
ಗಳಿಸಿದ ಹಣವನ್ನು ಉತ್ತಮ ಜಾಗದಲ್ಲಿ ಹೂಡಿಕೆ (Investment) ಮಾಡಿದ್ರೆ ಮಾತ್ರ ಗಳಿಸಿದ ಹಣದಿಂದ ಹಣ ಸಂಪಾದಿಸೋಕೆ ಸಾಧ್ಯ. ಬಹುತೇಕರಿಗೆ ಎಲ್ಲಿ ಹೂಡಿಕೆ ಮಾಡ್ಬೇಕು ಎನ್ನುವ ಜ್ಞಾನ ಇರೋದಿಲ್ಲ. ಷೇರುಮಾರುಕಟ್ಟೆ, ಎಸ್ ಐಪಿ, ಬ್ಯಾಂಕ್ ಯೋಜನೆಗಳಲ್ಲಿ ಮಾತ್ರವಲ್ಲ ನೀವು ಇನ್ನೂ ಅನೇಕ ಕಡೆ ಹೂಡಿಕೆ ಮಾಡಿ ಅದರಿಂದ ಉತ್ತಮ ರಿಟರ್ಸ್ ಪಡೆಯಬಹುದು. ಅದ್ರಲ್ಲಿ ಸರ್ವಿಸ್ ಅಪಾರ್ಟ್ಮೆಂಟ್ ಕೂಡ ಸೇರಿದೆ. ಸರ್ವಿಸ್ ಅಪಾರ್ಟ್ಮೆಂಟ್ (Service Apartment) ಅಂದ್ರೆ ಏನು, ಅಲ್ಲಿ ಹೇಗೆ ಹೂಡಿಕೆ ಮಾಡ್ಬಹುದು ಎಂಬುದರ ಮಾಹಿತಿ ಇಲ್ಲಿದೆ.
ಸರ್ವಿಸ್ ಅಪಾರ್ಟ್ಮೆಂಟ್ ಅಂದ್ರೆ ಏನು? : ಮೆಟ್ರೋ ಸಿಟಿಗಳಲ್ಲಿ ಒಂದ್ಕಡೆ ಐಷಾರಾಮಿ ಅಪಾರ್ಟ್ ಮೆಂಟ್, ವಿಲ್ಲಾಗಳಿಗೆ ಬೇಡಿಕೆ ಹೆಚ್ಚಾಗ್ತಿದ್ದು, ಇನ್ನೊಂದು ಕಡೆ ಸರ್ವಿಸ್ ಅಪಾರ್ಟ್ ಮೆಂಟ್ ಇಷ್ಟಪಡುವ ಜನರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೊಟೇಲ್ ಗಿಂದ ಸರ್ವಿಸ್ ಅಪಾರ್ಟ್ ಮೆಂಟ್ ಜನರಿಗೆ ಇಷ್ಟವಾಗ್ತಿದೆ. ಈ ಸರ್ವಿಸ್ ಅಪಾರ್ಟ್ ಮೆಂಟ್ ಸಿಂಗಲ್ ಬೆಡ್ ರೂಮ್ ಮನೆಯನ್ನು ನೀವು ಕಾಣ್ಬಹುದು. ಒಂದು ಬೆಡ್ ರೂಮ್, ಒಂದು ಲೀವಿಂಗ್ ರೂಮ್, ಕಿಚನ್ ಹಾಗೂ ಬಾಲ್ಕನಿ ನಿಮಗೆ ಸಿಗುತ್ತೆ. ಪ್ರಾಪರ್ಟಿ ಚಿಕ್ಕದಾಗಿದ್ರೂ ಮಾರ್ಕೆಟ್ ನಲ್ಲಿ ಇದ್ರ ಡಿಮ್ಯಾಂಡ್ ಹೆಚ್ಚಿದೆ. ಅಲ್ಲದೆ ರೇಟ್ ಕೂಡ ಉಳಿದ ಅಪಾರ್ಟ್ ಮೆಂಟ್ ಗಳಿಗೆ ಹೋಲಿಕೆ ಮಾಡಿದ್ರೆ ಕಡಿಮೆ. ಇದನ್ನು ಮಾರಾಟ ಮಾಡೋದು ನಿಮಗೆ ಕಷ್ಟವಾಗೋದಿಲ್ಲ.
