ಫಾರಿನ್‌ಗೆ ಪ್ಯಾಕೇಜ್ ಟೂರ್ ಹೋಗ್ತೀರಾ? ತೆರಿಗೆ ಕಟ್ಟಿ| ಪ್ಯಾನ್ ಇದ್ದರೆ 5%, ಇಲ್ಲದಿದ್ದರೆ 10% ಟಿಸಿಎಸ್| ವಾರ್ಷಿಕ 7 ಲಕ್ಷ ರು. ಮೇಲ್ಪಟ್ಟವೆಚ್ಚಕ್ಕೆ ತೆರಿಗೆ| ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪ
ನವದೆಹಲಿ[ಫೆ.22]: ಆದಾಯ ತೆರಿಗೆ ಪಾವತಿಸದಿದ್ದರೂ, ಪ್ಯಾಕೇಜ್‌ನಡಿ ವಿದೇಶ ಪ್ರವಾಸಕ್ಕೆ ಹೋಗುವವರ ಮೇಲೆ ಕೇಂದ್ರ ಸರ್ಕಾರ ಗದಾ ಪ್ರಹಾರ ಮಾಡಿದೆ. ಏ.1ರಿಂದ ಯಾರೇ ವಿದೇಶಕ್ಕೆ ಪ್ಯಾಕೇಜ್ ಟೂರ್ ಹೋದರೂ ಟಿಸಿಎಸ್ (ಟ್ಯಾಕ್ಸ್ ಕಲೆಕ್ಷನ್ ಅಟ್ ಸೋರ್ಸ್) ಕಟ್ಟಬೇಕು. ವಾರ್ಷಿಕ 7 ಲಕ್ಷ ರು.ವರೆಗೆ ವೆಚ್ಚ ಮಾಡಿ ಪ್ರವಾಸಕ್ಕೆ ಹೋಗುವವರು, ಪ್ಯಾನ್ ಕಾರ್ಡ್ ಹೊಂದಿದ್ದರೆ ಶೇ.5, ಇಲ್ಲದಿದ್ದರೆ ಶೇ.10ರಷ್ಟುಟಿಸಿಎಸ್ ಪಾವತಿಸಬೇಕು ಎಂದು ಫೆ.1ರಂದು ಮಂಡನೆ ಮಾಡಿದ ಬಜೆಟ್‌ನಲ್ಲಿ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪ ಮಾಡಿದ್ದಾರೆ. ಈ ಹೊಸ ನಿಯಮ, ವಿದೇಶದಿಂದ ಹಣ ರವಾನಿಸುವವರಿಗೂ ಅನ್ವಯವಾಗಲಿದೆ.
ಪ್ಯಾಕೇಜ್ ಟೂರ್ ಆಯೋಜಿಸುವಾತ ಟಿಸಿಎಸ್ ಅನ್ನು ಸಂಗ್ರಹಿಸಬೇಕು ಎಂಬ ಅಂಶ ಬಜೆಟ್‌ನಲ್ಲಿದ್ದು, ತೆರಿಗೆ ಸಲಹೆಗಾರರು ಇದನ್ನು ಪತ್ತೆ ಮಾಡಿದ್ದಾರೆ. ಈ ಕ್ರಮದಿಂದ ಸರ್ಕಾರ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮುಂದಾಗಿದೆ.
ಮೊದಲನೆಯದಾಗಿ, ಹಲವು ಮಂದಿ ಆದಾಯ ತೆರಿಗೆಯನ್ನೇ ಘೋಷಿಸಿಕೊಳ್ಳುವುದಿಲ್ಲ. ತಮಗೆ ತೆರಿಗೆ ಕಟ್ಟುವಷ್ಟುಆದಾಯ ಇಲ್ಲ ಎಂಬ ನೆಪ ಹೇಳುತ್ತಾರೆ. ಆದರೆ ಪ್ಯಾಕೇಜ್ ಟೂರ್‌ನಡಿ ವಿದೇಶಕ್ಕೆ ಮಾತ್ರ ಹೋಗುತ್ತಿರುತ್ತಾರೆ. ಇನ್ನು ಮುಂದೆ ಅಂಥವರ ವಿವರ ಸರ್ಕಾರಕ್ಕೆ ಸುಲಭವಾಗಿ ಲಭ್ಯವಾಗಲಿದೆ. ಎರಡನೆಯದಾಗಿ, ಬೇರೆಯವರ ಹಣ (ಲಂಚ)ದಲ್ಲಿ ಪ್ರವಾಸ ಹೋಗುವ ಸರ್ಕಾರಿ ಅಧಿಕಾರಿಗಳು, ಖಾಸಗಿ ಕಂಪನಿಗಳ ಮುಖ್ಯಸ್ಥರು, ವೈದ್ಯರ ವಿವರ ಸರ್ಕಾರಕ್ಕೆ ಲಭ್ಯ ದೊರೆಯಲಿದೆ. ಕಪ್ಪು ಹಣ ಬಳಸಿ ಬೇರೆಯವರನ್ನು ವಿದೇಶಕ್ಕೆ ಕಳುಹಿಸುವವರೂ ಸಿಕ್ಕಿಬೀಳಲಿದ್ದಾರೆ.
