
ನವದೆಹಲಿ[ಮೇ.14]: ಕಡಿಮೆ ಆದಾಯ ಹೊಂದಿರುವ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿರುವ ಬಡವರ ಮೇಲಿನ ಹೊರೆ ತಗ್ಗಿಸಲು ಹೊಸದಾಗಿ ಅಧಿಕಾರಕ್ಕೆ ಬರುವ ಕೇಂದ್ರ ಸರ್ಕಾರ ‘ಸಾರ್ವತ್ರಿಕ ಸಾಲ ಮನ್ನಾ’ ಯೋಜನೆಯೊಂದನ್ನು ಜಾರಿಗೆ ತರಲಿದೆ. ಸಣ್ಣ ಉದ್ದಿಮೆಗಳು, ಸಣ್ಣ ರೈತರು ಹಾಗೂ ಕುಶಲಕರ್ಮಿಗಳಂತಹ ಅಲ್ಪ ಮೊತ್ತದ ಸಾಲ ಮಾಡಿರುವ ವರ್ಗಗಳಿಗೆ ಇದರಿಂದ ಅನುಕೂಲವಾಗಲಿದೆ.
ವಾರ್ಷಿಕ 60 ಸಾವಿರ ರು. ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ, 35 ಸಾವಿರ ರು. ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಸಾಲ ಹೊಂದಿರುವ ಹಾಗೂ 20 ಸಾವಿರ ರು. ಮೌಲ್ಯದೊಳಗಿನ ಆಸ್ತಿ ಹೊಂದಿರುವವರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ.
ಸಣ್ಣ ರೈತರು, ಕುಶಲಕರ್ಮಿಗಳು, ಕಿರು ಉದ್ಯಮಿಗಳು ಅಥವಾ ಇನ್ನಿತರೆ ವ್ಯಕ್ತಿಗಳಿಗೆ ಈ ಯೋಜನೆಯಿಂದ ಲಾಭ ಸಿಗಲಿದೆ. ಒಟ್ಟಿನಲ್ಲಿ ಇದು ಬಡವರ ಸಾರ್ವತ್ರಿಕ ಸಾಲ ಮನ್ನಾ ಯೋಜನೆಯಾಗಿರಲಿದೆ ಎಂದು ಕಾರ್ಪೊರೆಟ್ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಇಂಜೆತಿ ಶ್ರೀನಿವಾಸ್ ತಿಳಿಸಿದ್ದಾರೆ. ಈ ಯೋಜನೆಯಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚೆಂದರೆ 20 ಸಾವಿರ ಕೋಟಿ ರು. ಹೊರೆಯಾಗಬಹುದು ಎಂದು ಹೇಳಿದ್ದಾರೆ.
ಹೊಸ ಯೋಜನೆಯನ್ನು ಜಾರಿಗೆ ತರಲು ದಿವಾಳಿ ಸಂಹಿತೆಗೆ ತಿದ್ದುಪಡಿ ತರಬೇಕಾಗುತ್ತದೆ. ಈಗ ಇರುವ ನಿಯಮಗಳ ಪ್ರಕಾರ ಸಣ್ಣ ಸಾಲಗಾರರಿಗೆ ಯಾವುದೇ ವಿಶೇಷ ವಿನಾಯಿತಿ ನೀಡುವ ಅಂಶವಿಲ್ಲ. ಹೀಗಾಗಿ ಬದಲಾವಣೆ ಮಾಡಬೇಕಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾರ್ವತ್ರಿಕ ಸಾಲ ಮನ್ನಾ ಯೋಜನೆಯ ಫಲಾನುಭವಿಯಾಗಲು ಇಷ್ಟವಿಲ್ಲದ ವ್ಯಕ್ತಿಗಳನ್ನು ಹೊರಗಿಡಲಾಗುತ್ತದೆ. ಏಕೆಂದರೆ, ಈ ಯೋಜನೆಯಿಂದ ಲಾಭ ಪಡೆದವರಿಗೆ ಭವಿಷ್ಯದಲ್ಲಿ ಸಾಲ ಪಡೆಯಲು ಕೆಲವು ನಿರ್ಬಂಧಗಳು ಎದುರಾಗುತ್ತವೆ ಎಂದು ಹೇಳಿದ್ದಾರೆ.
ಚುನಾವಣೆ ನಂತರ ಸಣ್ಣ ಉದ್ಯಮಿಗಳಿಗೆ 50 ಲಕ್ಷ ರು.ವರೆಗೆ ಖಾತ್ರಿ ರಹಿತ ಸಾಲ, ಪಿಂಚಣಿ, ಕ್ರೆಡಿಟ್ ಕಾರ್ಡ್ ನೀಡುವ ಸಂಬಂಧ ಈ ಹಿಂದೆಯೇ ಘೋಷಣೆ ಹೊರಬಿದ್ದಿದೆ. ಆ ಸಾಲಿಗೆ ಸಾರ್ವತ್ರಿಕ ಸಾಲ ಮನ್ನಾ ಯೋಜನೆ ಹೊಸ ಸೇರ್ಪಡೆಯಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.