ಹೊಟೇಲ್ ಹಾಗೂ ದೊಡ್ಡ ಅಪಾರ್ಟ್ಮೆಂಟ್ ಮಧ್ಯೆ ಇರುವಂತಹದ್ದು ಈ ಸರ್ವಿಸ್ ಅಪಾರ್ಟ್ಮೆಂಟ್. ವಾರ, ತಿಂಗಳು ಅಥವಾ ವರ್ಷಗಟ್ಟಲೆ ಕುಟುಂಬಸ್ಥರಿಂದ ದೂರ ಇರುವ ಜನರು ಈ ಅಪಾರ್ಟ್ಮೆಂಟ್ ಆಯ್ಕೆ ಮಾಡಿಕೊಳ್ತಾರೆ. ಇಲ್ಲಿ ಹೊಟೇಲ್ ರೂಮಿನಂತೆ ಬೆಡ್, ಕುರ್ಚಿ ಸೇರಿದಂತೆ ಎಲ್ಲ ವ್ಯವಸ್ಥೆ ಇರುತ್ತೆ. ನೀವು ಹೊರಗಿನ ಊಟವನ್ನು ಪಾರ್ಸಲ್ ತಂದ್ಕೊಂಡು ತಿನ್ಬಹುದು. ಸಾಧ್ಯವಾದ್ರೆ ಕಿಚನ್ ನಲ್ಲಿ ನೀವೇ ರೆಡಿ ಮಾಡ್ಕೊಳ್ಬಹುದು. ಹೊಟೇಲ್ ಗಿಂತ ಇಲ್ಲಿ ಸ್ವಾತಂತ್ರ್ಯ ಹೆಚ್ಚು. ನಿಮ್ಮ ಮನೆಯಂತೆ ಇಲ್ಲಿರುವ ಎಲ್ಲ ವಸ್ತುಗಳನ್ನು ನೀವು ಬಳಸಿಕೊಳ್ಬಹುದು. ತುಂಬಾ ದಿನ ಮನೆಯಿಂದ ಹೊರಗೆ ಇರುವ ಜನರು, ಮನೆಯಂತೆ ಇರಲು ರೂಮ್ ಗಿಂತ ಸರ್ವಿಸ್ ಅಪಾರ್ಟ್ಮೆಂಟ್ ಬೆಸ್ಟ್ ಎನ್ನುತ್ತಾರೆ.
ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಹೂಡಿಕೆ ಮಾಡೋದು ಹೇಗೆ? : ಬಿಲ್ಡರ್ಸ್ ಸರ್ವಿಸ್ ಅಪಾರ್ಟ್ ಮೆಂಟ್ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಮೆಟ್ರೋ ಸಿಟಿಯಲ್ಲಿ ಮಾತ್ರವಲ್ಲ ಟೂ ಟಾಯರ್ ಸಿಟಿಯಲ್ಲೂ ಈ ಅಪಾರ್ಟ್ ಮೆಂಟ್ ತಲೆ ಎತ್ತುತ್ತಿದೆ. ಬಿಲ್ಡರ್ಸ್, ಮಾರಾಟ ಮತ್ತು ನಿರ್ಮಾಣ ಪೂರ್ಣಗೊಂಡ ನಂತ್ರ, ಆಸ್ತಿಯನ್ನು ಸೇವಾ ಅಪಾರ್ಟ್ಮೆಂಟ್ ಆಗಿ ಬಳಸಲು ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ತಾರೆ. ನೀವು ಅಪಾರ್ಟ್ ಮೆಂಟ್ ಖರೀದಿ ಮಾಡಿ, ಅದನ್ನು ಸರ್ವಿಸ್ ಅಪಾರ್ಟ್ಮೆಂಟ್ ಆಗಿ ಬಳಸಲು ಅನುಮತಿ ನೀಡ್ಬಹುದು. ಬುಕಿಂಗ್ ಮತ್ತು ಇತರ ಸೌಲಭ್ಯಗಳಿಗಾಗಿ ಪಡೆದ ಹಣದಲ್ಲಿ ಒಂದು ನಿರ್ದಿಷ್ಟ ಪಾಲನ್ನು ಬಿಲ್ಡರ್ಸ್ ತೆಗೆದುಕೊಂಡು ಉಳಿದ ಮೊತ್ತವನ್ನು ಮಾಲೀಕರಿಗೆ ವರ್ಗಾಯಿಸ್ತಾರೆ. ಜೊತೆಗೆ ಬಾಡಿಗೆಯಿಂದ ನಿಮಗೆ ಒಂದಿಷ್ಟು ಹಣ ಬರ್ತಿರುತ್ತದೆ. ಇದ್ರಲ್ಲಿ ಬಿಲ್ಡರ್ಸ್ ಕಮಿಷನ್ ರೂಪದಲ್ಲಿ ಹಣ ಸಂಪಾದನೆ ಮಾಡ್ತಾರೆ. ಬಿಲ್ಡರ್ಸ್, ಮನೆ ಮಾಲೀಕರು ಹಾಗೂ ಬಾಡಿಗೆದಾರರು ಮೂವರಿಗೂ ಇದ್ರಿಂದ ಲಾಭವಿದೆ. ಬಾಡಿಗೆದಾರರಿಗೆ ಹೊಟೇಲ್ ಗಿಂತ ಹೆಚ್ಚು ಆರಾಮದಾಯಕ ವ್ಯವಸ್ಥೆ ಇಲ್ಲಿ ಸಿಗುತ್ತದೆ. ಮೆಟ್ರೋ ಸಿಟಿಗಳಲ್ಲಿ ಈ ಸರ್ವಿಸ್ ಅಪಾರ್ಟ್ ಮೆಂಟ್ ಹೆಚ್ಚಿನ ಸಂಖ್ಯೆಯಲ್ಲಿ ತಲೆ ಎತ್ತುತ್ತಿದೆ. ದಾಖಲೆ ಪರಿಶೀಲಿಸಿ ನೀವು ಕೂಡ ಇದ್ರಲ್ಲಿ ಹೂಡಿಕೆ ಮಾಡ್ಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.