ರೀಫಂಡ್ ಆಯ್ಕೆ ಉಂಟು:
5 ಲಕ್ಷ ರು. ಒಳಗೆ ಆದಾಯ ಇರುವವರು, ವಿದೇಶಕ್ಕೆ ಪ್ಯಾಕೇಜ್ ಪ್ರವಾಸ ಹೋಗುವಾಗ ಟಿಸಿಎಸ್ ಪಾವತಿಸಿದರೆ, ಅದನ್ನು ರೀಫಂಡ್ ಪಡೆಯಬಹುದಾಗಿರುತ್ತದೆ. ಟಿಸಿಎಸ್ ಸಂಗ್ರಹ ಮಾಡುವುದರಿಂದ ವಿದೇಶ ಪ್ರವಾಸಕ್ಕೆ ಹೋಗಿದ್ದಾತನ ನೈಜ ಆದಾಯ ಹಾಗೂ ಆತನ ಐಷಾರಾಮಿ ಜೀವನದ ಮಾಹಿತಿ ತೆರಿಗೆ ಅಧಿಕಾರಿಗಳಿಗೆ ಸುಲಭವಾಗಿ ಸಿಗುತ್ತದೆ. ಆದಾಯ ಬಚ್ಚಿಟ್ಟವರ ವಿವರ ದೊರೆಯುತ್ತದೆ.
ಸದ್ಯ ಇರುವ ನಿಯಮಗಳ ಪ್ರಕಾರ, ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅರ್ಜಿಯಲ್ಲಿ ಪಾಸ್‌ಪೋರ್ಟ್ ವಿವರವನ್ನು ನಮೂದಿಸಬೇಕಾಗಿದೆ. ಆದರೆ, ಬಹುತೇಕ ತೆರಿಗೆದಾರರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಒಂದು ವೇಳೆ ತೆರಿಗೆದಾರರು ವಿದೇಶಕ್ಕೆ ಹೋಗಿ ಬಂದಿದ್ದರೂ ತೆರಿಗೆ ಸಲಹೆಗಾರರು ಕೂಡ ಪಾಸ್‌ಪೋರ್ಟ್ ವಿವರ ನಮೂದಿಸಲು ಸೂಚಿಸುವುದಿಲ್ಲ. ಆದರೆ ಇದೀಗ ಟಿಸಿಎಸ್ ಸಂಗ್ರಹದ ಮೂಲಕ ವಿದೇಶ ಪ್ರವಾಸಕ್ಕೆ ಹೋಗುವವರ ಮೇಲೆ ಸರ್ಕಾರ ನಿಗಾ ಇಡಲು ಮುಂದಾಗಿದೆ.
ಈ ಕ್ರಮದಿಂದ ಕಪ್ಪು ಹಣದ ಹರಿವೂ ಪತ್ತೆಯಾಗಲಿದೆ. ಉನ್ನತ ಸ್ತರದಲ್ಲಿರುವ ಸರ್ಕಾರಿ ಅಥವಾ ಖಾಸಗಿ ಅಧಿಕಾರಿಗಳು ಸಾಮಾನ್ಯವಾಗಿ ವಿದೇಶ ಪ್ರವಾಸಕ್ಕೆ ತಮ್ಮ ಕುಟುಂಬ ಸಹಿತ ಹೋಗುತ್ತಿರುತ್ತಾರೆ. ಇದಕ್ಕೆ ಬೇರೆಯವರು ಹಣ ಪಾವತಿಸಿರುತ್ತಾರೆ. ಇದು ಲಂಚ ಕೂಡ ಆಗಿರುತ್ತದೆ. ಇನ್ನು ಮುಂದೆ ಇದಕ್ಕೆ ಕಡಿವಾಣ ಬೀಳುವ ನಿರೀಕ್ಷೆ ಇದೆ.