರ ಆಹಾರ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನೂ ಕಂಪನಿ ಗುರಿಯಾಗಿಸಿಕೊಂಡಿತು. ಕಂಪನಿಯ ಆರಂಭಿಕ ಉತ್ಪನ್ನಗಳಲ್ಲಿ ನಟ್ಸ್‌ಯುಕ್ತ ಕುಕೀಸ್‌ಗಳು ಇದ್ದವು. ನಂತರ ನಟ್ಸ್, ಚಿಪ್ಸ್ ಮತ್ತು ಪ್ರೋಟೀನ್ ಆಧಾರಿತ ಸ್ನ್ಯಾಕ್ಸ್ ಸೇರಿದಂತೆ ಹಲವು ಉತ್ಪನ್ನಗಳನ್ನು ಪರಿಚಯಿಸಲಾಯಿತು.

ಕಂಪನಿ ಆರಂಭವಾದ ಕೆಲವೇ ದಿನಗಳಲ್ಲಿ ಹೂಡಿಕೆದಾರರ ಗಮನ ಸೆಳೆಯಲು ಆರಂಭಿಸಿತು. 2019ರ ಜೂನ್‌ನಲ್ಲಿ ಸುಮಾರು 1.25 ಮಿಲಿಯನ್ ಡಾಲರ್‌ಗಳ ಸೀಡ್ ಫಂಡಿಂಗ್ ಸಂಗ್ರಹಿಸಿತು. ವಿಜಯ್ ಶೇಖರ್ ಶರ್ಮಾ, ಕುನಾಲ್ ಬಹ್ಲ್, ರೋಹಿತ್ ಬನ್ಸಾಲ್, ವಿವೇಕ್ ಗಂಭೀರ್ ಮತ್ತು Z47 ಸೇರಿದಂತೆ ಹೂಡಿಕೆದಾರರು ಇದರಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ಓಪನ್ ಸೀಕ್ರೆಟ್‌ನ ಬೆಳವಣಿಗೆ ವೇಗ ಪಡೆದುಕೊಂಡಿತು. ಹೂಡಿಕೆ ಮತ್ತು ಆದಾಯ ಎರಡರಲ್ಲೂ ಗಮನಾರ್ಹ ಏರಿಕೆ ಕಂಡುಬಂತು.

ಟ್ರ್ಯಾಕ್ಸನ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2021ರ ಜುಲೈನಲ್ಲಿ ಸಿಕ್ಸ್ತ್ ಸೆನ್ಸ್ ವೆಂಚರ್ಸ್ ನೇತೃತ್ವದಲ್ಲಿ ಕಂಪನಿ ಸುಮಾರು 2.36 ಮಿಲಿಯನ್ ಡಾಲರ್‌ಗಳ ಸೀರೀಸ್ ಎ ಫಂಡಿಂಗ್ ಸಂಗ್ರಹಿಸಿತು. ಒಂದು ವರ್ಷದ ಬಳಿಕ ಅನಂತ ಕ್ಯಾಪಿಟಲ್ ನೇತೃತ್ವದಲ್ಲಿ ಸುಮಾರು 10 ಮಿಲಿಯನ್ ಡಾಲರ್‌ಗಳ ಸೀರೀಸ್ ಬಿ ಫಂಡಿಂಗ್ ಪಡೆದಿತು. ಸಿಕ್ಸ್ತ್ ಸೆನ್ಸ್ ವೆಂಚರ್ಸ್ ಮತ್ತು Z47 ಸೇರಿದಂತೆ ಹಿಂದಿನ ಹೂಡಿಕೆದಾರರೂ ಈ ಸುತ್ತಿನಲ್ಲಿ ಭಾಗವಹಿಸಿದ್ದರು.

ಸೀರೀಸ್ ಬಿ ಹೂಡಿಕೆಯ ಬಳಿಕ ಕಂಪನಿಯ ಬಹಿರಂಗಪಡಿಸಿದ ಪೋಸ್ಟ್-ಮನಿ ಮೌಲ್ಯಮಾಪನ ಸುಮಾರು 28.1 ಮಿಲಿಯನ್ ಡಾಲರ್‌ಗೆ ತಲುಪಿತು. ಹೂಡಿಕೆ ಮಾಹಿತಿಯಲ್ಲಿ ಉಲ್ಲೇಖಿಸಿರುವ ವಿನಿಮಯ ದರದ ಪ್ರಕಾರ ಇದು ಸುಮಾರು ₹219 ಕೋಟಿ.

