ಒಬಿಸಿ ಕೆನೆಪದರ ಆದಾಯ ಮಿತಿ 12 ಲಕ್ಷ ರು.ಗೆ?

By Kannadaprabha NewsFirst Published Feb 22, 2020, 11:39 AM IST
Highlights

ಒಬಿಸಿ ಕೆನೆಪದರ ಆದಾಯ ಮಿತಿ 12 ಲಕ್ಷ ರು.ಗೆ?| 8 ಲಕ್ಷ ರೂ. ಗಿಂತ 12 ಲಕ್ಷಕ್ಕೇರಿಸಲು ಶಿಫಾರಸು| ಶೀಘ್ರ ಸಂಪುಟದಲ್ಲಿ ಚರ್ಚೆ ಸಾಧ್ಯತೆ

ನವದೆಹಲಿ[ಫೆ.22]: ಹಿಂದುಳಿದ ವರ್ಗದವರು ಮೀಸಲು ಪಡೆಯಲು ಇರುವ ಆದಾಯದ ಅರ್ಹತಾ ಮಿತಿಯನ್ನು (ಕೆನೆಪದರ ಮಿತಿ) ಈಗಿನ ವಾರ್ಷಿಕ 8 ಲಕ್ಷ ರು.ನಿಂದ 12 ಲಕ್ಷ ರು.ಗೆ ಏರಿಸಲು ಕೇಂದ್ರ ಸರ್ಕಾರ ಶಿಫಾರಸು ಮಾಡಿದೆ. ಸಂಪುಟದಲ್ಲಿ ಈ ವಿಚಾರ ಶೀಘ್ರ ಚರ್ಚೆಗೆ ಬರುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಇದು ಕಾರ್ಯರೂಪಕ್ಕೆ ಬಂದರೆ ಇನ್ನಷ್ಟುಹೆಚ್ಚು ಹಿಂದುಳಿದವರು ಮೀಸಲು ಪ್ರಯೋಜನ ಪಡೆಯಲು ಅರ್ಹರಾಗಲಿದ್ದಾರೆ. ಅಂದರೆ ಈವರೆಗೆ 8 ಲಕ್ಷ ರು.ಗಿಂತ ಹೆಚ್ಚು ವಾರ್ಷಿಕ ಆದಾಯ ಇದ್ದರೆ ಅಂಥ ಹಿಂದುಳಿದ ವರ್ಗದವರು (ಒಬಿಸಿ) ಮೀಸಲು ಸೌಲಭ್ಯ ಪಡೆಯಲು ಆಗುತ್ತಿರಲಿಲ್ಲ. ಈಗ ಮಿತಿ ಹೆಚ್ಚಳವಾದರೆ 12 ಲಕ್ಷ ರು.ವರೆಗೆ ವಾರ್ಷಿಕ ಆದಾಯ ಇದ್ದವರು ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲು ಸವಲತ್ತು ಪಡೆಯಬಹುದಾಗಿದೆ.

ಒಬಿಸಿ ಕೆನೆಪದರದ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಒಂದು ದ್ವಿಸದಸ್ಯ ಸಮಿತಿ ನೇಮಿಸಿತ್ತು. ಆ ಸಮಿತಿ ಮಾಡಿದ ಶಿಫಾರಸಿನ ಅನ್ವಯ ಸರ್ಕಾರ ಈ ಬದಲಾವಣೆ ಮಾಡಲು ಹೊರಟಿದೆ ಎಂದು ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ.

ಒಬಿಸಿ ಕೆನೆಪದರ ನಿರ್ಧರಿಸುವಾಗ ವ್ಯಕ್ತಿಯ ಒಟ್ಟಾರೆ ವಾರ್ಷಿಕ ಆದಾಯದ ಜತೆಗೆ ವೇತನವನ್ನೂ ಸೇರಿಸಬೇಕು. 8 ಲಕ್ಷ ರು.ನಿಂದ .12 ಲಕ್ಷಕ್ಕೆ ಕೆನೆಪದರ ಮಿತಿ ಹೆಚ್ಚಿಸಬೇಕು ಎಂದು ಸಮಿತಿಯು 2019ರ ಸೆಪ್ಟೆಂಬರ್‌ 19ರಂದು ಶಿಫಾರಸು ಮಾಡಿತ್ತು. 10 ಹೆಕ್ಟೇರ್‌ಗಿಂತ ಹೆಚ್ಚು ಜಮೀನು ಇದ್ದವರನ್ನೂ ಕೆನೆಪದರದಲ್ಲಿ ಸೇರಿಸುವಂತೆ ತಿಳಿಸಿತ್ತು.

ಈ ಶಿಫಾರಸನ್ನು ಒಪ್ಪಿರುವ ಸರ್ಕಾರ, ಸಂಪುಟ ಟಿಪ್ಪಣಿಯನ್ನು ಸಚಿವಾಲಯಗಳಿಗೆ ಹಂಚಿದ್ದು, ಅಭಿಪ್ರಾಯ ಬಯಸಿದೆ. ಅಭಿಪ್ರಾಯ ಸಂಗ್ರಹದ ನಂತರ ಸಂಪುಟ ಸಭೆಯಲ್ಲಿ ಇದನ್ನು ಮಂಡಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

2017ರಲ್ಲಿ ಒಬಿಸಿ ಕೆನೆಪದರ ಮಿತಿಯನ್ನು 6 ಲಕ್ಷ ರು.ನಿಂದ 8 ಲಕ್ಷ ರು.ಗೆ ಹೆಚ್ಚಿಸಲಾಗಿತ್ತು.

 ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!