ಕಂಪನಿಯ ಆದಾಯವೂ ವೇಗವಾಗಿ ಏರತೊಡಗಿತು. FY20ರಲ್ಲಿ ಸುಮಾರು ₹30 ಲಕ್ಷ ಇದ್ದ ಆದಾಯ FY21ರಲ್ಲಿ ₹3.2 ಕೋಟಿಗೆ ಮತ್ತು FY22ರಲ್ಲಿ ₹13.3 ಕೋಟಿಗೆ ಏರಿತು. ಬಳಿಕ ಉತ್ಪನ್ನಗಳ ಸಂಖ್ಯೆ ಮತ್ತು ಆಫ್‌ಲೈನ್ ಮಾರಾಟ ಜಾಲವನ್ನು ವಿಸ್ತರಿಸಿದ ಹಿನ್ನೆಲೆಯಲ್ಲಿ FY23ರಲ್ಲಿ ಆದಾಯ ₹38.3 ಕೋಟಿಗೆ ಏರಿತು.

ಆದರೆ ಈ ಬೆಳವಣಿಗೆಯೊಂದಿಗೆ ನಷ್ಟವೂ ಹೆಚ್ಚಾಯಿತು. ಬ್ರ್ಯಾಂಡ್ ನಿರ್ಮಾಣ ಮತ್ತು ವಿತರಣಾ ಜಾಲ ವಿಸ್ತರಣೆಗೆ ಲಾಭಕ್ಕಿಂತ ಮುಂಚಿತವಾಗಿ ಹೆಚ್ಚಿನ ಹಣ ಖರ್ಚು ಮಾಡಿದ್ದರಿಂದ FY23ರಲ್ಲಿ ಕಂಪನಿಯ ನಿವ್ವಳ ನಷ್ಟ ಸುಮಾರು ₹23 ಕೋಟಿಗೆ ಏರಿತು. ಮುಂದಿನ ಎರಡು ವರ್ಷಗಳಲ್ಲೂ ಕಂಪನಿ ವಿಸ್ತರಣೆ ಮುಂದುವರಿಸಿತು. FY24ರಲ್ಲಿ ಸ್ಟ್ಯಾಂಡ್‌ಅಲೋನ್ ಆದಾಯ ₹56.9 ಕೋಟಿಗೆ ಮತ್ತು FY25ರಲ್ಲಿ ₹87.5 ಕೋಟಿಗೆ ಏರಿತು. ಟ್ರ್ಯಾಕ್ಸನ್ ಮಾಹಿತಿಯ ಪ್ರಕಾರ, FY25ರ ಕನ್ಸಾಲಿಡೇಟೆಡ್ ಆದಾಯ ಸುಮಾರು ₹87.3 ಕೋಟಿ. ಇದೇ ವೇಳೆ ನಷ್ಟ ಗಣನೀಯವಾಗಿ ಕಡಿಮೆಯಾಯಿತು. FY25ರಲ್ಲಿ ಓಪನ್ ಸೀಕ್ರೆಟ್‌ನ ಸ್ಟ್ಯಾಂಡ್‌ಅಲೋನ್ ನಿವ್ವಳ ನಷ್ಟ ಸುಮಾರು ₹7.2 ಕೋಟಿಗೆ ಇಳಿಯಿತು. ಹಿಂದಿನ ವರ್ಷ ಇದು ಸುಮಾರು ₹23 ಕೋಟಿಯಾಗಿತ್ತು.

ಕಂಪನಿ ಬಂಡವಾಳ ಸಂಗ್ರಹಿಸುವುದನ್ನೂ ಮುಂದುವರಿಸಿದೆ. 2026ರ ಜುಲೈನಲ್ಲಿ ದೇಸಾಯಿ ಬ್ರದರ್ಸ್ ನೇತೃತ್ವದಲ್ಲಿ ಸುಮಾರು 3.12 ಮಿಲಿಯನ್ ಡಾಲರ್‌ಗಳ ಸೀರೀಸ್ ಸಿ ಸುತ್ತಿನ ಹೂಡಿಕೆ ಪಡೆಯಿತು. ಇದರ ಜೊತೆಗೆ ಸುಮಾರು 2.08 ಮಿಲಿಯನ್ ಡಾಲರ್‌ಗಳ ಸಾಮಾನ್ಯ ಸಾಲವನ್ನೂ ಪಡೆದಿದ್ದು, ಒಟ್ಟಾರೆ ಹಣಕಾಸು ನೆರವು ಸುಮಾರು ₹50 ಕೋಟಿಗೆ ತಲುಪಿದೆ.

ಟ್ರ್ಯಾಕ್ಸನ್ ಪ್ರಕಾರ, ಕಂಪನಿಯ ಇತ್ತೀಚಿನ ಬಹಿರಂಗಪಡಿಸಿದ ಮೌಲ್ಯಮಾಪನ ಸುಮಾರು 25.9 ಮಿಲಿಯನ್ ಡಾಲರ್‌, ಅಂದರೆ ಸುಮಾರು ₹250 ಕೋಟಿ. ಇದರರ್ಥ ಸೀರೀಸ್ ಬಿ ಸುತ್ತಿನ ಬಳಿಕ ಕಂಪನಿಯ ಬಹಿರಂಗಪಡಿಸಿದ ಮೌಲ್ಯಮಾಪನದಲ್ಲಿ ದೊಡ್ಡ ಬದಲಾವಣೆ ಕಂಡುಬರದಿದ್ದರೂ, ಅದರ ಆದಾಯ ಗಣನೀಯವಾಗಿ ಹೆಚ್ಚಾಗಿದೆ. ಗೌತಮ್ ಅವರ ಉದ್ಯಮ ಪಯಣ ಅವರ ಜೀವನದ ಅತ್ಯಂತ ಕಷ್ಟದ ಅವಧಿಯೊಂದರಲ್ಲೇ ಸಾಗಿತು.

ಕೊರೊನಾ ವೇಳೆ ತಾಯಿ ನಿಧನ ಆಘಾತ ತರಿಸಿತು

2021ರ ಮಾರ್ಚ್‌ನಲ್ಲಿ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಅವರ ತಾಯಿ ನಿಧನರಾದರು. ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಬಳಿಕವೇ ವ್ಯವಹಾರವನ್ನು ಮುಂದುವರಿಸುವ ಶಕ್ತಿ ನನ್ನಲ್ಲಿ ಬಂದಿತು ಎಂದು ಗೌತಮ್ ಹೇಳಿದ್ದಾರೆ. ಅಂದರೆ ಅವರ ಪಾಲಿಗೆ ‘ಓಪನ್ ಸೀಕ್ರೆಟ್’ ಆರಂಭಿಸುವ ನಿರ್ಧಾರ ಕೇವಲ ಒಂದು ಉದ್ಯಮದ ಅವಕಾಶವಾಗಿರಲಿಲ್ಲ. ತಾವು ಬಾಲ್ಯದಲ್ಲಿ ಅನುಭವಿಸಿದ, ತಾಯಿಯಿಂದ ಕಲಿತ ಪಾಠಗಳು ಇತರ ಕುಟುಂಬಗಳ ಜೀವನದಲ್ಲೂ ಕಂಡ ಸಮಸ್ಯೆಗೆ ನೀಡಿದ ಪ್ರತಿಕ್ರಿಯೆಯೂ ಆಗಿತ್ತು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅತಿಯಾದ ಜಾಹೀರಾತಿನಿಂದ ತಡರಾತ್ರಿ ಶೋ 22 ನಿಮಿಷ ಲೇಟ್ ಮಾಡಿದ್ದಕ್ಕೆ ಮಲ್ಟಿಪ್ಲೆಕ್ಸ್ ದೈತ್ಯ PVR INOX ಗೆ ಭಾರೀ ದಂಡ
Wind Farm: ಸಮುದ್ರದ ಗಾಳಿಯಿಂದ ಬೆಳಗಲಿದೆ ಭಾರತ; ಕಡಲ ತೀರದಲ್ಲಿ ದೇಶದ ಚೊಚ್ಚಲ 'ವಿಂಡ್ ಫಾರ್ಮ್' ಯೋಜನೆಗೆ ಚಾಲನೆ!